ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಕಳುಹಿಸಿ

Published 22 ಮೇ 2023, 23:30 IST
Last Updated 22 ಮೇ 2023, 23:30 IST
ಅಕ್ಷರ ಗಾತ್ರ

ರಮ್ಯಾ ಶ್ರೀಹರಿ

ಮಗು ಮನೆಯಿಂದ ಶಾಲೆಗೆ ಹೊರಡುತ್ತದೆ; ಇದರಲ್ಲೇನು ವಿಶೇಷ? ಇದು ಲೋಕದ ರೂಢಿ. ಪ್ರಪಂಚದಾದ್ಯಂತ ಹಲವಾರು ವರ್ಷಗಳಿಂದ ಲಕ್ಷಾಂತರ ಮಕ್ಕಳು ಹೀಗೆ ಮನೆಯಿಂದ ಶಾಲೆಗೆ ಹೋಗಿದ್ದಾರೆ, ಹೋಗುತ್ತಲಿದ್ದಾರೆ; ಮುಂದೆಯೂ ಹೋಗುತ್ತಲಿರುತ್ತಾರೆ. ದಿನನಿತ್ಯದ ಈ ಸಾಧಾರಣ ವಿಷಯ ಒಂದು ಮಗುವಿನ ಬದುಕಿನ ಅಸಾಧಾರಣ ಘಟ್ಟವೇ ಹೌದು. ಒಂದು ಮಗು ಮನೆಯಿಂದ ಶಾಲೆಗೆ ಹೋಗುವುದು ತನ್ನ ಮನೆಯನ್ನು ಬಿಟ್ಟು ವಿಶಾಲವಾಗಿ ವಿಸ್ತರಿಸಿಕೊಂಡಿರುವ ಹೊರಜಗತ್ತಿಗೆ ಕಾಲಿರಿಸುವ ಒಂದು ಸಾಂಕೇತಿಕ ಕ್ರಿಯೆ; ಮಗುವಿನ ಬದುಕಿನಲ್ಲಿ ಅದೊಂದು ಪರ್ವಕಾಲ ಎಂದರೂ ಅತಿಶಯೋಕ್ತಿಯಲ್ಲ.

ಬದಲಾವಣೆ ಯಾವುದೇ ಇರಬಹುದು; ಅದು ಎಷ್ಟೇ ಒಳ್ಳೆಯದಿದ್ದರೂ, ಎಷ್ಟೇ ಸಂತೋಷ ತರುವಂತಿದ್ದರೂ ಅದರೊಟ್ಟಿಗೆ ಸಣ್ಣ ಆತಂಕವೂ ಇರುತ್ತದೆ. ವಯಸ್ಸು ಯಾವುದೇ ಇರಲಿ ದಿನನಿತ್ಯದ ಸಾಧಾರಣ ಬದಲಾವಣೆಗಳಿಗೆ ಕೂಡ ನಮ್ಮ ಮನಸ್ಸು ಹೇಗೆ ಬೇರೆ ಬೇರೆ ರೀತಿಯಾಗಿ ಸ್ಪಂದಿಸುತ್ತದೆ ಎನ್ನುವುದು ಸೂಕ್ಷ್ಮವಾಗಿ ತಮ್ಮನ್ನು ತಾವು ಅವಲೋಕಿಸಿಕೊಳ್ಳುವವರಿಗೆ ಅರಿವಾಗುತ್ತದೆ. ಅತಿ ಸೂಕ್ಷ್ಮ ಸ್ಥಿತ್ಯಂತರಗಳನ್ನೂ ((micro transitions) ಕೂಡ ನಮ್ಮ ದೇಹ–ಮನಸ್ಸು ತನಗೇ ವಿಶಿಷ್ಟವಾದ ರೀತಿಯಲ್ಲಿ ಗ್ರಹಿಸುತ್ತಿರುತ್ತದೆ. ಬೆಳಗ್ಗೆ ಹಾಸಿಗೆಯಿಂದ ಏಳುವುದು, ದಿನದ ಕೆಲಸಕ್ಕೆ ತಯಾರಾಗುವುದು, ಹಗಲು ನಿಧಾನಕ್ಕೆ ಸಂಜೆಗೆ ತಿರುಗುವುದನ್ನು, ಸಂಜೆ ರಾತ್ರಿಯಾಗುವುದನ್ನು ನೋಡುವುದು, ನಮ್ಮ ಆರಾಮದಾಯಕ ವಲಯವನ್ನು ಬಿಟ್ಟು ಹೊಸತನ್ನು ಮಾಡಲು ಹೊರಡುವುದು, ಹೊಸ ಜಾಗಕ್ಕೆ ಹೋಗುವುದು, ಅಪರಿಚಿತರನ್ನು ಭೇಟಿಯಾಗುವುದು - ಇಂಥದ್ದೆಲ್ಲವನ್ನು ಅನೇಕ ಸಲ ಹಾದುಬಂದ ಅನುಭವವಿದ್ದರೂ ಮತ್ತೆ ಒಂದು ಸೂಕ್ಷ್ಮ ಸ್ಥಿತ್ಯಂತರವನ್ನು ಎದುರಿಸಬೇಕಾದಾಗ ವಯಸ್ಕರೂ ಕೂಡ ಒಂದು ಅತಿ ಸಣ್ಣ ಇರುಸುಮುರುಸಿಗೆ ಒಳಗಾಗುತ್ತಾರೆ. ವಿಷಯ ಹೀಗಿರುವಾಗ ತಮ್ಮ ಮನಸ್ಸಿನಲ್ಲೇನಾಗುತ್ತಿದೆ ಎಂದು ಹೇಳಿಕೊಳ್ಳಲು ಬಾರದ, ತಂದೆ/ ತಾಯಿ/ ತನ್ನ ಮನೆಯನ್ನೇ ಸುರಕ್ಷಿತ ಭಾವಕ್ಕಾಗಿ ನೆಚ್ಚಿಕೊಂಡಿರುವ ಮಗುವಿಗೆ ‘ಶಾಲೆಗೆ ಹೋಗುವುದು’ ಎನ್ನುವುದು ಎಷ್ಟು ದೊಡ್ಡ ಸ್ಥಿತ್ಯಂತರವಲ್ಲವೇ?

ಬದುಕಿನ ಬದಲಾವಣೆಗಳಿಗೆ ತೆರೆದುಕೊಳ್ಳುವಾಗ ಸಹಜವಾಗಿ ಆಗುವ ಉದ್ವೇಗವನ್ನು ನಿರ್ವಹಿಸಲು ನಮಗೆ ಸಹಾನುಭೂತಿ ಮತ್ತು ಮಾನಸಿಕ ಬೆಂಬಲದ ಅಗತ್ಯವಿರುತ್ತದೆ. ದಿನನಿತ್ಯದ ಸೂಕ್ಷ್ಮ ಪರಿವರ್ತನೆಗಳನ್ನು ಸಹಜವಾಗಿ ಸ್ವೀಕರಿಸಲು ಮತ್ತು ಬದುಕಿಗೆ ಒಂದು ಲಯ ಕಂಡುಕೊಳ್ಳಲು ನಮಗೆ ಕೆಲವೊಂದು ಕಲಾಪ(ritual)ಗಳ ಅವಶ್ಯಕತೆಯಿರುತ್ತದೆ. ಮಕ್ಕಳಿಗೂ ಹೀಗೆಯೇ, ಅವರು ಶಾಲೆಗೆ ಹೋಗಲು, ಹೊಸ ಜಾಗಕ್ಕೆ, ಹೊಸ ಜನರಿಗೆ ಹೊಂದಿಕೊಳ್ಳಲು ತಮ್ಮನ್ನು ತಾವು ಕಂಡುಕೊಂಡು, ತಾವಿರುವಂತೆ ತಮ್ಮನ್ನು ಪ್ರಪಂಚಕ್ಕೆ ತೋರ್ಪಡಿಸಿಕೊಳ್ಳಲು ಪೋಷಕರ, ಶಿಕ್ಷಕರ, ಸಮಾಜದ ಬೆಂಬಲ ಬೇಕು, ಬದುಕಿಗೆ ಹೊಂದಿಕೊಳ್ಳಲು ಅನುವಾಗುವಂತಹ ಕಲಾಪಗಳು ಬೇಕು. ಮಗು ಹಾಸಿಗೆಯಿಂದ ಏಳುವಾಗ ಅದನ್ನು ಮುದ್ದಿಸುವುದಿರಬಹುದು, ಶಾಲೆಗೆ ಹೋಗಲು ತಯಾರಾಗುವಾಗ ತನ್ನಿಷ್ಟದ ಹಾಡು ಕೇಳಿಸಿಕೊಳ್ಳುವುದಿರಬಹುದು, ಸ್ನಾನ ಮಾಡುವಾಗ ಸೋಪಿನ ನೀರಿನಲ್ಲಿ ಕೆಲನಿಮಿಷ ಆಟವಾಡುವುದಿರಬಹುದು, ತಿಂಡಿ ತಿನ್ನುವಾಗ ಅಪ್ಪ ಅಮ್ಮ ಹೇಳಿಕೊಡುವ ಪದ್ಯವಿರಬಹುದು, ಶಾಲೆಯಿಂದ ಬಂದ ಮೇಲೆ ಮಾಡಬಹುದಾದ ಆಸಕ್ತಿಕರ ಚಟುವಟಿಕೆಯ ಬಗ್ಗೆ, ಹೊರಗೆ ಸುತ್ತಾಡುವುದರ ಬಗ್ಗೆ, ಮಗುವಿಗೆ ಇಷ್ಟವಾದ ತಿಂಡಿಯ ಬಗ್ಗೆ ಮಾತನಾಡುವುದಿರಬಹುದು, ಒಟ್ಟಿನಲ್ಲಿ ಮಕ್ಕಳಿಗೆ ಒಂದು ಸ್ಥಿರವಾದ, ಆಹ್ಲಾದಕಾರಿಯಾದ, ತಂದೆ–ತಾಯಿಯ ಕೂಗಾಟ, ಧಾವಂತವಿರದ ದಿನಚರಿಯ ಅಗತ್ಯವಿದೆ.

ಬೇಸಿಗೆ ರಜೆಯನ್ನು ಮುಗಿಸಿ ಶಾಲೆಗೆ ಹೊರಡುವ ಸ್ವಲ್ಪ ದೊಡ್ಡ ಮಕ್ಕಳು, ಶಾಲೆಗೆ ಹಲವು ವರ್ಷಗಳಿಂದ ಹೋಗುತ್ತಿದ್ದರೂ ಮಿಶ್ರ ಭಾವನೆಗಳಿಗೆ ಒಳಗಾಗುವ ಸಾಧ್ಯತೆಯಿದೆ. ಬೇಸಿಗೆ ರಜೆಯನ್ನು ಹೇಗೆಲ್ಲಾ ಸಾರ್ಥಕವಾಗಿ ಕಳೆದೆವು, ಎಷ್ಟೊಂದು ನೆನಪಿನಲ್ಲುಳಿಯುವ ಅನುಭವಗಳನ್ನು ಪಡೆದೆವು, ಮುಂದಿನ ತರಗತಿಯಲ್ಲಿ ಎಷ್ಟೆಲ್ಲಾ ಹೊಸ ವಿಷಯಗಳನ್ನು ಕಲಿಯುವುದಿದೆ ಮುಂತಾದ ಆಯಾ ವಯಸ್ಸಿಗೆ ಸೂಕ್ತವಾದ ಮಾತುಕತೆಯನ್ನು ಪೋಷಕರೊಂದಿಗೆ ಅಥವಾ ಸಹಪಾಠಿಗಳೊಂದಿಗೆ ನಡೆಸುವುದು ಮಕ್ಕಳು ‘ರಜೆ ಮುಗಿಸಿ ಮತ್ತೆ ಶಾಲೆಗೆ ಹೋಗುವುದು’ ಎನ್ನುವ ಸ್ಥಿತ್ಯಂತರಕ್ಕೆ ಹೊಂದಿಕೊಳ್ಳಲು ಸಹಕಾರಿಯಾಗಬಲ್ಲ ಕಲಾಪವೇ ಹೌದು. ಒಟ್ಟಿನಲ್ಲಿ ಮಕ್ಕಳ ಜೀವನದ ಸಣ್ಣ ಸಣ್ಣ ಬದಲಾವಣೆಗಳನ್ನೂ ಪೋಷಕರು ಗಮನಿಸುತ್ತಿರುತ್ತಾರೆ. ಅದಕ್ಕೆ ಪ್ರೀತಿಯಿಂದ ಸಹಾನುಭೂತಿಯಿಂದ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸವೇ ಮಕ್ಕಳಿಗೆ ಸುರಕ್ಷಿತ ಭಾವವನ್ನು ಹುಟ್ಟಿಸುತ್ತದೆ.

ಮಗುವಿನ ಪಾಲಿಗೆ ಹೊರಜಗತ್ತಿನ, ಸಮಾಜದ, ವ್ಯವಸ್ಥೆಯ ಪ್ರತಿನಿಧಿಯಂತಿರುವ ಶಾಲೆಗೆ ಮಗು ಹೇಗೆ ಸ್ಪಂದಿಸುತ್ತದೆ, ಸ್ವೀಕರಿಸುತ್ತದೆ, ಒಗ್ಗಿಕೊಳ್ಳುತ್ತದೆ ಎನ್ನುವುದು ಮಗುವಿನ ಭಾವನಾತ್ಮಕ ಬೆಳವಣಿಗೆಯ ಮೈಲಿಗಲ್ಲು. ಮಗುವಿಗೆ ಶಾಲೆಯ ಬಗೆಗಿನ ಧೋರಣೆ/ ದೃಷ್ಟಿಕೋನ ಎನ್ನುವುದು ಮಗುವಿನ ಮನಸ್ಸಿನಲ್ಲೇನಾಗುತ್ತಿದೆ, ಕುಟುಂಬದಲ್ಲೇನಾಗುತ್ತಿದೆ, ಸಮಾಜದಲ್ಲೇನಾಗುತ್ತಿದೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿ. ನಾವು ಒಂದು ಕ್ಷಣ ನಮ್ಮ ಬಾಲ್ಯಕ್ಕೆ ಹೋಗಿ ಶಾಲೆಗೆ ಹೋಗುವಾಗಿನ ನಮ್ಮ ಮಾನಸಿಕ ಸ್ಥಿತಿ ಹೇಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬಹುದು, ಅದು ನಮ್ಮ ವ್ಯಕ್ತಿತ್ವ, ನಾವು ಬೆಳೆದುಬಂದ ಪರಿಸರ, ನಮ್ಮ ಲೋಕಗ್ರಹಿಕೆ - ಈ ಎಲ್ಲದರ ಕುರಿತು ಸಮೃದ್ಧ ಮಾಹಿತಿಯನ್ನೊದಗಿಸುತ್ತದೆ!!

ಚಿಕ್ಕ ಮಗು ಪೋಷಕರನ್ನು, ಮನೆಯನ್ನು ತೊರೆದು ಶಾಲೆಗೆ ಹೋಗಲು ಮುಖ್ಯ ತೊಡಕಾಗಿರುವ, ಮಗುವಿನ ಭಾವನಾತ್ಮಕ ಬದುಕಿನ ಮಹತ್ವದ ಅಂಶವೆಂದರೆ: ಮಗುವಿನ ಮನಸ್ಸಿನಲ್ಲಿರುವ ಅಭದ್ರತೆಯ ಭಾವನೆ. ‘ನನ್ನನ್ನು ತಂದೆ/ತಾಯಿ ಶಾಲೆಯಿಂದ ಮನೆಗೆ ಕರೆತರಲು ಬಾರದೇ ಇದ್ದರೆ? ಶಾಲೆಯಿಂದ ಮನಗೆ ಬರುವಷ್ಟರಲ್ಲಿ ತಂದೆ/ತಾಯಿ ಕಾಣದೇ ಹೋದರೆ, ತಂದೆ/ತಾಯಿಗೇ ಏನಾದರೂ ಅಪಾಯವಾದರೆ, ತನ್ನಿಂದ ಅವರು ದೂರವಾಗಿಬಿಟ್ಟರೆ’ ಎಂಬಂತಹ ಆತಂಕ ಒಂದು ಮಟ್ಟ ಮೀರಿ ಮಗುವಿಗಿದ್ದಾಗ ಶಾಲೆಗೆ ಹೋಗದಿರಲು, ತಂದೆ/ತಾಯಿಗೇ ಅಂಟಿಕೊಂಡಿರಲು ಮಗು ಏನಾದರೂ ನೆಪವನ್ನು ಹುಡುಕುತ್ತಿರುತ್ತದೆ.

ಮಗುವಿನ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಈ ಭಯಕ್ಕೆ, ಅಪನಂಬಿಕೆಗೆ ಮಗುವಿನ ದೈಹಿಕ ಸ್ಥಿತಿ, ಕೌಟುಂಬಿಕ ಸ್ಥಿತಿ, ಮಗುವಿಗೆ ತೀರ ಎಳೆವೆಯಲ್ಲಿ ಆದ ಅನುಭವಗಳು – ಹೀಗೆ ಹಲವು ಬಲವಾದ ಕಾರಣಗಳಿರುತ್ತವೆ. ಇಂತಹ ಮಕ್ಕಳಿಗೆ ಶಾಲೆಗೆ ಹೋಗಲು ಶಿಕ್ಷೆಯ ಭಯವನ್ನುಂಟುಮಾಡಿಯೋ, ಯಾವುದಾದರೂ ಆಮಿಷವೊಡ್ಡಿಯೋ, ಬೇರೆ ಮಕ್ಕಳೊಂದಿಗೆ ಹೋಲಿಸಿ ಮನವೊಲಿಸುವುದೋ, ಸುಮ್ಮನೇ ಕಾರಣ ತಿಳಿಯದೇ ಬಲವಂತಪಡಿಸುವುದೋ ಅಷ್ಟೇನೂ ಪರಿಣಾಮಕಾರಿ ತಂತ್ರವಲ್ಲ. ಮಗುವಿನ ಮನಸ್ಸಿನಲ್ಲಿ ವಿಶ್ವಾಸವನ್ನು ತುಂಬಿಸಲು ಸಮಯ, ಪರಿಶ್ರಮ, ಅಗತ್ಯಬಿದ್ದರೆ ತಜ್ಞರ ಸಹಾಯವೂ ಬೇಕು. ಮಗು ದಿನವೂ ತಪ್ಪದೆ ಶಾಲೆಗೆ ಹೋಗುವುದು ಅನಿವಾರ್ಯ; ಅದರಲ್ಲಿ ಯಾವುದೇ ವಿನಾಯಿತಿಯಿಲ್ಲ ಎನ್ನುವುದನ್ನು ಪ್ರೀತಿಯಿಂದ ಅರ್ಥಮಾಡಿಸಬೇಕಾಗುತ್ತದೆ.

ಶಾಲೆಯಲ್ಲಿ ತನ್ನನ್ನು ಶಿಕ್ಷೆಗೊಳಪಡಿಸಬಹುದೆಂಬ ಭಯ, ಶಾಲೆಯ ವಾತಾವರಣ ಯಾವ ರೀತಿಯಲ್ಲೂ ಸಂತಸದಾಯಕವಾಗಿಲ್ಲದಿರುವುದು, ಸಹಪಾಠಿಗಳ ಗೇಲಿ, ಅವರೊಂದಿಗೆ ಜಗಳ, ಆತ್ಮೀಯತೆಯಿಂದ ಮಕ್ಕಳನ್ನು ಕಾಣದ ಶಿಕ್ಷಕರು, ಓದಿನ ಒತ್ತಡ ಹೀಗೆ ಮಕ್ಕಳು ಶಾಲೆಗೆ ಹೋಗಲು ಬೇಸರಪಟ್ಟುಕೊಳ್ಳಲು ಹಲವು ಕಾರಣಗಳಿದ್ದರೂ ಅವೆಲ್ಲವನ್ನೂ ಪೋಷಕರ ಸ್ವಲ್ಪ ಬೆಂಬಲದೊಂದಿಗೆ ಯಶಸ್ವಿಯಾಗಿ ನಿರ್ವಹಿಸುವ ಶಕ್ತಿ ಮಕ್ಕಳಿಗಿರುತ್ತದೆ. ತನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುವ, ಸದಾ ಗಮನಿಸುವ, ತನ್ನ ಕನಸುಗಳನ್ನು ನನಸು ಮಾಡಿಕೊಳ್ಳಲು ಪ್ರೇರೇಪಿಸುವ, ತನ್ನನ್ನು ಅನನ್ಯ ವ್ಯಕ್ತಿಯೆಂದು ಕಾಣುವ ಒಬ್ಬರಾದರೂ ಹಿರಿಯರು/ ಪೋಷಕರಿದ್ದಾಗ ಮಕ್ಕಳು ಜೀವನದ ಸವಾಲುಗಳನ್ನು ಸಹಜವಾಗಿ ಸ್ವೀಕರಿಸಿ, ಹಗಲಿರುಳೂ ಶ್ರಮಿಸಿ ಕಷ್ಟಪಟ್ಟಾದರೂ ಏನನ್ನಾದರೂ ಕಲಿತು ಸಾಧಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT