ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಮಯದಲ್ಲಿ ಹೆಚ್ಚಿದ ಬೇಡಿಕೆ; ಮೆಡಿಕಲ್‌ ಕೋಡಿಂಗ್‌

Last Updated 4 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕೋವಿಡ್‌ ಬಹಳಷ್ಟು ಮಂದಿಯ ಉದ್ಯೋಗಗಳನ್ನು ಕಸಿದುಕೊಂಡಿದ್ದು ಗೊತ್ತೇ ಇದೆ. ಭಾರತದಲ್ಲಿ ಮಾತ್ರವಲ್ಲ, ಇದು ಪ್ರಪಂಚದಾದ್ಯಂತ ನಡೆದಿರುವ ವಿದ್ಯಮಾನ. ಉದ್ಯೋಗ ಇಲ್ಲ ಎಂದು ಕೈಕಟ್ಟಿ ಕೂರದೇ ಹೊಸ ಉದ್ಯೋಗಕ್ಕಾಗಿ ಹೊಸ ಕೋರ್ಸ್‌ಗೆ ಪ್ರವೇಶ ಪಡೆದವರೂ ಸಾಕಷ್ಟು ಮಂದಿ ಇದ್ದಾರೆ. ಈ ಸಂದರ್ಭದಲ್ಲಿ ಮೆಡಿಕಲ್‌ ಕೋಡಿಂಗ್‌ ಹಲವರ ಚಿತ್ತವನ್ನು ಸೆಳೆದಿದ್ದಂತೂ ಹೌದು. ಆರೋಗ್ಯಸೇವಾ ಕ್ಷೇತ್ರದಲ್ಲಿ ರೋಗ ಪತ್ತೆ, ಇತರ ಪ್ರಕ್ರಿಯೆಗಳು, ವೈದ್ಯಕೀಯ ನೆರವಿನ ಮಾಹಿತಿ ಮಾತ್ರವಲ್ಲ, ಶಸ್ತ್ರಚಿಕಿತ್ಸೆ, ತಪಾಸಣೆ, ಆಸ್ಪತ್ರೆ, ಪ್ರಯೋಗಾಲಯ ಮೊದಲಾದವುಗಳಲ್ಲಿ ಬಳಸಲಾಗುವ ಉಪಕರಣಗಳ ವಿವರಗಳನ್ನು ಕೂಡ ವೈದ್ಯಕೀಯ ಅಲ್ಫಾನ್ಯೂಮರಿಕ್‌ ಕೋಡ್‌ಗೆ ಬದಲಾಯಿಸುವ ‘ಮೆಡಿಕಲ್‌ ಕೋಡಿಂಗ್‌’ ಇತ್ತೀಚೆಗೆ ಜನಪ್ರಿಯವಾಗುತ್ತಿದೆ.

ಈ ಮೆಡಿಕಲ್‌ ಕೋಡಿಂಗ್‌ ಉದ್ಯೋಗಿಯು ಮಾಡಬೇಕಾದ ಕೆಲಸಗಳ ವಿವರ ನೋಡೋಣ. ರೋಗ ಪತ್ತೆ ಮತ್ತು ಪ್ರಕ್ರಿಯೆಗೆ ಐಸಿಡಿ (ಅಂತರರಾಷ್ಟ್ರೀಯ ಕಾಯಿಲೆ ವರ್ಗೀಕರಣ) ಹಾಗೂ ಸಿಪಿಟಿ (ಪ್ರಚಲಿತ ಕಾರ್ಯವಿಧಾನದ ಪರಿಭಾಷೆ) ಕೋಡ್‌ಗಳನ್ನು ನೀಡಬೇಕಾಗುತ್ತದೆ. ಸರ್ಕಾರ ಮತ್ತು ವಿಮೆ ನಿಯಮಗಳಿಗೆ ಅನುಗುಣವಾಗಿ ಈ ಕೋಡ್‌ಗಳು ನಿಖರವಾಗಿರಬೇಕು. ಯಾವುದಾದರೂ ದಾಖಲೆ ಅಪೂರ್ಣವಾಗಿ ಅಥವಾ ಅಸ್ಪಷ್ಟವಾಗಿದ್ದರೆ ಅವುಗಳನ್ನು ಒದಗಿಸುವವರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ದಾಖಲೀಕರಣಕ್ಕೆ ಸಂಬಂಧಿಸಿದಂತೆ ಇತರ ಕ್ಲಿನಿಕಲ್‌ ಸಿಬ್ಬಂದಿ ಜೊತೆ ಸಂವಹನ ನಡೆಸಬೇಕಾಗುತ್ತದೆ. ಕೋಡಿಂಗ್‌ ಕಷ್ಟವಾದರೆ ಅಥವಾ ವಿಭಿನ್ನವಾಗಿದ್ದರೆ ಮಾಹಿತಿ ಹುಡುಕಾಟ ನಡೆಸಬೇಕು. ರೋಗಿಗಳ ದಾಖಲೆಗಳನ್ನು ಪರಿಶೀಲಿಸಬೇಕು. ಹಿಂದಿನ ದಾಖಲೆಗಳನ್ನು ಪರಾಮರ್ಶಿಸಬೇಕು. ಎಲ್ಲಾ ಕೋಡ್‌ಗಳು ಪ್ರಸ್ತುತವಾಗಿದ್ದು, ಸಕ್ರಿಯವಾಗಿರುವಂತೆ ನಿಗಾ ವಹಿಸಬೇಕು. ಇವಿಷ್ಟನ್ನೂ ಮೆಡಿಕಲ್‌ ಕೋಡಿಂಗ್‌ ಮಾಡುವವರು ನಿರಂತರವಾಗಿ ಮಾಡಬೇಕಾಗುತ್ತದೆ.

ಸದ್ಯ ಮೆಡಿಕಲ್ ಕೋಡಿಂಗ್‌ಗೆ ಇರುವ ಅಂತರರಾಷ್ಟ್ರೀಯವಾಗಿ ಪ್ರಮಾಣಿತವಾಗಿರುವ ಮಾಪನವೆಂದರೆ ಐಸಿಡಿ–10. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಸ್ಥಿರೀಕರಿಸಿದೆ. ಇದರಲ್ಲಿ ರೋಗ ಪತ್ತೆಗೇ 14 ಸಾವಿರಕ್ಕಿಂತ ಅಧಿಕ ಕೋಡ್‌ಗಳಿವೆ. ಹಾಗೆಯೇ ಐಸಿಡಿ–11 ಕೂಡ ಅಂಗೀಕೃತವಾಗಿದ್ದು, ಮುಂದಿನ ವರ್ಷದಿಂದ ಬಳಕೆಗೆ ಬರಬಹುದು. ಇದರಲ್ಲಿ 55 ಸಾವಿರಕ್ಕಿಂತ ಅಧಿಕ ಕೋಡ್‌ಗಳಿವೆ.

ಅರ್ಹತೆ

ಹಾಗಾದರೆ ಮೆಡಿಕಲ್‌ ಕೋಡಿಂಗ್‌ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸುವುದಾದರೆ ಯಾವ ಅರ್ಹತೆ ಇರಬೇಕು? ಪಿಯುಸಿಯಲ್ಲಿ ವಿಜ್ಞಾನ ಓದಿ ಮುಂದೆ ಜೀವ ವಿಜ್ಞಾನ (ಲೈಫ್‌ ಸೈನ್ಸ್‌) ಅಂದರೆ ಜೀವಶಾಸ್ತ್ರ/ ಮಾನವ ಅಂಗರಚನಾ ಶಾಸ್ತ್ರ/ ಫಿಸಿಯಾಲಜಿ ಮೊದಲಾದವುಗಳಲ್ಲಿ ಬಿಎಸ್‌ಸಿ ಪದವಿ ಪಡೆದಿರಬೇಕು. ಇದಲ್ಲದೇ ಬಯೋಟೆಕ್‌, ಜೈವಿಕರಸಾಯನಶಾಸ್ತ್ರ, ಬಯೋಇನ್‌ಫಾರ್ಮಾಟಿಕ್ಸ್‌, ಎಂಡೊಕ್ರೀನೋಲಜಿ, ಫಾರ್ಮಸಿ ಅಥವಾ ನರ್ಸಿಂಗ್‌ನಲ್ಲಿ ಪದವಿ ಪಡೆದಿರಬೇಕು.

ಇದರ ಜೊತೆಗೆ ಕೆಲವು ತಾಂತ್ರಿಕ ಕೌಶಲಗಳಲ್ಲಿ ಪರಿಣತಿ ಅಗತ್ಯ. ಅನಾಟಮಿ, ಫಿಸಿಯಾಲಜಿ ಮತ್ತು ವೈದ್ಯಕೀಯ ಶಬ್ದಗಳ ಕುರಿತು ಆಳವಾದ ಜ್ಞಾನವಿರಬೇಕು. ಕಂಪ್ಯೂಟರ್‌ನಲ್ಲಿ ವೇಗವಾಗಿ, ಸ್ಪಷ್ಟವಾಗಿ ಟೈಪ್‌ ಮಾಡುವ ಕಲೆ ಸಿದ್ಧಿಸಿರಬೇಕು. ಹಾಗೆಯೇ ಗಣಿತದ ಕೌಶಲವೂ ಅವಶ್ಯಕ. ಐಸಿಡಿ–9 ಕೋಡ್‌ ಮತ್ತು ಪ್ರಕ್ರಿಯೆಗಳ ಅರಿವಿರಬೇಕು. ಮಾತನಾಡುವ ಹಾಗೂ ಬರೆಯುವ ಮತ್ತು ಸಂವಹನ ನಡೆಸುವ ಕೌಶಲವಿರುವುದು ಕಡ್ಡಾಯ.

ಕೋರ್ಸ್‌ಗಳು

ಕೋಡಿಂಗ್‌ ಕುರಿತು ಕೋರ್ಸ್‌ಗಳೂ ಇವೆ. ಕೋಡಿಂಗ್‌ ಸರ್ಟಿಫಿಕೇಶನ್‌, ಮೆಡಿಕಲ್‌ ಕೋಡಿಂಗ್‌ ಮತ್ತು ಬಿಲ್ಲಿಂಗ್‌ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಬೆಂಗಳೂರು ಸೇರಿದಂತೆ ಇತರೆಡೆ ಇರುವ ಕೆಲವು ಕಾಲೇಜುಗಳಲ್ಲಿ ಕಲಿಸಲಾಗುವುದು. ಮೆಡಿಕಲ್‌ ರೆಕಾರ್ಡ್‌ ಟೆಕ್ನಾಲಜಿ, ಪ್ರೊಫೇಶನಲ್‌ ಕೋಡರ್‌ (ಸಿಪಿಸಿ), ಅಡ್ವಾನ್ಸ್ಡ್‌ ಮೆಡಿಕಲ್ ಕೋಡಿಂಗ್‌ ಮೊದಲಾದ ಕೋರ್ಸ್‌ಗಳು ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್‌ ಮುಂತಾದ ಕಡೆಗಳಲ್ಲಿ ಇವೆ.

ಕಾರ್ಮಿಕ ಮತ್ತು ಅಂಕಿಅಂಶ ಇಲಾಖೆಯ ಪ್ರಕಾರ ಮೆಡಿಕಲ್‌ ಕೋಡಿಂಗ್‌ ಮತ್ತು ಬಿಲ್ಲಿಂಗ್‌ ಕ್ಷೇತ್ರವು ಇನ್ನು 2–3 ವರ್ಷಗಳಲ್ಲಿ ಶೇ 15ರಷ್ಟು ಪ್ರಗತಿ ಕಾಣಲಿದೆ. ಮೆಡಿಕಲ್‌ ರೆಕಾರ್ಡ್ಸ್‌ ಕೋಆರ್ಡಿನೇಟರ್‌, ಕೋಡಿಂಗ್‌ ಎಜುಕೇಟರ್‌, ಮೆಡಿಕಲ್‌ ಕೋಡಿಂಗ್‌ ತಜ್ಞ, ಆರೋಗ್ಯ ಮಾಹಿತಿ ಅಧಿಕಾರಿ, ಕೋಡಿಂಗ್‌ ನಿರ್ದೇಶಕ, ಸಿಇಒ, ಕಾಲೇಜ್‌ ಉಪನ್ಯಾಸಕ ಮೊದಲಾದ ಹುದ್ದೆಗಳನ್ನು ಈ ಕೋರ್ಸ್‌ ಮಾಡಿಕೊಂಡವರು ನಿಭಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT