ಮಂಗಳವಾರ, ಸೆಪ್ಟೆಂಬರ್ 21, 2021
21 °C

ಅಣಕು ಪರೀಕ್ಷೆ ಎಷ್ಟು ಪ್ರಯೋಜನ?

ಪಿ. ಅಶೋಕ Updated:

ಅಕ್ಷರ ಗಾತ್ರ : | |

Prajavani

ಬ್ಯಾಂ ಕ್‌, ಯುಪಿಎಸ್‌ಸಿ, ಕೆಪಿಎಸ್‌ಸಿ, ರೈಲ್ವೆ ಸೇರಿದಂತೆ ಹಲವಾರು ನೇಮಕಾತಿ ಪರೀಕ್ಷೆಗಳು ನಡೆಯುತ್ತಲೇ ಇರುತ್ತವೆ. ಬ್ಯಾಂಕ್‌ನಲ್ಲಂತೂ ಉದ್ಯೋಗಕ್ಕಾಗಿ ಪರೀಕ್ಷೆಗೆ ನೋಂದಾವಣೆ ಮಾಡಿಕೊಳ್ಳುವವರ ಸಂಖ್ಯೆ ಲಕ್ಷಾಂತರವಿರುತ್ತದೆ. ಐಬಿಪಿಎಸ್‌, ಆರ್‌ಬಿಐ, ಆರ್‌ಆರ್‌ಬಿ, ಎಸ್‌ಬಿಐ, ಎಸ್‌ಎಸ್‌ಸಿ, ನಬಾರ್ಡ್‌ ಎಂದೆಲ್ಲ ನೇಮಕಾತಿ ನಡೆಯುತ್ತಲೇ ಇರುವುದರಿಂದ ಪರೀಕ್ಷೆಯಲ್ಲೂ ಸ್ಪರ್ಧೆ ಸಹಜವಾಗಿಯೇ ಜಾಸ್ತಿ ಇರುತ್ತದೆ. ಉಳಿದ ಸ್ಪರ್ಧಾತ್ಮಕ ಪರೀಕ್ಷೆಗಳೂ ಅಷ್ಟೆ. ಈ ಪರೀಕ್ಷೆಗಳಿಗೆ ಚೆನ್ನಾಗಿ ಓದುವುದರ ಜೊತೆಗೆ ಇತರ ಸಿದ್ಧತೆಗಳು ಅಗತ್ಯ. ಅಂದರೆ ಪದೇ ಪದೇ ಅಣಕು ಪರೀಕ್ಷೆ ತೆಗೆದುಕೊಂಡರೆ ನಿಮ್ಮ ಸಿದ್ಧತೆ ಎಷ್ಟಾಗಿದೆ, ಯಶಸ್ಸಿನ ಸಮೀಪವಿದ್ದೀರಾ ಎಂದೆಲ್ಲ ತಿಳಿದುಕೊಳ್ಳಬಹುದು.

ಈ ಅಣಕು ಪರೀಕ್ಷೆಗಳು ನೀವು ಎದುರಿಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಒಂದು ಸಮಗ್ರವಾದ ಒಳನೋಟ ಒದಗಿಸುತ್ತವೆ. ಅಂದರೆ ಪರೀಕ್ಷೆಯ ರೀತಿ, ಪ್ರಶ್ನೆಗಳನ್ನು ಎದುರಿಸಬೇಕಾದ ಬಗೆ, ಉತ್ತರಿಸುವ ಕೌಶಲ, ಪ್ರತಿಯೊಂದು ವಿಭಾಗಕ್ಕೂ ಎಷ್ಟು ಸಮಯ ವ್ಯಯಿಸಬೇಕು.. ಹೀಗೆ ಎಲ್ಲವನ್ನೂ ತಿಳಿದುಕೊಳ್ಳಬಹುದು. ಈಗಂತೂ ಈ ಅಣಕು ಪರೀಕ್ಷೆಯ ಬೇಕಾದಷ್ಟು ಮಾದರಿಗಳು ಆನ್‌ಲೈನ್‌ನಲ್ಲಿ ಲಭ್ಯ.

 ಈ ಅಣಕು ಪರೀಕ್ಷೆ ಎದುರಿಸುವುದರಿಂದ ನಿಮ್ಮಲ್ಲಿ ಇರುವ ಸಾಮರ್ಥ್ಯ ಮಾತ್ರವಲ್ಲ, ದೌರ್ಬಲ್ಯವನ್ನೂ ಗುರುತಿಸಬಹುದು. ಎಲ್ಲಿ ನಿಮ್ಮ ದೌರ್ಬಲ್ಯವಿದೆ, ಅಂದರೆ ಯಾವ ವಿಭಾಗದಲ್ಲಿದೆ ಎಂದು ತಿಳಿದುಕೊಂಡು ವಿಶ್ಲೇಷಣೆ ಮಾಡಿ ಸುಧಾರಿಸಿಕೊಳ್ಳಲು ಇದರಿಂದ ಸಾಧ್ಯ. ಉದಾಹರಣೆಗೆ ಇಂಗ್ಲಿಷ್‌, ರೀಸನಿಂಗ್‌, ಸಾಮಾ‌ನ್ಯ ಜ್ಞಾನ, ಕ್ವಾಂಟಿಟೇಟಿವ್‌ ಆಪ್ಟಿಟ್ಯೂಡ್‌ ಮೊದಲಾದವು. ಹಾಗೆಯೇ ಸಮಯದ ಸದುಪಯೋಗವನ್ನೂ ತಿಳಿದುಕೊಳ್ಳಬಹುದು.

ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗೂ ಅದರದ್ದೇ ಆದ ಸಮಗ್ರ ಪಠ್ಯವಿರುತ್ತದೆ, ವಿಭಾಗಗಳಿರುತ್ತವೆ. ಹಾಗೆಯೇ ಯಾವ ವಿಭಾಗಕ್ಕೆ ಎಷ್ಟು ಅಂಕಗಳು, ತಪ್ಪಾದರೆ ಮೈನಸ್‌ ಅಂಕಗಳು.. ಹೀಗೆ ಎಲ್ಲವನ್ನೂ ಅರಿತುಕೊಳ್ಳಲು ಈ ಅಣಕು ಪರೀಕ್ಷೆ ನೆರವಾಗಬಲ್ಲದು. ಪ್ರಶ್ನೆಗಳನ್ನು ಯಾವ ರೀತಿ ಕೇಳಲಾಗುತ್ತದೆ ಎಂಬುದರ ಬಗ್ಗೆ ಅರಿವನ್ನೂ ಇದರಿಂದ ಪಡೆಯಬಹುದು.

ಅಣಕು ಪರೀಕ್ಷೆ ಎದುರಿಸಿದ ನಂತರ ನಿಮ್ಮ ದೌರ್ಬಲ್ಯಗಳ ಅರಿವಾಗುತ್ತದೆ. ಆಗ ನಿಮ್ಮ ಮುಂದಿನ ಗುರಿಯನ್ನು ನಿಗದಿಪಡಿಸಿಕೊಳ್ಳಬಹುದು. ನಿಮ್ಮ ತಪ್ಪುಗಳನ್ನು ವಿಶ್ಲೇಷಿಸಿ ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಗಮನ ಹರಿಸಬಹುದು.

ಇನ್ನೊಂದು ಅಂಶವೆಂದರೆ ಪ್ರಶ್ನೆಗಳನ್ನು ಬೇಗ ಅರ್ಥೈಸಿಕೊಂಡು ಅವುಗಳಿಗೆ ಉತ್ತರ ಕಂಡುಕೊಳ್ಳುವ ಬಗೆ, ವೇಗವಾಗಿ ಉತ್ತರಿಸುವ ರೀತಿ ಈ ಎಲ್ಲ ತಂತ್ರಗಳನ್ನು ನೀವು ರೂಪಿಸಿಕೊಳ್ಳಲು ಇದರಿಂದ ಸಾಧ್ಯ. ಇವುಗಳನ್ನು ರೂಢಿಸಿಕೊಂಡ ನಂತರ ಇನ್ನಷ್ಟು ಅಣಕು ಪರೀಕ್ಷೆಗಳನ್ನು ಎದುರಿಸಿ ಯಶಸ್ಸಿನ ಸಮೀಪ ಹೋಗಲು ಸಾಧ್ಯ.

ವೇಗವಾಗಿ ಉತ್ತರಿಸುವುದನ್ನು ಈ ಮೂಲಕ ರೂಢಿಸಿಕೊಳ್ಳಬಹುದು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಿರಲಿ, ನಿಗದಿತ ಸಮಯದೊಳಗೆ ಉತ್ತರಿಸುವ ಸವಾಲಿರುತ್ತದೆ. ಕಡಿಮೆ ಸಮಯದಲ್ಲಿ ಉತ್ತರಿಸುವ ಕೌಶಲ ಬೆಳೆಸಿಕೊಳ್ಳಬೇಕಾಗುತ್ತದೆ. ಇದನ್ನು ಅಣಕು ಪರೀಕ್ಷೆಯಿಂದ ರೂಢಿಸಿಕೊಳ್ಳಬಹುದು. ಗಣಿತ, ಇಂಗ್ಲಿಷ್‌ ಅಥವಾ ರೀಸನಿಂಗ್‌.. ಹೀಗೆ ಯಾವುದಕ್ಕೆ ಉತ್ತರಿಸಲು ಎಷ್ಟು ಸಮಯ ತಗಲುತ್ತದೆ ಎಂಬುದನ್ನು ಕಲಿಯಬಹುದು. ವೇಗವಾಗಿ ಉತ್ತರ ಗುರುತಿಸುವುದನ್ನು ಅಭ್ಯಾಸ ಮಾಡಿಕೊಳ್ಳಬಹುದು.

 ಸ್ಪರ್ಧಾತ್ಮಕ ಪರೀಕ್ಷೆಗೆ ಓದುವವರು ಎಲ್ಲಾ ವಿಷಯಗಳನ್ನೂ ಪದೇ ಪದೇ ಓದಿ, ಬರೆದು ರೂಢಿಸಿಕೊಳ್ಳಬೇಕು. ಅಧ್ಯಯನದ ವಿಷಯಗಳನ್ನು ಯಾವ ರೀತಿಯಲ್ಲಿ ಅಭ್ಯಾಸ ಮಾಡಬೇಕು ಎಂಬ ಅಂದಾಜು ಕೂಡ ನಿಮಗೆ ಈ ಅಣಕು ಪರೀಕ್ಷೆಯಿಂದ ಅರಿವಾಗುತ್ತದೆ.

ಅಣಕು ಪರೀಕ್ಷೆಯನ್ನು ಹೆಚ್ಚು ಹೆಚ್ಚು ತೆಗೆದುಕೊಳ್ಳುವುದರಿಂದ ನಿಜವಾದ ಪರೀಕ್ಷೆ ಎದುರಿಸಲು ಧೈರ್ಯ, ಆತ್ಮವಿಶ್ವಾಸ ಬರುತ್ತದೆ. ಈಗಂತೂ ಹೆಚ್ಚಿನ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸುವುದರಿಂದ ಇದೇ ಮಾದರಿಯ ಅಣಕು ಪರೀಕ್ಷೆಗಳಿಂದ ನಿಮ್ಮಲ್ಲಿ ಈ ವಿಶ್ವಾಸ ಹೆಚ್ಚುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು