ಸಾಗರ: ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ರಾಜ್ಯದ 276 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದ ನಿರ್ಧಾರದ ಹಿಂದೆ ಇರುವುದು ತಾಲ್ಲೂಕಿನ ಗೆಣಸಿನಕುಣಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಎಂಬುದು ಗಮನಾರ್ಹ.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ತರಗತಿ ಸಾಧ್ಯವೇ ಇಲ್ಲ ಎನ್ನುವ ಸನ್ನಿವೇಶದಲ್ಲಿ 2015ನೇ ಸಾಲಿನಲ್ಲೇ ಈ ತರಗತಿಗಳನ್ನು ಆರಂಭಿಸಿದ್ದು ಈ ಸರ್ಕಾರಿ ಶಾಲೆಯ ಹೆಗ್ಗಳಿಕೆಯಾಗಿದೆ.

ಗೆಣಸಿನಕುಣಿ ಗ್ರಾಮದ ಸರ್ಕಾರಿ ಶಾಲೆಗೆ 2015ರಲ್ಲಿ ಒಂದನೇ ತರಗತಿಗೆ ಕೇವಲ ಆರು ಮಕ್ಕಳು ದಾಖಲಾಗಿದ್ದರು. ಹೇಗಾದರೂ ಮಾಡಿ ಗ್ರಾಮದ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಬೇಕು ಎಂಬ ತುಡಿತ ಗ್ರಾಮಸ್ಥರಲ್ಲಿ ಮೂಡಿತ್ತು. ಈ ಸಂಬಂಧ ನಡೆದ ಚರ್ಚೆ ವೇಳೆಯಲ್ಲಿ ಮೂಡಿಬಂದ ವಿಚಾರವೇ ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಯನ್ನು ಆರಂಭಿಸುವುದು.

ಆ ಹೊತ್ತಿಗೆ ‘ಶಿಕ್ಷಣ ಸುಧಾರಣೆಯತ್ತ ಪಂಚಾಯತ್ ರಾಜ್’ ಎಂಬ ಅಭಿಯಾನ ನಡೆದಿತ್ತು. ಆಗ ತಾಲ್ಲೂಕು ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಹಕ್ರೆ ಅವರಿಗೆ ಪೋಷಕರೊಬ್ಬರು ‘ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಇದ್ದರೆ ಮಾತ್ರ ಈ ಶಾಲೆಗಳು ಉಳಿಯಲು ಸಾಧ್ಯ’ ಎಂದು ಅಭಿಪ್ರಾಯ ತಿಳಿಸಿದರು.

ಗೆಣಸಿನಕುಣಿ ಗ್ರಾಮದ ಶಾಲಾಭಿವೃದ್ಧಿ ಸಮಿತಿಯ ದೃಢ ನಿರ್ಧಾರಕ್ಕೆ ಈ ಅಭಿಪ್ರಾಯ ಪ್ರೇರಣೆ ನೀಡಿತ್ತು. ಸಮಿತಿ ವತಿಯಿಂದಲೇ ಶಿಕ್ಷಕರೊಬ್ಬರನ್ನು ನಿಯೋಜಿಸಿ, ಎಲ್‌ಕೆಜಿ ತರಗತಿಯನ್ನು ಪ್ರಾರಂಭಿಸಲಾಯಿತು. ಮೊದಲ ವರ್ಷವೇ ಅಲ್ಲಿ 23 ಮಕ್ಕಳು ದಾಖಲಾದರು.

ಇದನ್ನು ನೋಡಿದ ಹೊಸನಗರದ ಸರ್ಕಾರಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅಶ್ವಿನಿ ಕೂಡ ತಮ್ಮ ಊರಿನ ಶಾಲೆಯಲ್ಲಿ ಇದೇ ಪ್ರಯೋಗಕ್ಕೆ ಮುಂದಾದರು. ಅಲ್ಲಿ ಮೊದಲ ವರ್ಷವೇ 53 ಮಕ್ಕಳು ದಾಖಲಾದರು.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ತರಗತಿ ಆರಂಭವಾದದ್ದರಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಕಣ್ಣು ಕೆಂಪಗಾಯಿತು. ಸರ್ಕಾರಿ ಅಧಿಕಾರಿಗಳ ಮೂಲಕವೇ ಎಲ್‌ಕೆಜಿ ತರಗತಿ ತೆರೆದವರಿಗೆ ಕಿರುಕುಳ ಆರಂಭವಾಯಿತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಆರಂಭವಾದರೆ ಅಂಗನವಾಡಿ ಕೇಂದ್ರಗಳನ್ನು ಮುಚ್ಚಬೇಕಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ಬರೆದರು. ಈ ಪತ್ರ ಆಧರಿಸಿ ಶಿಕ್ಷಣ ಇಲಾಖೆ ಎಲ್‌ಕೆಜಿ ಆರಂಭಿಸಿದ ಶಾಲೆಯ ಮುಖ್ಯ ಶಿಕ್ಷಕರಿಗೆ ‘ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು’ ಎಂದು ಕಾರಣ ಕೇಳಿ ನೋಟಿಸ್ ನೀಡಿತು.

ಸರ್ವ ಶಿಕ್ಷಣ ಅಭಿಯಾನ ಸಮಿತಿಯಲ್ಲೂ ಈ ವಿಷಯ ಚರ್ಚೆಗೆ ಬಂದಿತ್ತು. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ತರಗತಿ ಆರಂಭಿಸಕೂಡದು ಎಂದು ನಿರ್ಣಯ ಸ್ವೀಕರಿಸಲಾಯಿತು. ಇನ್ನೇನು ಎಲ್‌ಕೆಜಿ ತರಗತಿಯನ್ನು ಮುಚ್ಚಬೇಕಾಗುತ್ತದೆ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ಗೆಣಸಿನಕುಣಿ ಗ್ರಾಮಸ್ಥರು ಸರ್ಕಾರಿ ಶಾಲೆಗಳಲ್ಲಿನ ಪೂರ್ವ ಪ್ರಾಥಮಿಕ ಶಾಲೆಗಳ ಪರ ಹೋರಾಟ ಸಮಿತಿಯೊಂದನ್ನು ರಚಿಸಿದರು. ಎಲ್‌ಕೆಜಿ ತರಗತಿಗಳನ್ನು ಮುಚ್ಚಿದರೆ ಅಥವಾ ಇದಕ್ಕೆ ಕಾರಣರಾದ ಶಿಕ್ಷಕರ ಮೇಲೆ ಕ್ರಮ ಕೈಗೊಂಡರೆ ಶಾಲೆಯ ಎದುರು ಟೆಂಟ್ ಹಾಕಿ ಪ್ರತಿಭಟನೆ ನಡೆಸುವುದಾಗಿ ಸಮಿತಿ ಎಚ್ಚರಿಸಿತು.

ಆ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ ಅವರನ್ನು ಸಮಿತಿ ಪ್ರಮುಖರು ಭೇಟಿ ಮಾಡಿ, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ತರಗತಿಗಳ ಮಹತ್ವವನ್ನು ವಿವರಿಸಿದರು. ಕಿಮ್ಮನೆ ರತ್ನಾಕರ ‘ಶಿಕ್ಷಣ ನೀತಿ ಆಯೋಗದಲ್ಲಿ ಈ ವಿಷಯ ಮಂಡಿಸಿ ಇದನ್ನು ಶಾಸನ ರೂಪದಲ್ಲಿ ಜಾರಿಗೊಳಿಸುತ್ತೇನೆ’ ಎಂದು ಭರವಸೆ ನೀಡಿದರು. ಆ ಭರವಸೆ ಈಗ ಶಾಸನ ರೂಪದಲ್ಲಿ ಅನುಷ್ಠಾನಗೊಂಡಿದೆ.

ಗೆಣಸಿನಕುಣಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ ತರಗತಿ ಆರಂಭವಾದ ನಂತರ ಆವಿನಹಳ್ಳಿ, ಹುಲಿದೇವರಬನ, ತಾಳಗುಪ್ಪ, ಆಚಾಪುರ ಪಂಚಾಯಿತಿ ವ್ಯಾಪ್ತಿಯ ಲಕ್ಕವಳ್ಳಿ, ಗೌತಮಪುರ ಪಂಚಾಯಿತಿ ವ್ಯಾಪ್ತಿಯ ಹಿರಿಯಡಕ, ಕಲ್ಮನೆ ಪಂಚಾಯಿತಿ ವ್ಯಾಪ್ತಿಯ ಅರಳಿಕೊಪ್ಪ ಸೇರಿದಂತೆ 19 ಗ್ರಾಮಗಳಲ್ಲಿ ಎಲ್‌ಕೆಜಿ ತರಗತಿಗಳು ಆರಂಭಗೊಂಡಿವೆ.

ಹೀಗೆ ಒಂದು ಪುಟ್ಟ ಗ್ರಾಮದಲ್ಲಿ ಆರಂಭಗೊಂಡ ಆಂದೋಲನ ಈಗ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ತರಗತಿ ಆರಂಭವಾಗುವ ಮಟ್ಟಕ್ಕೆ ಬಂದು ನಿಂತಿದೆ. ಸರ್ಕಾರಿ ಶಾಲೆಗಳ ಉಳಿವಿನ ನಿಟ್ಟಿನಲ್ಲಿ ಈ ಕ್ರಮ ಪರಿಣಾಮಕಾರಿಯಾಗಬಹುದು ಎಂಬ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.