ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು–ಬೀಳು ಸಾಮಾನ್ಯ; ಮಕ್ಕಳಲ್ಲಿ ಚೈತನ್ಯವನ್ನು ಬಿತ್ತಿರಿ ಬೆಳೆಸಿರಿ

Last Updated 3 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಮನೆಯ ಎದುರಿನ ಪಾರ್ಕನಲ್ಲಿ, ತಾಯಿ-ಮಗು ನಿಧಾನವಾಗಿ ಜಾಗ್ ಮಾಡುತ್ತಿರುವಾಗ, ಮಗು ಎಡವಿ ಬಿದ್ದು ಕಾಲಿಗೆ ಗಾಯವಾಯಿತು. ನಿರೀಕ್ಷೆಯಂತೆಯೇ, ತಾಯಿ ಗಾಬರಿಯಿಂದ ಮಗುವನ್ನು ಎತ್ತಿಕೊಂಡು, ಸಾವರಿಸಿ, ಗಾಯವನ್ನು ನೋಡಿ ಅದಕ್ಕೆ ತನ್ನಲ್ಲಿದ್ದ ಕರವಸ್ತ್ರವನ್ನು ಕಟ್ಟಿದಳು. ಇಲ್ಲಿಯವರೆಗೂ ನಡೆದದ್ದು ಸಹಜ. ಆದರೆ, ನಂತರ ನಡೆದದ್ದು ನನ್ನನ್ನು ಕೊಂಚ ವಿಚಲಿತನಾಗಿಸಿತು. ತಾಯಿಯು, ಮಗುವನ್ನು ಅಲ್ಲಿಂದ ಎತ್ತಿಕೊಂಡು, ಹತ್ತಿರವೇ ಇದ್ದ ಆಸ್ಪತ್ರೆಗೆ ಓಡಿಹೋದಳು. ಹೋಗುವಾಗ, ಅವಳು ‘ಈ ಪಾರ್ಕ್‌ನಲ್ಲಿ ಜಾಗ್ ಮಾಡಿದರೆ, ನೀನು ಬಿದ್ದು ಗಾಯ ಮಾಡಿಕೊಳ್ಳುತ್ತೀಯ, ಇನ್ನು ಮೇಲೆ ಇಲ್ಲಿಗೆ ಬರುವುದೇ ಬೇಡ’ ಎಂದು ಮಗುವಿಗೆ ಹೇಳುತ್ತಿದ್ದಳು!

ರಿಯಾ 10ನೇ ತರಗತಿಯಲ್ಲಿ ಓದುತ್ತಿರುವ ಹುಡುಗಿ. ಇತ್ತೀಚೆಗೆ ಅವಳ ಶಾಲೆಯನ್ನು ಬದಲಿಸಲಾಯಿತು. ಈಗೀಗ, ಅವಳಿಗೆ ತನ್ನ ಹೊಸ ಶಾಲೆ, ಸಹಪಾಠಿಗಳೊಂದಿಗೆ ಹೊಂದಿಕೊಳ್ಳಲು ತೊಂದರೆಯಾಗುತ್ತಿದೆ. ತನ್ನನ್ನು ಯಾರೂ ಇಷ್ಟ ಪಡುವುದಿಲ್ಲ ಎಂದುಕೊಳ್ಳುತ್ತಾಳೆ. ತಾನು ನೋಡಲು ಇತರರಂತೆ ಸುಂದರವಿಲ್ಲ ಎಂದುಕೊಳ್ಳುತ್ತಾಳೆ. ಇದರಿಂದ ಶಾಲೆಯಲ್ಲಿ ಜಗಳಗಳು, ಓದಿನಲ್ಲಿ ಏಕಾಗ್ರತೆಯ ಕೊರತೆ, ಆಸಕ್ತಿ ಕಳೆದುಕೊಳ್ಳುತ್ತಿದ್ದಾಳೆ. ಮನೆಯಲ್ಲಿಯೂ ಕಿರಿಕಿರಿಗಳು ಹೆಚ್ಚುತ್ತಿವೆ.

ಅಮರ, 7ನೇ ತರಗತಿಯಲ್ಲಿ ಓದುತ್ತಿದ್ದ. ಒಮ್ಮೆ, ಹೋಂವರ್ಕ್ ಮಾಡದಿದ್ದಕ್ಕೆ ಶಾಲೆಯಲ್ಲಿ ಶಿಕ್ಷಕರು ಬೈದಿದ್ದರು. ಮನೆಗೆ ಬಂದ ಮೇಲೆ, ಮೊಬೈಲ್‍ನಲ್ಲಿ ಗೇಮ್ ಆಡುತ್ತ ಕುಳಿತಿದ್ದ. ಅದನ್ನು ನೋಡಿ ಅವರಪ್ಪ, ಅವನನ್ನು ಗದರಿದರು. ಸಂಜೆ, ಅಮರ ಮನೆಯಿಂದ ಹೊರ ಹೋಗಿದ್ದ. ರಾತ್ರಿಯಾದರೂ ಮರಳಿ ಮನೆಗೆ ಬಂದಿರಲಿಲ್ಲ. ಕೊನೆಗೆ, 3 ದಿನಗಳ ನಂತರ ಬೆಂಗಳೂರು ರೈಲು ನಿಲ್ದಾಣದಲ್ಲಿ ಸಿಕ್ಕಿದ್ದ! ಪೋಲಿಸರು ಕಾರಣ ಕೇಳಿದರೆ, ಅಪ್ಪ ಗದರಿದರು, ಅದಕ್ಕೆ ಮನೆ ಬಿಟ್ಟು ಓಡಿ ಬಂದೆ ಎನ್ನುವ ಕಾರಣ ಹೇಳಿದ್ದ.

ಈ ಮೇಲಿನ ಮೂರು ಸಂದರ್ಭಗಳನ್ನು ಗಮನಿಸಿದರೆ, ಮಕ್ಕಳು ಹಾಗೂ ಹದಿಹರೆಯದವರಲ್ಲಿ ವಿವಿಧ ಪ್ರತಿಕೂಲ ಪರಿಸ್ಥಿತಿಗಳನ್ನು ಸಫಲವಾಗಿ ಎದುರಿಸುವ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಉದ್ಭವವಾಗುತ್ತವೆ.

ಮೊದಲನೇ ಸಂದರ್ಭದಲ್ಲಿ, ತಾಯಿಯ ಕಾಳಜಿಯು ಸ್ವಾಭಾವಿಕವಾಗಿಯೂ ಹಾಗೂ ಪರಿಸ್ಥಿತಿಗೆ ತಕ್ಕ ಹಾಗೆ ಎನ್ನಿಸುತ್ತದೆ. ಆದರೆ ಅಷ್ಟು ಚಿಕ್ಕ ಗಾಯವಾಗುವ ಕ್ರಿಯೆಗೆ, ಅಷ್ಟೊಂದು ದೊಡ್ಡ ಮಟ್ಟದ ಪ್ರತಿಕ್ರಿಯೆ ಅವಶ್ಯಕತೆ ಇತ್ತೇ? ಈ ರೀತಿಯ ಪಾಲನೆಗೆ ‘ಹೆಲಿಕಾಪ್ಟರ್ ಪೆರೆಂಟಿಂಗ್’ ಎನ್ನುತ್ತೇವೆ.

ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ ಸಫಲವಾಗಿ ಹೊರಹೊಮ್ಮುವ ಸಾಮರ್ಥ್ಯ (Resilience) ಪ್ರತಿಯೊಬ್ಬ ಮನುಷ್ಯನಿಗೂ ಅತಿ ಅವಶ್ಯ. ಪ್ರತಿಯೊಬ್ಬರಲ್ಲೂ ಸಹಜವಾಗಿಯೇ ಈ ಸಾಮರ್ಥ್ಯ ಬೇರೆ ಬೇರೆ ಮಟ್ಟದಲ್ಲಿರುತ್ತದೆ. ಆದರೆ ಈ ಪುಟಿದೇಳುವ ಸಾಮರ್ಥ್ಯವನ್ನು ಚಿಕ್ಕಂದಿನಿಂದಲೇ ಪ್ರತಿಯೊಬ್ಬರಲ್ಲೂ ಬೆಳೆಸಬಹುದು, ವೃದ್ಧಿಸಬಹುದು.

ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ, ಪುಟಿದೇಳುವ ಚೈತನ್ಯವು ಇತ್ತೀಚಿನ ದಿನಗಳಲ್ಲಿ ಬೆಳೆಯುವ ಮಕ್ಕಳಲ್ಲಿ ಕಡಿಮೆಯೆನಿಸುತ್ತಿದೆ. ವಿಶೇಷವಾಗಿ, ಕೋವಿಡ್ ಲಾಕ್ಡೌನ್ ನಂತರ ಮಕ್ಕಳಲ್ಲಿ, ಅನೇಕ ಭಾವನಾತ್ಮಕ, ಮನೋದೈಹಿಕ ಹಾಗೂ ವರ್ತನಾ ಸಮಸ್ಯೆಗಳು ಹೆಚ್ಚಿವೆ. ಈ ಹೆಚ್ಚಳಕ್ಕೆ ಕಾರಣಗಳನ್ನು ಹುಡುಕಬೇಕಾದರೆ, ಮಕ್ಕಳಲ್ಲಿ ‘ರೆಸಿಲಿಯನ್ಸ್’ ಕಡಿಮೆಯಿರುವುದು ಒಂದು ಪ್ರಮುಖ ಕಾರಣ. ಈ ಚೈತನ್ಯ ಬೆಳೆಯದಿರುವುದಕ್ಕೆ ಕಾರಣಗಳೇನು?

1. ಹೆಲಿಕಾಪ್ಟರ್ ಪಾಲನೆ: ಮಕ್ಕಳಿಗೆ ಸ್ಪಷ್ಟವಾದ ಮಾರ್ಗದರ್ಶನ, ಸಂಪನ್ಮೂಲಗಳನ್ನು ಒದಗಿಸುವ ಹೊರತಾಗಿಯೂ ಮಗುವಿನ ಪ್ರತಿಯೊಂದು ಚಟುವಟಿಕೆಯಲ್ಲಿಯೂ ಪಾಲಕರು ಅವಶ್ಯಕತೆಗಿಂತ ಹೆಚ್ಚು ಭಾಗವಹಿಸುವುದು. ಇದರಿಂದ, ಮಗುವು ತನ್ನ ಸ್ವತಂತ್ರ ಮನೋಭಾವವನ್ನು ಬೆಳೆಸಿಕೊಳ್ಳುವುದಿಲ್ಲ. ಪ್ರತಿಯೊಂದಕ್ಕೂ, ಪಾಲಕರು ಹಾಗೂ ಇತರರ ಮೇಲೆಯೆ ಅವಲಂಬಿತವಾಗುತ್ತದೆ. ಸಮಸ್ಯೆಗಳನ್ನು ಪರಿಹರಿಸುವ ಕೌಶಲ ಮಗುವಿನಲ್ಲಿ ಬೆಳೆಯುವುದಿಲ್ಲ.

2. ಶಾಲೆಗಳಲ್ಲಿ ಅತಿಯಾದ ಶೈಕ್ಷಣಿಕ ಒತ್ತಡ. ಗುರಿಸಾಧನೆಯೆಡೆಗೇ ಅತಿಯಾದ ಪ್ರಾಮುಖ್ಯ.

3. ಜೀವನಕೌಶಲ ಹಾಗೂ ನೀತಿಪಾಠದ ಕಲಿಕೆ ಹಾಗೂ ಬೋಧನೆಯ ಬಗ್ಗೆ ನಿರಾಸಕ್ತಿ.

4. ಓದಿನಲ್ಲಿ, ಮೌಲ್ಯಾಧಾರಿತ ಫಲಿತಾಂಶಕ್ಕಿಂತ ಲೌಕಿಕ ಫಲಿತಾಂಶಕ್ಕೆ ಹೆಚ್ಚಿನ ಒತ್ತು.

5. ಪ್ರಕೃತಿಯಿಂದ ದೂರ ಸಾಗಿ ಅವಾಸ್ತವಿಕ ಜಗತ್ತಿನಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದು. (ಮೊಬೈಲ್, ಸಾಮಾಜಿಕ ಜಾಲತಾಣ, ಗೇಮ್ಸ್)

6. ಅನುಭೂತಿಯ ಕೊರತೆ. ಚಿಕ್ಕ ಕುಟುಂಬಗಳು, ಕೌಟುಂಬಿಕ ಸಮಸ್ಯೆಗಳು, ನಗರೀಕರಣ, ಇತ್ಯಾದಿ.

ಹಾಗಾದರೆ ಮಕ್ಕಳಲ್ಲಿ ಪುಟಿದೇಳುವ ಮನಃಸ್ಥಿತಿಯನ್ನು ಬೆಳೆಸಬಹುದೇ? ಹೌದು. ಮಕ್ಕಳಲ್ಲಿ, ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ, ಪುಟಿದೇಳುವಂತಹ ಚೈತನ್ಯವನ್ನು ಬೆಳೆಸಬಹುದು.

1. ಮಕ್ಕಳಿಗೆ ಆದಷ್ಟು ಸ್ವತಂತ್ರ ಹಾಗೂ ಪ್ರೋತ್ಸಾಹಭರಿತ ವಾತಾವರಣವನ್ನು ಕಲ್ಪಿಸಿಕೊಡುವುದು.

2. ಹೆಲಿಕಾಪ್ಟರ್ ಪಾಲನೆ ಬೇಡ. ಮಕ್ಕಳ ಸಮಸ್ಯೆಗಳನ್ನು ಖುದ್ದಾಗಿ ಪರಿಹರಿಸಬೇಡಿ.
ಮಕ್ಕಳಿಗೆ ಮಾರ್ಗದರ್ಶನ ಮಾಡಿ, ಅವೇ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಹಕರಿಸಿ. ಫಲಿತಾಂಶಗಳಿಗಿಂತ, ಪ್ರಯತ್ನಗಳನ್ನು ಪ್ರಶಂಸಿಸಿ.

ನಿರಾಶೆ, ಹತಾಶೆಗಳನ್ನು ಅನುಭವಿಸಲು ಬಿಡಿ. ಈ ಪರಿಸ್ಥಿತಿಗಳು ಶಾಶ್ವತವಲ್ಲವೆಂಬುದು ಮಕ್ಕಳಿಗೂ ಅರಿವಾಗಲಿ.

ಸೃಜನಶೀಲತೆಯನ್ನು ಬೆಂಬಲಿಸಿ, ಪ್ರೋತ್ಸಾಹಿಸಿ. ನಿರ್ಧಾರಗಳನ್ನು ಸ್ವಂತವಾಗಿ ತೆಗೆದುಕೊಳ್ಳಲು ಅವಕಾಶ ನೀಡಿ. ಸವಾಲುಗಳನ್ನು ಅವಕಾಶಗಳನ್ನಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಚರ್ಚಿಸಿ. ಆತ್ಮವಿಶ್ವಾಸ–ಸ್ವಾಭಿಮಾನಗಳನ್ನು ಬೆಳೆಸಿ.

3. ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಿ. ಇತರರೊಡನೆ ಬೆರೆಯುವುದು, ಗೆಳೆತನ, ಅನುಭೂತಿ ಮುಂತಾದ ಸಾಮಾಜಿಕ ಕೌಶಲಗಳನ್ನು ಬೆಳೆಸಿಕೊಳ್ಳುವುದು.

4. ಕ್ರೀಡೆಗಳತ್ತ ವಿಶೇಷ ಗಮನಕ್ಕೆ ಪ್ರೋತ್ಸಾಹಿಸಿ. ಕ್ರೀಡಾಸ್ಫೂರ್ತಿ ಜೀವನದಲ್ಲಿ ಅತಿ ಮುಖ್ಯ.

5. ಆದಷ್ಟು ಪ್ರಕೃತಿಯತ್ತ ಮುಖ ಮಾಡಿಸಿ. ‘ಮೋರ್ ಗ್ರೀನ್ ಟೈಮ್ ದ್ಯಾನ್ ಸ್ಕ್ರೀನ್ ಟೈಮ್.’

ಮನುಷ್ಯ ಜೀವನದಲ್ಲಿ ಕಷ್ಟ-ಸುಖ, ಏಳು–ಬೀಳುಗಳು ಸಾಮಾನ್ಯ. ಅವುಗಳನ್ನು ಎದುರಿಸಬೇಕು. ಒಂದು ವೇಳೆ ಬಿದ್ದರೂ, ಪುಟಿದೇಳುವಂತಹ ಸಾಮರ್ಥ್ಯವೇ ನಮ್ಮನ್ನು ಸಫಲರನ್ನಾಗಿ ಮಾಡುವುದು. ಈ ಮನಃಸ್ಥಿತಿಯನ್ನು ಚಿಕ್ಕಂದಿನಿಂದಲೇ, ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಬೆಳೆಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT