ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಕ್ಲರ್ಕ್ ಪರೀಕ್ಷೆ ಸಿದ್ಧತೆ ಹೇಗಿರಬೇಕು?

Last Updated 19 ಮೇ 2021, 19:30 IST
ಅಕ್ಷರ ಗಾತ್ರ

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಕ್ಲರ್ಕ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಪರ್ಧಾರ್ಥಿಗಳು ಆನ್‌ಲೈನ್‌ ಸಹಾಯದಿಂದ ಸಿದ್ಧತೆಯನ್ನು ನಡೆಸಬಹುದು.

ಸದ್ಯ ದೇಶದಾದ್ಯಂತ ಎದುರಾಗಿರುವ ಕೋವಿಡ್‌-19 ಎರಡನೇ ಅಲೆ ತೀವ್ರತೆಯ ನಡುವೆ ಈ ಬಾರಿಯ ಎಸ್‌ಬಿಐ (ಭಾರತೀಯ ಸ್ಟೇಟ್‌ ಬ್ಯಾಂಕ್‌) ಕ್ಲರ್ಕ್- 2021 (ಜೂನಿಯರ್‌ ಅಸೋಸಿಯೇಟ್‌) ಅಧಿಸೂಚನೆ ಹೊರಬೀಳುವುದೋ ಅಥವಾ ಇಲ್ಲವೋ ಎಂಬ ಗೊಂದಲ ಅನೇಕ ಅಭ್ಯರ್ಥಿಗಳಲ್ಲಿತ್ತು. ಈಗ ಎಸ್‌ಬಿಐ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಮೂಲಕ ಆಕಾಂಕ್ಷಿಗಳಲ್ಲಿದ್ದ ಗೊಂದಲಗಳಿಗೆ ತೆರೆ ಎಳೆದಿದೆ. ವರ್ಷದಿಂದ ವರ್ಷಕ್ಕೆ ಪದವೀಧರರು ಹೆಚ್ಚುತ್ತಾ ಹೋದಂತೆ ಸ್ಪರ್ಧಾರ್ಥಿಗಳ ಸಂಖ್ಯೆ ಕೂಡ ಹೆಚ್ಚುವುದು ಸಹಜ. ಅದಕ್ಕೆ ತಕ್ಕಂತೆ ಸ್ಪರ್ಧೆಯೂ ಕೂಡ ಜಾಸ್ತಿಯಾಗುತ್ತ ಹೋಗುತ್ತದೆ. ಹಾಗೆಯೇ ಕ್ಲಿಷ್ಟತೆಯ ಮಟ್ಟ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುತ್ತದೆ.

ಈ ಬಾರಿಯ ಬದಲಾವಣೆಗಳು
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಕೆಲವು ಬದಲಾವಣೆಗಳು ಸಾಮಾನ್ಯ. ಹಾಗೆಯೇ ಈ ಬಾರಿಯ ಬದಲಾವಣೆಗಳು ಕೆಳಗಿನಂತಿವೆ:

ಈ ಬಾರಿ ಅರ್ಜಿ ಸಲ್ಲಿಸುವಾಗ ಪರೀಕ್ಷೆಗೆ ನೀವು ತರುವ ಐಡಿ ಪ್ರೂಫ್‌ನ ಸಂಖ್ಯೆ ನೀಡುವುದು ಕಡ್ಡಾಯ ಹಾಗೂ ಅದು ನೀವು ಅರ್ಜಿ ಸಲ್ಲಿಸಿದ ಹೆಸರಿನೊಂದಿಗೆ ಹೊಂದಾಣಿಕೆಯಾಗಬೇಕು.

ಈ ಬಾರಿ ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷಾ ಸ್ಥಳದಲ್ಲಿ ಸಂಗ್ರಹಿಸಲಾಗುವುದಿಲ್ಲ. ಬದಲಾಗಿ ಇದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧೃಡಪಡಿಸಿಕೊಳ್ಳುವ ಆಗತ್ಯವಿದೆ. ಮೇನ್ಸ್ ಪರೀಕ್ಷೆಗೆ ಅರ್ಹಗೊಂಡ ಅಭ್ಯರ್ಥಿಗಳು ಮೇನ್ಸ್ ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ದೃಢೀಕರಣಗೊಂಡ ಪ್ರವೇಶ ಪತ್ರವನ್ನು ಕೂಡ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಬಹುದು.

ಪರೀಕ್ಷಾ ತಯಾರಿ ಹೇಗಿರಬೇಕು?
ಪರೀಕ್ಷೆಗೆ ಅರ್ಜಿ ಸಲ್ಲಿಸಿದ, ಈಗಾಗಲೇ ಬೇರೆ ಉದ್ಯೋಗ ಮಾಡುತ್ತಿರುವ ಸ್ಪರ್ಧಾರ್ಥಿಗಳಿಗೆ ವರ್ಕ್ ಫ್ರಂ ಹೋಮ್ ಅಥವಾ ಲಾಕ್‌ಡೌನ್‌ ರಜೆ ಇರುವುದರಿಂದ ಆನ್‌ಲೈನ್‌ನಲ್ಲಿ ತರಬೇತಿ ಪಡೆದುಕೊಂಡು ಅಧ್ಯಯನ ನಡೆಸಲು ಸಾಕಷ್ಟು ಕಾಲಾವಕಾಶವಿದೆ. ಇದಲ್ಲದೆ ಕೋವಿಡ್‌ ಕಾರಣದಿಂದ ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಸಾಕಷ್ಟು ಸಮಯ ದೊರಕುವುದರಿಂದ ಪರೀಕ್ಷಾ ತಯಾರಿಗಾಗಿ ಹೆಚ್ಚಿನ ಸಮಯ ಮೀಸಲಿಡಬಹುದು. ಇದರೊಂದಿಗೆ ಪರೀಕ್ಷೆ ತಯಾರಿಗೆಂದೇ ತಮ್ಮ ಸಂಪೂರ್ಣ ಸಮಯ ಮೀಸಲಿಟ್ಟ ಅಭ್ಯರ್ಥಿಗಳು ಈ ಸಂದರ್ಭದಲ್ಲಿ ಪರೀಕ್ಷೆಗೆ ಮತ್ತಷ್ಟು ತಯಾರಿ ನಡೆಸಿ ಆಯ್ಕೆಯಾಗುವ ಅವಕಾಶ ಜಾಸ್ತಿಯಿದೆ. ಹಾಗಾಗಿ ಮೊದಲ ಪ್ರಯತ್ನದ ಅಭ್ಯರ್ಥಿಗಳಿಂದ ಹಿಡಿದು ಕೊನೆಯ ಅವಕಾಶ ಎನ್ನುವ ಎಲ್ಲಾ ಅಭ್ಯರ್ಥಿಗಳೂ ಸಹ ಈಗಿನಿಂದಲೇ ತಯಾರಿ ನಡೆಸುವುದು ಸೂಕ್ತ.

ಪರೀಕ್ಷಾ ತಂತ್ರ ರೂಪಿಸಿಕೊಳ್ಳಿ

* ಪರೀಕ್ಷಾ ತಯಾರಿಗೆ ಮೊದಲು ಪಠ್ಯಕ್ರಮವನ್ನು ಸಂಪೂರ್ಣ ಅವಲೋಕಿಸಿ.

* ನಿಮ್ಮ ಪ್ರಬಲ ಅಂಶ ಹಾಗೂ ದೌರ್ಬಲ್ಯಗಳ ಮೇಲೆ ನಿಗಾ ವಹಿಸಿ. ದೌರ್ಬಲ್ಯವಿರುವ ವಿಷಯವನ್ನು ಹೆಚ್ಚು ಒತ್ತುಕೊಟ್ಟು ಅಭ್ಯಸಿಸಿ.

* ಪ್ರತಿನಿತ್ಯ ಒಂದು ಪ್ರಿಲಿಮ್ಸ್ ಹಾಗೂ ಎರಡು ದಿನಕ್ಕೊಮ್ಮೆ ಒಂದು ಮೇನ್ಸ್ ಅಣಕು ಪರೀಕ್ಷೆ ತೆಗೆದುಕೊಂಡು ಅವಲೋಕಿಸಿಕೊಳ್ಳಿ.

* ಓದಲು ನಿಗದಿತ ವೇಳಾಪಟ್ಟಿಯನ್ನು ಅನುಸರಿಸಿ.

* ಜನರಲ್ ಅವೇರ್‌ನೆಸ್‌ /ಫೈನಾನ್ಸಿಯಲ್ ಅವೇರ್‌ನೆಸ್ ವಿಭಾಗದಲ್ಲಿ ನವೀಕರಿಸಿದ ಪ್ರಶ್ನೆಗಳ ಕಡೆಗೆ ಗಮನ ಕೊಡಬೇಕಾಗುತ್ತದೆ. ಹೀಗಾಗಿ ಕನಿಷ್ಠ ಕಳೆದ 6 ತಿಂಗಳುಗಳ ನೋಟ್ಸ್ ತಯಾರಿಸಿಕೊಳ್ಳಿ. ಈ ವಿಭಾಗದಲ್ಲಿ ಮೇನ್ಸ್ ಪರೀಕ್ಷೆಯಲ್ಲಿ 50 ಅಂಕ ಮೀಸಲು ಇರುವುದರಿಂದ ಈ ವಿಭಾಗಕ್ಕೆ ಈಗಿನಿಂದಲೇ ಹೆಚ್ಚು ಒತ್ತುಕೊಟ್ಟು ಅಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ಯಶಸ್ಸು ಸುಲಭ.

* ಉಳಿದ ವಿಷಯಗಳ ಕ್ಲಿಷ್ಟತೆಯ ಮಟ್ಟವನ್ನು ಹೆಚ್ಚಿಸಲು ನವೀಕರಿಸಿದ ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ಅವಲೋಕಿಸಿ.

ಅಧಿಸೂಚನೆಯಲ್ಲಿ ತಿಳಿಸಿದಂತೆ ಅರ್ಜಿ ಸಲ್ಲಿಸಲು ಮೇ 17ರವರೆಗೆ ದಿನಾಂಕ ನಿಗದಿಯಾಗಿತ್ತು. ನಂತರ 15/5/2021ರ ತಿದ್ದುಪಡಿ (ಕೊರಿಜೆಂಡಮ್‌)ಯ ಪ್ರಕಾರ ಆನ್‌ಲೈನ್‌ ಅರ್ಜಿ ಸಲ್ಲಿಸಲು ಹಾಗೂ ಶುಲ್ಕವನ್ನು ಪಾವತಿಸಲು ಅವಧಿಯನ್ನು ಮೇ 20ರವರೆಗೆ ವಿಸ್ತರಿಸಲಾಗಿದೆ ಹಾಗಾಗಿ ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ಇಂದು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶಪತ್ರ ಬಿಡುಗಡೆ ದಿನಾಂಕವನ್ನು ಜೂನ್‌ 11ರ ನಂತರ ಬಿಡುಗಡೆಗೊಳಿಸುವುದಾಗಿ ಹಾಗೂ ಪರೀಕ್ಷೆಗಳನ್ನು ಜೂನ್ 2021ರ ವಿವಿಧ ದಿನಾಂಕಗಳಲ್ಲಿ ನಡೆಸುವುದಾಗಿ ತಾತ್ಕಾಲಿಕ ದಿನಾಂಕ ಪ್ರಕಟಿಸಿದೆ. ಹಾಗೆಯೇ ಮೇನ್ಸ್ ಪರೀಕ್ಷೆ ಯ ಪ್ರವೇಶ ಪತ್ರವನ್ನು ಜೂನ್‌ 19ರ ನಂತರ ಬಿಡುಗಡೆಗೊಳಿಸುವುದಾಗಿ ಹಾಗೂ ಪರೀಕ್ಷೆಯನ್ನು ಜುಲೈ 31ರಂದು ನಡೆಸುವುದಾಗಿ ತಾತ್ಕಾಲಿಕ ದಿನಾಂಕ ಪ್ರಕಟಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಪರೀಕ್ಷೆಗೆ ತಯಾರಿ ನಡೆಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT