ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪ್ಲೊಮಾಕ್ಕೆ ಗ್ರಾಮೀಣ ವಿದ್ಯಾರ್ಥಿಗಳ ನಿರಾಸಕ್ತಿ

ಜಿಲ್ಲೆಯ ಬಹುತೇಕ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಶೇ 50ರಷ್ಟು ಸೀಟುಗಳು ಖಾಲಿ
Last Updated 3 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಕೆಲವು ವರ್ಷಗಳ ಹಿಂದೆ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದರು. ಆದರೆ, 2020– 21ನೇ ಶೈಕ್ಷಣಿಕ ವರ್ಷದಲ್ಲಿ ಡಿಪ್ಲೊಮಾ ಪ್ರವೇಶಾತಿ ಕುಸಿದಿದೆ.

ಜಿಲ್ಲೆಯಲ್ಲಿ ಒಟ್ಟು 16 ಪಾಲಿಟೆಕ್ನಿಕ್ ಕಾಲೇಜುಗಳಿವೆ. ನಗರದಲ್ಲಿರುವ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಬಹುತೇಕ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಶೇ 50ರಷ್ಟು ಸೀಟುಗಳು ಭರ್ತಿಯಾಗಿಲ್ಲ.

ಅಫಜಲಪುರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಾಲ್ಕು ವಿಭಾಗಗಳಲ್ಲಿರುವ 240 ಸೀಟುಗಳಲ್ಲಿ ಪ್ರವೇಶ ಪಡೆದದ್ದು ಕೇವಲ 22 ವಿದ್ಯಾರ್ಥಿಗಳು ಮಾತ್ರ. ಕಾಳಗಿಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 252 ಸೀಟುಗಳಲ್ಲಿ 106 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದು, 146 ಸೀಟುಗಳು ಖಾಲಿ ಉಳಿದಿವೆ.‌

ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿರುವ ಕಾಲೇಜುಗಳಿಗೆ ಪ್ರವೇಶ ಪಡೆಯಲು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಅಲ್ಲಿನ ಸಿಬ್ಬಂದಿ ಮತ್ತು ಸೌಲಭ್ಯ ಕೊರತೆಯೂ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇದರಿಂದಾಗಿ ನಗರದಲ್ಲಿರುವ ಕಾಲೇಜುಗಳಿಗೆ ತೆರಳುತ್ತಿದ್ದಾರೆ.

ಕಲಬುರ್ಗಿಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರವೇಶಾತಿ ಉತ್ತಮವಾಗಿದೆ. ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ ಹಾಗೂ ದೂರಸಂಪರ್ಕ ವಿಭಾಗಗಳಲ್ಲಿ ತಲಾ 63 ಸೀಟುಗಳಿದ್ದು, ಎಲ್ಲವೂ ಭರ್ತಿಯಾಗಿವೆ. ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ 30 ಸೀಟುಗಳಿದ್ದು, ಅದರಲ್ಲಿ 22 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದು ಪ್ರಾಚಾರ್ಯ ಎಸ್.ಬಿ.ಪಾಟೀಲ ತಿಳಿಸಿದರು.

ಇಲ್ಲಿನ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಒಟ್ಟು ನಾಲ್ಕು ವಿಭಾಗಗಳಿದ್ದು, 180 ಸೀಟುಗಳಲ್ಲಿ 146 ಸೀಟುಗಳು ಭರ್ತಿಯಾಗಿವೆ. ನೂತನ ವಿದ್ಯಾಲಯ ಸೊಸೈಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 5 ವಿಭಾಗಗಳಿದ್ದು, ಶೇ 50ರಷ್ಟು ಸೀಟು ಭರ್ತಿಯಾಗಿವೆ.

ಡಿಪ್ಲೊಮಾ ಉತ್ತೀರ್ಣ ಮಾಡುವುದು ಕಷ್ಟ ಎಂಬ ಮನೋಭಾವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಮೂಡಿದೆ. ಪಿಯು ಶಿಕ್ಷಣ ಪಡೆದು ಇತರ ಕೋರ್ಸ್‌ಗಳತ್ತ ಆಸಕ್ತಿ ಬೆಳೆಯುತ್ತಿದೆ. ಎಂಜಿನಿಯರಿಂಗ್‌ ಶಿಕ್ಷಣ ಪಡೆಯುವ ಆಸಕ್ತರು ಕೂಡ ಡಿಪ್ಲೊಮಾ ಸೇರುತ್ತಿಲ್ಲ. ಪ್ರವೇಶಾತಿ ಕುಸಿತಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ವಲಯದಲ್ಲಿ ಇಂತಹ ಹಲವು ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆ.

ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣಕ್ಕೆ 2020–21ನೇ ಶೈಕ್ಷಣಿಕ ವರ್ಷ ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುವುದು ವಿಳಂಬವಾದ್ದರಿಂದ ಡಿಪ್ಲೊಮಾ ಪ್ರವೇಶ ಪ್ರಕ್ರಿಯೆಯೂ ತಡವಾಯಿತು.

ಇತರ ಕೋರ್ಸ್‌ಗಳಿಗೆ ಹೋಲಿಸಿದರೆ ಡಿಪ್ಲೊಮಾ ಪ್ರವೇಶಾತಿ ಪ್ರಕ್ರಿಯೆ ಸಂಕೀರ್ಣವಾಗಿದೆ. ವಿಳಂಬವಾಗಿ ಆರಂಭವಾಗುವ ಆನ್‌ಲೈನ್ ನೋಂದಣಿ, ಚಲನ್ ಕಟ್ಟುವುದಕ್ಕಾಗಿ ಗಂಟೆಗಟ್ಟಲೆ ಬ್ಯಾಂಕಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಡಿಪ್ಲೊಮಾದತ್ತ ಸುಳಿಯುತ್ತಿಲ್ಲ. ಪ್ರವೇಶ ಪ್ರಕ್ರಿಯೆಯನ್ನು ಸರಳವಾಗಿಸುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಸಾಧ್ಯ ಎನ್ನುತ್ತಾರೆ ಅಫಜಲಪುರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಶಾವಿ.

ಈಗ ಬಹುತೇಕ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗ ಪಡೆಯಲು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಆದರೆ ಡಿಪ್ಲೊಮಾ ಶಿಕ್ಷಣವನ್ನು ಪೊಲೀಸ್, ಅಂಚೆ, ಅರಣ್ಯ, ಕಂದಾಯ ಸೇರಿದಂತೆ ಹಲವು ಇಲಾಖೆಗಳಲ್ಲಿ ಪರಿಗಣಿಸುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಡಿಪ್ಲೊಮಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಉದ್ಯೋಗಗಳಲ್ಲಿ ಡಿಪ್ಲೊಮಾ ಪಡೆದವರಿಗೂ ಅವಕಾಶ ನೀಡಿದಾಗ ಮಾತ್ರ ಪ್ರವೇಶಾತಿ ಹೆಚ್ಚಿಸಲು ಸಾಧ್ಯ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಮೊದಲ ವರ್ಷಕ್ಕೆ ಪ್ರಮಾಣಪತ್ರ

ಡಿಪ್ಲೊಮಾ ಶಿಕ್ಷಣದಲ್ಲಿ ಮೊದಲ ವರ್ಷ ಪೂರೈಸಿದ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರ ಸಿಗಲಿದೆ. ಇದನ್ನು ಆಧರಿಸಿ ಉದ್ಯೋಗ ಪಡೆಯಲು ನೂತನ ಶಿಕ್ಷಣ ನೀತಿ ಅವಕಾಶ ಕಲ್ಪಿಸಿದೆ.

ಮೂರು ವರ್ಷದ ಡಿಪ್ಲೊಮಾ ಶಿಕ್ಷಣವನ್ನು ಕೆಲವರಿಗೆ ಪೂರೈಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರಥಮ, ದ್ವಿತೀಯ ವರ್ಷಕ್ಕೂ ಪ್ರಮಾಣಪತ್ರ ನೀಡಲಾಗುತ್ತಿದೆ. ಶಿಕ್ಷಣ ಮೊಟಕುಗೊಳಿಸಿದರೂ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದಿಲ್ಲ.

*ಪಿಯುಸಿಗೆ ಹೋಲಿಸಿದರೆ ಡಿಪ್ಲೊಮಾ ಮುಗಿಸಿದವರಿಗೆ ಉದ್ಯೋಗವಕಾಶ ಹೆಚ್ಚು. ಡಿಪ್ಲೊಮಾ ಪಠ್ಯವನ್ನು ಈಗ ಸರಳವಾಗಿಸಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಭರತ್, ಪ್ರಾಚಾರ್ಯ, ಸರ್ಕಾರಿ ಪಾಲಿಟೆಕ್ನಿಕ್, ಕಾಳಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT