ಶನಿವಾರ, ಜೂನ್ 25, 2022
26 °C

ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆ: ಪರೀಕ್ಷೆ ಸಿದ್ಧತೆ ಹೇಗಿರಬೇಕು?

ಕೆ.ಎಚ್. ಮಂಜುನಾಥ್ Updated:

ಅಕ್ಷರ ಗಾತ್ರ : | |

Prajavani

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 3553 ಪೊಲೀಸ್ ಕಾನ್‌ಸ್ಟೇಬಲ್ (ನಾಗರಿಕ) ಹುದ್ದೆಗಳ ನೇರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕರೆಯಲಾಗಿದೆ. ಸ್ಪರ್ಧಾರ್ಥಿಗಳಿಗೆ ಈ ಪರೀಕ್ಷೆಗೆ ಯಾವ ರೀತಿ ತಯಾರಿ ನಡೆಸಬೇಕು, ಹೇಗೆ ಉತ್ತರಿಸಬೇಕು ಎಂಬ ಆತಂಕವಿರುವುದು ಸಹಜ. ಹಾಗೆಯೇ ಮೊದಲ ಬಾರಿ ಅರ್ಜಿ ಸಲ್ಲಿಸುವವರಿಗೆ ಯಾವ ಯಾವ ಪೇಪರ್‌ಗಳಿರುತ್ತವೆ ಎಂಬ ಬಗ್ಗೆಯೂ ಅರಿವಿರಬೇಕಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯ ವಿವರಗಳು
ಒಟ್ಟು 100 ಅಂಕಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಒಂದು ಪ್ರಶ್ನೆಗೆ 1 ಅಂಕ ನಿಗದಿ ಮಾಡಲಾಗಿದೆ. ಸರಿ ಉತ್ತರಕ್ಕೆ 1 ಅಂಕ ನೀಡಿದರೆ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಶೇ 30ರಷ್ಟು ಅಂಕಗಳಿಗಿಂತ ಕಡಿಮೆ ಅಂಕಗಳನ್ನು ಗಳಿಸಿರುವ ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ ಹಾಗೂ ಅರ್ಹತೆಗೆ ಪರಿಗಣಿಸುವುದಿಲ್ಲ. ಹೀಗಾಗಿ ಚೆನ್ನಾಗಿ ಸಿದ್ಧತೆ ನಡೆಸಿ ಉತ್ತಮ ಅಂಕ ಗಳಿಸಬೇಕಾದ ಅಗತ್ಯವಿದೆ.

ಈ ಪರೀಕ್ಷೆಯು ಈ ಕೆಳಗಿನ ವಿಷಯಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯ ಜ್ಞಾನ, ಇತಿಹಾಸ, ಭೂಗೋಳ, ವಿಜ್ಞಾನ, ಭಾರತದ ಸ್ವಾತಂತ್ರ್ಯ ಹೋರಾಟ, ಸಾಮಾನ್ಯ ಮಾನಸಿಕ ಸಾಮರ್ಥ್ಯ, ನೀತಿ ಶಿಕ್ಷಣ.

ಈ ಪರೀಕ್ಷೆಗೆ ಏನನ್ನು ಓದಬೇಕು?

ಈ ಪರೀಕ್ಷೆಯಲ್ಲಿ ಏನನ್ನು ಓದಬೇಕು ಎಂಬುದು ಈ ಹಿಂದೆ ಇದೇ ತರಹ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಯನ್ನು ಗಮನಿಸಿದಾಗ ಗೊತ್ತಾಗುತ್ತದೆ. ಆದ್ದರಿಂದ ಮೊದಲು ಆ ಪ್ರಶ್ನೆ ಪತ್ರಿಕೆಗಳನ್ನು ಓದಿ. ನಂತರ 8, 9, 10ನೇ ತರಗತಿಯ ಸಮಾಜವಿಜ್ಞಾನ ಮತ್ತು ವಿಜ್ಞಾನದ ಪುಸ್ತಕಗಳನ್ನು ಓದಿ. ಮನೋರಮಾ ಅಥವಾ ಯಾವುದಾದರೂ ವಾರ್ಷಿಕ (ಇಯರ್ ಬುಕ್) ಸಂಗ್ರಹ ಪುಸ್ತಕ ಓದಿ. ಭಾರತದ ಸಂವಿಧಾನಕ್ಕೆ ಪಿ.ಎಸ್. ಗಂಗಾಧರ್ ಅವರ ‘ಭಾರತ ಸಂವಿಧಾನ ಮತ್ತು ರಾಜಕೀಯ’ವನ್ನು ಓದಬಹುದು. ಭಾರತ ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಡಾ. ಸದಾಶಿವ ಅವರ ಪುಸ್ತಕಗಳು, ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಾಗಿ ಪದವಿ ಪೂರ್ವ ಶಿಕ್ಷಣ ಮಂಡಳಿ ಪ್ರಕಟಿಸಿರುವ ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ ಪುಸ್ತಕಗಳು, ಭಾರತದ ಸಂವಿಧಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಬೇಕು. ಮಾನಸಿಕ ಸಾಮರ್ಥ್ಯಕ್ಕೆ ಆರ್.ಎಸ್. ಅಗರವಾಲ್ ಅವರು ಬರೆದಿರುವ ರೀಸನಿಂಗ್ ಪುಸ್ತಕಗಳನ್ನು ಓದಿ. ಪ್ರಚಲಿತ ವಿದ್ಯಮಾನಕ್ಕೆ ಪ್ರತಿದಿನ ದಿನಪತ್ರಿಕೆಯನ್ನು ಓದಲು ಮರೆಯಬೇಡಿ.

ಪರೀಕ್ಷಾ ತಯಾರಿಗೆ ಒಂದಿಷ್ಟು ಸಲಹೆ
ಒಂದು ಪ್ರಶ್ನೆ ಅದರ ಕೆಳಗೆ ನಾಲ್ಕು ಉತ್ತರಗಳನ್ನು ನೀಡಿರುತ್ತಾರೆ. ಆ ಉತ್ತರಗಳಲ್ಲಿಯೇ ಒಂದು ಸರಿಯಾಗಿ ಬರೆಯಬೇಕು.

ಇದೊಂದು ಪಿಯುಸಿ ಅಥವಾ ಎಸ್‌ಎಸ್‌ಎಲ್‌ಸಿ ತರಹದ ಅಕಾಡೆಮಿಕ್ ಪರೀಕ್ಷೆಯಲ್ಲ. ಇಲ್ಲಿ ಬಾಯಿಪಾಠ ಮಾಡಿಕೊಂಡು ಹೋಗಿ ಬರೆಯುವ ಪ್ರಶ್ನೆಗಳು ಬರುವುದಿಲ್ಲ. ಆದ್ದರಿಂದ ಪ್ರತಿ ವಿಷಯವನ್ನು ಓದುವಾಗಲೂ ಹಿಂದಿನ ಪ್ರಶ್ನೆ ಪತ್ರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ವಿಷಯಗಳನ್ನು ಓದುವುದು ಒಳ್ಳೆಯದು. ಕಂಠಪಾಠಕ್ಕಿಂತ ವಿಷಯದ ತಿಳಿವಳಿಕೆಯೇ ಮುಖ್ಯ.

 ಒಂದು ನೂರು ಪ್ರಶ್ನೆಗಳನ್ನು ಒಂದೂವರೆ ಗಂಟೆಯಲ್ಲಿ ಬಿಡಿಸಬೇಕಾಗಿದೆ. ಅದಕ್ಕಾಗಿ ಸಮಯದ ಹೊಂದಾಣಿಕೆ ಮುಖ್ಯ. ಆದ್ದರಿಂದ ನಿತ್ಯ ಬಹುಆಯ್ಕೆ ಪ್ರಶ್ನೆಗಳನ್ನು ಬಿಡಿಸುವ ಮೂಲಕ ಅಭ್ಯಾಸ ಮಾಡಿ.

ಪ್ರತಿ ದಿನ ಪರೀಕ್ಷೆ ಮುಗಿಯುವ ತನಕ ಕನಿಷ್ಠ 5-6 ಗಂಟೆಯನ್ನಾದರೂ ಓದಲು ಮೀಸಲಿಡಿ. ಅದರಲ್ಲಿ 1 ಗಂಟೆ ಬಹುಆಯ್ಕೆ ಪ್ರಶ್ನೆಗಳನ್ನು ಬಿಡಿಸಲು ಮೀಸಲಿಡುವುದು ಸೂಕ್ತ.

ಪ್ರತಿ ನಿತ್ಯ ದಿನಪತ್ರಿಕೆ ಓದಿ. 8, 9, 10ನೇ ತರಗತಿಯ ಸಮಾಜ ವಿಜ್ಞಾನ ಮತ್ತು ವಿಜ್ಞಾನದ ಪಠ್ಯ ಪುಸ್ತಕಗಳನ್ನು ಓದಲು ಮರೆಯಬೇಡಿ. ಹಾಗೆ ಓದುವಾಗ ಬಹುಆಯ್ಕೆ ಪ್ರಶ್ನೆಗಳನ್ನು ಕಲ್ಪಿಸಿಕೊಳ್ಳುತ್ತಾ ಓದುವುದು ಉತ್ತಮ! ನೀವು ಬಹುಆಯ್ಕೆ ಪ್ರಶ್ನೆಗಳನ್ನು ಕಲ್ಪಿಸಿಕೊಳ್ಳಲು ಹಿಂದಿನ ವರ್ಷಗಳಲ್ಲಿ ಬಂದ ಪ್ರಶ್ನೆಗಳನ್ನು ಮಾದರಿಯಾಗಿಟ್ಟುಕೊಳ್ಳಿ ಹಾಗೂ ಹೊಸ ಹೊಸ ಪ್ರಶ್ನೆಗಳನ್ನು ನಿತ್ಯ ಓದುವಾಗ ಸೃಷ್ಟಿಸುತ್ತಾ ಹೋಗುವುದು ನಿಮ್ಮನ್ನು ಉತ್ತಮ ಫಲಿತಾಂಶದತ್ತ ಒಯ್ಯಬಲ್ಲದು.

 ಪ್ರತಿದಿನವೂ ಅಭ್ಯಾಸಕ್ಕಾಗಿ ಒಂದಿಷ್ಟು ಸಮಯವನ್ನು ತೆಗೆದಿಡುವುದರ ಜೊತೆಗೆ ನಿತ್ಯವೂ ನೀವು ಹಿಂದೆ ಓದಿದ ವಿಷಯವನ್ನು ಪುನರಾವರ್ತನೆ ಮಾಡುತ್ತಾ ಅಧ್ಯಯನ ಮಾಡುವುದರಿಂದ ಹಿಂದೆ ಓದಿರುವುದನ್ನು ಮರೆತು ಹೋಗದಂತೆ ತಡೆಯಬಹುದು.

ಇದೊಂದು ಸ್ಪರ್ಧಾತ್ಮಕ ಪರೀಕ್ಷೆಯಾದ್ದರಿಂದ ಸ್ಪರ್ಧೆಯೇ ಪ್ರಧಾನವಾಗಿರುತ್ತದೆ ಮತ್ತು ಆ ಸ್ಪರ್ಧೆಯಲ್ಲಿ ಎಲ್ಲರಿಗಿಂತ ಮುಂದೆ ಇರಬೇಕಾದ ಅಗತ್ಯ ಇರುವುದರಿಂದ ತರಬೇತಿ ಕೇಂದ್ರಗಳ ಸಹಾಯವನ್ನು ಪಡೆಯಬಹುದು.

ಈ ಹಿಂದೆ ಪರೀಕ್ಷೆಯಲ್ಲಿ ಬಂದ ಕೆಲವು ಪ್ರಶ್ನೆಗಳು

ಇತಿಹಾಸ

1) ‘ಬ್ರಿಟಿಷರ ಆಳ್ವಿಕೆಯಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ’ ಭಾಗವಾಗಿದ್ದ ಪ್ರದೇಶಗಳು.......

ಎ) ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಬಿ) ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ

ಸಿ) ಮೈಸೂರು ಮತ್ತು ಕೊಡಗು ಡಿ) ದಕ್ಷಿಣ ಕನ್ನಡ ಮತ್ತು ಕೊಡಗು

ಉತ್ತರ:

**
ಭಾರತೀಯ ಅರ್ಥಶಾಸ್ತ್ರ

2) ಭಾರತದಲ್ಲಿ ಅತ್ಯಂತ ಹೆಚ್ಚು ಸಿಬ್ಬಂದಿ ಹೊಂದಿರುವ ಸಾರ್ವಜನಿಕ ಉದ್ಯಮ ಯಾವುದು?

ಎ) ಬಿಇಎಂಎಲ್ ಬಿ) ಬಿಎಚ್‌ಇಎಲ್
ಸಿ) ಭಾರತೀಯ ರೈಲ್ವೆ ಡಿ) ಮೇಲಿನ ಯಾವುದೂ ಅಲ್ಲ.

ಉತ್ತರ: ಸಿ

**
ಭೂಗೋಳ
3) ಖಾಸಿ ಮತ್ತು ಗ್ಯಾರೋ ಬುಡಕಟ್ಟಿನ ಜನಾಂಗವನ್ನು ಎಲ್ಲಿ ನೋಡಬಹುದು?

ಎ) ಗುಜರಾತ್ ಬಿ) ಕರ್ನಾಟಕ( ಚಾಮರಾಜನಗರ)
ಸಿ) ಮೇಘಾಲಯ ಡಿ) ಮಹಾರಾಷ್ಟ್ರ

ಉತ್ತರ: ಸಿ

**
ವಿಜ್ಞಾನ

4) ಸರಿಯಾಗಿ ಹೊಂದಿಸಿ ಬರೆಯಿರಿ:-

ಪಟ್ಟಿ-1 ಪಟ್ಟಿ-2
ಎ) ರಂಜಕ 1) ಬೆಂಕಿಕಡ್ಡಿ
ಬಿ) ಗಂಧಕ 2) ಟೈರುಗಳು
ಸಿ) ಪೊಟಾಶಿಯಂ 3) ಗೊಬ್ಬರ
ಡಿ) ಸಿಲಿಕಾನ್ 4) ಗಾಜು

ಉತ್ತರ ಸಂಕೇತಗಳು

ಎ) ಎ-3 ಬಿ-2 ಸಿ-4 ಡಿ-1
ಬಿ) ಎ-4 ಬಿ-3 ಸಿ-2 ಡಿ-1
ಸಿ) ಎ-1 ಬಿ-2 ಸಿ-3 ಡಿ-4
ಡಿ) ಎ-4 ಬಿ-3 ಸಿ-1 ಡಿ-2

ಉತ್ತರ:- ಸಿ

**
ಭಾರತೀಯ ಸಂವಿಧಾನ

5) ಹೊಂದಿಸಿ ಬರೆಯಿರಿ:-

ಪಟ್ಟಿ-1 ಪಟ್ಟಿ-2
ಎ) 356ನೇ ವಿಧಿ 1) ನ್ಯಾಷನಲ್ ಎಮರ್ಜನ್ಸಿ
ಬಿ) 360ನೇ ವಿಧಿ 2) ರಾಜ್ಯ ತುರ್ತು ಪರಿಸ್ಥಿತಿ
ಸಿ) 352ನೇ ವಿಧಿ 3) ಹಣಕಾಸಿನ ತುರ್ತುಪರಿಸ್ಥಿತಿ
ಡಿ) 315ನೇ ವಿಧಿ 4) ಹಣಕಾಸು ಆಯೋಗ
5) ಕೆ ಪಿ ಎಸ್ ಸಿ

ಉತ್ತರ ಸಂಕೇತಗಳು
ಎ) ಎ-5, ಬಿ-2, ಸಿ-3, ಡಿ-4
ಬಿ) ಎ-2, ಬಿ-3, ಸಿ-1, ಡಿ-5
ಸಿ) ಎ-2, ಬಿ-5, ಸಿ-1, ಡಿ-4
ಡಿ) ಎ-1, ಬಿ-2, ಸಿ-4, ಡಿ-3

ಉತ್ತರ: ಬಿ

(ಲೇಖಕ: ನಿರ್ದೇಶಕರು, ಜ್ಞಾನಭಾರತಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ, ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು