ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಭೂಮಿ ವಿಸ್ತರಣೆ ತಡೆಗೆ ಅರಾವಳಿ ‘ಹಸಿರು ಗೋಡೆ’ 

Published 28 ಜೂನ್ 2023, 23:30 IST
Last Updated 28 ಜೂನ್ 2023, 23:30 IST
ಅಕ್ಷರ ಗಾತ್ರ

ಯು.ಟಿ. ಆಯಿಶ ಫರ್ಝಾನ

ಯಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ಮಾಹಿತಿ ಇಲ್ಲಿದೆ.

ಮರುಭೂಮಿ ವಿಸ್ತರಣೆ ತಡೆ ಹಾಗೂ ಭೂ ಸವಕಳಿ ತಪ್ಪಿಸುವ ಹಿನ್ನೆಲೆಯಲ್ಲಿ ಭಾರತದ ಅರಾವಳಿ ಬೆಟ್ಟಗಳ ಸುತ್ತ ‘ಹಸಿರು ಗೋಡೆ’ ನಿರ್ಮಿಸುವ ‘ಅರಾವಳಿ ಹಸಿರು ಗೋಡೆ ಯೋಜನೆ’ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಭೂಪೇಂದರ್ ಯಾದವ್ ಅವರು ಇತ್ತೀಚೆಗೆ ಚಾಲನೆ ನೀಡಿದರು.

ಇದು ಭಾರತದ ನಾಲ್ಕು ರಾಜ್ಯಗಳಲ್ಲಿರುವ ಅರಾವಳಿ ಶ್ರೇಣಿಯ ಸುತ್ತಲಿನ 5 ಕಿಮೀ ಬಫರ್ ಪ್ರದೇಶವನ್ನು ಹಸಿರೀಕರಣಗೊಳಿಸುವ ಪ್ರಮುಖ ಉಪಕ್ರಮ. ಅಂತರರಾಷ್ಟ್ರೀಯ ಅರಣ್ಯ ದಿನಾಚರಣೆ ಹಿನ್ನೆಲೆಯಲ್ಲಿ, ಹರಿಯಾಣದ ಟಿಕ್ಲಿ ಗ್ರಾಮದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಸಚಿವರು ಈ ಯೋಜನೆಗೆ ಚಾಲನೆ ನೀಡಿದರು

ಅರಾವಳಿ ಹಸಿರು ಗೋಡೆ ಯೋಜನೆ

ಇದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲ ಯದ (MoEFCC) ಒಂದು ದೂರದೃಷ್ಟಿಯ  ಭಾಗ. ಮರುಭೂಮಿ ವಿಸ್ತರಣೆ ತಡೆ ಮತ್ತು ಭೂಮಿಯ ರಕ್ಷಣೆಗಾಗಿ ಹಸಿರು ಕಾರಿಡಾರ್‌ಗಳನ್ನು ರಚಿಸುವುದು ಈ ಯೋಜನೆಯ ಉದ್ದೇಶ.

ಈ ಯೋಜನೆಯು ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ದೆಹಲಿ ರಾಜ್ಯಗಳನ್ನು ಒಳಗೊಂಡಿದೆ. ಈ ರಾಜ್ಯಗಳಲ್ಲಿ 60 ಲಕ್ಷ ಹೆಕ್ಟೇರ್ ಭೂಮಿಯನ್ನು ಅರಾವಳಿ ಬೆಟ್ಟಗಳ ಭೂಪ್ರದೇಶ ವ್ಯಾಪಿಸಿದೆ.

ಕೊಳಗಳು, ಸರೋವರಗಳು ಮತ್ತು ತೊರೆಗಳಂತಹ ಭೂಮಿಯ ಮೇಲ್ಮೈ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಮರು ಸ್ಥಾಪಿಸುವ ಜೊತೆಗೆ ಕುರುಚಲು ಕಾಡು, ಪಾಳುಭೂಮಿ ಮತ್ತು ಅರಣ್ಯ ಭೂಮಿಯಲ್ಲಿ ಸ್ಥಳೀಯ ಪ್ರಭೇದಗಳ ಸಸ್ಯಗಳನ್ನು ಬೆಳೆಸುವ ಕ್ರಮವನ್ನೂ ಒಳಗೊಂಡಿರುತ್ತದೆ. ಜೊತೆಗೆ, ಸ್ಥಳೀಯ ಸಮುದಾಯಗಳ ಜೀವನೋಪಾಯ ವೃದ್ಧಿಗಾಗಿ ಕೃಷಿ ಅರಣ್ಯೀಕರಣ ಮತ್ತು ಹುಲ್ಲುಗಾವಲು ಅಭಿವೃದ್ಧಿಯ ಚಟುವಟಿಕೆಗಳನ್ನೂ ಈ ಯೋಜನೆ ಒಳಗೊಂಡಿದೆ.

ಯೋಜನೆಯ ಉದ್ದೇಶಗಳು

  •  ಅರಾವಳಿ ಶ್ರೇಣಿಯ ಪರಿಸರದ ಗುಣಮಟ್ಟವನ್ನು ಸುಧಾರಿಸುವುದು

  • ಥಾರ್ ಮರುಭೂಮಿಯ ಪೂರ್ವಾಭಿಮುಖ ವಿಸ್ತರಣೆ ತಡೆಗಟ್ಟುವುದು. ಮಣ್ಣಿನ ಸವಕಳಿ, ಮರುಭೂಮಿ ಮತ್ತು ದೂಳಿನ ಬಿರುಗಾಳಿಯನ್ನು ತಡೆಯುವ ಹಸಿರು ತಡೆಗೋಡೆಗಳನ್ನು ಸೃಷ್ಟಿಸುವುದು. ಈ ಮೂಲಕ ಭೂಮಿಯ ಅವನತಿಯನ್ನು ಕಡಿಮೆ ಮಾಡುವುದು.

  • ಅರಾವಳಿ ಪ್ರದೇಶದಲ್ಲಿ ಸ್ಥಳೀಯ ಪ್ರಭೇದದ ಸಸ್ಯ ಸಂಕುಲವನ್ನು ಬೆಳೆಸುವ ಮೂಲಕ ವನ್ಯಜೀವಿಗಳಿಗೆ ಆವಾಸಸ್ಥಾನವನ್ನು ಒದಗಿಸು ವುದು; ನೀರಿನ ಗುಣಮಟ್ಟ ಮತ್ತು ಪ್ರಮಾಣವನ್ನು ಸುಧಾರಿಸಿ ಅರಾವಳಿ ಪರ್ವತಗಳ ಶ್ರೇಣಿಯ ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯನ್ನು ಸುಧಾರಿಸುವುದು.

  • ಆದಾಯ, ಉದ್ಯೋಗ, ಆಹಾರ ಭದ್ರತೆ ಮತ್ತು ಸಾಮಾಜಿಕ ಪ್ರಯೋಜ ನಗಳನ್ನು ಸೃಷ್ಟಿಸುವ ಅರಣ್ಯೀಕರಣ, ಕೃಷಿ-ಅರಣ್ಯೀಕರಣ ಮತ್ತು ಜಲ ಸಂರಕ್ಷಣಾ ಚಟುವಟಿಕೆಗಳಲ್ಲಿ ಸ್ಥಳೀಯ ಸಮುದಾಯಗಳನ್ನು ಒಳಗೊಳ್ಳುವ ಮೂಲಕ ಸುಸ್ಥಿರ ಅಭಿವೃದ್ಧಿ ಮತ್ತು ಜೀವನೋಪಾಯದ ಅವಕಾಶಗಳ ಹೆಚ್ಚಳವನ್ನು ಉತ್ತೇಜಿಸುವುದು.

  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅರಣ್ಯ ಇಲಾಖೆಗಳು, ಸಂಶೋ ಧನಾ ಸಂಸ್ಥೆಗಳು, ನಾಗರಿಕ ಸಮಾಜ ಸಂಸ್ಥೆಗಳು, ಖಾಸಗಿ ವಲ ಯದ ಘಟಕಗಳು ಮತ್ತು ಸ್ಥಳೀಯ ಸಮುದಾಯಗಳಂತಹ ವಿವಿಧ ಭಾಗೀದಾರರಿಂದ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ.

  • ಯುಎನ್‌ಸಿಸಿಡಿ (United Nations Convention to Combat Desertification - ಮರುಭೂಮಿ ವಿಸ್ತರಣೆ ತಡೆ ಹೋರಾಟಕ್ಕಾಗಿ ವಿಶ್ವಸಂಸ್ಥೆಯ ಸಮಾವೇಶ), ಸಿಬಿಡಿ (Convention on Biodiversity- ಜೀವವೈವಿಧ್ಯ ಸಮಾವೇಶ) ಮತ್ತು ಯುಎನ್‌ಎಫ್‌ಸಿಸಿ (United Nations Framework Convention on Climate Change–ಹವಾಮಾನ ಬದಲಾವಣೆ ತಡೆಗೆ ನೀತಿ ನಿರೂಪಣೆಗೆ ವಿಶ್ವಸಂಸ್ಥೆಯ ಸಮಾವೇಶ) ಯಂತಹ ವಿವಿಧ ಅಂತರರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ಭಾರತವು ನೀಡಿರುವ ಬದ್ಧತೆಗಳಿಗೆ ತನ್ನ ಕೊಡುಗೆಯನ್ನು ನೀಡುವುದು.

ಯೋಜನೆ ಅನುಷ್ಠಾನ ಹೇಗೆ ?

ಹರಿಯಾಣದ ಅರಾವಳಿ ಪರ್ವತ ಶ್ರೇಣಿಗಳ ಪ್ರತಿ ಜಿಲ್ಲೆಯಲ್ಲಿ ಆರಂಭಿಕ ಹಂತದಲ್ಲಿ ತಲಾ 5 ಜಲಮೂಲಗಳಂತೆ ಒಟ್ಟು 75 ಜಲಮೂಲಗಳನ್ನು ಯೋಜನೆಯಡಿ ಪುನರುಜ್ಜೀವನಗೊಳಿಸಲಾಗುತ್ತದೆ. ಇದರಲ್ಲಿ ಗುರುಗ್ರಾಮ, ಫರಿದಾಬಾದ್, ಭಿವಾನಿ, ಮಹೇಂದರ್‌ಗಢ ಮತ್ತು ಹರಿಯಾ ಣದ ರೇವಾರಿ ಜಿಲ್ಲೆಗಳ ಹಾಳಾದ ಭೂಮಿಯೂ ಸೇರುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT