ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸೆ ನೀ ಇಲ್ಲದೆ ನಾ ಹೇಗಿರಲಿ!

Last Updated 26 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ನಮ್ಮ ಕಾಲೇಜಿನಲ್ಲಿ ಪ್ರತಿವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಒಂದು ನಾಟಕವನ್ನು ಅಭಿನಯಸಬೇಕಿರುವುದು ಕಡ್ಡಾಯ. ನಾಟಕದ ತಯಾರಿಗಾಗಿ ನಮ್ಮ ಕಪಿ ಸೈನ್ಯ ಅಣಿಯಾಯಿತು.

ನಾಟಕದ ಮೇಷ್ಟ್ರು ಸಿಂಗಾಪುರದಿಂದ ಬಂದಿಳಿದರು. ನಮ್ಮ ಶರೀರಕ್ಕೆಲ್ಲಾ ವ್ಯಾಯಾಮವೆಂಬೋ ಹೆಸರಿನಲ್ಲಿ ನಡು ಬಗ್ಗಿಸಿ, ಕತ್ತು ಕೊಂಕಿಸಿ, ಮೇಲಕ್ಕೆ ಜಿಗಿಸಿ, ಕೆಳಕ್ಕೆ ಬೀಳಿಸಿ ಇನ್ನೂ ಏನೇನೋ ಮಾಡಿಸಿ ನಮ್ಮೆಲ್ಲರ ಶಾಪಕ್ಕೆ ಗುರಿಯಾದರು.

ಏನೇನೋ ಮಾಡಿ ‘ದ ಲೀಡರ್’ ಎನ್ನುವ ಇಂಗ್ಲಿಷ್ ನಾಟಕವನ್ನು ನಾವೇ ಕನ್ನಡೀಕರಿಸಿ, ತಾಲೀಮು ಮಾಡಿ ತಯಾರಾದೆವು. ನಾಟಕಕ್ಕೆ ಸಭಾಂಗಣವೂ ಗೊತ್ತಾಯಿತು. ಇಂತಿಪ್ಪ ಸಮಯದಲ್ಲೇ ಹುಡುಗರಿಗೆಲ್ಲಾ ಬರಸಿಡಿಲಿನಂತೆ ಬಂದೆರಗಿತು ಮೇಷ್ಟ್ರ ಸುಗ್ರೀವಾಜ್ಞೆ. ನಾಟಕಕ್ಕೆ ಎಲ್ಲಾ ಹುಡುಗರು ಮೀಸೆ ಮತ್ತು ದಾಡಿಯನ್ನು ಒಂದು ಕೂದಲೂ ಕಾಣದಂತೆ ಶೇವ್ ಮಾಡಬೇಕೆಂಬುದೇ ಅದು.

ತಗಳಪ್ಪ, ಮೀಸೆಯ ಮೇಲೆ ಪ್ರಾಣವೇ ಇಟ್ಟುಕೊಂಡಿರುವ ನಮಗೆಲ್ಲ ಪೀಕಲಾಟ ಶುರು. ಕುಡಿಮೀಸೆ, ಚಿಗುರು ಮೀಸೆ, ಗಿರಿಜಾ ಮೀಸೆ, ಬಗೆ ಬಗೆಯ ಮೀಸೆಗಳ ಆಸೆಗೆಲ್ಲಾ ಮೇಷ್ಟ್ರು ತಣ್ಣೀರೆರಚಿದ್ದರು. ಕೋಪದಿಂದ ಒಬ್ಬನೆಂದ, ‘ನನ್ಗೆ ನಾಟಕದಲ್ಲಿ ಪಾತ್ರ ಕೊಡದಿದ್ರೂ ಪರ್ವಾಗಿಲ್ಲ, ನಾನ್ ಮಾತ್ರ ಮೀಸೆ ತೆಗೆಯಲ್ಲ’.

ಮೇಷ್ಟ್ರು ಅಷ್ಟೇ ಖಾರವಾಗಿ ‘ನಾನು ನಿನ್ಗೆ ಮೇಷ್ಟ್ರೇ ಅಲ್ಲ, ನೀನು ನನ್ಗೆ ಶಿಷ್ಯನೂ ಅಲ್ಲ, ತೊಲಗಾಚೆ’ ಎಂದರಚಿದರು. ಅವನೇನೋ ಬಚಾವಾದ. ಆದರೆ ನಮ್ಮಗಳ ಪಾಡು ‘ಕೂಗಿದರು ದನಿ ಕೇಳದೆ ನರಹರಿಯೆ’ ಎಂಬಂತೆ ಅರಣ್ಯರೋದನವಾಗಿತ್ತು. ಮೇಷ್ಟ್ರಿಂದ ಅರ್ಧಗಂಟೆ ಮೀಸೆ ತೆಗೆಸುವುದರ ಬೋಧನೆಯಾಯಿತು. ನಮ್ಮ ಮೇಷ್ಟ್ರು ಮಂಜಣ್ಣ ‘‘ಮೀಸೆ ಮೀಸೆ ಎಂದು ಬೀಗಬೇಡ, ರಟ್ಟೆಗಾತ್ರದ ಮೀಸೆಯ ವೀರಪ್ಪನ್, ಅವರಪ್ಪನ್ ಎಲ್ಲರೂ ಮಣ್ಣಾಗಿದ್ದನ್ನು ನೋಡಿದ್ದೇನೆ’’ ಎಂದು ರಾಗ ಪಾಡಿದರು.

‘ಮೀಸೆಯೆ ನನ್ನುಸಿರು, ಮೀಸೆಯೇ ನನ್ನುಸಿರು’ ಎನ್ನುತ್ತಿದ್ದ ನನಗೆ ಇದರಿಂದ ಉಸಿರೇ ನಿಂತಂತಾಯಿತು. ಮಾಡುವುದಿನ್ನೇನು, ಮೀಸೆ ತೆಗೆಯುವುದರ ಹೊರತು ಎಂದು ಹಲುಬುತ್ತಾ ಗಂಡು ಹೈಕಳೆಲ್ಲಾ ‘ದಾರಿ ಯಾವುದಯ್ಯಾ ಹರಿಯೇ ಕ್ಷೌರದಂಗಡಿಗೆ’ ಎಂದು ಹೊರಟೆವು. ಹೋಗಿ ‘ದಾಡಿ ನಿನ್ನದು, ಈ ಮೀಸೆ ನಿನ್ನದು, ನನಗಾಗಿ ಇನ್ನೇನಿದೆ... ಈ ಮೀಸೆ ಇಂದೆಂದೂ ನಿನದಾಗಿದೆ’ ಎಂದು ಕಣ್ಮುಚ್ಚಿ ಕುಳಿತೆವು.

ಅಂಗಡಿಯಾತ ನಮ್ಮ ಹುಲುಸಾದ ಬೆಳೆಗೆ ಕತ್ತರಿ ಇಟ್ಟು ಮರುಭೂಮಿ ಮಾಡಿದ್ದ. ಕಣ್ ಬಿಟ್ಟು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರೆ ಗುರುತೇ ಸಿಗುತ್ತಿಲ್ಲ. ನಮ್ಮ ಮಾರುತಿಯಂತೂ ಅಂಗಡಿಯಲ್ಲೇ ಕಿಟ್ಟನೆ ಕಿರುಚಿಬಿಟ್ಟ. ಅವನ ಹುಡುಗಿ ಅವನನ್ನು ಈ ಸ್ಥಿತಿಯಲ್ಲಿ ನೋಡಿದರೆ ಖಂಡಿತಾ ಪ್ರಜ್ಞೆ ತಪ್ಪುತ್ತಾಳೆಂದು ರೋದಿಸುತ್ತಿದ್ದ. ಅವನನ್ನು ಸಮಾಧಾನ ಪಡಿಸಿ ‘ಅಯ್ಯೋ ನಮ್ಮ ದುರಾದೃಷ್ಟವೇ, ಹಣೆಬರಹವೇ’ ಎಂದು ಹಲುಬುತ್ತಾ ಹಾಸ್ಟೆಲ್ ಕಡೆ ಬಂದರೆ ನಮ್ಮನ್ನು ನೋಡಲು ಇಡೀ ಕಾಲೇಜಿನ ಹುಡುಗಿಯರ ದಂಡೇ ಗೇಟಿನ ಬಳಿ ಜಮಾಯಿಸಿದೆ.

ಮೊನ್ನೆಯವರೆಗೂ ‘ಚಿಗುರು ಮೀಸೆ ಚೆಲುವಾ ನೀನು’ ಎನ್ನುತ್ತಿದ್ದ ಹುಡುಗಿ ನನ್ನ ನೋಡಿ ‘ಇವನ್ಯಾರವ ಇವನ್ಯಾರವ’ ಎಂದೆಣಿಸಲು ಶುರು ಮಾಡಿದಳು. ಮತ್ತೊಬ್ಬಳು ‘ಮೀಸೆ ಇಲ್ಲದ ನಿಮ್ಮ ಮುಖವು ಹಾಳೂರ ಹದ್ದಿನಂತಿಕ್ಕು’ ಎಂದು ಕಿಸಕ್ಕನೆ ನಕ್ಕಳು. ಮೊನ್ನೆಯವರೆಗೂ ಮಾತೇ ಆಡದಿದ್ದ ನಮ್ಮ ಮುರಳಿ ಮೀಸೆಯಲ್ಲೇನಿದೆ, ಮನಸಲ್ಲೆಲ್ಲಾ ಇದೆ ಎಂದು ಹಾಡಲು ಶುರು ಮಾಡಿದರು. ನಮ್ಮಲ್ಲೊಬ್ಬ ಬರೀ ದಾಡಿ ಮಾತ್ರ ತೆಗೆಸಿ ಮೀಸೆ ಹಾಗೇ ಬಿಟ್ಟಿದ್ದ.

ನೋಡಿದ ನಮಗೆಲ್ಲಾ ಹೊಟ್ಟೆಯಲ್ಲಿ ಖಾರ ಕಲೆಸಿದಂತಾಯ್ತು. ನಿನ್ನ ಮೀಸೆ ಕಂಡಾಗಲೆನ್ನ ಕಣ್ಣುರಿ ಕಾಣೋ ಜೋಗಿ ಎನ್ನುತ್ತಾ ಅವನ ಕೈಕಾಲು ಕಟ್ಟಿ ಮೀಸೆಯನ್ನೆಲ್ಲ ನುಣ್ಣಗೆ ಶೇವ್ ಮಾಡಿದೆವು. ಮೀಸೆಯಿಲ್ಲದ ನಮ್ಮ ಮುಖಗಳನ್ನು ನೋಡಿಕೊಂಡಾಗಲೆಲ್ಲಾ ನಮಗೇ ನಗು ಬರುತಿತ್ತು. ಮೀಸೆ ಕುಡಿಯನ್ನು ತಿರುವಿ ಅಭ್ಯಾಸವಾಗಿದ್ದ ನನಗೆ ಅಮೂಲ್ಯ ಸಂಪತ್ತನ್ನು ಕಳೆದುಕೊಂಡ ಭಾವ. ನಾಟಕದ ಮೇಷ್ಟ್ರ ಮೀಸೆಯನ್ನು ಮಲಗಿದ್ದಾಗ ತೆಗೆದೇ ತೀರುವುವೆಂದು ತೀರ್ಮಾನಿಸಿ ನಮ್ಮ ದುಃಖ ಮರೆಯಲು ಯತ್ನಿಸಿದೆವು.

–ಪ್ರದೀಪ ಟಿ.ಕೆ, ಬದುಕು ಕಮ್ಯೂನಿಟಿ ಕಾಲೇಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT