ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತ, ವಿಜ್ಞಾನದ ಕಲಿಕೆ ಹೇಗೆ?

Last Updated 16 ಮೇ 2021, 19:30 IST
ಅಕ್ಷರ ಗಾತ್ರ

ಅಮ್ಮನಿಗೆ ಅಡುಗೆಯಲ್ಲಿ ಸಹಾಯ ಮಾಡುವಾಗ ಚಿಂಟುವಿನ ಕೈಯಲ್ಲಿದ್ದ ಮೊಟ್ಟೆ ಆಕಸ್ಮಿಕವಾಗಿ ಕೈಜಾರಿ ಕೆಳಗೆ ಬಿತ್ತು. ಮೊಟ್ಟೆ ಹಾಳಾಗಿದ್ದರಿಂದ ಕೆಲಸ ದುಪ್ಪಟ್ಟಾಯಿತಲ್ಲ ಎನ್ನುವ ಕಾರಣದಿಂದ ಅಮ್ಮನ ಕೋಪ ನೆತ್ತಿಗೇರಿತು. ತಕ್ಷಣವೇ ಆದ ಬೈಗುಳದ ಸುರಿಮಳೆ ಆರು ವರ್ಷದ ಚಿಂಟುವಿನ ಉತ್ಸಾಹಕ್ಕೆ ತಣ್ಣೀರೆರಚಿತ್ತು.

ಮಕ್ಕಳು ತಪ್ಪು ಮಾಡಿದಾಗ ಸಾಮಾನ್ಯವಾಗಿ ಬಹಳಷ್ಟು ಪೋಷಕರು ಮಾಡುವ ಕೆಲಸ ತಕ್ಷಣಕ್ಕೆ ಕೋಪಗೊಳ್ಳುವುದು. ಒಡೆದ ಮೊಟ್ಟೆಯನ್ನು ಮೊದಲಿನಂತೆ ಮಾಡಲು ಸಾಧ್ಯವಿಲ್ಲ, ನಿಜ. ಆದರೆ ಅದರಿಂದ ಖಂಡಿತವಾಗಿ ಮಗುವಿನಲ್ಲಿ ವಿಜ್ಞಾನದೆಡೆಗೆ ಆಸಕ್ತಿಯನ್ನು ಮೂಡಿಸಬಹುದು. ಉದಾಹರಣೆಗೆ ಮೊಟ್ಟೆಯ ಹೊರಗಿನ ಬಿಳಿಯ ಕವಚ, ಹಳದಿ ಭಾಗ (ಯೋಕ್) ಭ್ರೂಣವಾಗುವ ಪರಿ, ಅದರಲ್ಲಿ ಅಡಗಿರುವ ಪ್ರೊಟೀನ್‌ ಅಂಶ.. ಹೀಗೆ ಸಾಕಷ್ಟನ್ನು ಮಕ್ಕಳಿಗೆ ವಿವರಿಸುವ ಮೂಲಕ ಅವರಲ್ಲಿ ಆಸಕ್ತಿ ಮತ್ತು ಕುತೂಹಲವನ್ನು ಬೆಳೆಸಬಹುದು. ಆಗ ಬಹುಶಃ ನಮ್ಮ ಮಕ್ಕಳಿಗೆ ಗಣಿತ, ವಿಜ್ಞಾನವೆಂದರೆ ಬಹಳ ಕಷ್ಟದ ವಿಷಯ ಎನ್ನುವ ಸಮಸ್ಯೆ ಬಗೆಹರಿಯಬಹುದು.

ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದ (ನ್ಯಾಷನಲ್ ಸೈನ್ಸ್ ಫೌಂಡೇಷನ್) ಶಿಕ್ಷಣ ತಜ್ಞರ ಪ್ರಕಾರ, ‘ಚಿಕ್ಕಮಕ್ಕಳಲ್ಲಿರುವ ಕುತೂಹಲ ಮತ್ತು ಎಲ್ಲವನ್ನೂ ಪರೀಕ್ಷಿಸಿ ಹೊಸತನ್ನು ಹುಡುಕುವ ಗುಣ ನೈಸರ್ಗಿಕವಾಗಿಯೇ ಅವರನ್ನು ಗಣಿತತಜ್ಞರು ಮತ್ತು ವಿಜ್ಞಾನಿಗಳನ್ನಾಗಿಸಿದೆ’. ಆದರೆ ಬೆಳೆಯುತ್ತಾ ಆ ಆಸಕ್ತಿ ಕಡಿಮೆಯಾಗುತ್ತದೆ. ಇನ್ನು ಅಮೆರಿಕದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ನೂರರಲ್ಲಿ ಕೇವಲ ಇಪ್ಪತ್ತಾರು ಮಕ್ಕಳು ಮಾತ್ರ ವಿಜ್ಞಾನ ಮತ್ತು ಗಣಿತದಲ್ಲಿ ಆಸಕ್ತಿ ಉಳ್ಳವರಾಗಿರುತ್ತಾರಂತೆ. ಇದಕ್ಕೆ ಕಾರಣ, ಭಾಷಾವಾರು ವಿಷಯಗಳಂತೆ ನಾವದನ್ನು ಕಥೆಗಳ ಮೂಲಕ ಮನಸ್ಸಿಗೆ ತಟ್ಟುವಂತೆ ಹೇಳದೆ ಇರುವುದು. ಹೌದು ಗಣಿತದ ಸೂತ್ರಗಳಿರಲಿ ಅಥವಾ ವಿಜ್ಞಾನದ ವ್ಯಾಖ್ಯಾನಗಳಿರಲಿ ನೇರವಾಗಿಯೇ ಹೇಳಿಕೊಟ್ಟು ಕಂಠಪಾಠ ಮಾಡಿಸಿಬಿಡುತ್ತೇವೆ. ಅರ್ಥವಾಗದ ಪರಿಕಲ್ಪನೆ ಹೆಚ್ಚು ದಿನ ಮೆದುಳಲ್ಲಿ ಉಳಿಯುವುದಾದರೂ ಹೇಗೆ?

ವಿಜ್ಞಾನದೆಡೆಗೆ ಕುತೂಹಲ ಹುಟ್ಟಿಸುವುದು ಹೇಗೆ?

1.ಮಕ್ಕಳು ಕೇಳುವ ಪ್ರಶ್ನೆಗಳಿಗೆ ತಾಳ್ಮೆಯಿಂದ ವಿವರಿಸಿ. ದೊಡ್ಡವರೆಂದ ಮಾತ್ರಕ್ಕೆ ಎಲ್ಲವೂ ಗೊತ್ತಿರಲೇಬೇಕೆಂದಿಲ್ಲ. ಗೊತ್ತಿಲ್ಲದ್ದನ್ನು ತಿಳಿದು ವಿವರಿಸಿ. ಪ್ರಶ್ನಿಸುವ ಪ್ರವೃತ್ತಿ ನಿಮ್ಮ ಮಗುವಿನದ್ದಾಗಿರದಿದ್ದರೆ ನೀವೇ ಮುತುವರ್ಜಿವಹಿಸಿ ವಿವರಿಸಲು ಶುರುಮಾಡಿ. ಆಗ ಮಗು ನಿಧಾನವಾಗಿ ಪ್ರಶ್ನಿಸಲು ಪ್ರಾರಂಭಿಸುತ್ತದೆ.

2.ಮಗುವಿನೊಟ್ಟಿಗೆ ಹೊರಗಡೆ ಓಡಾಡುವಾಗ ಕಣ್ಣಿಗೆ ಕಾಣಿಸಿದ ಒಂದೆರಡು ವಸ್ತುಗಳನ್ನೋ, ಗಿಡಗಳನ್ನೋ ತೋರಿಸಿ ಅದೇನೆಂದು ತಿಳಿಸಿ. ಮತ್ತೆ ಮಗುವಿಗೆ ಅದೇ ರೀತಿ ಹೇಳಲು ಹೇಳಿ.

3.ನೀವು ಹೇಳಿದ್ದನ್ನು ಮಗು ಕಲಿಯುವುದಕ್ಕಿಂತ ನೀವು ಮಾಡುವುದನ್ನು ಮಗು ವೇಗವಾಗಿ ಮತ್ತು ನಿಖರವಾಗಿ ಕಲಿಯುತ್ತದೆ. ಹಾಗಾಗಿ ಇದು ಮಾಡು, ಅದು ಮಾಡು ಎನ್ನುವುದಕ್ಕಿಂತ ನೀವೂ ಅವರೊಟ್ಟಿಗೆ ಕೂತು ಮಾಡುವುದು ಒಳ್ಳೆಯದು.

4. ಸಾಧ್ಯವಾದಷ್ಟೂ ಶಾಲೆಯಲ್ಲಿ ಕೊಟ್ಟ ವಿಜ್ಞಾನ ಪ್ರಾಜೆಕ್ಟ್‌ಗಳನ್ನು ನಿಮ್ಮ ಮಗುವಿನಿಂದಲೇ ಮಾಡಿಸಿ. ನಿಮ್ಮ ಸಂಪೂರ್ಣ ಸಹಾಯವಿರಲಿ. ಆದರೆ ಹೊರಗಿನಿಂದ ಮಾಡಿಸಿ ತರುವುದು ಅಥವಾ ಅಂಗಡಿಯಿಂದ ರೆಡಿ ಇರುವುದನ್ನು ತರುವುದು ಸಲ್ಲ. ಮಗು ಬೆಳೆಯುತ್ತಾ ಅದನ್ನೇ ಮುಂದುವರೆಸುತ್ತದೆ.

5.ಪೋಷಕರೊಟ್ಟಿಗೆ ಕೂತು ಚಿತ್ರಗಳನ್ನು ಬರೆಯುವುದೆಂದರೆ ಮಕ್ಕಳಿಗೆ ಇಷ್ಟ. ಇದನ್ನು ಅವರಲ್ಲಿ ವಿಜ್ಞಾನದ ಆಸಕ್ತಿ ಹೆಚ್ಚಿಸಲು ಸುಲಭವಾಗಿ ಬಳಸಿಕೊಳ್ಳಬಹುದು. ಸಸ್ಯಗಳ, ಮರಗಳ, ಪ್ರಾ಼ಣಿ– ಪಕ್ಷಿಗಳ ಚಿತ್ರ ಬರೆದಿದ್ದರೆ ಅದರ ಭಾಗಗಳನ್ನು ಗುರುತಿಸುವ ಚಟುವಟಿಕೆ ಮಾಡಿಸಿ.

6.ಗಣಿತವನ್ನು ಅಂಕಿಗಳಂತೆ ಹೇಳಿಕೊಡದೆ ಮಗುವಿಗೆ ಇಷ್ಟವಾಗುವ ವಸ್ತುಗಳಿಗೆ ಅಂಕಿಗಳನ್ನು ಸೇರಿಸಿ ಹೇಳಿಕೊಡಿ. ಮಗು ಬೇಗನೇ ಕಲಿಯುತ್ತದೆ. ‘ನಿನ್ನಲ್ಲಿರುವ ಒಂದು ಸೇಬಿಗೆ ನನ್ನಲ್ಲಿರುವ ನಾಲ್ಕು ಸೇಬು ಸೇರಿಸಿದರೆ ಎಷ್ಟಾಯಿತು?’ ಎಂದರೆ ಮಗು ಕ್ಷಣಾರ್ಧದಲ್ಲಿ ‘ಐದು ಸೇಬುಗಳು’ ಎನ್ನುತ್ತದೆ. ಅದನ್ನೆ ನೀವು ಒಂದಕ್ಕೆ ನಾಲ್ಕನ್ನು ಕೂಡು ಅಂದರೆ ಮಗುವಿಗೆ ಮೊದಮೊದಲು ಕಷ್ಟವಾಗಬಹುದು.

7.ಮಗ್ಗಿ ಗೊತ್ತಿದ್ದರೆ ಎಂತಹ ಗಣಿತದ ಸಮಸ್ಯೆಯನ್ನಾದರೂ ಬಿಡಿಸಬಹುದು. ಆದರೆ ಮಕ್ಕಳು ಇಂದು ಕಲಿತ ಮಗ್ಗಿಯನ್ನು ನಾಳೆ ಮರೆತಿರುತ್ತಾರೆ. ಹಾಗಾಗಿ ಮಕ್ಕಳಿಗೆ ಮಗ್ಗಿಯ ಮಹತ್ವ ತಿಳಿಸಿ.

(ಲೇಖಕಿ: ತುಮಕೂರಿನ ವಿಶ್ವವಿದ್ಯಾಲಯ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT