ಭಾನುವಾರ, ಏಪ್ರಿಲ್ 2, 2023
32 °C

ಪಿಯುಸಿ ಓದಿಗೆ ಕಾಲೇಜಿನ ಆಯ್ಕೆ ಹೀಗಿರಲಿ...

ಗುರುರಾಜ್‌ ಎಸ್‌. ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಶಿಕ್ಷಣತಜ್ಞ ಎಚ್.ನರಸಿಂಹಯ್ಯ ‘ಪಿಯುಸಿ’ ಯನ್ನು ‘ಪ್ಯುಪಿಲ್ ಅಂಡರ್ ಕನ್ಫ್ಯೂಶನ್’ ಎನ್ನುತ್ತಿದ್ದರು. ಈಗ ಪೋಷಕರು, ತಮ್ಮ ಮಕ್ಕಳ ಓದಿಗಾಗಿ ಯಾವ ಕೋರ್ಸ್, ಕಾಲೇಜು ಸೂಕ್ತ ಎಂದು ಹುಡುಕುತ್ತಿರುವುದನ್ನು ನೋಡಿದರೆ, 'ಪೇರೆಂಟ್ಸ್ ಅಂಡರ್‌‌‌ ಕನ್ಫ್ಯೂಷನ್' ಎನ್ನುವಂತಾಗಿದೆ. ಪೋಷಕರು–ಮಕ್ಕಳಲ್ಲಿರಬಹುದಾದ ಇಂಥ ಹಲವು ಗೊಂದಲಗಳಿಗೆ ಈ ಲೇಖನದಲ್ಲಿ ಉತ್ತರಿಸುವ ಪ್ರಯತ್ನ ಮಾಡಲಾಗಿದೆ.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗೆ ಆರು ವಾರಗಳು ಬಾಕಿ ಇವೆ. ಆದರೆ ವಿದ್ಯಾರ್ಥಿಗಳ ಪೋಷಕರು ಕಾಲೇಜುಗಳ ಎಡತಾಕಿ, ಏನೇನು ಕಾಂಬಿನೇಶನ್‌ಗಳಿವೆ, ಯಾವ ಭಾಷೆ ಬೋಧಿಸುತ್ತೀರಿ, ಕೋ ಎಜುಕೇಶನ್ನಾ? ಎಂದು ಕೇಳುತ್ತಿದ್ದಾರೆ. ‌

ಇಂಟೆಗ್ರೇಟೆಡ್ ಕೋಚಿಂಗ್ ಇದೆಯಾ? ಕಾಲೇಜು ಪಾಠದ ಜೊತೆ ಹೆಚ್ಚುವರಿ ಪಾಠದ ಅವಶ್ಯಕತೆ ಇದೆಯಾ? ಎಂದು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಸಿ.ಎ ಪರೀಕ್ಷೆಗೆ ತರಬೇತಿ ನೀಡುತ್ತೀರಾ, ನೀಟ್, ಜೆಇಇ ಕೋಚಿಂಗ್ ಇದೆಯಾ? ಸಿಲಬಸ್ ಯಾವಾಗ ಮುಗಿಸುತ್ತೀರಿ?  ಎಂದು ವಿಚಾರಿಸುತ್ತಿದ್ದಾರೆ.

ಪ್ರಥಮ ಪಿಯುಸಿಗೆ ಪಬ್ಲಿಕ್ ಪರೀಕ್ಷೆನಾ? ಸ್ಟೇಟ್ ಸಿಲಬಸ್ ಅಥವಾ ಸಿಬಿಎಸ್‌ಸಿ ಸಿಲಬಸ್ ಕಲಿಸುತ್ತೀರಾ? ವಾಹನ ಸೌಲಭ್ಯ ಇದೆಯಾ? ಒಂದು ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳನ್ನು ಕೂಡಿಸುತ್ತೀರಿ? ಪ್ರಯೋಗಾಲಯಗಳಲ್ಲಿ ಅಗತ್ಯ ಸಲಕರಣೆಗಳಿವೆಯಾ? ಹೀಗೆ ಪ್ರಶ್ನೆಗಳ ಪಟ್ಟಿ ಹಿಡಿದುಕೊಂಡೇ ಸುತ್ತಾಡುತ್ತಿದ್ದಾರೆ !

‘ಕೆಲವರು ನಮ್ಮ ಮಗ ಕಿರಿಯರ ಕ್ರಿಕೆಟ್‌ ಟೀಂನಲ್ಲಿ ರಾಜ್ಯಮಟ್ಟದ ಸ್ಪರ್ಧಿ. ಅವನಿಗೆ ಮಧ್ಯಾಹ್ನದ ಹೊತ್ತು ಕೋಚಿಂಗ್ ಇರುತ್ತದೆ. ಆಗೆಲ್ಲ ಕ್ಲಾಸಿಗೆ ಬರಲ್ಲ. ಅಟೆಂಡೆನ್ಸ್‌ ಕೊಡ್ತೀರಾ’ ಎಂದು ಪ್ರಶ್ನೆ ಕೇಳುತ್ತಾರೆ. ಪತಿ–ಪತ್ನಿಯರಿಬ್ಬರೂ ಕೆಲಸಕ್ಕೆ ಹೋಗುವವರು, ಶಿಕ್ಷಣ ಸಂಸ್ಥೆಗಳಲ್ಲಿ ವಸತಿ ಸೌಲಭ್ಯ ಸೌಲಭ್ಯವಿದೆಯಾ? ಎಂದು ಕೇಳುತ್ತಾರೆ.

‘ಪಿಸಿಎಂಬಿ ಒಳ್ಳೆಯದಾ? ಅಥವಾ ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ಸ್‌ ಕೊಡಿಸಬೇಕಾ? ಐ.ಟಿ ಉದ್ಯೋಗ ಕಡಿಮೆಯಾಗಿದೆ. ಕೆಲಸ ಸಿಗುತ್ತಾ?. ಕಾಮರ್ಸ್‌ನಲ್ಲಿ ಕರಿಯರ್‌ ಆಯ್ಕೆ ಏನು? ಆರ್ಟ್ಸ್‌ನಲ್ಲಿ ಸೈಕಾಲಜಿ ಬೇಕು. ಮಗ ಗಣಿತದಲ್ಲಿ ಸ್ವಲ್ಪ ವೀಕು. ಆದರೆ ವಿಜ್ಞಾನ ಇಷ್ಟ...’ ಹೀಗೆ ಪೋಷಕರ ಪಟ್ಟಿ ಬೆಳೆಯುತ್ತ ಹೋಗುತ್ತದೆ.

ಕಾಲೇಜಿನ ಆಯ್ಕೆ ಹೀಗಿರಲಿ...

*ವಿಜ್ಞಾನ ವಿಷಯ ಓದಬೇಕೆನ್ನುವ ವಿದ್ಯಾರ್ಥಿಗಳು ಸುಸಜ್ಜಿತ ಪ್ರಯೋಗಾಲಯ ಮತ್ತು ನುರಿತ ಅಧ್ಯಾಪಕರಿರುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಬಗ್ಗೆ ತಿಳಿಯಲು ಪೋಷಕರು ಕಾಲೇಜುಗಳನ್ನು ಖುದ್ದಾಗಿ ಸಂದರ್ಶಿಸಬೇಕು. ಅಲ್ಲಿನ ಪ್ರಾಚಾರ್ಯರು, ದಾಖಲಾತಿ ಸಂಯೋಜಕರು, ವಿಭಾಗ ಮುಖ್ಯಸ್ಥರನ್ನು ಭೇಟಿ ಮಾಡಿ, ಸೂಕ್ತ ಅನುಮತಿಯೊಂದಿಗೆ ಪ್ರಯೋಗಾಲಯಗಳನ್ನು ಹೊಕ್ಕು ನೋಡಬೇಕು.  

*ಆರ್ಟ್ಸ್ ಅಥವಾ ಕಾಮರ್ಸ್ ಆಯ್ಕೆ ಮಾಡಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಉತ್ತಮ ಗ್ರಂಥಾಲಯವಿರುವ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬೇಕು.  ಪಠ್ಯಪುಸ್ತಕದಲ್ಲಿರುವ ತಾತ್ವಿಕ ವಿಷಯಗಳು ಅರಿತುಕೊಳ್ಳಲು ಸಾಕಷ್ಟು ಪುಸ್ತಕಗಳು, ನಿಯತಕಾಲಿಕಗಳು ಇರಬೇಕು.

*ಹಂತ ಹಂತದ ಪರೀಕ್ಷೆ ನಡೆಸುವ, ಉತ್ತರ ಪತ್ರಿಕೆ ಮೌಲ್ಯ ಮಾಪನ ಮಾಡುವ, ಅಂಕಪಟ್ಟಿ ವಿತರಿಸುವ, ಪೋಷಕರ ಸಭೆಗಳನ್ನು ನಿಗದಿತವಾಗಿ ಕರೆದು ಕಲಿಕಾ ನ್ಯೂನತೆ ಮತ್ತು ಉತ್ತಮಿಕೆಗಳನ್ನು ಚರ್ಚಿಸುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಿ.

*ವರ್ಷದುದ್ದಕ್ಕೂ ಮಾಡಬೇಕಾದ ಪ್ರಯೋಗಗಳನ್ನು ಕೇವಲ ಒಂದು ತಿಂಗಳಿನಲ್ಲಿ ಕಲಿಸುವ ಕಾಲೇಜುಗಳೂ ಇವೆ. ಮಕ್ಕಳು ನೋಟ್ಸ್ ಬರೆದುಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲವೂ ಟ್ಯಾಬ್‌ನಲ್ಲಿ ಸಿಗುತ್ತವೆ ಎನ್ನುವ ಕಾಲೇಜುಗಳಿಂದ ದೂರವಿರಿ. 

*ಓದಿನಲ್ಲಿ ಹಿಂದುಳಿಯುವ ಮಕ್ಕಳ ಸುಧಾರಣೆಗೆ  ಕೌನ್ಸಿಲಿಂಗ್ ಅವಶ್ಯಕತೆ ಇರುತ್ತದೆ. ಆಪ್ತ ಸಮಾಲೋಚನಾ ವ್ಯವಸ್ಥೆ ಇರುವ ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿರುತ್ತದೆ.

*ಕಾಲೇಜಿನಲ್ಲಿ ಶೇ 75ರಷ್ಟು ಹಾಜರಾತಿ ಇರಲೇಬೇಕೆಂಬ ಕಠಿಣ ನಿಯಮವಿದೆ. ಇದನ್ನು ಪಾಲಿಸುವ ಕಾಲೇಜುಗಳಿಗೆ ಮಾತ್ರ ಮಕ್ಕಳನ್ನು ಸೇರಿಸುವುದು ಒಳಿತು. 

ದೇಶದಾದ್ಯಂತ ಒಂದೇ ಸಿಲಬಸ್

ಪದವಿ ಪೂರ್ವ ಶಿಕ್ಷಣ ಬೋಧಿಸುವ ಎಲ್ಲಾ ರಾಜ್ಯಗಳು ಎನ್‌ಸಿಇಅರ್‌ಟಿ ಪಠ್ಯಕ್ರಮವನ್ನು ಬೋಧಿಸುತ್ತವೆ. ಸ್ಟೇಟ್ ಸಿಲಬಸ್ ಮತ್ತು ಸೆಂಟ್ರಲ್ ಸಿಲಬಸ್ ಎಂಬ ಭೇದಗಳಿಲ್ಲ. ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳ 11ಮತ್ತು 12ನೇ ತರಗತಿಯ ಪಠ್ಯಕ್ರಮಕ್ಕೂ ನಮ್ಮ ರಾಜ್ಯದ ಪಿಯುಸಿ ಪಠ್ಯಕ್ರಮಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಆದರೆ ಪರೀಕ್ಷಾ ವಿಧಾನಗಳು ಮಾತ್ರ ಬೇರೆ ಬೇರೆಯಾಗಿರುತ್ತವೆ.

ಓದಲು ಸಮಯ ಬೇಕು

ಯಾವುದೇ ಪದವಿ ಪೂರ್ವ ಕಾಲೇಜಿನಲ್ಲಿ ದಿನಕ್ಕೆ ಆರರಿಂದ ಎಂಟು ತಾಸುಗಳು ಶೈಕ್ಷಣಿಕ ಚಟುವಟಿಕೆ ನಡೆಯುತ್ತದೆ. ತಾತ್ವಿಕ -ಪ್ರಾಯೋಗಿಕ ತರಗತಿ, ಅಸೈನ್‌ಮೆಂಟ್, ಪರಿಹಾರ ಬೋಧನೆ, ಎನ್‌ರಿಚ್‌ಮೆಂಟ್ ಕೋಚಿಂಗ್, ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳ ತರಬೇತಿ, ಕಿರು, ಮಧ್ಯ, ಪೂರ್ವಭಾವಿ ಅಂತಿಮ ಪರೀಕ್ಷೆಗಳಿರುತ್ತವೆ. ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರವಾಸಗಳಿರುತ್ತವೆ. ಎಸ್‌ಎಸ್‌ಎಲ್‌ಸಿ ಗೆ ಹೋಲಿಸಿದರೆ ಪಿಯುಸಿ ಸಿಲಬಸ್ ಸವಾಲಿನದ್ದು. ಉತ್ತಮ ಅಂಕಗಳಿಸಲು ಹೆಚ್ಚಿನ ಶ್ರಮ ಪಡಬೇಕು. ಅದಕ್ಕಾಗಿ ಹೆಚ್ಚಿನ ಸಮಯ ಬೇಕು. ಕಾಲೇಜಿನ ನಂತರ ಮಕ್ಕಳು ಟ್ಯೂಶನ್‌ಗೆ ಹೋಗಬೇಕೆಂದು ಬಯಸುವವರು ಮನೆಯ ಸಮೀಪದ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಸೂಕ್ತ.

ಚಿಕ್ಕ ತರಗತಿ, ಚೊಕ್ಕ ಪಾಠ

ತರಗತಿಯಲ್ಲಿನ ವಿದ್ಯಾರ್ಥಿಗಳೆಷ್ಟು ಎಂಬುದನ್ನೂ ತಿಳಿದುಕೊಳ್ಳಿರಿ. 80, 100 ಅಥವಾ ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕೂರಿಸಿ ಕೊಂಡು ಏನೇ ಪಾಠ ಮಾಡಿದರೂ ವಿದ್ಯಾರ್ಥಿಗಳಿಗೆ ಸರಿಯಾಗಿ ಅರ್ಥವಾಗುವುದಿಲ್ಲ. ಮೂಲಸೌಲಭ್ಯಗಳ ಕೊರತೆ ಇರುವ ಅನೇಕ ಕಾಲೇಜುಗಳಲ್ಲಿ ಈ ಸಮಸ್ಯೆ ಇದೆ. ಉಪನ್ಯಾಸಕ ವಿದ್ಯಾರ್ಥಿ ಅನುಪಾತ 50:1 ಇದ್ದರಷ್ಟೇ ಒಳಿತು.

ಬೋಧನಾ ಮಾಧ್ಯಮ ಬಹಳ ಮುಖ್ಯ

ಹೈಸ್ಕೂಲಿನವರೆಗೆ ಮಗುವಿನ ಶಿಕ್ಷಣ ಆಂಗ್ಲ ಮಾಧ್ಯಮದಲ್ಲೇ ಆಗಿದ್ದರೆ ಇದರಿಂದ ಪಿಯುಸಿ ವಿಜ್ಞಾನ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಆದರೆ, ಕನ್ನಡ ಮಾಧ್ಯಮದಲ್ಲಿ ಓದಿದವರು ಆಂಗ್ಲ ಮಾಧ್ಯಮದ ವಿಜ್ಞಾನ ಶಿಕ್ಷಣಕ್ಕೆ ಹೊಂದಿಕೊಳ್ಳಲು ವಿಶೇಷ ಶ್ರಮ ವಹಿಸಬೇಕಾಗುತ್ತದೆ. ಏಕೆಂದರೆ ರಾಜ್ಯದಾದ್ಯಂತ ಪಿಯುಸಿ ವಿಜ್ಞಾನ ಶಿಕ್ಷಣ ಬೋಧಿಸುವ ಕಾಲೇಜುಗಳ ಬೋಧನಾ ಮಾಧ್ಯಮ ಇಂಗ್ಲಿಷ್ ಆಗಿದೆ.

ಗ್ರಾಮೀಣ ಹಾಗೂ ತಾಲ್ಲೂಕು ಕೇಂದ್ರಗಳ ಕೆಲ ಕಾಲೇಜುಗಳಲ್ಲಿ ಕನ್ನಡದಲ್ಲಿ ಬೋಧನೆ ನಡೆಯುತ್ತದೆ ಯಾದರೂ ವಾರ್ಷಿಕ ಪರೀಕ್ಷೆಯನ್ನು ಆಂಗ್ಲ ಮಾಧ್ಯಮದಲ್ಲೇ ಬರೆಯಬೇಕಾಗುತ್ತದೆ. ಆರ್ಟ್ಸ್ ಮತ್ತು ಕಾಮರ್ಸ್ ವಿಭಾಗದವರು ಕನ್ನಡದ ಮಾಧ್ಯಮದಲ್ಲಿಯೇ ಕಲಿಯಬಹುದು ಮತ್ತು ಪರೀಕ್ಷೆ ಎದುರಿಸಬಹುದು.

ಇನ್ನಷ್ಟು ಟಿಪ್ಸ್

*ಕಾಲೇಜು ಹತ್ತು - ಹದಿನೈದು – ಇಪ್ಪತ್ತೈದು ವರ್ಷಗಳಷ್ಟು ಹಳೆಯದಾಗಿದ್ದರೆ ಕಳೆದ ಐದು ವರ್ಷಗಳ ದ್ವಿತೀಯ ಪಿಯುಸಿ ಫಲಿತಾಂಶ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಿ. ಉತ್ತೀರ್ಣ  ಪ್ರಮಾಣ ಶೇ 50ಕ್ಕಿಂತ ಕಡಿಮೆ ಇರುವ ಕಾಲೇಜುಗಳು ಬೇಡ.

*ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವ ಉಪನ್ಯಾಸಕರಿಗೆ ಇತರರಿಗಿಂತ ಹೆಚ್ಚು ವಿಷಯ ಜ್ಞಾನವಿರುತ್ತದೆ. ಅಂಥ ಉಪನ್ಯಾಸಕರು ಹೆಚ್ಚಿರುವ ಕಾಲೇಜುಗಳು ನಿಮ್ಮ ಮಗುವಿನ ಪಿಯುಸಿ ಓದಿಗೆ ಅತ್ಯಂತ ಸೂಕ್ತ.

*ಸಿಇಟಿ, ನೀಟ್, ಐಐಟಿ, ಜೆಇಇ ರ‍್ಯಾಂಕಿಂಗ್‌ ಚೆನ್ನಾಗಿರುವ ಕಾಲೇಜುಗಳು ಉತ್ತಮ ಶಿಕ್ಷಣ ನೀಡುತ್ತವೆ. ಆದರೆ ಅಲ್ಲಿನ ಶುಲ್ಕ ದುಬಾರಿ ಇರುತ್ತದೆ. ಸಂದಾಯ ಮಾಡುವ ಶಕ್ತಿ ಇದ್ದರೆ ಮಾತ್ರ ಆಯ್ಕೆ ಮಾಡಿಕೊಳ್ಳಿರಿ.

*ದೇಶದ ರಾಷ್ಟ್ರೀಯ ಹಬ್ಬ, ನಾಡಹಬ್ಬ, ಸಾಂಸ್ಕೃತಿಕ - ಸಾಂವಿಧಾನಿಕ ಮಹತ್ವದ ಹಬ್ಬಗಳನ್ನು ತಪ್ಪದೇ ಅಚರಿಸುವ ಕಾಲೇಜುಗಳು ಉತ್ತಮ ಆಯ್ಕೆ.

*ಸಮವಸ್ತ್ರ ಕಡ್ಡಾಯಗೊಳಿಸಿರುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇಲಾಖೆಯ ನಿಯಮಗಳ ಜೊತೆ ಆಯಾ ಸಂಸ್ಥೆಗಳು ವಿಧಿಸುವ ಕೆಲವು ಆಂತರಿಕ ಷರತ್ತು ಗಳನ್ನು ವಿದ್ಯಾರ್ಥಿಗಳು ಪೂರೈಸಬೇಕಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು