ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾ ವಾಣಿ: ಪ್ರಚಲಿತ ವಿದ್ಯಮಾನ– ರಾಷ್ಟ್ರಪತಿ ಚುನಾವಣೆ ಬಗ್ಗೆ ಸಂಪೂರ್ಣ ವಿವರ

Last Updated 27 ಜುಲೈ 2022, 20:30 IST
ಅಕ್ಷರ ಗಾತ್ರ

ಯುಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3 ಸೇರಿದಂತೆ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನದ ಮಾಹಿತಿ ಇಲ್ಲಿದೆ.

ಭಾರತೀಯ ಸಂವಿಧಾನದ 62 ನೇ ವಿಧಿಯ ಪ್ರಕಾರ, ಪ್ರಸ್ತುತವಿರುವ ರಾಷ್ಟ್ರಾಧ್ಯಕ್ಷರ ಅಧಿಕಾರದ ಅವಧಿ ಮುಗಿಯುವ ಮೊದಲೇ, ಅಧಿಕಾರದ ಅವಧಿಯು ಮುಕ್ತಾಯಗೊಳ್ಳುವುದರಿಂದ ಉಂಟಾಗುವ ಖಾಲಿ ಸ್ಥಾನವನ್ನು ತುಂಬಲು ಕಡ್ಡಾಯವಾಗಿ ಚುನಾವಣೆ ನಡೆಸಬೇಕು.

ಇತ್ತೀಚೆಗೆ ಇದೇ ಪ್ರಕ್ರಿಯೆಯಲ್ಲೇ ನೂತನ ರಾಷ್ಟ್ರಪತಿಯವರ ಆಯ್ಕೆ ನಡೆಯಿತು. ರಾಮನಾಥ್‌ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24, 2022ಕ್ಕೆ ಮುಗಿದಿದ್ದು, ಅದಕ್ಕೂ ಮುನ್ನವೇ ನೂತನ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಿತು. ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾದರು. ಜುಲೈ 25, 2022 ರಂದು ಅಧಿಕಾರ ಸ್ವೀಕರಿಸಿದರು.

ಹಾಗಾದರೆ, ರಾಷ್ಟ್ರಪತಿಯವರನ್ನು ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆಗಳು, ಕಾಯ್ದೆ, ನೀತಿ–ನಿಯಮಗಳು ಹೇಗಿರುತ್ತವೆ ? ಎಂಬುದನ್ನು ತಿಳಿಯೋಣ ಬನ್ನಿ.

ಸಾಂವಿಧಾನಿಕ ಮತ್ತು ಕಾನೂನು ನಿಬಂಧನೆಗಳು

l→ಸಂವಿಧಾನದ 324ನೇ ವಿಧಿಯ ಅನ್ವಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಕಾಯ್ದೆ 1952 ಹಾಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷೀಯ ಚುನಾವಣಾ ನಿಯಮಗಳು 1974 ಅನ್ನು ಜಾರಿಗೆ ತಂದಿದ್ದು, ಈ ಕಾಯ್ದೆ ಹಾಗೂ ನಿಯಮಾವಳಿಗಳ ಅನ್ವಯ ಭಾರತೀಯ ಚುನಾವಣಾ ಆಯೋಗ ರಾಷ್ಟ್ರಪತಿ ಹುದ್ದೆಗೆ ಸಂಬಂಧಿಸಿದಂತೆ ಚುನಾವಣಾ ನಿರ್ವಹಣೆ, ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಕಾರ್ಯವನ್ನು ನಿರ್ವಹಿಸುತ್ತದೆ.

l→ದೇಶದ ಅತ್ಯುನ್ನತ ಸ್ಥಾನವಾದ ಭಾರತದ ರಾಷ್ಟ್ರಪತಿ ಹುದ್ದೆಯ ಆಯ್ಕೆಗಾಗಿ ನಡೆಯುವ ಚುನಾವಣೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕು ಎಂದು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಬಾಧ್ಯಸ್ಥವಾಗಿರುತ್ತದೆ.

l→ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷರ ಚುನಾವಣೆಗಳ ಕಾಯಿದೆ, 1952 ರ ಸೆಕ್ಷನ್ 4(3)ರ ಪ್ರಕಾರ ನಿರ್ಗಮಿತ ಅಧ್ಯಕ್ಷರ ಅಧಿಕಾರದ ಅವಧಿ ಮುಗಿಯಲು 60 ದಿನಗಳಿರುವಾಗ ಅಥವಾ ನಂತರ ರಾಷ್ಟ್ರಪತಿ ಚುನಾವಣೆಯ ಅಧಿಸೂಚನೆ ಹೊರಡಿಸಲಾಗುತ್ತದೆ.

ಮತದಾರರ ಗುಂಪು

ಸಂವಿಧಾನದ 54ನೇ ವಿಧಿಯ ಪ್ರಕಾರ ಭಾರತದ ಸಂವಿಧಾನ, ಅಧ್ಯಕ್ಷರನ್ನು ಸಂವಿಧಾನ ನಿರ್ದಿಷ್ಟ ಪಡಿಸಿದ ಮತದಾರಗುಂಪು (ಎಲೆಕ್ಟರಲ್‌ ಕಾಲೇಜ್‌ ಅಥವಾ ನಿರ್ವಚನಾ ಮಂಡಳಿ) ಆಯ್ಕೆ ಮಾಡುತ್ತದೆ. ಆ ಗುಂಪು ಈ ಕೆಳಗಿನ ಸದಸ್ಯರನ್ನು ಹೊಂದಿರುತ್ತದೆ:

(i) ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರು ಮತ್ತು

(II)ಎಲ್ಲಾ ರಾಜ್ಯಗಳ ವಿಧಾನಸಭೆಗಳ ಚುನಾಯಿತ ಸದಸ್ಯರು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶವಾದ ದೆಹಲಿ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನಸಭೆಗಳ ಚುನಾಯಿತ ಸದಸ್ಯರನ್ನು ಒಳಗೊಂಡಿರುತ್ತದೆ.

l→ರಾಜ್ಯಸಭೆ ಮತ್ತು ಲೋಕಸಭೆ ಅಥವಾ ರಾಜ್ಯಗಳ ವಿಧಾನಸಭೆಗಳ ನಾಮನಿರ್ದೇಶಿತ ಸದಸ್ಯರು ಚುನಾವಣಾ ಗುಂಪಿನಲ್ಲಿ ಸೇರ್ಪಡೆಗೊಳ್ಳಲು ಅರ್ಹರಾಗಿರುವುದಿಲ್ಲ ಆದ್ದರಿಂದ, ಅವರು ಈ ಚುನಾವಣೆಯಲ್ಲಿ ಭಾಗವಹಿಸುವಂತಿರುವುದಿಲ್ಲ.

l→ಅದೇ ರೀತಿ ವಿಧಾನ ಪರಿಷತ್ತಿನ ಸದಸ್ಯರು ಕೂಡ ರಾಷ್ಟ್ರಪತಿ ಚುನಾವಣೆಗೆ ಆಯ್ಕೆದಾರರಲ್ಲ.

l→ರಾಜ್ಯ ವಿಧಾನಸಭೆಗಳು ಮತ್ತು ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರ ಮತಗಳ ಮೌಲ್ಯವನ್ನು ಸಂವಿಧಾನದ 55(2) ನೇ ವಿಧಿಯ ಮೂಲಕ ನಿರ್ಧರಿಸಲಾಗುತ್ತದೆ.

1) 16ನೇ ರಾಷ್ಟ್ರಪತಿ ಚುನಾವಣೆಗೆ ಶಾಸಕರ ಒಟ್ಟು ಮತಗಳ ಮೌಲ್ಯ 5,43,231 ಆಗಿರುತ್ತದೆ.

2) ಸಂಸದರ ಒಟ್ಟು ಮತಗಳ ಮೌಲ್ಯ 5,43,200 ಆಗಿರುತ್ತದೆ.

3) ಅಧ್ಯಕ್ಷೀಯ ಚುನಾವಣೆ 2022 ರ ಮತದಾರರ ಒಟ್ಟು ಮತದ ಮೌಲ್ಯವು 10,86,431 ಆಗಿದೆ.

l→ಸಂವಿಧಾನದ 55(3)ನೇ ವಿಧಿ ಪ್ರಕಾರ ಏಕ ವರ್ಗಾವಣಾ ಮತದ ಮೂಲಕ ಅನುಪಾತದ ಪ್ರಾತಿನಿಧ್ಯ ವ್ಯವಸ್ಥೆಗೆ ಅನುಗುಣವಾಗಿ ಚುನಾವಣೆ ನಡೆಸಬೇಕು ಎಂದು ಹೇಳುತ್ತದೆ.

l→ರಹಸ್ಯ ಮತದಾನದ ಮೂಲಕ ಮತದಾನ ನಡೆಯಬೇಕು ಮತ್ತು ಈ ವ್ಯವಸ್ಥೆಯಲ್ಲಿ, ಮತದಾರರು ಅಭ್ಯರ್ಥಿಗಳ ಹೆಸರಿನ ವಿರುದ್ಧ ತಮ್ಮ ಆದ್ಯತೆಗಳನ್ನು ಗುರುತಿಸಬೇಕು.

l→ಅಭ್ಯರ್ಥಿಗಳ ಸಂಖ್ಯೆಯಷ್ಟು ಆದ್ಯತೆಗಳನ್ನು ಮತದಾರರು ಗುರುತಿಸಬಹುದು. ಬ್ಯಾಲೆಟ್ ಪೇಪರ್ ಮಾನ್ಯವಾಗಬೇಕಾದರೆ ಮೊದಲ ಆದ್ಯತೆಯ ಗುರುತು ಕಡ್ಡಾಯವಾಗಿರುತ್ತದೆ. ಆದರೆ ನಂತರದ ಆದ್ಯತೆಗಳು ಐಚ್ಛಿಕವಾಗಿರುತ್ತವೆ.

l→ಅಧ್ಯಕ್ಷೀಯ ಚುನಾವಣೆಯ ಮತದಾನದ ವಿಷಯದಲ್ಲಿ ಪಕ್ಷಗಳು ತಮ್ಮ ಸಂಸದರು ಮತ್ತು ಶಾಸಕರಿಗೆ ಯಾವುದೇ ವಿಪ್ ನೀಡುವಂತಿಲ್ಲ .

l→ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷರ ಚುನಾವಣೆ ಗಳ ಕಾಯಿದೆ - 1952 ರ ಸೆಕ್ಷನ್ 18 ರ ಪ್ರಕಾರ, ಚುನಾವಣಾ ಬಿಕ್ಕಟ್ಟುಗಳು ಸಂಭವಿಸಿದಲ್ಲಿ ಇತ್ಯರ್ಥಪಡಿಸುವ ಮತ್ತು ಚುನಾವಣೆಯನ್ನು ಅನೂರ್ಜಿತ ಎಂದು ಘೋಷಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT