ಶನಿವಾರ, ಏಪ್ರಿಲ್ 1, 2023
31 °C
ವಸತಿ ಶಾಲೆಗೆ ಹೋಗೋಣ ಬನ್ನಿ...

ವಸತಿ ಶಾಲೆಗೆ ದಾಖಲಾತಿ: ಇಲ್ಲಿದೆ ಅರ್ಜಿ, ಸೀಟು, ಪ್ರವೇಶದ ಕುರಿತು ಮಾಹಿತಿ

ಎ.ಎಂ.ಸುರೇಶ Updated:

ಅಕ್ಷರ ಗಾತ್ರ : | |

ವಸತಿ ಶಾಲೆಗಳ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಕೆ, ಸೀಟುಗಳ ಲಭ್ಯತೆ, ಪ್ರವೇಶ ಪರೀಕ್ಷೆಯ ವಿಧಾನ, ದಾಖಲಾತಿ ಕುರಿತ ಸಮಗ್ರ ಮಾಹಿತಿಯನ್ನು ಒಳಗೊಂಡ ವಿವರ ಇಲ್ಲಿದೆ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಬರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಅಂಬೇಡ್ಕರ್‌, ಅಟಲ್‌ ಬಿಹಾರಿ ವಾಜಪೇಯಿ, ಇಂದಿರಾಗಾಂಧಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌, ಸಂಗೊಳ್ಳಿ ರಾಯಣ್ಣ, ನಾರಾಯಣ ಗುರು ಸೇರಿದಂತೆ ವಿವಿಧ ಮಾದರಿಯ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಸಂಘದ ಅಡಿಯಲ್ಲಿ ವಿವಿಧ ಮಾದರಿಯ 806 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 40,870 ಸೀಟುಗಳು ಪ್ರವೇಶಕ್ಕೆ ಲಭ್ಯವಾಗಲಿವೆ. 2022–23ನೇ ಸಾಲಿನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರು, ತಮ್ಮ ಮಕ್ಕಳನ್ನು 2023–24ನೇ ಸಾಲಿಗೆ 6ನೇ ತರಗತಿಗೆ ಸೇರಿಸಲು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿ ಸಲ್ಲಿಸಲು ಈ ತಿಂಗಳ 22 ಕೊನೆಯ ದಿನವಾಗಿದ್ದು, ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರವೇಶ ಪರೀಕ್ಷೆ ನಡೆಸಿ, ಅದರಲ್ಲಿ ಪಡೆಯುವ ಅಂಕಗಳು, ಮೀಸಲಾತಿ ಹಾಗೂ ಪ್ರವೇಶಕ್ಕಾಗಿ ನಮೂದಿಸಿರುವ ಶಾಲೆಗಳ ಆದ್ಯತಾ ಕ್ರಮದ ಆಧಾರದ ಮೇಲೆ ಕೌನ್ಸೆಲಿಂಗ್‌ ಮೂಲಕ ಸೀಟು ಹಂಚಿಕೆ ಮಾಡುತ್ತದೆ.

ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳ ಪೋಷಕರ ಕುಟುಂಬದ ವಾರ್ಷಿಕ ಆದಾಯವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಪರಿಶಿಷ್ಟ ಜಾತಿ/ಪಂಗಡ ಮತ್ತು ಪ್ರವರ್ಗ 1ರ ವಿದ್ಯಾರ್ಥಿಗಳ ಪೋಷಕರ ಆದಾಯದ ಮಿತಿ ₹2.5 ಲಕ್ಷದ ಒಳಗೆ ಇರಬೇಕು. ಪ್ರವರ್ಗ 2ಎ, 2ಬಿ, 3ಎ ಹಾಗೂ 3ಬಿ ಅಡಿ ಬರುವ ವಿದ್ಯಾರ್ಥಿಗಳ ಪೋಷಕರ ಆದಾಯ ಒಂದು ಲಕ್ಷದ ಒಳಗೆ ಇರಬೇಕು. 

ಜಾತಿ–ಆದಾಯ ಪ್ರಮಾಣ ಪತ್ರವಿಲ್ಲದಿದ್ದರೆ ಮೀಸಲಾತಿ ಸೌಲಭ್ಯ ದೊರೆಯುವುದಿಲ್ಲ. ಅಂತಹ ವಿದ್ಯಾರ್ಥಿಗಳನ್ನು ಸಾಮಾನ್ಯ ವರ್ಗದಡಿ ಪರಿಗಣಿಸಲಾಗುತ್ತದೆ.

ಅರ್ಜಿಯ ಜೊತೆಗೆ student Achievement Tracking systemನಿಂದ SATS ಸಂಖ್ಯೆಯನ್ನು ಓದುತ್ತಿರುವ ಶಾಲೆಯಿಂದ ಪಡೆದು ಅದನ್ನು ಅರ್ಜಿ ಸಲ್ಲಿಸುವಾಗ ನಮೂದಿಸಬೇಕು. 

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ರಾಜ್ಯದ ಕಾಯಂ ನಿವಾಸಿ ಆಗಿರಬೇಕು. 9 ರಿಂದ 13 ವರ್ಷ ವಯೋಮಾನದ ಒಳಗೆ ಇರಬೇಕು. ಪ್ರಸಕ್ತ ಸಾಲಿನಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದು, ದಾಖಲಾತಿ ಪರಿಶೀಲನೆ ವೇಳೆ 5ನೇ ತರಗತಿಯ ಅಂಕಪಟ್ಟಿಯನ್ನು ಹೊಂದಿರಬೇಕು.

ಪರೀಕ್ಷೆಯ ಸ್ವರೂಪ

ಮಾರ್ಚ್‌ 12ರಂದು ಪ್ರವೇಶ ಪರೀಕ್ಷೆ ನಿಗದಿಯಾಗಿದೆ. ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಶೇ 90ರಷ್ಟು ಪ್ರಶ್ನೆಗಳು 5ನೇ ತರಗತಿ ಪಠ್ಯ ಆಧರಿಸಿರುತ್ತವೆ. ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಯಲ್ಲಿ ಪ್ರಶ್ನೆಗಳಿರುತ್ತವೆ. ಬಹು ಆಯ್ಕೆ ಮಾದರಿಯ ಪ್ರಶ್ನೆಗಳು ಇರಲಿದ್ದು, ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆಯುವುದಿಲ್ಲ. ಅಂದರೆ ಋಣಾತ್ಮಕ ಮೌಲ್ಯಮಾಪನ ಇರುವುದಿಲ್ಲ. ಪರೀಕ್ಷೆಯ ಅವಧಿ ಎರಡು ಗಂಟೆ.

ಕನ್ನಡ, ಇಂಗ್ಲಿಷ್‌, ಗಣಿತ, ಸಮಾಜ ವಿಜ್ಞಾನ ಮತ್ತು ಸಾಮಾನ್ಯ ವಿಜ್ಞಾನ ವಿಭಾಗದಲ್ಲಿ ತಲಾ 20 ಪ್ರಶ್ನೆಗಳು ಇರುತ್ತವೆ. ಒಎಂಆರ್‌ ಶೀಟ್‌ನಲ್ಲಿ ಪ್ರತಿಯೊಂದು ಪ್ರಶ್ನೆ ಸಂಖ್ಯೆ ಮುಂದೆ ಎ,ಬಿ,ಸಿ,ಡಿ ಎಂದು ನಾಲ್ಕು ಬಾಕ್ಸ್‌ಗಳು ಇರುತ್ತವೆ. ವಿದ್ಯಾರ್ಥಿಗಳು ಸರಿಯಾದ ಉತ್ತರವನ್ನು ಆಯ್ಕೆ ಮಾಡಬೇಕು. ಉದಾಹರಣೆಗೆ ಉತ್ತರವು ‘ಎ‘ ಆಗಿದ್ದರೆ ‘ಎ‘ ಬಾಕ್ಸ್‌ ಅನ್ನು ಶೇಡ್‌ ಮಾಡಬೇಕು. ಒಂದಕ್ಕಿಂತ ಹೆಚ್ಚು ಬಾಕ್ಸ್‌ಗಳನ್ನು ಶೇಡ್‌ ಮಾಡುವಂತಿಲ್ಲ. ಆ ರೀತಿ ಮಾಡಿದರೆ ಅಂಕಗಳು ಸಿಗುವುದಿಲ್ಲ.

ಪ್ರಮಾಪತ್ರ ಸಲ್ಲಿಕೆ ಕಡ್ಡಾಯ

ವಿಶೇಷ ವರ್ಗಗಳ ಅಡಿ ಬರುವ ಮಕ್ಕಳಿಗೆ ಸೀಟು ಹಂಚಿಕೆಯಲ್ಲಿ ಮೀಸಲಾತಿ ಇರುತ್ತದೆ. ಆಶ್ರಮ ಶಾಲೆಯ ಮಕ್ಕಳು, ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಕ್ಕೆ ಸೇರಿದ ಮಕ್ಕಳು, ಅಂಗವಿಕಲರು, ಮಾಜಿ ಸೈನಿಕರ ಮಕ್ಕಳು, ವಿಶೇಷ ದುರ್ಬಲ ವರ್ಗದವರು, ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಮೀಸಲಾತಿ ಇರುತ್ತದೆ. ಆದರೆ, ಇವರು ಕೂಡ ಪರೀಕ್ಷೆಗೆ ಹಾಜರಾಗಿರಬೇಕು ಮತ್ತು ಸಂಬಂಧಪಟ್ಟ ಪ್ರಮಾಣಪತ್ರಗಳನ್ನು ಸಲ್ಲಿಸಿರಬೇಕು. ಅರ್ಜಿ ಸಲ್ಲಿಸುವಾಗ ಯಾವ ಶಾಲೆಗಳಲ್ಲಿ ದಾಖಲಾತಿ ಬಯಸುತ್ತಿರೊ, ಅಂತಹ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಆದ್ಯತಾ ಕ್ರಮದಲ್ಲಿ ದಾಖಲಿಸುವ ಶಾಲೆಗಳನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ. ಹೀಗಾಗಿ ಹೆಚ್ಚು ಅವಕಾಶಗಳನ್ನು ಬಯಸುವವರು ತಮ್ಮ ಜಿಲ್ಲೆಯಲ್ಲಿರುವ ಎಲ್ಲ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ನಮೂದಿಸುವುದು ಒಳ್ಳೆಯದು. ಅದೇ ತಾಲ್ಲೂಕಿನ ಮೂಲ ನಿವಾಸಿಗಳಾದ ವಿದ್ಯಾರ್ಥಿಗಳಿಗೆ ಶೇಕಡ 25ರಷ್ಟು ಸೀಟುಗಳನ್ನು ಮೀಸಲಿಡಲಾಗುತ್ತದೆ.

ಮಾದರಿ ಒಎಂಆರ್‌ ಶೀಟ್‌, ಪರೀಕ್ಷೆಯ ಕೈಪಿಡಿ ಹಾಗೂ ಪ್ರವೇಶದ ವಿವರಗಳನ್ನು ಒಳಗೊಂಡ ಸಂಪೂರ್ಣ ಮಾಹಿತಿ http://kea.kar.nic.in ನಲ್ಲಿ ಲಭ್ಯವಿದೆ. ಅರ್ಜಿಗಳನ್ನು ಭರ್ತಿ ಮಾಡುವ ಮುನ್ನ ಸರಿಯಾಗಿ ಓದಿಕೊಳ್ಳುವುದು ಒಳ್ಳೆಯದು. ಒಮ್ಮೆ ಭರ್ತಿ ಮಾಡಿದ ನಂತರ ತಿದ್ದುಪಡಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು, ಪೋಷಕರು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು