ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾವಾಣಿ: ದಶರಾಷ್ಟ್ರಗಳ ಒಕ್ಕೂಟ ‘ಬ್ರಿಕ್ಸ್’ ಬಗ್ಗೆ ಇಲ್ಲಿದೆ ಮಾಹಿತಿ

Published 20 ಮಾರ್ಚ್ 2024, 23:30 IST
Last Updated 20 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಸಮಕಾಲೀನ ಜಗತ್ತಿನಲ್ಲಿ ಪ್ರಮುಖ ಒಕ್ಕೂಟವಾದ ಬ್ರಿಕ್ಸ್ (BRICS) ತನ್ನ ಮೈತ್ರಿಕೂಟವನ್ನು ವಿಸ್ತರಿಸಿ ಕೆಲವು ದೇಶಗಳನ್ನು ಸೇರಿಸಿಕೊಳ್ಳುವ ನಿರ್ಧಾರವು ಜಾಗತಿಕ ಆರ್ಥಿಕ, ರಾಜಕೀಯ ಚಿತ್ರಣದಲ್ಲಿ ಗಮನಾರ್ಹ ಬದಲಾವಣೆಯನ್ನು ತರಬಹುದಾದ ಒಂದು ನಡೆಯಾಗಿತ್ತು. ಈ ಪ್ರಸ್ತಾವಿತ ಒಕ್ಕೂಟದಲ್ಲಿ ಅರ್ಜೆಂಟೀನಾ ದೇಶವು ಬ್ರಿಕ್ಸ್ (BRICS) ಕೂಟವನ್ನು ಸೇರದಿರುವ ನಿರ್ಧಾರ ಕೈಗೊಂಡಿದೆ.

‘ಬ್ರಿಕ್ಸ್’ (BRICS) ಎಂಬುದು ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಎಂಬುದರ ಸಂಕ್ಷಿಪ್ತ ರೂಪವಾಗಿದ್ದು, ಜಾಗತಿಕವಾದ ಆರ್ಥಿಕ ಅಭಿವೃದ್ಧಿ ಮತ್ತು ಸಹಕಾರಗಳಿಗೆ ಸಂಬಂಧಿಸಿದಂತೆ ಬೆಳೆಯುತ್ತಿರುವ ಆರ್ಥಿಕ ಶಕ್ತಿಗಳ ನಡುವಿನ ಮೈತ್ರಿಕೂಟವನ್ನು ಇದು ಪ್ರತಿನಿಧಿಸುತ್ತದೆ.

* ಅರ್ಜೆಂಟೀನಾ,  ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶಗಳನ್ನು ಸೇರಿಸಿಕೊಳ್ಳುವುದು ಈ ಮೊದಲಿನ ಯೋಜನೆಯಾಗಿತ್ತು.

* ಆದರೆ ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೈ ವಿಸ್ತರಿತ "ಬ್ರಿಕ್ಸ್" ಕೂಟಕ್ಕೆ ಸೇರುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

* ‘ಬ್ರಿಕ್ಸ್’ ಕೂಟದ ವಿಸ್ತರಣೆಯು ಅರಬ್ ಜಗತ್ತಿನ ಎರಡು ಅತಿ ದೊಡ್ಡ ಆರ್ಥಿಕತೆಗಳಾದ ಸೌದಿ ಅರೇಬಿಯಾ ಮತ್ತು ಯುಎಇಗೆ ಹೊಸ ಹೂಡಿಕೆ  ಅವಕಾಶಗಳ ಬಾಗಿಲನ್ನು ತೆರೆಯಲಿದೆ.

* 2006ರಲ್ಲಿ ಸ್ಥಾಪನೆಯಾದ "ಬ್ರಿಕ್ಸ್" ದೇಶಗಳು ಸಾಮೂಹಿಕ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿ ಮತ್ತು ಅಂತರರಾಷ್ಟ್ರೀಯ ಅಖಾಡದಲ್ಲಿ ಸಂಪನ್ಮೂಲಗಳ ಹೆಚ್ಚು ನ್ಯಾಯಸಮ್ಮತ ಹಂಚಿಕೆಯ ಸಮಾನ ಗುರಿಗಳನ್ನು ಹೊಂದಿವೆ.

* BRICS ಒಂದು ಔಪಚಾರಿಕ ಸಂಸ್ಥೆಯ ರೂಪದಲ್ಲಿ ಅಸ್ತಿತ್ವದಲ್ಲಿಲ್ಲವಾದರೂ, ಇದುವರೆಗೂ ಈ ಐದು ದೇಶಗಳ ನಡುವೆ ನಡೆಯುವ ವಾರ್ಷಿಕ ಶೃಂಗಸಭೆಯಾಗಿ ಕಾರ್ಯನಿರ್ವಹಿಸುತ್ತಿತ್ತು.

* ಇದರ ಅಧ್ಯಕ್ಷೀಯ ಸ್ಥಾನವನ್ನು BRICS ಇಂಗ್ಲಿಷ್ ಅಕ್ಷರಮಾಲೆಗೆ  ಅನುಗುಣವಾಗಿ, ವಾರ್ಷಿಕವಾಗಿ ಸದಸ್ಯರ ನಡುವೆ ಆವರ್ತಕ ರೂಪದಲ್ಲಿ ನಿಗದಿ ಪಡಿಸಲಾಗುತ್ತಿತ್ತು.

ಬ್ರಿಕ್‌ ಬ್ರಿಕ್ಸ್‌ ಆದದ್ದು ಹೇಗೆ ?

* ಬ್ರಿಕ್ ಎಂಬ ಸಂಕ್ಷಿಪ್ತ ರೂಪವನ್ನು 2001 ರಲ್ಲಿ ಗೋಲ್ಡ್‌ಮನ್ ಸ್ಯಾಚ್ಸ್‌ನ ಅರ್ಥಶಾಸ್ತ್ರಜ್ಞ ಜಿಮ್ ಓ'ನೀಲ್ ನಿರೂಪಿಸಿದರು.

* ಮೊದಲ BRIC ಶೃಂಗಸಭೆಯು 2009 ರಲ್ಲಿ ರಷ್ಯಾದ ಒಕ್ಕೂಟದಲ್ಲಿ ನಡೆದಿದ್ದು, ‘ಜಾಗತಿಕ ಹಣಕಾಸು ರಚನಾವಿನ್ಯಾಸದಲ್ಲಿ ಸುಧಾರಣೆ’ಯ ವಿಷಯಗಳ ಮೇಲೆ ಕೇಂದ್ರೀಕರಿಸಿತ್ತು.

* 2010ರಲ್ಲಿ ದಕ್ಷಿಣ ಆಫ್ರಿಕಾವನ್ನು ಸೇರಲು ಆಹ್ವಾನಿಸಿದ್ದು ಬಳಿಕ ಈ ಗುಂಪು BRICS ಎಂಬ ಸಂಕ್ಷಿಪ್ತ ರೂಪವನ್ನು ಅಳವಡಿಸಿಕೊಂಡಿತು. 2011 ರಲ್ಲಿ ಚೀನಾದ ಸನ್ಯಾದಲ್ಲಿ ನಡೆದ ಮೂರನೇ ಬ್ರಿಕ್ಸ್ ಶೃಂಗಸಭೆಯಲ್ಲಿ ದಕ್ಷಿಣ ಆಫ್ರಿಕಾವು ಭಾಗವಹಿಸಿತು.

ಉದ್ದೇಶಗಳು: ಪರಸ್ಪರ ಗುಂಪಿನೊಳಗೆ ಮತ್ತು ದೇಶಗಳ ನಡುವೆ  ಸಹಕಾರವನ್ನು ವಿಸ್ತರಿಸಿ ಮತ್ತು ತೀವ್ರಗೊಳಿಸಿ, ಪರಸ್ಪರ ಅಭಿವೃದ್ಧಿಗೆ ಪೂರಕವಾದ ಸುಸ್ಥಿರವಾದ ಲಾಭದಾಯಕ ನಡೆಗಳನ್ನು ಮುಂದುವರೆಸಲು ಬ್ರಿಕ್ಸ್ ಬಲವಾಗಿ ಪ್ರಯತ್ನಿಸುತ್ತದೆ.

ಜಾಗತಿಕ ಹಣಕಾಸು ಸಂಸ್ಥೆಗಳನ್ನು ಸುಧಾರಿಸುವ ತನ್ನ ಮೂಲ ಉದ್ದೇಶವನ್ನು ಮೀರಿ, ಪ್ರಸಕ್ತ ವೈವಿಧ್ಯಮಯ ಉದ್ದೇಶಗಳೊಂದಿಗೆ ಬ್ರಿಕ್ಸ್ ಹೊಸ ಮತ್ತು ಭರವಸೆಯ ರಾಜಕೀಯ - ರಾಜತಾಂತ್ರಿಕ ಘಟಕವಾಗಿ ಹೊರಹೊಮ್ಮುತ್ತಿದೆ.

ಸಾಧನೆಗಳು

* 2010 ರಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ  ಕೋಟಾ ಸುಧಾರಣೆಗೆ ಕಾರಣವಾದ ಸಾಂಸ್ಥಿಕ ಸುಧಾರಣೆಗೆ ಬ್ರಿಕ್ಸ್ ಒತ್ತಾಯಿಸಿತು.

ನ್ಯೂ ಡೆವೆಲಪ್ ಮೆಂಟ್  ಬ್ಯಾಂಕ್ : ( New Development Bank )

* ಫೋರ್ಟಲೆಜಾದಲ್ಲಿ Fortaleza (2014) ನಲ್ಲಿ ನಡೆದ ಆರನೇ BRICS ಶೃಂಗಸಭೆಯ ಸಂದರ್ಭದಲ್ಲಿ, ನಾಯಕರು ನ್ಯೂ ಡೆವೆಲಪ್ ಮೆಂಟ್  ಬ್ಯಾಂಕ್ ಅನ್ನು ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಿದರು.

* NDB ಯ ಪ್ರಮುಖ ಕಾರ್ಯಾಚರಣೆಯ ಕ್ಷೇತ್ರಗಳು - ಶುದ್ಧ ಶಕ್ತಿ, ಸಾರಿಗೆ ಮೂಲಸೌಕರ್ಯ, ನೀರಾವರಿ, ಸುಸ್ಥಿರ ನಗರಾಭಿವೃದ್ಧಿ ಮತ್ತು ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ ಸಹಕಾರ.

* ಆರನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಫೋರ್ಟಲೆಜಾ ಘೋಷಣೆಯ ಭಾಗವಾಗಿ ಬ್ರಿಕ್ಸ್ ರಾಷ್ಟ್ರಗಳು 2014 ರಲ್ಲಿ ಬ್ರಿಕ್ಸ್ 'ತುರ್ತು ಮೀಸಲು ನಿಧಿ ವ್ಯವಸ್ಥೆ'ಗೆ (ಸಿಆರ್‌ಎ) ಸಹಿ ಹಾಕಿದವು.

* ಕರೆನ್ಸಿ ವಿನಿಮಯದ ಮೂಲಕ ಸದಸ್ಯರಿಗೆ ಅಲ್ಪಾವಧಿಯ ದ್ರವ್ಯತೆ ಬೆಂಬಲವನ್ನು ಒದಗಿಸುವ ಮತ್ತು  ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು BRICS CRA ಹೊಂದಿದೆ.

* CRA ಯ ಆರಂಭಿಕ ಒಟ್ಟು ಬದ್ಧ ಸಂಪನ್ಮೂಲಗಳು 100 ಬಿಲಿಯನ್ ಡಾಲರ್‌ ಆಗಿರಬೇಕು ಎನ್ನುವ ಷರತ್ತಿನೊಂದಿಗೆ ಪ್ರಾರಂಭವಾಗಿದೆ.

* ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೂರು ದಿನಗಳ ಬ್ರಿಕ್ಸ್ ಶೃಂಗಸಭೆಯ ಕೊನೆಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಬ್ರಿಕ್ಸ್ ಗುಂಪಿನ ವಿಸ್ತರಣೆಯ ಬಗ್ಗೆಗಿನ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.

* ಜಗತ್ತಿನಾದ್ಯಂತ  20 ಕ್ಕೂ ಹೆಚ್ಚು ರಾಷ್ಟ್ರಗಳು ಬ್ರಿಕ್ಸ್‌ ನ ಸದಸ್ಯತ್ವವನ್ನು ಕೋರಿ ಅರ್ಜಿಗಳನ್ನು ಸಲ್ಲಿಸಿದ್ದರೆ, ಇತರ 15 ಕ್ಕೂ ಹೆಚ್ಚು ದೇಶಗಳು ಬ್ರಿಕ್ಸ್‌ ನ ಭಾಗವಾಗುವ ಆಸಕ್ತಿಯನ್ನು ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT