ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಮುಖ್ಯ ಪರೀಕ್ಷೆ: ವಿಷಯಕ್ಕೆ ತಕ್ಕ ಕೃತಿ ಓದಿ

ಯುಪಿಎಸ್‌ಸಿ ಮುಖ್ಯ ಪರೀಕ್ಷೆ
Last Updated 27 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಯುಪಿಎಸ್‌ಸಿಯ ಪೂರ್ವಭಾವಿ ಪರೀಕ್ಷೆಗೆ ಓದಿದ ಕೃತಿಗಳ ಜೊತೆಗೆ ಈ ಲೇಖನದಲ್ಲಿ ಪಟ್ಟಿಮಾಡಿರುವ ಪುಸ್ತಕಗಳನ್ನು ಮುಖ್ಯ ಪರೀಕ್ಷೆ(ಮೇನ್ಸ್‌)ಗೆ ಓದಲೇಬೇಕು. ಅದರ ಜೊತೆಗೆ ಗಾಂಧೀಜಿ, ವಿವೇಕಾನಂದ, ಮಾರ್ಟಿನ್‌ಲೂಥರ್‌ಕಿಂಗ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ, ಬರ್ಟ್ರಾಂಡ್ ರಸೆಲ್‌ರ ಪ್ರಬಂಧಗಳು, ವಿನ್‌ಸ್ಟನ್ ಚರ್ಚಿಲ್‌ರ ಭಾಷಣ, ಬರ್ನಾಡ್‌ ಷಾ ಅವರ ಪುಸ್ತಕಗಳನ್ನು ಓದಿದರೆ ಹೆಚ್ಚು ಅನುಕೂಲ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಸಾಮಾನ್ಯ ಅಧ್ಯಯನದ ನಾಲ್ಕು, ಐಚ್ಛಿಕ ವಿಷಯಗಳ ಎರಡು, ಪ್ರಬಂಧ, ಭಾರತೀಯ ಭಾಷೆ (ಪೇಪರ್‌ A - ಕಡ್ಡಾಯ) ಮತ್ತು ಇಂಗ್ಲಿಷ್ (ಪೇಪರ್ B) ಸೇರಿ ಒಟ್ಟು ಒಂಬತ್ತು ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಯಬೇಕು. ಪ್ರತಿ ವಿಷಯಕ್ಕೂ ವಿಸ್ತೃತ ಹಾಗೂ ವಿಶೇಷ ತಯಾರಿ ಬೇಕೇಬೇಕು.

ಪೇಪರ್ Aಮತ್ತು B ಹೊರತುಪಡಿಸಿ ಒಟ್ಟು 1750 ಅಂಕಗಳಿಗೆ ಉತ್ತರಿಸಲು, ಹೆಚ್ಚಿನ ಅಂಕಗಳಿಸಲು ಯಾವ ಪುಸ್ತಕ, ನೋಟ್ಸ್‌, ಮ್ಯಾಗಜಿನ್, ವರದಿ, ಸಮೀಕ್ಷೆ, ಪ್ರಬಂಧ ಓದಬೇಕು ಎಂಬ ಪ್ರಶ್ನೆ ಎಲ್ಲ ಅಭ್ಯರ್ಥಿಗಳಲ್ಲೂ ಸಹಜ. ಒಂದು ವಿಷಯ ನೆನಪಿರಲಿ; ಪ್ರಿಲಿಮ್ಸ್‌(ಪೂರ್ವಭಾವಿ ಪರೀಕ್ಷೆ)ತಯಾರಿಗೆ ಓದಿದ ಪುಸ್ತಕಗಳು ಮುಖ್ಯ ಪರೀಕ್ಷೆ ತಯಾರಿಗೂ ನೆರವಾಗುತ್ತವೆ.

ಸಾಮಾನ್ಯ ಅಧ್ಯಯನಕ್ಕೆ ಯಾವ ಪುಸ್ತಕ?

ಸಾಮಾನ್ಯ ಅಧ್ಯಯನದ (General Studies –I) ಮೊದಲ ಪತ್ರಿಕೆಯಲ್ಲಿ ಭಾರತೀಯ ಪರಂಪರೆ ಮತ್ತು ಸಂಸ್ಕೃತಿ, ವಿಶ್ವದ ಇತಿಹಾಸ ಮತ್ತು ಭೂಗೋಳ ಹಾಗೂ ಸಾಮಾಜಿಕ ವ್ಯವಸ್ಥೆ ಕುರಿತಾದ ಪ್ರಶ್ನೆಗಳಿರುತ್ತವೆ. ಇವುಗಳ ಅಧ್ಯಯನಕ್ಕೆ ಅರ್ಜುನ್ ದೇವ್ ಹಾಗೂ ಇಂದಿರಾ ಅರ್ಜುನ್ ದೇವ್‌ರ ‘ವರ್ಲ್ಡ್ ಹಿಸ್ಟರಿ’, ರಾಮ್ ಅಹುಜಾರ ‘ಸೋಶಿಯಲ್ ಪ್ರಾಬ್ಲಮ್ಸ್‌’, ಸೌಮೆನ್ ಸಿಕ್‌ದರ್ ಬರೆದ ‘ಕಾಂಟೆಂಪರರಿ ಇಶ್ಯೂಸ್ ಇನ್ ಗ್ಲೋಬಲೈಜೇಶನ್’, ಜಿ.ಸಿ.ಲಿಯೊಂಗ್ ಬರೆದಿರುವ ‘ಸರ್ಟಿಫಿಕೇಟ್ ಆಫ್ ಫಿಸಿಕಲ್ ಅಂಡ್ ಹ್ಯೂಮನ್ ಜಿಯೊಗ್ರಫಿ’, ಆಕ್ಸ್‌ಫರ್ಡ್ ಪ್ರೆಸ್‌ನವರ ‘ಆಕ್ಸ್‌ಫರ್ಡ್ ಸ್ಕೂಲ್ ಅಟ್ಲಾಸ್‌’ ಮತ್ತು ಓರಿಯಂಟ್ ಬ್ಲಾಕ್ ಸ್ವಾನ್ ಪ್ರಕಾಶನದ ‘ವರ್ಲ್ಡ್‌ ಅಟ್ಲಾಸ್‌’, ರಾಜೀವ್ ಅಹಿರ್‌ ಅವರ ‘ಎ ಬ್ರೀಫ್ ಹಿಸ್ಟರಿ ಆಫ್ ಮಾಡ್ರನ್ ಇಂಡಿಯಾ’, ಮಜಿದ್ ಹುಸೇನ್‌ರ ಜಿಯಾಗ್ರಫಿ ಇಂಡಿಯಾ, ವರ್ಲ್ಡ್‌ ಜಿಯಾಗ್ರಫಿ, ಪುಸ್ತಕಗಳನ್ನು ತಪ್ಪದೇ ಓದಬೇಕು.

ಎರಡನೇ ಪತ್ರಿಕೆಯಲ್ಲಿ (General Studies – II) ಆಡಳಿತ, ಸಂವಿಧಾನ, ರಾಜಕೀಯ, ಸಾಮಾಜಿಕ ನ್ಯಾಯ, ಅಂತರರಾಷ್ಟ್ರೀಯ ಸಂಬಂಧಗಳ ಕುರಿತಾದ ವಿಷಯಗಳಿರುತ್ತವೆ. ಎಂ.ಲಕ್ಷ್ಮೀಕಾಂತ್‌ ಬರೆದ ‘ಇಂಡಿಯನ್ ಪಾಲಿಟಿ’ ಕೃತಿಯ ಆರನೇ ಆವೃತ್ತಿ, ಡಿ.ಡಿ.ಬಸು ಬರೆದಿರುವ ಇಂಟ್ರೊಡಕ್ಷನ್ ಟು ಇಂಡಿಯನ್ ಕಾನ್‌ಸ್ಟಿಟ್ಯೂಶನ್, ಪುಷ್ಪೇಶ್ ಪಂತ್ ಅವರ ಇಂಟರ್‌ನ್ಯಾಷನಲ್ ರಿಲೇಶನ್ಸ್, ಪುಸ್ತಕಗಳು ಸಮಗ್ರ ಅಧ್ಯಯನದ ಅವಕಾಶ ಕಲ್ಪಿಸುತ್ತವೆ.

ಸಾಮಾನ್ಯ ಅಧ್ಯಯನದ (General Studies – III) 3ನೆಯ ಪತ್ರಿಕೆಯಲ್ಲಿ ವಿಜ್ಞಾನ ತಂತ್ರಜ್ಞಾನ, ಆರ್ಥಿಕತೆ ಮತ್ತು ಅಭಿವೃದ್ಧಿ, ಜೀವ ವೈವಿಧ್ಯ, ಪರಿಸರ, ಭದ್ರತೆ ಹಾಗೂ ವಿಕೋಪ ನಿರ್ವಹಣೆಗಳ ಕುರಿತ ಪಠ್ಯಕ್ರಮವಿದ್ದು ಅದರ ವಿಸ್ತೃತ ಅಧ್ಯಯನಕ್ಕೆ ನಿತಿನ್ ಸಿಂಘಾನಿಯರ ಇಂಡಿಯನ್ ಎಕಾನಮಿ, ಪರಿಸರ ಮತ್ತು ವಿಕೋಪ ನಿರ್ವಹಣೆಗೆ ಟಾಟಾ ಮೆಗ್ರಾಹಿಲ್ ಪಬ್ಲಿಕೇಶನ್, ಆಂತರಿಕ ಭದ್ರತೆ ವಿಷಯಕ್ಕೆ ಅಶೋಕ್ ಕುಮಾರ್ ಬರೆದ ‘ಛಾಲೆಂಜಸ್ ಟು ಇಂಟರ್‌ನಲ್‌ ಸೆಕ್ಯುರಿಟಿ ಆಫ್ ಇಂಡಿಯ’, ಎನ್ವಿರಾನ್ಮೆಂಟ್‌ ರೀಡರ್ ಫಾರ್ ಇಂಡಿಯನ್ ಯೂನಿವರ್ಸಿಟಿಸ್, ಸೈನ್ಸ್ ರಿಪೋರ್ಟರ್, ಕಾಂಪಿಟಿಶನ್ ವಿಜರ್ಡ್, ಇಸ್ರೊ, ಸಿಎಸ್‌ಐಆರ್, ಐಐಎಚ್‌ಆರ್, ಐಐಎಸ್‌ಸಿ, ಆರ್‌ಆರ್‌ಐ ಮತ್ತು ದೇಶದ ಐಐಟಿ, ಐಐಎಸ್‌ಇಆರ್‌ಗಳ ವೆಬ್‌ಸೈಟ್‌ಗಳನ್ನು ಗಮನಿಸಬೇಕು.

ಸಾಮಾನ್ಯ ಅಧ್ಯಯನದ ನಾಲ್ಕನೆ (General Studies – IV) ಪತ್ರಿಕೆಯ ಪಠ್ಯಕ್ರಮ ಅಭ್ಯರ್ಥಿಯ ಸಾಮಾಜಿಕ ದೃಷ್ಟಿಕೋನ, ಪ್ರಾಮಾಣಿಕ ಮನೋಭಾವ, ಮಾನವೀಯ ಮೌಲ್ಯ -ಮಾನವ ಸಂಬಂಧಗಳ ಕುರಿತಾದ ನಂಬಿಕೆಗಳು, ಸಾಧಕರ ಜೀವನ ಪಾಠಗಳ ಪ್ರಭಾವ, ಸಾಮಾಜಿಕ ಸಂರಚನೆಯಲ್ಲಿ ಕುಟುಂಬಗಳ ಸಹ ಭಾಗಿತ್ವ, ನೀತಿ ನಿರೂಪಣೆ, ನೈತಿಕ ಮೌಲ್ಯಗಳ ಕಡೆಗಿನ ಒಲವು ಮತ್ತು ಆಚರಣೆ, ವರ್ತನೆ, ಮನೋವೃತ್ತಿ, ಸಮಗ್ರತೆಗಳನ್ನು ಉತ್ತರಗಳ ಮೂಲಕ ಒರೆಗೆ ಹಚ್ಚುತ್ತದೆ. ಇದರ ಸೂಕ್ಷ್ಮ ಮತ್ತು ವಿಶ್ಲೇಷಣಾತ್ಮಕ ಅಧ್ಯಯನಕ್ಕೆ ಸುಬ್ಬರಾವ್ ಮತ್ತು ಡಿ.ಎನ್.ರಾಯ್ ಚೌಧರಿ ಬರೆದಿರುವ ಎಥಿಕ್ಸ್, ಇಂಟೆಗ್ರಿಟಿ ಅಂಡ್ ಆಪ್ಟಿಟ್ಯೂಡ್‌ಫಾರ್ ಸಿವಿಲ್ ಸರ್ವಿಸಸ್ ಮೇನ್ ಎಕ್ಸಾಮಿನೇಶನ್ ಎಂಬ ಪುಸ್ತಕ ಓದಲೇಬೇಕು.

ಜೊತೆಗೆ ಗಾಂಧೀಜಿ, ವಿವೇಕಾನಂದ, ಮಾರ್ಟಿನ್‌ಲೂಥರ್‌ಕಿಂಗ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ, ಬರ್ಟ್ರಾಂಡ್ ರಸೆಲ್‌ರ ಪ್ರಬಂಧಗಳು, ವಿನ್‌ಸ್ಟನ್ ಚರ್ಚಿಲ್‌ರ ಭಾಷಣ, ಬರ್ನಾಡ್‌ ಷಾ ಅವರ ಪುಸ್ತಕಗಳನ್ನು ಓದಿದರೆ ಹೆಚ್ಚು ಅನುಕೂಲ ಎಂಬುದು ಯುಪಿಎಸ್‌ಸಿ ಟಾಪರ್‌ಗಳ ಮುಕ್ತ ಅಭಿಪ್ರಾಯ.

ಎಂ.ಕಾರ್ತಿಕೇಯನ್, ನಂದ ಕಿಶೋರ್‌ರೆಡ್ಡಿ, ಡಿ.ಕೆ ಬಾಲಾಜಿ ಅವರ ‘ಎಥಿಕ್ಸ್, ಇಂಟೆಗ್ರಿಟಿ ಅಂಡ್ ಆಪ್ಟಿಟ್ಯೂಡ್, ದಿ ಲೆಕ್ಸಿಕಾನ್‌ರ ಇತ್ತೀಚಿನ ಆವೃತ್ತಿ, ಪಿಯರ್‌ಸನ್ ಪ್ರಕಾಶನದ ಮುಕುಲ್ ಕುಲಕರ್ಣಿ ಮತ್ತು ಅಕ್ಷಯ್ ಪಾಟೀಲ್‌ರ ಪುಸ್ತಕ, ಅಜಿತ ಕುಮಾರ್ ಝೂ ಅವರ ‘200 ಎಥಿಕ್ಸ್ – ಕೇಸ್ ಸ್ಟಡೀಸ್ ಅಂಡ್ ಡಿಸ್‌ಕಶನ್ಸ್’ ಎಂಬ ಪುಸ್ತಕ, ಅನಿಲ್ ಸ್ವರೂಪ್‌ರ ‘ಎಥಿಕಲ್ ಡಿಲೆಮ್ಮಾಸ್ ಆಫ್ ಎ ಸಿವಿಲ್ ಸರ್ವೆಂಟ್’ ಪುಸ್ತಕಗಳು ಅಭ್ಯರ್ಥಿಯ ತಯಾರಿಗೆ ಭಾರಿ ಸತ್ವ ಒದಗಿಸುತ್ತವೆ. ನೈತಿಕತೆ, ಸಮಗ್ರತೆ ಮತ್ತು ಸಾಮರ್ಥ್ಯ ಎಂಬ ಬಾಲಾಜಿ ಬರೆದಿರುವ ಕನ್ನಡ ಅವತರಣಿಕೆ ತುಂಬಾ ಉಪಯುಕ್ತ ಪುಸ್ತಕ ಎಂಬ ಮಾತಿದೆ.

ಇವೆಲ್ಲ ಉದಾಹರಣೆಯಷ್ಟೇ. ನೀವು ಆಯ್ಕೆ ಮಾಡಿಕೊಳ್ಳುವ ನಿಮ್ಮ ಇಷ್ಟದ ವಿಷಯದ ಅಧ್ಯಯನಕ್ಕೆ ಬೇಕಾದ ಉತ್ಕೃಷ್ಟ ಪುಸ್ತಕಗಳು ಮಾರುಕಟ್ಟೆ, ಲೈಬ್ರರಿಗಳಲ್ಲಿ ಲಭ್ಯವಿರುತ್ತವೆ.NCERTಯ6 ರಿಂದ 12 ನೇ ತರಗತಿಯ ಎಲ್ಲಾ ಪುಸ್ತಕಗಳು, ಯೋಜನಾ ಪತ್ರಿಕೆ, ವಿವಿಧ ಪಬ್ಲಿಕೇಶನ್‌ಗಳ ಇಯರ್ ಬುಕ್‌ಗಳು, ವಿವಿಧ ವಿಶ್ವಾಸಾರ್ಹ ದಿನಪತ್ರಿಕೆ / ನಿಯತಕಾಲಿಕೆಗಳು, ವಿಮರ್ಶಾ ಗ್ರಂಥಗಳು, ಪ್ರಸಿದ್ಧ ಕೋಚಿಂಗ್ ಸಂಸ್ಥೆಗಳ ನೋಟ್ಸ್‌ಗಳು, ವೆಬ್‌ಸೈಟ್‌ಗಳಲ್ಲಿ ಸಿಗುವ ಫ್ರೀ ಸ್ಟಡೀ ಮೆಟೀರಿಯಲ್‌ಗಳು ಅಧ್ಯಯನಕ್ಕೆ ಕಸುವು ತುಂಬುತ್ತವೆ.

ಕನ್ನಡ ಸಾಹಿತ್ಯ ಮತ್ತು ಭಾಷೆ

ಆಪ್ಶನಲ್(ಆಯ್ಕೆ) ಪೇಪರ್‌ಗೆ ತಯಾರಿ: ಅಭ್ಯರ್ಥಿಗಳು ತಾವೇ ಆಯ್ಕೆ ಮಾಡಿಕೊಂಡ ಎರಡು ಪತ್ರಿಕೆಗಳಿರುತ್ತವೆ. ಉದಾಹರಣೆಗೆ ಕನ್ನಡ ಸಾಹಿತ್ಯ ಮತ್ತು ಭಾಷೆಯನ್ನು (ಪತ್ರಿಕೆ – 1 ಮತ್ತು 2 )ಆಯ್ಕೆ ಮಾಡಿಕೊಳ್ಳುವವರು ಕನ್ನಡ ಭಾಷೆಯ ಇತಿಹಾಸ, ಕನ್ನಡ ಸಾಹಿತ್ಯ ಚರಿತ್ರೆ, ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯಕ ವಿಮರ್ಶೆ, ಕರ್ನಾಟಕದ ಸಾಂಸ್ಕೃತಿಕ ಚರಿತ್ರೆ, ಪ್ರಾಚೀನ, ಮಧ್ಯಕಾಲೀನ, ಆಧುನಿಕ ಕನ್ನಡ ಸಾಹಿತ್ಯ, ಜನಪದ ಸಾಹಿತ್ಯ ವಿಷಯಗಳ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಪುಸ್ತಕಗಳನ್ನು ಓದಲೇಬೇಕು.

ಕನ್ನಡ ಭಾಷೆ ಮತ್ತು ಸಾಹಿತ್ಯದ ವಿಸ್ತೃತ ತಿಳಿವಳಿಕೆಗಾಗಿ, ರಂ.ಶ್ರೀ ಮುಗಳಿಯವರ ‘ಕನ್ನಡ ಸಾಹಿತ್ಯ ಚರಿತ್ರೆ’, ಆರ್. ವೈ. ಧಾರವಾಡಕರ್‌ ಅವರ ‘ಕನ್ನಡ ಭಾಷಾ ಶಾಸ್ತ್ರ’, ಎಂ.ಎಚ್.ಕೃಷ್ಣಯ್ಯನವರ ‘ಕನ್ನಡ ಭಾಷೆಯ ಶಾಸ್ತ್ರೀಯ ಇತಿಹಾಸದ ಅಧ್ಯಯನ’ ತೀರಾ ಅವಶ್ಯಕ. ಎರಡನೆಯ ಪತ್ರಿಕೆಗೆ ಶಿವರಾಮ ಕಾರಂತರ ‘ಬೆಟ್ಟದ ಜೀವ’, ಅನುಪಮಾ ನಿರಂಜನರ ‘ಮಾಧವಿ’, ದೇವನೂರು ಮಹದೇವರ ‘ಒಡಲಾಳ’, ಎ.ಎನ್.ಮೂರ್ತಿರಾವ್‌ ಅವರ ‘ದೇವರು’, ಡಾ.ಹಾ.ಮಾ.ನಾಯಕರ ‘ಜನಪದ ಸ್ವರೂಪ’, ದೇ. ಜವರೇಗೌಡರ ಜನಪ್ರಿಯ ಕನಕ ಸಂಪುಟ, ಜೀ.ಶಂ. ಪರಮಶಿವಯ್ಯನವರ ‘ಕನ್ನಡ ಜನಪದ ಕತೆಗಳು’, ಜಿ.ಎಚ್.ನಾಯಕರ ‘ಕನ್ನಡ ಸಣ್ಣ ಕತೆಗಳು’, ಕುಮಾರವ್ಯಾಸನ ಗದುಗಿನಭಾರತ, ಟಿ.ಎನ್.ಶ್ರೀಕಂಠಯ್ಯನವರ ನಂಬಿಯಣ್ಣನ ರಗಳೆ, ಎಲ್.ಬಸವರಾಜುರವರ ಪಂಪನ ಸಮಸ್ತ ಭಾರತ ಕಥಾಮೃತ, ಕುವೆಂಪು ಅವರ ‘ಶೂದ್ರ ತಪಸ್ವಿ’, ಗಿರೀಶ್ ಕಾರ್ನಾಡರ ‘ತುಘಲಕ್’, ಕೆ. ಮರುಳುಸಿದ್ದಪ್ಪ ಮತ್ತು ಕಿ.ರಂ.ನಾಗರಾಜ್‌ರ ‘ವಚನ ಕಮ್ಮಟ’ ಹಾಗೂ ಪಂಪನ ‘ವಿಕ್ರಮಾರ್ಜುನ ವಿಜಯ’ ಕೃತಿಗಳನ್ನು ಓದಬೇಕು.

(ಮುಂದಿನ ವಾರ ಪಾಠ– 7 : ಮೇನ್ಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಸ್ವರೂಪ ಮತ್ತು ಉತ್ತರಿಸುವ ಬಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT