ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್, ಎಂಬಿಬಿಎಸ್.. ಯಾವ ಆಯ್ಕೆ ಸೂಕ್ತ? ಪ್ರಶ್ನೋತ್ತರ ಅಂಕಣ

ಪ್ರದೀಪ್ ಎಸ್ ವೆಂಕಟರಾಮ್ ಅವರ ಉತ್ತರಗಳು
Published 24 ಏಪ್ರಿಲ್ 2023, 0:18 IST
Last Updated 24 ಏಪ್ರಿಲ್ 2023, 0:18 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ.
ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

1. ನಾನು ಪಿಯುಸಿ ಮುಗಿಸುತ್ತಿದ್ದು ಮುಂದೆ ಎಂಜಿನಿಯರಿಂಗ್ ಅಥವಾ ಎಂಬಿಬಿಎಸ್  ಮಾಡ ಬೇಕೆಂದುಕೊಂಡಿದ್ದೇನೆ. ಇವೆರಡರಲ್ಲಿ ಆಯ್ಕೆ ಮಾಡಲು ಗೊಂದಲವಿದೆ. ಮಾರ್ಗದರ್ಶನ ನೀಡಿ.

ಹೆಸರು, ಊರು ತಿಳಿಸಿಲ್ಲ.

ನೀವು ಕೇಳಿರುವ ಎರಡೂ ಆಯ್ಕೆಗಳು ಉತ್ತಮವಾದದ್ದು. ಆದರೂ, ನಿಮಗೆ ಯಾವುದು ಹೆಚ್ಚು ಸೂಕ್ತವೆಂದು ಮೌಲ್ಯಮಾಪನ ಮಾಡಬೇಕು. ವೈದ್ಯರಾಗಲು ಸೇವಾ ಮನೋಭಾವ, ಜ್ಞಾಪಕ ಶಕ್ತಿ, ನಿಷ್ಠೆ, ಪ್ರಾಮಾಣಿಕತೆ, ಸಮಯದ ನಿರ್ವಹಣೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಅಗತ್ಯವಾದರೆ, ಎಂಜಿನಿಯರಿಂಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ ಅಗತ್ಯವಾಗುತ್ತದೆ. ಹಾಗಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಒಲವು ಮತ್ತು ಕೌಶಲಗಳ ಮೌಲ್ಯಮಾಪನ ಮಾಡಿ, ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳು, ಧ್ಯೇಯಗಳನ್ನು ಗುರುತಿಸಿ, ವೃತ್ತಿಯ ಆಯ್ಕೆಯನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor


2. ನಾನು 12ನೇ ತರಗತಿಯಲ್ಲಿದ್ದು ಡಾಕ್ಟರ್ ಆಗಬೇಕೆಂದಿದ್ದೇನೆ. ಸರ್ಕಾರಿ ಸೀಟ್ ಪಡೆಯಲು ಸಿಇಟಿ ಬರೆದರೆ ಸಾಕೇ ಅಥವಾ ನೀಟ್ ಬರೆಯಲೇಬೇಕೇ? ಒಳ್ಳೆಯ
ಕಾಲೇಜಿನಲ್ಲಿ ಸೀಟ್ ಸಿಗಲು ಯಾವುದನ್ನು ಬರೆಯಬೇಕು?

ಹೆಸರು, ಊರು ತಿಳಿಸಿಲ್ಲ.

ದೇಶದ ವಿವಿಧ ಕಾಲೇಜುಗಳ ವೈದ್ಯಕೀಯ ಸಂಬಂಧಿತ ಪದವಿ ಪೂರ್ವ ಕೋರ್ಸ್‌ಗಳಿಗೆ, ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ), ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್- ಯುಜಿ)ಯನ್ನು ಆಯೋಜಿಸುತ್ತದೆ. ನೀಟ್ ಪರೀಕ್ಷೆಯ ಮಾದರಿಯಂತೆ, ಭೌತವಿಜ್ಞಾನ, ರಸಾಯನ ವಿಜ್ಞಾನ  ಮತ್ತು ಜೀವವಿಜ್ಞಾನ ವಿಷಯಗಳ 180 ಪ್ರಶ್ನೆಗಳಿರುತ್ತವೆ. ಸರಿಯಾದ ಉತ್ತರಗಳಿಗೆ 4 ಅಂಕಗಳೂ, ತಪ್ಪಾದ ಪ್ರತಿ ಉತ್ತರಕ್ಕೆ 1 ಅಂಕವನ್ನು ಕಡಿತಗೊಳಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆಯುವ ರ‍್ಯಾಂಕ್ ಆಧಾರದ ಮೇಲೆ ಸೀಟ್ ಹಂಚಿಕೆಯಾಗುತ್ತದೆ. ಕಳೆದ ವರ್ಷಗಳಲ್ಲಿ, ರ‍್ಯಾಂಕ್ ಆಧಾರದ ಮೇಲೆ ವಿವಿಧ ಕಾಲೇಜುಗಳ ಸೀಟ್ ಹಂಚಿಕೆಯ ಮಾಹಿತಿಯನ್ನು ವಿಶ್ಲೇಷಿಸಿ, ನಿಮಗೆ ಸೂಕ್ತವೆನಿಸುವ ಕಾಲೇಜು ಪ್ರವೇಶಕ್ಕೆ ಬೇಕಾಗುವ ರ‍್ಯಾಂಕ್ ಮತ್ತು ಅಂಕಗಳನ್ನು ಅಂದಾಜು ಮಾಡಿ, ಪರೀಕ್ಷೆಯ ಕಾರ್ಯತಂತ್ರವನ್ನು ರೂಪಿಸಬೇಕು. ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ‘ನೀಟ್’ ಪರೀಕ್ಷೆ ಕಡ್ಡಾಯ; ಸಿಇಟಿ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಒಳ್ಳೆಯ ಕಾಲೇಜುಗಳನ್ನು ಗುರುತಿಸುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=DmaXk-MuoOI


3. ನಾನು ಬಿಕಾಂ ಮುಗಿಸಿದ್ದೇನೆ, ಮುಂದೆ ಎಂಕಾಂ ಮತ್ತು ಎಂಬಿಎ ಇವೆರಡರಲ್ಲಿ ಯಾವು ದನ್ನು ವೃತ್ತಿಯ ಅವಕಾಶಗಳ ದೃಷ್ಟಿ ಯಿಂದ  ಆರಿಸಿಕೊಳ್ಳಬಹುದು?

ವಿದ್ಯಾ, ಹುಬ್ಬಳ್ಳಿ.

ವೃತ್ತಿಯ ದೃಷ್ಟಿಯಿಂದ ಎಂಬಿಎ ಕೋರ್ಸ್ ನಂತರ ಹೆಚ್ಚಿನ ಕ್ಷೇತ್ರಗಳಲ್ಲಿ (ಬ್ಯಾಂಕಿಂಗ್, ಇನ್‌ಶ್ಯೂರೆನ್ಸ್, ಫೈನಾನ್ಸ್, ರೀಟೇಲ್, ಸರ್ಕಾರಿ ಇತ್ಯಾದಿ) ಅವಕಾಶಗಳಿವೆ. ಎಂಕಾಂ ಅಥವಾ ಎಂಬಿಎ ನಂತರ, ಆಯಾ ಕ್ಷೇತ್ರಗಳಲ್ಲಿನ ಕೆಲಸದ ವಿವರಗಳಿಗೆ (ಜಾಬ್ ಪ್ರೊಫೈಲ್) ತಕ್ಕಂತೆ ಜ್ಞಾನ, ಆಸಕ್ತಿ, ಅಭಿರುಚಿ ಮತ್ತು ಕೌಶಲಗಳ ಅಗತ್ಯವಿರುತ್ತದೆ. ಹಾಗಾಗಿ, ನಿಮಗೆ ಯಾವ ವೃತ್ತಿ/ಕೋರ್ಸ್ ಸೂಕ್ತವೆಂದು ಪರಿಶೀಲಿಸಲು, ವೃತ್ತಿಯೋಜನೆ ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU


4. ನಾನು ಎಂ.ಎಸ್ಸಿ (ಬಯೋ ಕೆಮಿಸ್ಟ್ರಿ) ಮಾಡಿ ಕೆಲಸದಲ್ಲಿದ್ದೇನೆ. ಈಗ, ಡೇಟಾ ಸೈನ್ಸ್ ಬಗ್ಗೆ ಆಸಕ್ತಿಯಿದೆ. ಯಾವ ಕೋರ್ಸ್ ಮಾಡಬಹುದು?

ಸಚಿನ್, ಊರು ತಿಳಿಸಿಲ್ಲ.

ಡೇಟಾ ಸೈನ್ಸ್ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಆಸಕ್ತಿಯ ಜೊತೆಗೆ ಸಮಸ್ಯೆಗಳ ಪರಿಹಾರ, ವಿವರಗಳಿಗೆ ಗಮನ, ಮಷಿನ್ ಲರ್ನಿಂಗ್, ಪ್ರೋಗ್ರಾಮಿಂಗ್ ಮುಂತಾದ ಕೌಶಲಗಳಿರಬೇಕು. ಈಗ ನೀವು ಕೆಲಸ ಮಾಡುತ್ತಿರುವ ಕ್ಶೇತ್ರದಲ್ಲಿ ಮುಂದುವರಿಯುತ್ತಾ ಡೇಟಾ ಸೈನ್ಸ್ ಕ್ಷೇತ್ರದ ತಜ್ಞತೆಗಾಗಿ, ಅಲ್ಪಾವಧಿ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಬಹುದು. ಇದಾದ ನಂತರ, ವೃತ್ತಿ ದೃಷ್ಟಿ ಯಿಂದ ಈ ಕ್ಷೇತ್ರ ಸೂಕ್ತವೆನಿಸಿದರೆ, ಸ್ನಾತಕೋತ್ತರ ಪದವಿಯನ್ನೂ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT