ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಗೆ ಬೇಕು ‘ಅಡೆಪ್ಟ್’

Last Updated 10 ಜುಲೈ 2022, 23:15 IST
ಅಕ್ಷರ ಗಾತ್ರ

ಕಲಿತಿದ್ದು ನೆನಪಿನಲ್ಲಿ ಉಳಿಯದಿದ್ದಾಗ, ಪದೇ ಪದೇ ಪುಸ್ತಕಗಳನ್ನು ಓದುತ್ತೇವೆ. ವಿದ್ಯಾರ್ಥಿಗಳು ವಿಷಯದ ಕಲಿಕೆ ಕಷ್ಟವಾದಾಗ ‘ಕಂಠಪಾಠ’ ಮಾಡಿ, ಬಲವಂತವಾಗಿ ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಸುಲಭವಾಗಿ ನೆನಪಿಟ್ಟುಕೊಳ್ಳಲು ನೆರವಾ ಗುವಂತಹ ಕಲಿಕಾ ತಂತ್ರವೊಂದಿದ್ದರೆ, ಕಲಿಕೆ ಸರಳವಾಗುತ್ತದೆ. ಹೀಗೆ ಕಲಿತಿದ್ದನ್ನು ಸುಲಭವಾಗಿ ಅರ್ಥೈಸುವ ಹಾಗೂ ನೆನಪಿಟ್ಟುಕೊಳ್ಳಲು ನೆರವಾಗುವ ಕಲಿಕಾ ತಂತ್ರಜ್ಞಾನವೇ ಅಡೆಪ್ಟ್‌(ADEPT). ಅಮೆರಿಕಾದ ಖ್ಯಾತ ಸೈದ್ದಾಂತಿಕ ಭೌತಶಾಸ್ತ್ರಜ್ಞ ಹಾಗೂ ಶಿಕ್ಷಣ ತಜ್ಞ ರಿಚರ್ಡ್ ಫಿಲಿಪ್ಸ್ ಫೆಯನ್‌ಮನ್ ಅವರು ಈ ಕಲಿಕಾ ತಂತ್ರವನ್ನು ರೂಪಿಸಿದ್ದಾರೆ.

ಏನಿದು ಅಡೆಪ್ಟ್‌ (ADEPT)?

l A–Analogy(ಸಾದೃಶ್ಯ)
l D–Diagram(ರೇಖಾಚಿತ್ರ)

l E–Example(ಉದಾಹರಣೆ)

l P–Plain Language(ಸರಳ ಭಾಷೆ)

l T–Technical Description(ತಾಂತ್ರಿಕ ವಿವರಣೆ)

ಅಡೆಪ್ಟ್‌ ಒಂದುಉತ್ತಮ ಕಲಿಕಾ ಸ್ನೇಹಿ ತಂತ್ರ. ವಿದ್ಯಾರ್ಥಿಗಳು ಹಂತ ಹಂತವಾಗಿ ಕಲಿಕೆಯಲ್ಲಿ ಮುಂದುವ ರಿಯಲು ನೆರವಾಗುತ್ತದೆ. ಕಂಠಪಾಠ ಪದ್ದತಿಗೆ ವಿದಾಯ ಹೇಳಿ, ತಾಂತ್ರಿಕ ವಿವರಣೆಗಳ ಮೂಲಕ ಅಭ್ಯಾಸ ಮಾಡುವುದೇ ಇದರ ಉದ್ದೇಶ. ಪರಿಕಲ್ಪನೆಯನ್ನು(Concept) ಸಂಪೂರ್ಣವಾಗಿ ಅರ್ಥೈಸಿಕೊಂಡರೆ, ಎಂತಹ ಸಮಸ್ಯೆಯನ್ನಾದರೂ ಸುಲಭವಾಗಿ ಪರಿಸಹರಿಸಿಕೊಳ್ಳಲು ಸಾಧ್ಯವಿದೆ. ಪರಿಕಲ್ಪನೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಈ ಕಲಿಕಾ ತಂತ್ರಗಾರಿಕೆ ಪ್ರಮುಖ ಪಾತ್ರವಹಿಸುತ್ತದೆ. ಇದು ಕೇವಲ ಶೈಕ್ಷಣಿಕ ಹಂತ ದಾಟಲು ಮಾತ್ರವಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಅನ್ವಯವಾಗುತ್ತದೆ.

ಸಾದೃಶ್ಯದೊಂದಿಗೆ ಪ್ರಾರಂಭಿಸಿ

ಯಾವುದೇ ಹೊಸ ಪರಿಕಲ್ಪನೆಯನ್ನು ಕಲಿಯುವ ಮೊದಲು ನಿಮಗೆ ತಿಳಿದಿರುವ ಕಲಿಕೆಯೊಂದಿಗೆ ಹೋಲಿಸಿಕೊಳ್ಳಿ. ಉದಾಹರಣೆಗೆ ನರಕೋಶದ ಕಾರ್ಯಗಳ ಬಗ್ಗೆ ತಿಳಿಯಬೇಕಾಗಿದೆ ಎಂದುಕೊಳ್ಳೋಣ. ಇದಕ್ಕೆ ಪೂರಕವಾಗಿ ಈಗಾಗಲೇ ಸಾರಿಗೆ ಸಂಪರ್ಕ ವ್ಯವಸ್ಥೆಯ ಬಗ್ಗೆ ನಮಗೆ ತಿಳಿದಿದೆ. ಸಾರಿಗೆ ವ್ಯವಸ್ಥೆಗಳು ಜನರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವ ರೀತಿಯಲ್ಲಿಯೇ ನರಕೋಶಗಳು ಒಂದು ನಿರ್ದಿಷ್ಟ ನರಕೋಶದಿಂದ ಇನ್ನೊಂದಕ್ಕೆ ಸಂದೇಶಗಳನ್ನು ಸಾಗಿಸುತ್ತವೆ. ಇವೆರಡನ್ನೂ ಹೋಲಿಕೆ ಮಾಡಿಕೊಂಡಾಗ ಕಲಿಕೆ ಸುಗಮವಾಗುತ್ತದೆ ಮತ್ತು ಪರಿಕಲ್ಪನೆ ಸ್ಪಷ್ಟವಾಗುತ್ತದೆ.

ರೇಖಾಚಿತ್ರವನ್ನು ಬಳಸಿ

ಪರಿಕಲ್ಪನೆ ವಿವರಿಸಲು ಸೂಕ್ತ ಪದಗಳು ಲಭ್ಯವಾಗದಿದ್ದರೆ ಚಿತ್ರದ ಮೂಲಕ ತಿಳಿಸಿ. ಪರಿಕಲ್ಪನೆಯ ಸ್ಪಷ್ಟ ಸಂವಹನಕ್ಕಾಗಿ ರೇಖಾಚಿತ್ರವನ್ನು ಬಳಸಬಹುದು. ಜೀವಕೋಶಗಳು, ಜೀರ್ಣಕ್ರಿಯೆಗಳು, ರಕ್ತಪ್ರವಾಹ, ವಿವಿಧ ದೇಶಗಳ ಮಾಹಿತಿ ತಿಳಿಯುವಾಗ ರೇಖಾಚಿತ್ರ ಬಳಸಿಕೊಂಡರೆ ಬೇಗನೆ ಅರ್ಥವಾಗುತ್ತದೆ. ಈ ಚಿತ್ರಗಳ ಬಳಕೆಯಿಂದ ನಾವು ಹೊಸ ಮತ್ತು ಅಮೂರ್ತ ವಿಚಾರಗಳನ್ನು ದೃಶ್ಯೀಕರಿಸಬಹುದು. ಚಿತ್ರಗಳು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ನೆರವಾಗುತ್ತವೆ.

ಉದಾಹರಣೆಗಳು ಮುಖ್ಯ

ಕಲಿಯುವ ವಿಷಯದ ಬಗ್ಗೆ ಗೊಂದಲಗಳಿದ್ದರೆ ಉದಾಹರಣೆಗಳ ಮೂಲಕ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಗಣಿತದಲ್ಲಿ ಪ್ರಮೇಯಗಳನ್ನು ಕಲಿಯುವಾಗ ಸರಳವಾದ ಚಿತ್ರವನ್ನು ಉದಾಹರಣೆಯಾಗಿ ಬಳಸಿಕೊಂಡಾಗ ಪ್ರಮೇಯವು ಸುಲಭವಾಗಿ ಅರ್ಥವಾಗುತ್ತದೆ. ಅಂತೆಯೇ ವಿಜ್ಞಾನದಲ್ಲಿ ಕಣ್ಣಿಗೆ ಕಾಣದಿರುವ ಅಣು, ಪರಮಾಣು ಮುಂತಾದವುಗಳ ಬಗ್ಗೆ ಕಲಿಯುವಾಗ ಚಿತ್ರಗಳನ್ನು ಉದಾಹರಣೆಯಾಗಿ ಬಳಸಿದರೆ ಕಲಿಕೆ ಉತ್ತಮವಾಗುತ್ತದೆ.

ಸರಳ ಭಾಷೆಯಲ್ಲಿ ವಿವರಿಸಿ

ನೀವು ಕಲಿತ ಪರಿಕಲ್ಪನೆಯನ್ನು ನಿಮ್ಮದೇ ಸರಳ ಭಾಷೆಯಲ್ಲಿ ಬರೆದಿಟ್ಟು ಕೊಳ್ಳಿ. ಇದು ಪರಿಣಾಮಕಾರಿ ಸಂವಹನಕ್ಕೆ ಪೂರಕವಾದದು. ಸಾಧ್ಯವಾದರೆ ಅದನ್ನು ನಿಮಗಿಂತ ಕೆಳಗಿನ ತರಗತಿಯವರಿಗೆ ಕೊಟ್ಟು ಓದಿಸಿ. ಇದು ಪರಿಕಲ್ಪನೆಯನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಮತ್ತು ವಿಷಯವನ್ನು ಸರಳಗೊಳಿಸಲು ಸಹಾಯ ಮಾಡುತ್ತದೆ.

ತಾಂತ್ರಿಕ ವಿವರಣೆ ಇರಲಿ

ಒಮ್ಮೆ ನೀವು ಪರಿಕಲ್ಪನೆಯ ನಿಜವಾದ ತಿಳುವಳಿಕೆಯನ್ನು ಪಡೆದರೆ, ಅದರ ತಾಂತ್ರಿಕ ವಿವರಣೆಯನ್ನು ಅರ್ಥಮಾಡಿಕೊಳ್ಳುವುದು ಅಂತಿಮ ಹಂತವಾಗಿದೆ. ಜಟಿಲವಾದ ಕಲ್ಪನೆಯೊಂದಿಗೆ ಪ್ರಾರಂಭವಾದ ಕಲಿಕೆಯು ತಾಂತ್ರಿಕ ಪದಗಳಿಂದ ಸ್ಪಷ್ಟತೆ ಪಡೆದಾಗ ಮಾತ್ರ ಪರಿಪೂರ್ಣವಾಗುತ್ತದೆ. ಇದಕ್ಕಾಗಿ ಆಯಾ ವಿಷಯದ ಪರಿಭಾಷೆಯಲ್ಲಿಯೇ ಪರಿಕಲ್ಪನೆಯನ್ನು ವಿವರಿಸಿಬೇಕು.

ಅಡೆಪ್ಟ್‌ – ಪ್ರಯೋಜನಗಳು

* ಕಲಿಯುತ್ತಿರುವ ಯಾವುದೇ ವಿಷಯದ ಬಗ್ಗೆ ನಿಜವಾದ ತಿಳಿವಳಿಕೆಯನ್ನು ಅಭಿವೃದ್ಧಿಪಡಿಸಲು ಇದು ಸಹಾಯ ಮಾಡುತ್ತದೆ.

* ಬುದ್ಧಿವಂತ ಮತ್ತು ತಾರ್ಕಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ.

* ಕಲಿಕೆ ಮತ್ತು ಬೋಧನಾ ಕೌಶಲಗಳನ್ನು ಸುಧಾರಿಸಬಹುದು.

* ವಿಮರ್ಶಾತ್ಮಕ ಚಿಂತನೆಯ ಸಾಮರ್ಥ್ಯವನ್ನು ಸುಧಾರಿಸಲು ಸಾಧ್ಯವಿದೆ.

(ಪ್ರೌಢಶಾಲಾ ಶಿಕ್ಷಕ, ಸ್ಪರ್ಧಾತ್ಮಕ ಪರೀಕ್ಷೆ ತರಬೇತುದಾರ)

(ಮುಂದಿನ ವಾರ: ‘ಅಡೆಪ್ಟ್‌‘ ತಂತ್ರಗಾರಿಕೆ ಎಲ್ಲೆಲ್ಲಿ ಅಳವಡಿಸಿಕೊಳ್ಳಬಹುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT