ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಾಂತ್ಯಕ್ಕೆ 9-12 ತರಗತಿಗಳಿಗೆ ತೆರೆದ ಪುಸ್ತಕ ಪರೀಕ್ಷೆ ಪ್ರಯೋಗ: ಸಿಬಿಎಸ್‌ಇ

Published 22 ಫೆಬ್ರುವರಿ 2024, 13:50 IST
Last Updated 22 ಫೆಬ್ರುವರಿ 2024, 13:50 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಈ ವರ್ಷದ ಕೊನೆಯಲ್ಲಿ 9ರಿಂದ 12ನೇ ತರಗತಿಗಳಿಗೆ ಆಯ್ದ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆ(ಒಬಿಇ)ಗಳಿಗೆ ಚಾಲನೆ ನೀಡಲು ಯೋಜಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2023ರ ಡಿಸೆಂಬರ್‌ನಲ್ಲಿ ನಡೆದ ಮಂಡಳಿಯ ಕೊನೆಯ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿತ್ತು. 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಈ ಸ್ವರೂಪದ ಪರೀಕ್ಷಾ ಪದ್ಧತಿಯನ್ನು ಅಳವಡಿಸಿಕೊಳ್ಳುವ ಯಾವುದೇ ಯೋಜನೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸಿಬಿಎಸ್‌ಇ ಆಯ್ದ ಶಾಲೆಗಳಲ್ಲಿ ತೆರೆದ ಪುಸ್ತಕ ಪರೀಕ್ಷೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲು ಯೋಜಿಸಲಾಗುತ್ತಿದೆ. ಈ ಸ್ವರೂಪದ ಪರೀಕ್ಷೆಯನ್ನು ಪೂರ್ಣಗೊಳಿಸಲು ವಿದ್ಯಾರ್ಥಿಗಳು ತೆಗೆದುಕೊಳ್ಳುವ ಸಮಯ ಅಳೆಯುವುದು ಮತ್ತು ಸಂಬಂಧಿಸಿದವರ ಪ್ರತಿಕ್ರಿಯೆ ಸಂಗ್ರಹಿಸುವುದು ಈ ಪ್ರಯೋಗದ ಉದ್ದೇಶವಾಗಿದೆ. 9 ಮತ್ತು 10 ನೇ ತರಗತಿಗಳಿಗೆ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ, 11 ಮತ್ತು 12ನೇ ತರಗತಿಗಳಿಗೆ ಇಂಗ್ಲಿಷ್, ಗಣಿತ ಮತ್ತು ಜೀವವಿಜ್ಞಾನ ವಿಷಯದಲ್ಲಿ ಈ ರೀತಿಯ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

‘ಈ ಯೋಜನೆಯು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಮಾಡಲಾದ ಶಿಫಾರಸುಗಳಿಗೆ ಅನುಗುಣವಾಗಿದೆ. ಪರೀಕ್ಷೆ ಪೂರ್ಣಗೊಳಿಸುವ ಸಮಯ, ರಚನಾತ್ಮಕ ಮತ್ತು ಕ್ರೋಡೀಕೃತ ಮೌಲ್ಯಮಾಪನದ ಸಮರ್ಪಕತೆ, ಸಂಬಂಧಿಸಿದವರ (ಪೋಷಕರು– ಶಿಕ್ಷಕರು) ದೃಷ್ಟಿಕೋನ ಒಳಗೊಂಡಂತೆ ವಿವಿಧ ಅಂಶಗಳನ್ನು ಮೌಲ್ಯಮಾಪನ ಮಾಡಲು ಈ ಪರೀಕ್ಷೆಗಳು ಶಾಲೆಗಳಲ್ಲಿ ಪ್ರಾಯೋಗಿಕವಾಗಿ ನಡೆಯಲಿವೆ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

‘ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆ ಉತ್ತೇಜಿಸಲು ಆಂತರಿಕ ಪರೀಕ್ಷೆಗಳಲ್ಲಿ ಈ ವಿಧಾನ ಬಳಸಬಹುದು. ಆದಾಗ್ಯೂ ಇದು ಕೇವಲ ಪ್ರಾಯೋಗಿಕ ಹಂತದಲ್ಲಿದೆ. ಸಿಬಿಎಸ್‌ಇ 10 ಮತ್ತು 12ನೇ ತಗರತಿ ಮಂಡಳಿ ಪರೀಕ್ಷೆಯಲ್ಲಿ ತೆರೆದ ಪುಸ್ತಕ ಪರೀಕ್ಷೆಯ ಸ್ವರೂಪ ಅಳವಡಿಸಿಕೊಳ್ಳುವ ಯಾವುದೇ ಯೋಜನೆ ಇಲ್ಲ’ ಎಂದು ಅಧಿಕಾರಿ ಹೇಳಿದ್ದಾರೆ.

ತೆರೆದ ಪುಸ್ತಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತಮ್ಮ ಟಿಪ್ಪಣಿಗಳು, ಪಠ್ಯಪುಸ್ತಕಗಳು ಅಥವಾ ಇತರ ಅಧ್ಯಯನ ಸಾಮಗ್ರಿಗಳನ್ನು ಒಯ್ಯಲು ಮತ್ತು ಪರೀಕ್ಷೆಯ ಸಮಯದಲ್ಲಿ ಅವುಗಳನ್ನು ಬಳಸಲು ಅನುಮತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT