ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ ನಂತರದ ಕೋರ್ಸ್‌ ಆಯ್ಕೆ ಹೇಗಿರಬೇಕು?

Last Updated 13 ಜೂನ್ 2021, 19:30 IST
ಅಕ್ಷರ ಗಾತ್ರ

ಶಿಕ್ಷಣದ ಎಲ್ಲಾ ಹಂತಗಳೂ ಮುಖ್ಯವೇ ಆದರೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಭಾರತೀಯ ಶಿಕ್ಷಣದ ಚೌಕಟ್ಟಿನಲ್ಲಿ ಪ್ರಮುಖವೆನಿಸಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಅಂಕಗಳು ವಿದ್ಯಾರ್ಥಿಯು ಶಿಕ್ಷಣದ ಯಾವ ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಳ್ಳಬೇಕು (ಕಲೆ, ವಿಜ್ಞಾನ, ವಾಣಿಜ್ಯ, ಪಾಲಿಟೆಕ್ನಿಕ್, ಡಿಪ್ಲೊಮಾ ಇತ್ಯಾದಿ) ಎಂಬ ತೀರ್ಮಾನ ಮಾಡುವುದರೊಂದಿಗೆ, ಶಿಕ್ಷಣವನ್ನು ಮುಂದುವರೆಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸುತ್ತವೆ.

ಹತ್ತನೇ ತರಗತಿಯ ಶಿಕ್ಷಣ ಸಾಮಾನ್ಯ ಶಿಕ್ಷಣವಾಗಿದ್ದು ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಬದುಕಲು ಬೇಕಾದ ಪೌರಪ್ರಜ್ಞೆ, ನಾಯಕತ್ವ ಲಕ್ಷಣಗಳು ಮತ್ತು ಉದ್ಯೋಗವನ್ನು ಆಯ್ದುಕೊಂಡರೆ ಅದಕ್ಕೆ ಬೇಕಾದ ಮೂಲಭೂತ ಕೌಶಲಗಳನ್ನು ಕೊಡುವುದಷ್ಟೇ ಆಗಿದೆ. ಈ ಹಂತದಲ್ಲಿ ಕರ್ನಾಟಕದಲ್ಲಿ ಸಾಮಾನ್ಯವಾಗಿ 10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ. ಶೇಕಡಾ 60–70 ರಷ್ಟು ಮಂದಿ ಉತ್ತೀರ್ಣರಾಗುತ್ತಾರೆ. ಮೂರರಿಂದ - ನಾಲ್ಕು ಲಕ್ಷ ವಿದ್ಯಾರ್ಥಿಗಳು ಏನು ಮಾಡುತ್ತಾರೆ ಎಂಬುದರ ಬಗ್ಗೆ ವಿಶ್ಲೇಷಣೆ ಮಾಡಬೇಕಾಗುತ್ತದೆ.

ಕರ್ನಾಟಕದಲ್ಲಿ ವರ್ಷಕ್ಕೆ ಪಿಯುಸಿಗೆ ಬರುವ ಒಟ್ಟು ವಿದ್ಯಾರ್ಥಿಗಳು ಸುಮಾರು 6–7 ಲಕ್ಷ ಇರುತ್ತಾರೆ. ಇದರಲ್ಲಿ ನಾಲ್ಕು ಲಕ್ಷದಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ ಎಂದುಕೊಳ್ಳೋಣ. (ಈ ವರ್ಷ ಕೋವಿಡ್‌ನಿಂದಾಗಿ ಪರಿಸ್ಥಿತಿ ಬೇರೆಯೇ ಇದೆ). ಕಲೆ, ವಾಣಿಜ್ಯ, ವಿಜ್ಞಾನ, ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು ಮೊದಲಾದ ಪದವಿಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಸರ್ಕಾರದ ಗಮನ ಕೇವಲ ವಿಜ್ಞಾನದ ವಿದ್ಯಾರ್ಥಿಗಳ ಮೇಲಿದೆ. ಎಲ್ಲಾ ನಿಯಮಗಳೂ ಅವರನ್ನೇ ಕೇಂದ್ರೀಕರಿಸಿರುತ್ತವೆ.

ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಯಾವುದೇ ತರಬೇತಿ ಮತ್ತು ವಿಶೇಷ ಕಾಳಜಿ ಇರುವುದಿಲ್ಲ. ಬಹುತೇಕ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳೆಂದರೆ ಈ ಕಲಾ ಮಾಧ್ಯಮದವರೇ.

ವಾಣಿಜ್ಯ ವಿಭಾಗವನ್ನು ಆಯ್ದುಕೊಳ್ಳುವವರೆಲ್ಲರೂ ಸಿ.ಎ.(ಚಾರ್ಟರ್ಡ್ ಅಕೌಂಟೆನ್ಸಿ) ಓದುವ ಕನಸನ್ನೇ ಹೊತ್ತು ಈ ವಿಷಯಗಳನ್ನು ಆಲಂಗಿಸಿರುತ್ತಾರೆ. ಕಡೆಯದಾಗಿ ಎಲ್ಲೋ ದಡ ಸೇರುತ್ತಾರೆ.

ಈ ಎಲ್ಲಾ ತಾರತಮ್ಯಗಳೂ ಹೋಗಬೇಕಾದಲ್ಲಿ ಆಯಾ ವೃತ್ತಿಗಳಲ್ಲಿ ಬರುವ ಉಪವೃತ್ತಿಗಳ ಪಟ್ಟಿ ಮಾಡಿ ಬೇಡಿಕೆಗಳಿಗೆ ಅನುಗುಣವಾಗಿ ವಿವಿಧ ಕೋರ್ಸ್‍ಗಳನ್ನು ರಚಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಕೋರ್ಸ್ ಆಯ್ಕೆಯ ಬಗ್ಗೆ ಆಪ್ತ ಸಲಹೆಯ ಅವಶ್ಯಕತೆ ಇದೆ.

ಎಷ್ಟೋ ವಿದ್ಯಾರ್ಥಿಗಳು ಹೆಚ್ಚಾಗಿ ತಮಗೆ ಇಷ್ಟವಿಲ್ಲದಿದ್ದರೂ ಪೋಷಕರ ಒತ್ತಡದಿಂದಲೇ ಕೋರ್ಸ್‌ಗಳಿಗೆ ನೋಂದಾಯಿಸಿಕೊಳ್ಳುತ್ತಾರೆ ಹಾಗೂ ಅವರು ಅವುಗಳನ್ನು ಪೂರ್ಣಗೊಳಿಸುವುದೂ ಇಲ್ಲ. ಹೀಗಾಗಿ ಪಿಯುಸಿಯ ನಂತರದ ಯಾವುದೇ ಕೋರ್ಸ್‌ ಅನ್ನು ನಿರ್ಧರಿಸುವ ಮುನ್ನ ಪೋಷಕರು, ವಿದ್ಯಾರ್ಥಿಗಳು ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ. ಅದರ ಸ್ಥೂಲ ಪರಿಚಯವನ್ನು ಇಲ್ಲಿ ಮಾಡಲಾಗಿದೆ.

ಪೋಷಕರು ಗಮನಿಸಬೇಕಾದ ಅಂಶಗಳು

* ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನಿಸಿ.

* ನಿಮ್ಮ ಮಕ್ಕಳಿಗೆ ಮುಕ್ತವಾಗಿ, ನಿಖರವಾಗಿ ಚರ್ಚಿಸಲು ಅವಕಾಶ ಕೊಡಿ.

* ವಿದ್ಯಾರ್ಥಿಗಳು ತೀರ್ಮಾನ ತೆಗೆದುಕೊಳ್ಳಲು ಅಶಕ್ತರಾಗಿದ್ದಲ್ಲಿ, ಮಕ್ಕಳ ಅಭಿಲಾಷೆಯನ್ನರಿತು ಮಾರ್ಗದರ್ಶನ ಮಾಡಿ.

* ವಿದ್ಯಾರ್ಥಿಗಳು ಯಾವುದಾದರೂ ವಿಷಯದ ಬಗ್ಗೆ ಅಧ್ಯಯನ ಮಾಡಲು ಆಸಕ್ತಿ ತೋರಿಸಿದರೆ ಕೇವಲ ಆದಾಯ (ಹಣದ)ವನ್ನಷ್ಟೇ ಗಮನದಲ್ಲಿಟ್ಟು ಅದು ಪ್ರಯೋಜನ ಇಲ್ಲವೆಂದು ಮೂದಲಿಸಬೇಡಿ.

* ಹೆಚ್ಚಿನ ವಿದ್ಯಾರ್ಥಿಗಳು ಯಾವ ಕೋರ್ಸ್‌ಗೆ ಸೇರುತ್ತಾರೋ ಆ ಕೋರ್ಸ್‌ಗೇ ನಮ್ಮ ಮಕ್ಕಳೂ ಹೋಗಲಿ ಎಂಬ ಭಾವನೆ ಬೇಡ.

* ನಿಮ್ಮ ಮಕ್ಕಳನ್ನು ನಿಮ್ಮ ಇತರ ಮಕ್ಕಳೊಂದಿಗೆ ಹಾಗೂ ಬೇರೆಯವರ ಮಕ್ಕಳಿಗೆ ಹೋಲಿಸಲೇಬೇಡಿ.

* ‘ನಿನಗಾಗಿ ನಾವು ಎಷ್ಟು ದುಡಿದಿದ್ದೀವಿ, ತ್ಯಾಗ ಮಾಡಿದ್ದೀವಿ ಗೊತ್ತೇ? ಅದಕ್ಕಾಗಿ ನೀನು ನಾವು ಹೇಳಿದ್ದನ್ನು ಕೇಳಬೇಕು’ ಎಂದು ಕಟ್ಟುನಿಟ್ಟಾಗಿ ಹೇಳಬೇಡಿ.

* ತಾಳ್ಮೆಯಿಂದ ಎಲ್ಲಾ ದೃಷ್ಟಿಯಿಂದಲೂ ಯೋಚಿಸಿ ನಿಮ್ಮ ಮಗುವಿನ ಭವಿಷ್ಯವನ್ನು ನಿರ್ಧರಿಸಿ.

* ಕಷ್ಟಪಟ್ಟು ಯಾವುದೇ ಕ್ಷೇತ್ರದಲ್ಲಿ ದುಡಿದರೂ ಉಜ್ವಲ ಭವಿಷ್ಯವಿದೆ ಎಂಬುದನ್ನು ಅವರಿಗೆ ಮನದಟ್ಟು ಮಾಡಿ.

* ಅವರಿಗೆ ಇಷ್ಟವಾಗುವ ಯಾವುದೇ ಹವ್ಯಾಸವನ್ನು ಬೆಳೆಸಿಕೊಳ್ಳಲು ಉತ್ತೇಜಿಸಿ.

ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶಗಳು

* ನಿಮಗಿರುವ ಆಸಕ್ತಿ ಕ್ಷೇತ್ರವನ್ನು ಪತ್ತೆ ಮಾಡಿಕೊಳ್ಳಿ.

* ಮಾನಸಿಕ ತೃಪ್ತಿ ನೀಡುವ, ನಿಮ್ಮ ಕೌಶಲಗಳನ್ನು ಚೆನ್ನಾಗಿ ಬಳಸಿಕೊಳ್ಳಲು ಅವಕಾಶವಿರುವ ಕ್ಷೇತ್ರವನ್ನು ಗಮನಿಸಿ.

* ಆಯ್ದುಕೊಂಡ ಕ್ಷೇತ್ರವನ್ನು ಛಲಬಿಡದೆ ವಿಕ್ರಮನಂತೆ ಪಟ್ಟು ಹಿಡಿದು ಪೂರ್ಣಗೊಳಿಸಿ.

* ನಿಮ್ಮ ಪೋಷಕರೊಂದಿಗೆ ಗೌರವದಿಂದ ವರ್ತಿಸಿ.

* ದೇಶ-ವಿದೇಶಗಳಲ್ಲಿ ಸಿಗಬಹುದಾದ ಉತ್ತಮ ಅವಕಾಶಗಳನ್ನು ಗಮನಿಸಿ.

* ಭಾಷಾ ಕಲಿಕೆಯಲ್ಲಿ ನಿಮಗೆ ಆಸಕ್ತಿ ಇದ್ದಲ್ಲಿ ಅದನ್ನೇ ಆರಿಸಿಕೊಳ್ಳಿ. ಬಹುತೇಕ ಉದ್ಯಮಗಳಲ್ಲಿ ಸಂವಹನಾ ಕೌಶಲವೇ ಮುಖ್ಯವಾಗತ್ತದೆ.

* ಯಾವುದೇ ಕ್ಷೇತ್ರದಲ್ಲಿ ನೀವು ದುಡಿಯಬೇಕಾದರೆ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಬಹಳ ಮುಖ್ಯ.

* ಕೆಲವು ಕೋರ್ಸ್‍ಗಳಿಗೆ ಸಹನೆ, ಸೇವಾಭಾವನೆ ಮತ್ತು ಸಂವಹನ ಮುಖ್ಯವಾದರೆ ಮತ್ತೆ ಕೆಲವಕ್ಕೆ ಚುರುಕುತನ, ಸೃಜನಶೀಲತೆ ಪ್ರಮುಖವೆನಿಸುತ್ತದೆ. ರಕ್ಷಣಾ ವಿಭಾಗದಲ್ಲಿ ನಿಮ್ಮ ಒಲುಮೆ ಇದ್ದಲ್ಲಿ ಧೈರ್ಯ, ಅರ್ಪಣಾಭಾವ ಎಲ್ಲಕ್ಕಿಂತಲೂ ಮುಖ್ಯವಾಗುತ್ತದೆ.

* ದೊರೆತಿರುವ ಸಮಯದಲ್ಲಿ ಸಾಮಾನ್ಯ ಜ್ಞಾನ, ಪ್ರಸಕ್ತ ವಿದ್ಯಮಾನದ ಬಗ್ಗೆ ಗಮನ ಹರಿಸಿ.

* ಅನುಭವವಿರುವವರಿಂದ, ನಿಮ್ಮ ಜೊತೆ ಇದ್ದ ಹಿರಿಯ ವಿದ್ಯಾರ್ಥಿಗಳಿಂದ ವಿಷಯ ಸಂಗ್ರಹಿಸಿ.

* ನೀವು ತೆಗೆದುಕೊಳ್ಳಬೇಕಾದ ಕೋರ್ಸ್‌ಗಳಿಗೆ ದೊರೆಯಬಹುದಾದ ಆರ್ಥಿಕ ನೆರವಿನ ಬಗ್ಗೆ ತಿಳಿದುಕೊಳ್ಳಿ.

(ಲೇಖಕ: ನಿವೃತ್ತ ಪ್ರಾಂಶುಪಾಲರು, ಎಂ.ಇ.ಎಸ್. ಶಿಕ್ಷಣ ಕಾಲೇಜು, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT