ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಮೆಡಿಕಲ್‌ ಕ್ಷೇತ್ರ

Last Updated 30 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಆರೋಗ್ಯ ಸೇವಾ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಭವಿಷ್ಯದಲ್ಲಿ ಇನ್ನಷ್ಟು ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುವ ನಿರೀಕ್ಷೆಯಿದೆ. ಹಾಗೆಯೇ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ವಲಯವೂ ಹೌದು. ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ವೈದ್ಯಕೀಯ ಕ್ಷೇತ್ರಕ್ಕೆ ತಂತ್ರಜ್ಞರ ಹಾಗೂ ರೋಗಪತ್ತೆ ತಜ್ಞ (ಡಯಾಗ್ನಾಸ್ಟಿಶಿಯನ್‌)ರ ಅಪಾರ ಬೇಡಿಕೆಯಿದೆ. ಇಂತಹ ಪ್ರಯೋಗಾಲಯ ತಂತ್ರಜ್ಞರು, ವೈದ್ಯರ ಸಹಾಯಕರು, ಶುಶ್ರೂಷಕರು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಇಂತಹ ತಂತ್ರಜ್ಞರು, ಸುಶ್ರೂಷಕರನ್ನು ತಯಾರು ಮಾಡಲು ಪ್ಯಾರಾ ಮೆಡಿಕಲ್‌ (ಅರೆ ವೈದ್ಯಕೀಯ) ಕೋರ್ಸ್‌ಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿವೆ. ರೋಗಿಗಳ ಆರೈಕೆಯ ವಿಷಯ ಬಂದಾಗ ಈ ನುರಿತ ತಜ್ಞರು ಮುಂಚೂಣಿಯಲ್ಲಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಅಪಘಾತ ಚಿಕಿತ್ಸಾ ಕೇಂದ್ರಗಳು, ತುರ್ತು ನಿಗಾ ಘಟಕಗಳು, ರೋಗಪತ್ತೆ ಮಾಡುವ ಪ್ರಯೋಗಾಲಯಗಳು, ಸ್ಕ್ಯಾನಿಂಗ್‌ ಕೇಂದ್ರಗಳು.. ಮೊದಲಾದವುಗಳು ನುರಿತ ವೃತ್ತಿಪರರನ್ನು ಆಕರ್ಷಿಸುತ್ತಿವೆ.

ಯಾವ ಕೋರ್ಸ್?
ಪಿ.ಯು.ಸಿ. ನಂತರ ಲಭ್ಯವಿರುವ ಈ ಕೋರ್ಸ್‌ಗಳಲ್ಲಿ ಮೂರು ಮುಖ್ಯ ಬಗೆಗಳಿವೆ. ಅವೆಂದರೆ ಪದವಿ ಕೋರ್ಸ್, ಡಿಪ್ಲೊಮ ಕೋರ್ಸ್ ಹಾಗೂ ಸರ್ಟಿಫಿಕೇಟ್ ಕೋರ್ಸ್. ಈ ಎಲ್ಲ ಕೋರ್ಸ್‌ಗಳಲ್ಲಿ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲು ಅಗತ್ಯವಾದ ಶಿಕ್ಷಣ ಹಾಗೂ ತರಬೇತಿಯನ್ನು ನೀಡಲಾಗುತ್ತದೆ.

ಪದವಿ: ಈ ಬಿ.ಎಸ್ಸಿ. ಕೋರ್ಸ್‌ನ ಅವಧಿ ಮೂರೂವರೆಯಿಂದ ನಾಲ್ಕು ವರ್ಷಗಳು. ಆಸ್ಪತ್ರೆಯ ವಿವಿಧ ವಿಭಾಗಗಳಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿಶೇಷ ವಿಷಯಗಳಲ್ಲಿ ಪದವಿ ಕೋರ್ಸ್ ಲಭ್ಯವಿದೆ. ಫಿಸಿಯೋಥೆರಪಿ, ನರ್ಸಿಂಗ್, ಪ್ರಯೋಗಾಲಯ, ನೇತ್ರ ಶಾಸ್ತ್ರ, ಅರಿವಳಿಕೆ, ಡಯಾಲಿಸಿಸ್, ಶಸ್ತ್ರ ಚಿಕಿತ್ಸಾ ಕೊಠಡಿ, ವಿಕಿರಣ ಚಿಕಿತ್ಸೆ, ಶ್ರವಣಶಾಸ್ತ್ರ, ಸ್ಪೀಚ್‌ ಥೆರಪಿ, ಶ್ವಾಸಕೋಶಗಳ ಆರೈಕೆ, ಹೃದಯದ ಶಸ್ತ್ರ ಚಿಕಿತ್ಸಾ ತಂತ್ರಜ್ಞಾನ, ಹೃದಯದ ತುರ್ತು ಆರೈಕೆಯ ತಂತ್ರಜ್ಞಾನ, ಔದ್ಯೋಗಿಕ ಚಿಕಿತ್ಸೆ, ಆಸ್ಪತ್ರೆಯ ಆಡಳಿತ ಮೊದಲಾದ ನಿರ್ದಿಷ್ಟ ವಿಷಯಗಳಲ್ಲಿ ಪದವಿ ಮಾಡುವ ಅವಕಾಶವಿರುತ್ತದೆ. ಈ ಕೋರ್ಸ್‌ಗಳಿಗೆ ಸೇರಲಿಚ್ಛಿಸುವವರು ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಷಯದಲ್ಲಿ ಕನಿಷ್ಠ ಶೇ. 50ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಈ ಕೋರ್ಸ್ ನಮ್ಮ ರಾಜ್ಯದ ಬಹತೇಕ ಎಲ್ಲ ಸರ್ಕಾರಿ ಹಾಗೂ ಕೆಲವು ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಲಭ್ಯವಿದೆ. ಆಸಕ್ತ ವಿದ್ಯಾರ್ಥಿಗಳು ರಾಜೀವ್ ಗಾಂಧಿ ವಿಶ್ವ ವಿದ್ಯಾನಿಲಯದ ಜಾಲತಾಣದಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಸಾಮಾನ್ಯವಾಗಿ ಜುಲೈ– ಆಗಸ್ಟ್ ತಿಂಗಳಿನಲ್ಲಿ ವಿಶ್ವ ವಿದ್ಯಾನಿಲಯವು ಈ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸುತ್ತದೆ. ಖಾಸಗಿ ಕಾಲೇಜುಗಳಲ್ಲಿ ನೇರವಾಗಿ ಪ್ರವೇಶ ಪಡೆಯಬಹುದು.

ಡಿಪ್ಲೊಮ ಕೋರ್ಸ್: ಸುಮಾರು 10 ವಿಶೇಷ ವಿಷಯಗಳಲ್ಲಿ ಲಭ್ಯವಿದ್ದು, ಇದು ಎರಡು ವರ್ಷದ ಅವಧಿಯದ್ದಾಗಿರುತ್ತದೆ. ಈ ಕೋರ್ಸ್‌ಗಳಲ್ಲಿ ಪ್ರಯೋಗಾಲಯ, ನೇತ್ರಶಾಸ್ತ್ರ, ಶಸ್ತ್ರ ಚಿಕಿತ್ಸಾ ಕೊಠಡಿ, ಎಕ್ಸ್ ರೇ, ವೈದ್ಯಕೀಯ ದಾಖಲೆ, ಡಯಾಲಿಸಿಸ್, ಹಲ್ಲುಗಳ ಯಂತ್ರಶಾಸ್ತ್ರ, ದಂತ ನೈರ್ಮಲ್ಯ ಹಾಗೂ ಆರೋಗ್ಯ ತನಿಖಾಧಿಕಾರಿ ತರಬೇತಿ ವಿಷಯಗಳಲ್ಲಿ ಸೂಕ್ತ ಶಿಕ್ಷಣ ಹಾಗೂ ತರಬೇತಿಯನ್ನು ಪಡೆದುಕೊಳ್ಳಬಹುದು. ಈ ಕೋರ್ಸ್‌ಗೆ ಕೂಡ ವಿದ್ಯಾರ್ಥಿಗಳು ವಿಜ್ಞಾನ ವಿಷಯ ತೆಗೆದುಕೊಂಡು ಪಿ.ಯು.ಸಿ.ಯಲ್ಲಿ ತೇರ್ಗಡೆಯಾಗಿರಬೇಕು. ಎಸ್.ಎಸ್.ಎಲ್.ಸಿ. ನಂತರ ಕೂಡ ಈ ಕೋರ್ಸ್ ಅನ್ನು ಓದಬಹುದು. ಆದರೆ ಆಗ ಇದರ ಅವಧಿ ಮೂರು ವರ್ಷಗಳದ್ದಾಗಿರುತ್ತದೆ.

ಜಿ.ಎನ್.ಎಮ್. (ಜನರಲ್‌ ನರ್ಸರಿ ಆ್ಯಂಡ್‌ ಮಿಡ್‌ವೈಫ್‌) ಕೋರ್ಸ್: ಕರ್ನಾಟಕ ರಾಜ್ಯ ನರ್ಸಿಂಗ್ ಡಿಪ್ಲೊಮ ಮಂಡಳಿಯ ಅಡಿಯಲ್ಲಿ ನರ್ಸಿಂಗ್‌ನಲ್ಲಿ ಡಿಪ್ಲೊಮ (ಜಿ.ಎನ್.ಎಮ್.) ಮಾಡುವ ಅವಕಾಶವಿದ್ದು ಈ ಕೋರ್ಸ್‌ಗೆ ಯಾವುದೇ ವಿಷಯದಲ್ಲಿ ಪಿಯುಸಿಯಲ್ಲಿ ತೇರ್ಗಡೆಯಾದವರೂ ಸೇರಿಕೊಳ್ಳಬಹುದು.

ಸರ್ಟಿಫಿಕೇಟ್ ಕೋರ್ಸ್: ಇದೇ ವಿಷಯಗಳಲ್ಲಿ ಸರ್ಟಿಫಿಕೇಟ್‌ ಕೋರ್ಸ್‌ ರಾಜ್ಯದ ಕೆಲವು ಆಸ್ಪತ್ರೆ ಹಾಗೂ ಸಂಸ್ಥೆಗಳಲ್ಲಿ ಲಭ್ಯವಿದ್ದು ಎರಡು ವರ್ಷದ ತರಬೇತಿಯೊಂದಿಗೆ ಪ್ರಮಾಣ ಪತ್ರವನ್ನೂ ಪಡೆಯಬಹುದು.

ವೃತ್ತಿ ಅವಕಾಶಗಳು
ಇಂತಹ ಕೋರ್ಸ್‌ಗಳನ್ನು ಮುಗಿಸಿದವರಿಗೆ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಒಳ್ಳೆಯ ಭವಿಷ್ಯವಿದೆ. ನೀವು ಆರಿಸಿಕೊಂಡ ವಿಷಯಕ್ಕೆ ಅನುಗುಣವಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ, ಸರ್ಕಾರಿ ಕ್ಷಯ ರೋಗ ಹಾಗೂ ಏಡ್ಸ್ ಕೇಂದ್ರಗಳಲ್ಲಿ, ರಕ್ತ ನಿಧಿಗಳಲ್ಲಿ, ವೈದ್ಯಕೀಯ ಪ್ರಯೋಗಾಲಯಗಳಲ್ಲಿ (ಡಯಾಗ್ನೋಸ್ಟಿಕ್ ಸೆಂಟರ್), ಡಯಾಲಿಸಿಸ್ ಕೇಂದ್ರಗಳಲ್ಲಿ, ಕಣ್ಣಿನ ಆಸ್ಪತ್ರೆಗಳಲ್ಲಿ, ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗಳಲ್ಲಿ, ವೈದ್ಯಕೀಯ - ದಂತ ವೈದ್ಯಕೀಯ ಕಾಲೇಜುಗಳಲ್ಲಿ ಹಾಗೂ ದಂತ ಚಿಕಿತ್ಸಾ ಪ್ರಯೋಗಾಲಯಗಳಲ್ಲಿ ಉದ್ಯೋಗದ ಅವಕಾಶವಿರುತ್ತದೆ. ಪ್ರಾಯೋಗಿಕ ನೈಪುಣ್ಯವನ್ನು ಸಾಧಿಸಿದರೆ ಅಂತಹವರಿಗೆ ತುಸು ಹೆಚ್ಚೇ ಬೇಡಿಕೆಯಿರುತ್ತದೆ.

ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಶಿಕ್ಷಣ
ಆಸ್ಪತ್ರೆಗಳಲ್ಲಿ ರೋಗಿಗೆ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಆತನನ್ನು ಬಾಧಿಸುವ ಕಾಯಿಲೆಯ ಪತ್ತೆಯಾಗಬೇಕು. ಕಾಯಿಲೆಯ ಪತ್ತೆಗೆ ರೋಗಿಯ ರಕ್ತ, ಮಲ, ಮೂತ್ರ, ಇತರ ಸ್ರವಿಕೆಗಳು, ಕಫ ಮೊದಲಾದವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನೋಡಬೇಕು. ಆ ಎಲ್ಲ ತಪಾಸಣೆಗಳ ವರದಿಯನ್ನು ಪರಿಶೀಲಿಸಿದ ಮೇಲೆಯೇ ವೈದ್ಯರು ರೋಗಿಗೆ ಸೂಕ್ತ ಚಿಕಿತ್ಸೆಯನ್ನು ಕೊಡುವುದು ಸಾಧ್ಯ. ಈ ಎಲ್ಲ ಪರೀಕ್ಷೆಗಳನ್ನು ಪ್ರಯೋಗಾಲಯದಲ್ಲಿ ಮಾಡಿ ವರದಿ ಕೊಡುವವರು ಪ್ರಯೋಗಾಲಯ ತಂತ್ರಜ್ಞರು. ಹಾಗೆಯೇ ರಕ್ತನಿಧಿಯಲ್ಲಿ ನಿಮ್ಮ ರೋಗಿಗೆ ಬೇಕಾದ ರಕ್ತವನ್ನು ಹೊಂದಿಸಿ ನೋಡಿಕೊಡುವವರೂ ಸಹ ಪ್ರಯೋಗಾಲಯ ತಂತ್ರಜ್ಞರೇ.

ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಬಿ.ಎಸ್ಸಿ. ಪದವಿ, ಡಿಪ್ಲೊಮ ಮತ್ತು ಪ್ರಮಾಣ ಪತ್ರದ ಕೋರ್ಸ್ ಮಾಡಬಹುದು. ಬಿ.ಎಸ್ಸಿ. ಮೂರು ವರ್ಷ, ಡಿಪ್ಲೊಮ ಎರಡು ವರ್ಷ ಹಾಗೂ ಭಾರತ್ ಸೇವಕ್ ಸಮಾಜ್ (ಬಿ.ಎಸ್.ಎಸ್.) ಪ್ರಮಾಣ ಪತ್ರದ ಕೋರ್ಸ್ ಎರಡು ವರ್ಷ ಅವಧಿಯದ್ದಾಗಿರುತ್ತದೆ. ಬಿ.ಎಸ್ಸಿ. ಪದವಿ ಕೋರ್ಸ್‌ನಲ್ಲಿ ಮಾನವ ಅಂಗ ರಚನಾ ಶಾಸ್ತ್ರ, ಶರೀರ ಶಾಸ್ತ್ರ, ಜೀವ ವಿಜ್ಞಾನ, ಅಣುಜೀವಿ ಶಾಸ್ತ್ರ, ರೋಗ ಗುಣಲಕ್ಷಣ ಶಾಸ್ತ್ರವನ್ನು ಮುಖ್ಯವಾಗಿ ಅಧ್ಯಯನ ಮಾಡಬೇಕು.

ಇದರೊಂದಿಗೆ ಸಮಾಜ ಶಾಸ್ತ್ರ, ಕಂಪ್ಯೂಟರ್, ಸಂಶೋಧನೆ, ಅಂಕಿ–ಅಂಶ, ಪರಿಸರ ವಿಜ್ಞಾನ ವಿಷಯಗಳ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ. ಮೂರು ವರ್ಷ ಅವಧಿಯಲ್ಲಿ ಈ ಎಲ್ಲ ವಿಷಯಗಳಲ್ಲಿ ಪರಿಣತಿ ಪಡೆಯುತ್ತಲೇ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಾ ಪ್ರಾಯೋಗಿಕ ಅಂಶಗಳನ್ನು ಕಲಿಯಬೇಕಾಗುತ್ತದೆ. ಪ್ರಯೋಗಾಲಯದಲ್ಲಿ ಉಪಯೋಗಿಸಲ್ಪಡುವ ವಿವಿಧ ಉಪಕರಣಗಳ ಕಾರ್ಯ ವೈಖರಿಯ ಬಗ್ಗೆಯೂ ಇಲ್ಲಿ ತಿಳಿಸಿಕೊಡಲಾಗುತ್ತದೆ.

(ಲೇಖಕಿ ಶಿವಮೊಗ್ಗದಲ್ಲಿ ಪೆಥಾಲಜಿಸ್ಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT