ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ ಎದುರಿಸಲು ಬೇಕು ಇಂಗ್ಲಿಷ್‌ ಸಂಭಾಷಣೆ ಕಲೆ

Last Updated 24 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಂದರ್ಶನ ಎದುರಿಸಬೇಕಾದರೆ ಇಂಗ್ಲಿಷ್‌ನಲ್ಲಿ ಸುಲಲಿತವಾಗಿ ಮಾತನಾಡುವುದು ಕೂಡ ಮುಖ್ಯ. ಸರಳ ಹಾಗೂ ಸುಲಭ ಸಂವಹನವನ್ನು ರೂಢಿಸಿಕೊಂಡರೆ ಆಯ್ಕೆ ಕಟ್ಟಿಟ್ಟ ಬುತ್ತಿ.

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ನಂತರ ಸಂದರ್ಶನಗಳನ್ನು ಎದುರಿಸಬೇಕಾಗುತ್ತದೆ. ಇದು ಆಯ್ಕೆ ಪ್ರಕ್ರಿಯೆಯ ಪ್ರಮುಖ ಭಾಗವೂ ಒಂದು. ಆದರೆ ಇಂಗ್ಲಿಷ್‌ನಲ್ಲಿ ಮಾತನಾಡಲು ಕೆಲವರಿಗೆ ಪಾಂಡಿತ್ಯ ಇರುವುದಿಲ್ಲ. ಹೀಗಾಗಿ ಇಂತಹ ಸ್ಪರ್ಧಾರ್ಥಿಗಳು ಸಂದರ್ಶನದಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ ಹೆಚ್ಚು.

ಬ್ಯಾಂಕ್‌ ಪರೀಕ್ಷೆ ತೆಗೆದುಕೊಂಡರೆ ಲಿಖಿತಪರೀಕ್ಷೆ (ಸಿಡಬ್ಲುಇ) ಗಿಂತ ಸಾಕಷ್ಟು ಸಮಯವನ್ನು ಸಂದರ್ಶನಕ್ಕೆ ತಯಾರಾಗಲು ಮೀಸಲಿಡುವುದು ಸೂಕ್ತ. ಪ್ರಿಲಿಮ್ಸ್‌ ಹಾಗೂ ಮೇನ್ಸ್‌ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ ನಂತರ ಸಂದರ್ಶನಕ್ಕೆ ತಯಾರಿ ನಡೆಸುವುದಕ್ಕಿಂತ ಸಮಯ ಸಿಕ್ಕಾಗಲೆಲ್ಲ ಸಿದ್ಧತೆ ನಡೆಸಿದರೆ ಅನುಕೂಲ.

ಸಂದರ್ಶನ ಎದುರಿಸುವಾಗ ಇಂಗ್ಲಿಷ್‌ನಲ್ಲಿ ಸುಲಲಿತವಾಗಿ ಮಾತನಾಡುವುದು ಹೇಗೆ ಎಂಬುದರ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.

ಮಾತನಾಡುವಾಗ ಒಂದೇ ರೀತಿಯ ವೇಗವನ್ನು ಕಾಯ್ದುಕೊಳ್ಳಿ

ಇಂಗ್ಲಿಷ್‌ ಅನ್ನು ನಿರರ್ಗಳವಾಗಿ ಮಾತನಾಡಲು ಬಂದರೆ ಆ ಭಾಷೆಯ ಮೇಲೆ ಚೆನ್ನಾಗಿ ಹಿಡಿತವಿದೆ ಎಂದು ಕೆಲವರು ಅಂದುಕೊಳ್ಳಬಹುದು. ಆದರೆ ಇದು ತಪ್ಪು. ಗಡಿಬಿಡಿಯಲ್ಲಿ ಇಂಗ್ಲಿಷ್‌ ಮಾತನಾಡುವುದಕ್ಕಿಂತ ಸಂದರ್ಶನದುದ್ದಕ್ಕೂ ನಿಗದಿತ ವೇಗವನ್ನು ಅಂದರೆ ಮಧ್ಯಮ ವೇಗವನ್ನು ಕಾಯ್ದುಕೊಂಡು ಮಾತನಾಡುವುದು ಸೂಕ್ತ. ನಮ್ಮ ಮಾತೃಭಾಷೆಯಲ್ಲಿ ಮಾತನಾಡಿದಂತೆ ಇದೂ ಕೂಡ. ಇದರಿಂದ ವೇಗವಾಗಿ ಮಾತನಾಡಿ ತಪ್ಪು ನುಸುಳುವುದು ಅಥವಾ ನಿಧಾನವಾಗಿ ಮಾತನಾಡಿ ಭಾಷೆಯ ಮೇಲೆ ಹಿಡಿತವಿಲ್ಲ ಎಂದು ತೋರಿಸಿಕೊಳ್ಳುವುದು ತಪ್ಪುತ್ತದೆ.

ಸಂದರ್ಶನದಲ್ಲಿ ಮಾತಿನ ಮೇಲೆ ಹಿಡಿತ ಹಾಗೂ ನಿರರ್ಗಳತೆ ತುಂಬಾ ಮುಖ್ಯ. ಈ ನಿರರ್ಗಳತೆಯು ಮೃದುವಾದ ಮಾತು, ನಿರಂತರ ಮಾತಿನ ಹರಿವು ಹಾಗೂ ಸುಸಂಬದ್ಧತೆಯ ಮೇಲೆ ನಿರ್ಧರಿಸಬಹುದು.

ಮೃದುತ್ವ: ಇದು ಅಲ್ಪವಿರಾಮ, ಮಧ್ಯೆ ಮಧ್ಯೆ ಬಿಡುವು ಕೊಡುವುದು, ಪುನರುಚ್ಚರಿಸುವುದು ಹಾಗೂ ನಮಗೆ ನಾವೇ ಸರಿಪಡಿಸಿಕೊಳ್ಳುವುದನ್ನು ಅವಲಂಬಿಸಿದೆ. ಇದು ಸ್ಪರ್ಧಾರ್ಥಿಯ ಅಥವಾ ಅಭ್ಯರ್ಥಿಯ ಮಾತಿನ ಮೃದುತ್ವವನ್ನು ಹೇಳುತ್ತದೆ. ಹೀಗಾಗಿ ಸ್ಪರ್ಧಾರ್ಥಿಯು ಸುದೀರ್ಘವಾದ ವಿರಾಮ ನೀಡುವುದನ್ನು, ಪುನರುಚ್ಚಾರ ಮಾಡುವುದನ್ನು ಬಿಡಬೇಕು.

ಮಾತಿನ ಹರಿವು: ಕೆಲವೊಂದು ಸಂಕೀರ್ಣವಾದ ಪ್ರಶ್ನೆಗಳಿಗೆ ವಿವರವಾದ ಹಾಗೂ ಉದ್ದವಾದ ಉತ್ತರ ನೀಡುವಾಗ ನಿರಂತರ ಮಾತಿನ ಹರಿವು ಅಭ್ಯರ್ಥಿಯ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತದೆ. ಉದ್ದವಾದ ಉತ್ತರದ ಅಗತ್ಯವಿದ್ದಾಗ ಅಭ್ಯರ್ಥಿಯು ಒಂದೇ ಶಬ್ದದ ಉತ್ತರ ನೀಡುವುದನ್ನು ಅಥವಾ ಚಿಕ್ಕದಾಗಿ ಉತ್ತರಿಸುವುದನ್ನು ಬಿಡಬೇಕು.

ಸುಸಂಬದ್ಧತೆ: ಮಾತನಾಡುವಾಗ ಸ್ಪರ್ಧಾರ್ಥಿಯು ಒಂದು ಸೈದ್ಧಾಂತಿಕವಾದ ರೀತಿಯಲ್ಲಿ ಮಾತನಾಡಬೇಕು. ಇದು ನಿಮ್ಮ ಸಾಂಸ್ಥಿಕ ಕೌಶಲವನ್ನು ಪ್ರತಿಬಿಂಬಿಸುತ್ತದೆ. ಇದರ ಜೊತೆಗೆ ನಮ್ಮ ನಿಲುವನ್ನು ಜನರಿಗೆ ಹೇಗೆ ಮನದಟ್ಟು ಮಾಡಿಕೊಡುತ್ತೀರಿ ಎಂಬುದರ ದ್ಯೋತಕವಿದು.

ವ್ಯಾಕರಣ ಹಾಗೂ ಕಾಲದ ನಿಯಮಗಳ ಬಗ್ಗೆ ಯೋಚಿಸುವುದನ್ನು ಬಿಡಿ

ವ್ಯಾಕರಣ ಹಾಗೂ ಕಾಲಗಳ ಬಗ್ಗೆ ಜಾಸ್ತಿ ಯೋಚಿಸುತ್ತ ಹೋದರೆ ಮಾತಿನ ಓಘದ ಮೇಲೆ ಪರಿಣಾಮ ಬೀರಬಹುದು. ಶಬ್ದ ಭಂಡಾರದ ಕೊರತೆಯಿದ್ದರೆ, ಅಂದರೆ ಸೂಕ್ತವಾದ ಶಬ್ದಗಳು ತಕ್ಷಣಕ್ಕೆ ನೆನಪಿಗೆ ಬರದಿದ್ದರೆ ಅಂಥವರು ಚಿಕ್ಕದಾದ ಹಾಗೂ ಸರಳವಾದ ವಾಕ್ಯಗಳಲ್ಲಿ ಮಾತನಾಡುವುದು ಉತ್ತಮ. ಇದರಿಂದ ತಪ್ಪು ಮಾಡುವುದು ಕಡಿಮೆಯಾಗಿ ತಮ್ಮ ನಿಲುವನ್ನು ಸಮರ್ಥವಾಗಿ, ಸ್ಪಷ್ಟವಾಗಿ ಹೇಳಲು ಸಾಧ್ಯ.
ಹಾಗೆಯೇ ಪ್ರಸೆಂಟ್‌ ಕಂಟಿನ್ಯುಯಸ್‌ ಟೆನ್ಸ್‌ನಲ್ಲಿ ಮಾತನಾಡುವುದು ಸೂಕ್ತವಲ್ಲ. ಇದರ ಬಳಕೆ ಯಾವತ್ತೂ ಕಷ್ಟ.

ಇನ್ನೊಂದು ವಾಕ್ಯಕ್ಕೆ ಜೋಡಿಸುವಂತಹ ಶಬ್ದಗಳನ್ನು ಬಳಸಬಹುದು. ಕೆಲವೊಂದು ಶಬ್ದಗಳನ್ನು, ನುಡಿಗಟ್ಟುಗಳನ್ನು ಬಳಸಿದರೆ ಮಾತಿನನಿರಂತರತೆಯನ್ನು ಕಾಪಾಡಿಕೊಳ್ಳಬಹುದು. ಮಧ್ಯೆ ಏನೂ ಮಾತಿಲ್ಲದೆ ಮೌನವಾಗಿ ಕೂರುವುದನ್ನುತಪ್ಪಿಸಬಹುದು.

ಮಾತನಾಡುವಾಗ ಮಧ್ಯೆ ಯೋಚಿಸುವುದಕ್ಕೆ ಸಮಯ ಬೇಕಿದ್ದರೆ ಅದೇ ವಿಷಯವನ್ನು ವಿಸ್ತರಿಸಲು ಕೆಲವು ವಾಕ್ಯಗಳನ್ನು ಬಳಸಬಹುದು. ಉದಾಹರಣೆಗೆ‘ಸಿಮಿಲರ್‌ ಟು ಅಥವಾ ಸಚ್‌ ಆ್ಯಸ್‌’ ಆದರೆ ಇದನ್ನು ಹೆಚ್ಚು ಬಳಸಬೇಡಿ. ಸ್ಪರ್ಧಾರ್ಥಿಗೆ ಆತ್ಮವಿಶ್ವಾಸದ ಕೊರತೆಯಿರಬಹುದು ಎಂದು ಸಂದರ್ಶನ ನಡೆಸುವವರು ತಿಳಿದುಕೊಳ್ಳಬಹುದು.

ವಿದೇಶಿ ಉಚ್ಚಾರಣೆ ಬೇಡ

ಸಂದರ್ಶಕರ ಮೇಲೆ ಪ್ರಭಾವ ಬೀರಲು ಕೆಲವರು ವಿದೇಶಿ ಉಚ್ಚಾರಣೆಯಲ್ಲಿ ಮಾತನಾಡಲು ಪ್ರಯತ್ನಿಸಬಹುದು. ಆದರೆ ಇದು ಖಂಡಿತ ಕೂಡದು. ಇದು ಸ್ಪರ್ಧಾರ್ಥಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹೀಗಾಗಿ ನಿಮ್ಮದೇ ಆದ ರೀತಿಯಲ್ಲಿ ಮಾತನಾಡಿ. ಮಾತು ವಿಚಿತ್ರವಾಗಿದೆಯಲ್ಲ ಎಂಬ ಭಾವನೆ ಬರುವಂತಿರಬಾರದು.
ನಿಮಗೆ ಗೊತ್ತಿಲ್ಲದ ವಿಶೇಷಣಗಳನ್ನು ಬಳಸಲು ಹೋಗಬೇಡಿ. ಯಾವುದೋ ಶಬ್ದವನ್ನು ಸರಿಯಾಗಿ ಉಚ್ಚರಿಸಲು ಬರದಿದ್ದರೆ ಅದನ್ನು ಬಳಸುವುದು ಸೂಕ್ತವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT