ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಜೊತೆಗೆ ಬೇರೆ ಯಾವ ಕೋರ್ಸ್‌ ಸೂಕ್ತ?

Last Updated 19 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಈಗಂತೂ ಕಾಲೇಜಿನಲ್ಲಿ ಬಗೆಬಗೆಯ ಕೋರ್ಸ್‌ಗಳು ಲಭ್ಯ. ವಿದ್ಯಾರ್ಥಿಗಳಿಗೆ ಬೇಕಾದಷ್ಟು ಆಯ್ಕೆಗಳಿವೆ. ಈ ಹಿಂದೆ ಒಂದು ವಿಷಯದಲ್ಲಿ ನೀಡಲಾಗುತ್ತಿದ್ದ ಯಾವುದೋ ಒಂದು ಅಧ್ಯಾಯವನ್ನೇ ಒಂದು ಪ್ರತ್ಯೇಕ ಕೋರ್ಸ್‌ ಆಗಿ ಪರಿವರ್ತಿಸಲಾಗಿದೆ. ಹಾಗೆಯೇ ಪ್ರತಿಯೊಬ್ಬರೂ ಒಂದು ಪದವಿಯ ಜೊತೆಗೆ ಇತರ ಕೋರ್ಸ್‌ಗಳನ್ನು ಮಾಡಿಕೊಂಡು ಕೌಶಲವನ್ನು ಸಿದ್ಧಿಸಿಕೊಳ್ಳುತ್ತಾರೆ. ಉದಾಹರಣೆಗೆ ಸಾಹಿತ್ಯದಲ್ಲಿ ಪದವಿ ಮಾಡಿದವರು ಡಿಜಿಟಲ್‌, ಮಷೀನ್‌ ಲರ್ನಿಂಗ್‌ ಎಂದೆಲ್ಲ ಕೌಶಲದಲ್ಲಿ ಪರಿಣಿತರಾಗುವುದು ಹೊಸದೇನಲ್ಲ. ಕೌಶಲದ ಜೊತೆಗೆ ವಿವಿಧ ವಿಷಯಗಳಲ್ಲಿ ಜ್ಞಾನ ಸಂಪಾದಿಸುವುದು ಹಲವರ ಗುರಿ. ಹಾಗೆಯೇ ಉದ್ಯೋಗದಾತರೂ ಕೂಡ ಇಂತಹ ಬೇರೆ ಬೇರೆ ಕೌಶಲಗಳನ್ನು ಉದ್ಯೋಗಿಗಳಲ್ಲಿ ಬಯಸುವುದು ಸಾಮಾನ್ಯ.

ಮುಂದೆ ಉದ್ಯೋಗದಲ್ಲಿ ಮೇಲಿನ ಸ್ಥಾನಕ್ಕೇರಲು ಕೂಡ ಇಂತಹ ಬೇರೆ ಬೇರೆ ಕೋರ್ಸ್‌ಗಳು ನೆರವಿಗೆ ಬರುತ್ತವೆ. ಇದಕ್ಕೆಲ್ಲ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಯೋಜನೆ ರೂಪಿಸಿಕೊಳ್ಳುವುದು ಸೂಕ್ತ. ಆ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಜ್ಞಾನ ಪಡೆದರೆ ವಿದ್ಯಾರ್ಥಿಗಳಿಗೇ ಅನುಕೂಲ.

ಪದವಿ ಓದುವುದರ ಜೊತೆಗೆ ಮಾಡಬಹುದಾದ ಕೆಲವು ಕೋರ್ಸ್‌ಗಳು ಇಲ್ಲಿವೆ.

ಕಂಪ್ಯೂಟರ್‌ ಕೋಡಿಂಗ್‌: ಕಂಪ್ಯೂಟರ್‌ ವಿಜ್ಞಾನ ಕಲಿಯಬೇಕೆಂದೇನೂ ಇಲ್ಲ, ಅದರಲ್ಲಿ ಪದವಿ ಪಡೆದವರು ಮಾತ್ರ ಅದಕ್ಕೆ ಸಂಬಂಧಿಸಿದ ಇತರ ಕೋರ್ಸ್‌ಗಳನ್ನು ಮಾಡಬಹುದು ಎಂಬ ನಿಯಮವೇನೂ ಇಲ್ಲ. ಯಾವುದೇ ಪದವಿ ಇರಲಿ, ಜೊತೆಗೆ ಕೋಡಿಂಗ್‌ ಕಲಿತರೆ ನಿಮಗೇ ಅನುಕೂಲ.

ಪ್ರೋಗ್ರಾಮಿಂಗ್‌ ಬಗ್ಗೆ ಮುಖ್ಯವಾದ ಅಂಶಗಳನ್ನು ಕಲಿತರೆ ಮುಂದೆ ಯಾವುದೇ ಉದ್ಯೋಗ ಸೇರಿದರೂ ಕೂಡ ಅಲ್ಲಿ ಕಂಪ್ಯೂಟರ್‌ ಬಳಸುವಾಗ ಕೆಲವು ಪರಿಭಾಷೆಗಳನ್ನು ಅರ್ಥ ಮಾಡಿಕೊಂಡು ಚೆನ್ನಾಗಿ ಕಾರ್ಯನಿರ್ವಹಿಸಬಹುದು. ಕಂಪ್ಯೂಟರ್‌ನಲ್ಲಿ ಯಾವುದನ್ನು ಬಳಕೆ ಮಾಡಬಹುದು ಎಂಬುದಕ್ಕೆ ಬೇರೆಯವರ ಸಹಾಯ ಅಗತ್ಯವಿರುವುದಿಲ್ಲ.

ಮಾರ್ಕೆಟಿಂಗ್‌: ಈ ಸಾಮಾಜಿಕ ಜಾಲತಾಣ ಎಂಬುದು ಇದೆಯಲ್ಲ, ಪ್ರತಿಯೊಬ್ಬರೂ ತಮ್ಮದೇ ಆದ ಬ್ರ್ಯಾಂಡ್‌ ಇಮೇಜ್‌ ಬೆಳೆಸಿಕೊಳ್ಳಲು ಸಹಾಯ ಮಾಡಿದೆ. ಇದರ ಬಗ್ಗೆ ಆಳವಾಗಿ ತಿಳಿದುಕೊಂಡರೆ ಅದು ನಿಮ್ಮ ವ್ಯವಹಾರಕ್ಕೆ ನೆರವಾಗಬಹುದು. ನಿಮ್ಮ ಉತ್ಪನ್ನಗಳ ಪ್ರಚಾರಕ್ಕೆ, ಗ್ರಾಹಕರನ್ನು ಸೆಳೆಯಲು ಇದು ಪೂರಕ.

ವಹಿವಾಟು, ಅದರ ಬಗ್ಗೆ ಪ್ರಚಾರ ಮಾಡುವುದು ಹಾಗೂ ಬ್ರ್ಯಾಂಡಿಂಗ್‌ ಬಗ್ಗೆ ಮುಖ್ಯವಾದ ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಇದು ಮುಂದೆ ನಿಮಗೆ ಅವಕಾಶಗಳನ್ನು ಸೃಷ್ಟಿಸುವುದಲ್ಲದೇ, ಉದ್ಯಮದಲ್ಲಿ ಸಾಧನೆ ಮಾಡಲು ನೆರವಾಗುತ್ತದೆ. ಹೀಗಾಗಿ ವಿದ್ಯಾರ್ಥಿ ದೆಸೆಯಲ್ಲೇ ನಿಮ್ಮನ್ನು ನೀವು ಪರಿಚಯಿಸಿಕೊಂಡು, ಸ್ನೇಹಿತರ ದಂಡನ್ನು ಸಂಪಾದಿಸಬಹುದು.

ಗ್ರಾಫಿಕ್‌ ಡಿಸೈನ್‌: ಈ ವಿನ್ಯಾಸ ಕೌಶಲದಲ್ಲಿ ಪರಿಣತಿ ಸಂಪಾದಿಸಿದರೆ ಮುಂದೆ ಡಿಜಿಟಲ್‌ ಅಥವಾ ಪ್ರಿಂಟ್‌ ಮಾಧ್ಯಮದಲ್ಲಿ ನಿಮಗೆ ಅನುಕೂಲ. ಕಂಟೆಂಟ್‌ ಬರಹಗಾರರಾಗಿಯಲ್ಲದೇ, ಮಾರ್ಕೆಟಿಂಗ್‌ನಲ್ಲೂ ಕೆಲಸ ಮಾಡಬಹುದು. ಜೊತೆಗೆ ಫೋಟೊಶಾಪ್‌ನಲ್ಲೂ ತರಬೇತಿ ಪಡೆದುಕೊಳ್ಳಿ.

ಸಂಖ್ಯಾಶಾಸ್ತ್ರದಲ್ಲಿ ಪರಿಣತಿ: ಈಗಂತೂ ಅಂಕಿ– ಅಂಶಗಳು ಎಲ್ಲಾ ಕ್ಷೇತ್ರದಲ್ಲೂ ಅಗತ್ಯ. ಇಂದು ಸಿದ್ಧ ತಿನಿಸಿನ ಪ್ಯಾಕ್‌ ಮೇಲಿಂದ ಹಿಡಿದು, ಆರೋಗ್ಯ ಕ್ಷೇತ್ರದವರೆಗೂ ಇದರ ವ್ಯಾಪ್ತಿ ಚಾಚಿದೆ. ಇನ್ನೂ ಕಾಡುತ್ತಿರುವ ಕೋವಿಡ್‌ ಬಗ್ಗೆಯೂ ಸಾಕಷ್ಟು ಅಂಕಿ– ಅಂಶಗಳನ್ನು ತಜ್ಞರು ನೀಡುತ್ತಿರುವುದು ಗೊತ್ತೇ ಇದೆ. ಹೀಗಾಗಿ ಸಂಖ್ಯಾಶಾಸ್ತ್ರ ಕಲಿತರೆ ವಿಶ್ಲೇಷಣೆ ಸಾಮರ್ಥ್ಯವನ್ನೂ ಬೆಳೆಸಿಕೊಳ್ಳಬಹುದು.

ಆಳ ಅಧ್ಯಯನ

ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಕೋರ್ಸ್‌ ಆದರೆ ಅದರಲ್ಲಿ ಆಳವಾದ ಅಧ್ಯಯನ ಮಾಡುವುದು ಒಳಿತು. ಮೂರು ಅಥವಾ ಆರು ತಿಂಗಳ ಅಲ್ಪಾವಧಿ ಕೋರ್ಸ್ ಅಥವಾ ಸರ್ಟಿಫಿಕೇಟ್‌ ಕೋರ್ಸ್‌ನಿಂದ ಅಷ್ಟೊಂದು ಪ್ರಯೋಜನವಾಗುವುದಿಲ್ಲ. ಯಾವಾಗಲೂ ಉದ್ಯೋಗದಾತರು ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನೆಲೆ ನೋಡಿಕೊಂಡೇ ನೇಮಕಾತಿ ಮಾಡಿಕೊಳ್ಳುವುದು. ವಿದ್ಯಾರ್ಥಿ ಯಾವ ರೀತಿಯ ಕೋರ್ಸ್‌ ಆಯ್ಕೆ ಮಾಡಿಕೊಂಡಿದ್ದಾನೆ ಎಂಬುದರ ಮೇಲೆ ಆ ವಿದ್ಯಾರ್ಥಿಯ ಬದ್ಧತೆ ಮನದಟ್ಟಾಗುತ್ತದೆ. ಒಂದು ಕೋರ್ಸ್‌ಗೆ ಕೇವಲ ಹವ್ಯಾಸಕ್ಕೋಸ್ಕರ ಸೇರಿಕೊಂಡು ಸರ್ಟಿಫಿಕೇಟ್‌ ಪಡೆದುಕೊಂಡರೆ ಚಾಣಾಕ್ಷ ಉದ್ಯೋಗದಾತರು ಆ ವ್ಯಕ್ತಿಯ ಬದ್ಧತೆಯನ್ನು ಪತ್ತೆ ಮಾಡಬಲ್ಲರು.

ಹಾಗೆಯೇ ಯಾವುದೇ ಕೋರ್ಸ್ ಇರಲಿ, ಮುಂದೆ ಯಾವ ಉದ್ಯೋಗಕ್ಕೆ ಸೇರಬೇಕೆಂಬುದನ್ನು ನಿರ್ಧರಿಸಿ ಪದವಿ ಪಡೆದಿರಲಿ, ಇಂಗ್ಲಿಷ್‌ ಅನ್ನು ಚೆನ್ನಾಗಿ ಕಲಿತಿರಬೇಕು. ಅಂತರರಾಷ್ಟ್ರೀಯವಾಗಿ ಸಂವಹನ ಮಾಡುವುದು ಬರದಿದ್ದರೆ ಅವರು ತಮ್ಮ ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವುದು ಕಷ್ಟ.

ಕೊನೆಯದಾಗಿ ವೈಯಕ್ತಿಕ ಹಣಕಾಸನ್ನು ನಿಭಾಯಿಸುವ ಸಾಮರ್ಥ್ಯವಿರಬೇಕು. ಉಳಿತಾಯ, ಹೂಡಿಕೆ, ಕ್ರೆಡಿಟ್‌ ಕಾರ್ಡ್‌, ತೆರಿಗೆ ಮೊದಲಾದವುಗಳನ್ನು ಸ್ವತಂತ್ರವಾಗಿ ನಿಭಾಯಿಸುವಂತಹ ಛಾತಿ ಬೆಳೆಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT