ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CBSC Exam: ಓದಿದ ವಿಷಯ ನೆನಪಿನಲ್ಲಿಡುವುದು ಹೇಗೆ?

Last Updated 14 ನವೆಂಬರ್ 2021, 20:30 IST
ಅಕ್ಷರ ಗಾತ್ರ

ಹಿಂದಿನ ಸಂಚಿಕೆಯಲ್ಲಿ ನಾವು ‘ಪ್ರಾಸಬದ್ಧ ಪದಗಳ’ ವಿಧಾನದಿಂದ ಪಾಠದ ಮುಖ್ಯ ಅಂಶಗಳನ್ನು ಸುಲಭವಾಗಿ ಹೇಗೆ ನೆನಪಿಡಬಹುದು ಎಂದು ತಿಳಿದೆವು. ಈ ಲೇಖನದಲ್ಲಿ ಮತ್ತಷ್ಟು ವಿಧಾನಗಳ ಬಗ್ಗೆ ತಿಳಿಯೋಣ.

ಭಾಗ–4

ಹಿಂದಿನ ಸಂಚಿಕೆಯಲ್ಲಿ ನಾವು ‘ಪ್ರಾಸಬದ್ಧ ಪದಗಳ’ ವಿಧಾನದಿಂದ ಪಾಠದ ಮುಖ್ಯ ಅಂಶಗಳನ್ನು ಸುಲಭವಾಗಿ ಹೇಗೆ ನೆನಪಿಡಬಹುದು ಎಂದು ತಿಳಿದೆವು. ಈ ಲೇಖನದಲ್ಲಿ ಮತ್ತಷ್ಟು ವಿಧಾನಗಳ ಬಗ್ಗೆ ತಿಳಿಯೋಣ.

ಆ. ಪದಗಳ ಜೋಡಣೆ ವಿಧಾನ

ಈ ವಿಧಾನದಲ್ಲಿ, ನಾವು ನೆನಪಿಡಬೇಕಾದ ವಿಷಯಗಳನ್ನು ಅಥವಾ ಪಾಠದ ಮುಖ್ಯ ಅಂಶಗಳನ್ನು ಒಂದು ಸಣ್ಣ ವಾಕ್ಯವಾಗಿಯೋ, ಪದ ಪುಂಜವಾಗಿಯೋ ಅಥವಾ ಒಂದು ಸರಳವಾದ ಹಾಗೂ ಸುಲಭವಾಗಿ ನೆನಪಿಡಬಹುದಾದ ಅರ್ಥಪೂರ್ಣ ಪದವಾಗಿಯೋ ಸಂಕುಚಿತಗೊಳಿಸಿಕೊಂಡು ನೆನಪಿನಲ್ಲಿಡಬಹುದು.

ಉದಾಹರಣೆಗೆ ನಾವು ಶಾಲೆಯಲ್ಲಿ ಓದುವಾಗ ನಮ್ಮ ಗುರುಗಳು ಹೀಗೆ ಹೇಳಿಕೊಟ್ಟಿದ್ದರು. ‘ಶಹಜಹಾನನ ನಾಲ್ಕು ಜನ ಮಕ್ಕಳ ಹೆಸರು ಏನು?’

ಈ ಪ್ರಶ್ನೆಗೆ ಉತ್ತರವನ್ನು ನೆನಪಿನಲ್ಲಿಡಲು ಅವರು ನಮಗೆ ಹೇಳಿಕೊಟ್ಟ ವಾಕ್ಯ ಹೀಗಿತ್ತು! ‘ಅವರಂಗೀ ಜೇಬು ಮುರಿದು ಹೋಯ್ತು ಸೂಜಿ ದಾರ ತೆಗೆದುಕೊಂಡು ಹೊಲಿ’.

ಇಲ್ಲಿ, ಅವರಂಗೀ ಜೇಬು– ಔರಂಗಜೇಬ್

* ಮುರಿದು – ಮುರಾದ್ * ಸೂಜಿ – ಸೂಜ * ದಾರ – ದಾರ

ಶಹಜಹಾನನ ನಾಲ್ಕು ಜನ ಮಕ್ಕಳ ಹೆಸರು – ಔರಂಗಜೇಬ್‌, ಮುರಾದ್‌, ಸೂಜ ಮತ್ತು ದಾರ. ಎಷ್ಟು ಸುಲಭವಾಗಿ ನೆನಪಿನಲ್ಲಿಡಬಹುದು ಅಲ್ಲವೇ? !

ಹಾಗೆಯೇ, ಹಿಂದಿಯಲ್ಲಿ, ಗಳನ್ನು ನೆನಪಿನಲ್ಲಿಡಲು ಹೀಗೆ ಹೇಳುತ್ತಿದ್ದರು. ‘ಕಾ, ಕೆ, ಕಿ ,ಮೇಜ್‌ ಪರ್‌ ದೋಸೇ ನೇ’

ಎಷ್ಟು ತಮಾಷೆಯ ವಿಧಾನ ಅನಿಸುತ್ತದೆಯಲ್ಲವೇ? ಆದರೆ ಬಹಳ ಸರಳ ಹಾಗೂ ಉಪಯುಕ್ತ ವಿಧಾನ.

ಈ ವಿಧಾನವು ಭಾಷೆಗಳು, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ವಿಷಯಗಳ ಮುಖ್ಯ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದಕ್ಕೆ ಬಹಳ ಉಪಯುಕ್ತ.

ಇ. ಮೈಂಡ್‌ ಮ್ಯಾಪ್‌ ವಿಧಾನ

ನಿಮಗೆ ಈಗಾಗಲೇ ತಿಳಿದಿರುವಂತೆ ಮೈಂಡ್‌ ಮ್ಯಾಪ್‌ ವಿಧಾನವು ಬಹಳ ಉಪಯುಕ್ತವಾದ ವಿಧಾನಗಳಲ್ಲಿ ಒಂದು. ಈ ವಿಧಾನವು, ಪಾಠವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಹಕರಿಸುವು ದರ ಜೊತೆಗೆ, ವಿಷಯಗಳನ್ನು ಸರಳವಾಗಿ ನೆನಪಿನಲ್ಲಿಡಲು ಹಾಗೂ ವೇಗವಾಗಿ ಪಾಠಗಳನ್ನು ಪುನರಾವರ್ತನೆ ಮಾಡಲು ಸಹಕಾರಿಯಾಗಿದೆ. ಬಹುಆಯ್ಕೆ ಉತ್ತರಗಳಿರುವ ಪ್ರಶ್ನೆಗಳಿಗೆ ಉತ್ತರಿಸಲು, ಪಾಠದ ಹಲವಾರು ಅಂಶಗಳನ್ನು ನೆನಪಿನಲ್ಲಿಡಲೂ ಮೈಂಡ್‌ ಮ್ಯಾಪ್‌ಗಳು ಸಹಾಯಕವಾಗುತ್ತವೆ. ಅದಕ್ಕಾಗಿ, ಇಡೀ ಪಾಠವನ್ನು ಮೈಂಡ್‌ ಮ್ಯಾಪ್‌ನಲ್ಲಿ ಅಳವಡಿಸುವ ಬದಲು, ಪಾಠದ ಮುಖ್ಯ ಅಂಶದ ಮೈಂಡ್‌ ಮ್ಯಾಪ್‌ಗಳನ್ನು ಮಾಡಿಕೊಳ್ಳುವುದು ಉಪಯುಕ್ತ.

ಚಿತ್ರದಲ್ಲಿ ತೋರಿಸಿರುವಂತೆ, ಒಂದು ಪಾಠದ ಮುಖ್ಯ ಅಂಶಗಳನ್ನು ಮಾತ್ರ ಮೈಂಡ್‌ ಮ್ಯಾಪ್‌ ಆಗಿ ಪರಿವರ್ತಿಸಲಾಗಿದೆ. ಈ ಮೈಂಡ್‌ ಮ್ಯಾಪ್‌ ಅನ್ನು ಗಮನಿಸಿದರೆ, ಇಲ್ಲಿರುವ ಎಲ್ಲಾ ಅಂಶಗಳನ್ನೂ ಹೇಗೆ ಸರಳವಾಗಿ ನೆನಪಿಡಬಹುದು ಎಂದು ತಿಳಿಯುತ್ತದೆ ಅಲ್ಲವೇ?

ಕೆಲವು ಬಾರಿ, ನೀವು, ಅಭ್ಯಾಸಕ್ಕಾಗಿ ಮೈಂಡ್‌ ಮ್ಯಾಪ್‌ನ ಕೆಲವು ಅಂಶಗಳನ್ನು ಖಾಲಿ ಬಿಟ್ಟಿರಿ (ಕೆಳಗಿನ ಚಿತ್ರದಲ್ಲಿ ತೋರಿಸಿರುವಂತೆ). ನಂತರ ಪುನರಾವರ್ತನೆ ಮಾಡುವಾಗ ಈ ಖಾಲಿ ಬಿಟ್ಟ ಸ್ಥಳಗಳನ್ನು ತುಂಬಿರಿ.

ಹೀಗೆ ಪಾಠದ ಅಭ್ಯಾಸವೂ ಆಗುತ್ತದೆ ಹಾಗೂ ನಿಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆ!

ಹಲವಾರು ಬಾರಿ ಪರೀಕ್ಷೆಯಲ್ಲಿ ಈ ಪಾಠದ ಕುರಿತಾಗಿ ಪ್ರಶ್ನೆಗಳು ಬಂದಾಗ ಈ ಮೈಂಡ್‌ ಮ್ಯಾಪ್‌ ನಿಮ್ಮ ಕಣ್ಣಮುಂದೆ ಬರುತ್ತದೆ ಹಾಗೂ ಕೊಟ್ಟಿರುವ ಪ್ರಶ್ನೆಗೆ ಉತ್ತರಿಸಲು ಸುಲಭವಾಗುತ್ತದೆ.

ಈ ಮೈಂಡ್‌ ಮ್ಯಾಪ್‌ ವಿಧಾನವೂ ಸಹ ಭಾಷೆಗಳು, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ವಿಷಯಗಳ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದಕ್ಕೆ ಬಹಳ ಉಪಯುಕ್ತ.

ಈ. ಪಾಠದ ಮುಖ್ಯ ಅಂಶವನ್ನು ನೆನಪಿನಲ್ಲಿಟ್ಟುಕೊಂಡು ಅದರ ಆಧಾರದ ಮೇಲೆ ಪಾಠದ ಮಿಕ್ಕೆಲ್ಲಾ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದೂ ಒಂದು ಉಪಯುಕ್ತ ವಿಧಾನ.

ಹೀಗೆ ಮಾಡಿ,

1. ಪಾಠದ ಎಲ್ಲ ಮುಖ್ಯ ಅಂಶಗಳನ್ನೂ ಪಟ್ಟಿಮಾಡಿ.

2. ನಂತರ ಮುಖ್ಯ ಅಂಶಗಳಲ್ಲಿ ಒಂದನ್ನು ಕೆಳಗಿನ ಚಿತ್ರದಲ್ಲಿ ತೋರಿಸಿದಂತೆ ಮಧ್ಯದ ವೃತ್ತದಲ್ಲಿ ಬರೆಯಿರಿ.

3. ಈ ಮುಖ್ಯ ಅಂಶವನ್ನು ಆಧರಿಸಿದ ಎಲ್ಲ ಸಹ-ಅಂಶಗಳನ್ನೂ ಚಿತ್ರದಲ್ಲಿ ತೋರಿಸಿದಂತೆ ಬರೆಯಿರಿ.

ಹೀಗೆ ಮಾಡುವುದರಿಂದ, ಮುಖ್ಯ ಅಂಶ ಹಾಗೂ ಅದರ ಆಧರಿತ ಎಲ್ಲ ಅಂಶಗಳನ್ನೂ ಸುಲಭವಾಗಿ ನೆನಪಿಡಬಹುದು.

ಉದಾಹರಣೆಗೆ:

ಉ. ಒಂದು ಪಾಠದ ಮುಖ್ಯ ಹಂತಗಳನ್ನು ಬರೆದುಕೊಂಡು ಆ ಮುಖ್ಯ ಹಂತಗಳ ಸಹಾಯದಿಂದ ಇಡೀ ಪಾಠವನ್ನು ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಬಹುದು.

ಹೀಗೆ ಮಾಡಿ,

1. ಪಾಠದ ಮುಖ್ಯ ಹಂತಗಳನ್ನು ಕ್ರಮವಾಗಿ ಪಟ್ಟಿಮಾಡಿ.

2. ಪದಗಳ ಜೋಡಣೆ ವಿಧಾನದ ಸಹಾಯದಿಂದ ಪಾಠದ ಮುಖ್ಯ ಹಂತಗಳನ್ನು ನೆನಪಿಟ್ಟುಕೊಳ್ಳಿ.

ಹೀಗೆ ಮಾಡುವುದರಿಂದ, ಪಾಠದ ಮುಖ್ಯಹಂತಗಳ ಜೊತೆಯಿರುವ ಅಂಶಗಳನ್ನೆಲ್ಲ ನೆನಪಿನಲ್ಲಿಟ್ಟುಕೊಳ್ಳಲು ಸುಲಭವಾಗುತ್ತದೆ.

(ಮುಂದಿನ ಸಂಚಿಕೆಯಲ್ಲಿ: ಸಿ.ಬಿ.ಎಸ್.ಇ. ಮೊದಲನೆಯ ಅವಧಿಯ ಪರೀಕ್ಷೆಯಲ್ಲಿ
ಒ.ಎಮ್.ಆರ್.‌ ಹಾಳೆಯಲ್ಲಿ ಉತ್ತರಿಸುವುದು ಹೇಗೆ?)

(ಲೇಖಕರು: ನಿರ್ದೇಶಕರು, ಸ್ಮಾರ್ಟ್‌ ಸೆರೆಬ್ರಮ್‌ ಪ್ರೈವೇಟ್‌ ಲಿಮಿಟೆಡ್‌ ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT