ಯಾವುದೇ ಮಗುವಿಗೆ ಹನ್ನೆರಡರಿಂದ ಹದಿನೈದರ ಹರೆಯವು ದೇಹದ ಹಾರ್ಮೋನುಗಳು ತ್ವರಿತವಾಗಿ ಬೆಳೆಯುವ, ಮನಸ್ಸು ವಿಕಸಿಸುವ ಸಮಯ. ಈ ಹೊತ್ತಿನಲ್ಲಿ ದೇಹ ದಣಿದರೆ ಮನಸ್ಸು ಹದಗೊಳ್ಳುತ್ತದೆ. ಓದಿನೊಂದಿಗೆ ಓಟ, ಆಟ, ಹಾರಾಟ, ನಗು, ತಮಾಷೆ, ಬೆವರು ಎಲ್ಲವೂ ಸೃಷ್ಟಿಶೀಲತೆಗೆ ಇಂಬು ಕೊಡುತ್ತವೆ. ಅಂಗಳದ ಬಯಲಿನ ಚುರುಕಾದ ಚಟುವಟಿಕೆಯು ದೇಹದ ಎಲುಬಿಗೂ ಮನಸ್ಸಿನ ಮೆದುಳಿಗೂ ಪ್ರಾಣ ತುಂಬುತ್ತದೆ.

ದುರಂತವೆಂದರೆ, ದೇಹದ ಮೂಲಕ ಮನಸ್ಸು ಅರಳುವ, ಕ್ರಿಯಾಶೀಲಗೊಳ್ಳುವ ಇದೇ ಹೊತ್ತಿಗೆ ನಾವು ನಮ್ಮ ಮಕ್ಕಳನ್ನು ಅಂಕದ ಒತ್ತಡದಲ್ಲಿ ಮುಳುಗಿಸುತ್ತೇವೆ. ಬರೀ ಓದು ಓದು ಓದು ಎಂದು ಕಲಿಕೆಯ ಗೋಡೆಯೊಳಗೆ ನಿರ್ಬಂಧಿಸುತ್ತೇವೆ. ಎಂಟು ದಾಟಿ ಒಂಬತ್ತನೇ ತರಗತಿಗೆ ಬಂದರೆ ಸಾಕು, ಮನೆಯೊಳಗೆ ಅಘೋಷಿತ ಸೆಕ್ಷನ್ನೊಂದು ಜಾರಿಯಾಗುತ್ತದೆ. ಮಗು ಆಚೆ ಈಚೆ ನೋಡುವಂತಿಲ್ಲ, ಪಠ್ಯ ಬಿಟ್ಟು ಬೇರೆ ಪುಸ್ತಕ ಇಲ್ಲ, ಗೆಳೆಯರ ಕೂಟ ಸೇರುವಂತಿಲ್ಲ, ಇಷ್ಟದ ಕ್ರಿಕೆಟ್ ಇಲ್ಲವೇ ಇಲ್ಲ, ಸಂಗೀತ, ಸಿನಿಮಾ ದೂರದ ಮಾತು. ಬರೀ ಟೆನ್ಷನ್. ಹೀಗೆ ಅಂಕದ ಮೂಸೆಯಲ್ಲಿ ಎರಕಹೊಯ್ಯುವ ಪ್ರತಿಬಂಧಕಾಜ್ಞೆಯು ನಿತ್ಯ ನಿರಂತರ ಜಾರಿಯಲ್ಲಿದ್ದು, ಮಗುವನ್ನು ಬರೀ ಪುಸ್ತಕಕ್ಕೆ ಅಂಟಿಸಿ ಬಿಡುತ್ತದೆ.

ತಮ್ಮ ಮಗ ಅಥವಾ ಮಗಳನ್ನು ‘ಈಗ 10ನೆಯ ತರಗತಿ’ ಎಂಬ ಹೆಸರಿನಲ್ಲಿ ಮರ್ಯಾದೆಯ ಕಟಕಟೆಯಲ್ಲಿ ನಿಲ್ಲಿಸಲಾಗುತ್ತದೆ! ತಂದೆ ತಾಯಿಯಷ್ಟೇ ಅಲ್ಲ, ಶಿಕ್ಷಕರು, ಸಂಸ್ಥೆಯ ಮಾಲೀಕರು, ಮಾರ್ಗದರ್ಶಕರು– ಎಲ್ಲರೂ ಮಗುವಿನ ಜೀವನವನ್ನು ಅಂಕಗಳ ಚೌಕಟ್ಟಿನಲ್ಲಿ ಅಳೆಯತೊಡಗುತ್ತಾರೆ. ವಿದ್ಯಾರ್ಥಿ ಪಡೆಯುವ ಅಂಕವು ಹೆತ್ತವರಿಗಷ್ಟೇ ಅಲ್ಲ ಶಾಲೆಗೂ ಮರ್ಯಾದೆಯ ಪ್ರಶ್ನೆಯಾಗುತ್ತದೆ. ಫಲಿತಾಂಶದ ಲಕ್ಷ್ಮಣರೇಖೆಯ ಒಳಗೆ ಬಂಧಿಸಿ ಮಗುವನ್ನು ಕಾವಲು ಕಾಯಲಾಗುತ್ತದೆ.

ತಲೆಗಷ್ಟೇ ಒತ್ತಡ ಕೊಡುವ ಈ ಕಲಿಕಾ ಕ್ರಮ ನಿಧಾನವಾಗಿ ದೇಹದ ವೈಕಲ್ಯಕ್ಕೆ ಕಾರಣವಾಗಬಹುದು ಎನ್ನುತ್ತವೆ ಸಂಶೋಧನೆಗಳು. ಇದನ್ನು ಆಧರಿಸಿಯೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಕೆ.ಟಿ.ತಿಪ್ಪೇಸ್ವಾಮಿ ಇತ್ತೀಚೆಗೆ ಶಿಕ್ಷಣ ಇಲಾಖೆಗೆ ಪತ್ರ ಬರೆದು, ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಟ ಹಾಗೂ ದೈಹಿಕ ಶಿಕ್ಷಣದ ಅವಕಾಶ ನೀಡಲು ಒತ್ತಾಯಿಸಿದ್ದಾರೆ. ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಬೇಕು ಎಂಬ ಕಾರಣಕ್ಕಾಗಿ ಸರ್ಕಾರಿ ಶಾಲೆಗಳೂ ಸೇರಿ ಬಹುತೇಕ ಶಿಕ್ಷಣ ಸಂಸ್ಥೆಗಳು ಇಂದು ದೈಹಿಕ ಶಿಕ್ಷಣ ಅಥವಾ ನಿಯತ ಆಟಗಳ ತರಗತಿಗಳನ್ನು ರದ್ದು ಮಾಡುತ್ತಿವೆ. ತಿಪ್ಪೇಸ್ವಾಮಿ ಅವರ ಪ್ರಕಾರ, ಆಟ, ಕಲೆ, ಸಂಗೀತದಂತಹ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸಮಗ್ರ ವ್ಯಕ್ತಿತ್ವದ ಅಭಿವೃದ್ಧಿಗೆ ಅಗತ್ಯವಾದವು. ಆದರೆ ಅಂಕದ ಒತ್ತಡದ ಕಾರಣದಿಂದ ಅವುಗಳನ್ನು ನಿಷೇಧಿಸುವುದು ಮಕ್ಕಳ ಕಲಿಕೆಯ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತದೆ.

ಬೇರೆ ಪಠ್ಯಗಳ ಕಲಿಕೆಯ ಹಾಗೆಯೇ ಆಟವು ವಿದ್ಯಾರ್ಥಿಗಳ ಮೂಲಭೂತ ಹಕ್ಕು. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಪ್ಪಂದದ 31ನೇ ವಿಧಿಯ ಪ್ರಕಾರ, ಆಟ ಮತ್ತು ವಿಶ್ರಾಂತಿಯು ಮಕ್ಕಳ ಶಾರೀರಿಕ, ಮಾನಸಿಕ ಬೆಳವಣಿಗೆಗೆ ಅತ್ಯವಶ್ಯ. ಆದರೆ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯವರು ಈ ಹಕ್ಕಿನ ಮಹತ್ವ ಅರಿಯದ ಕಾರಣ ಮಕ್ಕಳು ಹಿಂಸೆಗೆ ಒಳಗಾಗುತ್ತಿದ್ದಾರೆ. ಶಾಲೆಗಳು ವಾರದಲ್ಲಿ ಕಡ್ಡಾಯವಾಗಿ ಕನಿಷ್ಠ ನಾಲ್ಕು ದೈಹಿಕ ಶಿಕ್ಷಣ ತರಗತಿಗಳನ್ನು ನಡೆಸಬೇಕು. ರಾಜ್ಯ ಸರ್ಕಾರದ ಪಠ್ಯಕ್ರಮದಲ್ಲೂ ಇದೇ ನಿಯಮ, ವೇಳಾಪಟ್ಟಿ ಇದೆ. ಶನಿವಾರ ಸಾಮೂಹಿಕ ವ್ಯಾಯಾಮ ಇದೆ. ಆದರೆ ಮಗು ಹತ್ತನೇ ತರಗತಿಗೆ ಬಂದಾಗ ಇವೆಲ್ಲವನ್ನೂ ನಿಲ್ಲಿಸಲಾಗುತ್ತಿದೆ. ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹೇಶ್ ಅವರು ಈ ತಪ್ಪನ್ನು ಸಂಸ್ಥೆಗಳು ಮಾಡುವ ಅಪರಾಧ ಎಂದೇ ನೇರವಾಗಿ ಎತ್ತಿ ತೋರಿಸಿದ್ದಾರೆ.

ಮನೆ ಮತ್ತು ಶಾಲೆಯು ಇಡೀ ದಿನ ಮಗುವನ್ನು ಓದಿಗಾಗಿ ಪೀಡಿಸುವುದರಿಂದ ಅದು ಧೃತಿಗೆಡುವ ಸಾಧ್ಯತೆ ಇರುತ್ತದೆ. ಅದೇ ಒತ್ತಡದಲ್ಲಿ ಮಗುವಿನ ಮನಸ್ಸು ಹೊಸತನವನ್ನು ಕಳೆದುಕೊಳ್ಳುತ್ತದೆ. ಇದೆಲ್ಲ ಆ ಮಗುವಿನ ಶಿಕ್ಷಕರು ಮತ್ತು ಪೋಷಕರಿಗೆ ಗೊತ್ತಿರುವ ವಿಷಯವೇ. ಮಗುವಿನ ದೈಹಿಕ, ಮಾನಸಿಕ ಸ್ವಾಸ್ಥ್ಯಕ್ಕಿಂತ ಅದರ ಬುದ್ಧಿಮತ್ತೆಯ ಫಲಿತಾಂಶದ ನಿರೀಕ್ಷೆಯಲ್ಲಿರುವ ಅವರಿಗೆ ಇದು ಗಣನೀಯ ವಿಷಯವಾಗದೇ ಹೋಗುವುದು ಮಾತ್ರ ದುರಂತ.

ಆಟ ಮತ್ತು ವ್ಯಾಯಾಮವನ್ನು ನಾವು ‘ಓದಿಗೆ ಅಡ್ಡಿ’ ಎಂದೇ ನೋಡುತ್ತಿದ್ದೇವೆ. ಆದರೆ ಅದೇ ಸಮಯದಲ್ಲಿ, ಆಟವೇ ಕಲಿಕೆಯ ಮೂಲಭೂತ ವಿಧಾನದ ಉಪಕ್ರಮ ಎಂಬ ಅಂಶವನ್ನು ಮರೆತೇಬಿಟ್ಟಿದ್ದೇವೆ. ಮಗು ಆಟದ ಮೂಲಕ ಸಹಕಾರ, ಶಿಸ್ತು, ಸಹನೆ, ಸೋಲಿನ ಪಾಠಗಳನ್ನು ಕಲಿಯುತ್ತದೆ. ಈ ಪಾಠಗಳು ಯಾವುದೇ ಪುಸ್ತಕದೊಳಗೆ ಸಿಗುವುದಿಲ್ಲ. ಪರಿಣಾಮವಾಗಿ, ಮಕ್ಕಳ ದೇಹವು ಕಠಿಣವಾಗುವುದಕ್ಕಿಂತ ಮೊದಲು ಮನಸ್ಸೇ ಕಠಿಣವಾಗುತ್ತಿದೆ. ಹತ್ತನೇ ತರಗತಿಯ ಹಂತದಲ್ಲಿ ನಮ್ಮ ಕ್ರೀಡಾಂಗಣ ಖಾಲಿಯಾಗಿದೆ, ಆದರೆ ಟ್ಯೂಷನ್ ಸೆಂಟರ್ಗಳು ತುಂಬಿವೆ. ಮಕ್ಕಳ ಬಾಲ್ಯವನ್ನು ನಾವು ವ್ಯಾವಹಾರಿಕ ಆರ್ಥಿಕ ಅಂಕದ ಚೀಲದೊಳಗೆ ತುಂಬಿದ್ದೇವೆ.

ಪ್ರೌಢ ಕಲಿಕಾ ಹಂತವನ್ನು ಪರೀಕ್ಷೆಯನ್ನು ಸಿದ್ಧಿಸಿಕೊಳ್ಳುವ ತರಬೇತಿ ಶಿಬಿರವನ್ನಾಗಿ ಮಾಡಿದ್ದೇವೆ. ಕಲಿಕೆಯ ಉದ್ದೇಶವೆಂದರೆ, ವಿಷಯವನ್ನು ತಳಸ್ಪರ್ಶಿಯಾಗಿ ಅರ್ಥೈಸುವುದಲ್ಲ, ಬಾಯಿಪಾಠ ಮಾಡಿ ಉತ್ತರಿಸಲು ತಯಾರಾಗುವುದು ಎಂಬ ಹೊಸ ವಿಕೃತಿ ಬೆಳೆದಿದೆ.

ಎಸ್ಎಸ್ಎಲ್ಸಿ ಕಲಿಕೆಯ ಒಂದು ಹಂತ ಮಾತ್ರ. ಅದು ಜೀವನದ ಪರಮ ಅಂತ್ಯವಲ್ಲ. ಆದರೆ ನಮ್ಮ ಸ್ವಾರ್ಥ ಅದನ್ನು ಅಂತಿಮ ತೀರ್ಪನ್ನಾಗಿ ಮಾಡಿದೆ. ಈ ಭಯದ ಸಂಸ್ಕೃತಿಯನ್ನು ಮುರಿಯಬೇಕಾದ ಸಮಯ ಇದು. ಮಗು ಕಲಿಯಬೇಕು, ಬರೆಯುವ ಪರೀಕ್ಷೆ ಯಾವತ್ತೂ ಬದುಕುವ ಪರೀಕ್ಷೆಗಿಂತ ದೊಡ್ಡದಲ್ಲ ಎಂಬ ಅರಿವು ಮೂಡಿಸಬೇಕು.

ಚಟುವಟಿಕೆ ಹದಗೆಟ್ಟರೆ...

ಎಸ್ಎಸ್ಎಲ್ಸಿ ಮತ್ತು ಪಿಯುಸಿ ಮಕ್ಕಳು (ಅದರಲ್ಲೂ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವವರು) ಸಾಮಾನ್ಯವಾಗಿ ಬೆಳಿಗ್ಗೆ ಶಾಲಾ ಕಾಲೇಜಿಗೆ ಮತ್ತು ಸಂಜೆ ಟ್ಯೂಷನ್ಗೆ ಹೋಗುತ್ತಾರೆ, ರಾತ್ರಿ ‘ಪ್ರ್ಯಾಕ್ಟೀಸ್ ಪೇಪರ್’ ಅಭ್ಯಾಸದಲ್ಲಿ ನಿರತರಾಗುತ್ತಾರೆ. ದೇಹಕ್ಕೆ ಚೂರೂ ವ್ಯಾಯಾಮವಿಲ್ಲ, ಕಣ್ಣುಗಳಿಗೆ ವಿಶ್ರಾಂತಿಯಿಲ್ಲ, ಮನಸ್ಸಿಗೆ ಶಾಂತಿಯಿಲ್ಲ.

ನಾವು ಮಗುವಿನ ಓದಿನ ಪ್ರಮಾಣದ ಬಗ್ಗೆ ಮಾತ್ರ ಚಿಂತಿಸುತ್ತೇವೆ. ಶಾಲೆಗಳು, ಪೋಷಕರು ಮತ್ತು ಸಮಾಜ ಎಲ್ಲರೂ ಸೇರಿ ಈ ವಯಸ್ಸಿನ ಮಕ್ಕಳನ್ನು ‘ನೀನು ಈ ಹಂತದಲ್ಲಿ ತಪ್ಪಿದರೆ ಜೀವನವೇ ತಪ್ಪುತ್ತದೆ’ ಎಂಬ ಮನೋಭಾವದೊಳಗೆ ತಳ್ಳುತ್ತಿದ್ದೇವೆ. ಈ ಒತ್ತಡದಿಂದ ಮಕ್ಕಳಲ್ಲಿ ತಾಳ್ಮೆ ಕಡಿಮೆಯಾ
ಗುತ್ತಿದೆ, ಚಟುವಟಿಕೆ ಹದಗೆಡುತ್ತಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ.

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಪ್ಪಂದದ 31ನೇ ವಿಧಿಯ ಪ್ರಕಾರ, ಆಟ ಮತ್ತು ವಿಶ್ರಾಂತಿಯು ಮಕ್ಕಳ ಶಾರೀರಿಕ, ಮಾನಸಿಕ ಬೆಳವಣಿಗೆಗೆ ಅತ್ಯವಶ್ಯ. ಆದರೆ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯವರು ಈ ಹಕ್ಕಿನ ಮಹತ್ವ ಅರಿಯದ ಕಾರಣ ಮಕ್ಕಳು ಹಿಂಸೆಗೆ ಒಳಗಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.