ಶನಿವಾರ, ಜನವರಿ 29, 2022
17 °C

ಸಾಹಿತ್ಯ ರುಚಿಸುವ ಪುಟ್ಟ ಹೆಜ್ಜೆಗಳು: ಮಕ್ಕಳಿಗೆ ಸಾಹಿತ್ಯದ ರುಚಿ ಹತ್ತಿಸಿ

ಭಾರತಿ.ಎ,ಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಶಿಕ್ಷಣವೆಂದರೆ ಪಠ್ಯಪುಸ್ತಕದ ಜ್ಞಾನ ವರ್ಗಾವಣೆಯಷ್ಟೇ ಅಲ್ಲ. ಮಕ್ಕಳು ಪಠ್ಯ ಪುಸ್ತಕಗಳ ಹೊರತಾಗಿಯೂ ಓದುವ, ತಾವೇ ಬರೆಯುವ ಅಭ್ಯಾಸ ರೂಢಿಸಿಕೊಳ್ಳಲು ಪ್ರೇರೇಪಿಸಬೇಕು. ಇದು ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಮೊದಲ ಮೆಟ್ಟಿಲು. ಈ ಹಂತದಲ್ಲಿ ಮಕ್ಕಳ  ಆಸಕ್ತಿಗನುಗುಣವಾದ ಒಂದಿಷ್ಟು ಸಾಹಿತ್ಯ ಕೃತಿಗಳು, ಪತ್ರಿಕೆಗಳ ಮಕ್ಕಳ ಪುರವಣಿಗಳು, ಕೆಲವು ಪುಟಾಣಿ ಸಂಬಂಧಿಸಿದ ಪಾಕ್ಷಿಕ, ಮಾಸ ಪತ್ರಿಕೆಗಳನ್ನು ಓದಲು ಉತ್ತೇಜಿಸಿದರೆ, ಅವರಿಗೆ ಸಾಹಿತ್ಯ ಆಸಕ್ತಿ ಮೂಡುತ್ತದೆ. ಓದು ಮುಂದುವರಿದಂತೆಲ್ಲಾ ತಮ್ಮ ಅನುಭವ ಹಾಗೂ ಕಲ್ಪನೆಗಳನ್ನು ಅಕ್ಷರ ರೂಪಕ್ಕಿಳಿಸಲು ಸಾಧ್ಯ.

ಬರೆಯುವ ವಿಶ್ವಾಸ ಮೂಡಿಸಿ

ಅನೇಕ ಮಕ್ಕಳಲ್ಲಿ ಬರೆಯುವ ಹವ್ಯಾಸವಿರುತ್ತದೆ. ಅದನ್ನು ಪೋಷಕರು, ಶಿಕ್ಷಕರು ಗುರುತಿಸಬೇಕು. ಮಕ್ಕಳಲ್ಲಿ ‘ನಾನೂ ಬರೆಯಬಲ್ಲೆ’ ಎಂಬ ಆತ್ಮವಿಶ್ವಾಸ ಮೂಡಿಸಬೇಕು. ಇದಕ್ಕೆ ಶಾಲೆಯಲ್ಲಿ ಮತ್ತು ಮನೆಯಲ್ಲಿ ಪೂರಕ ವಾತಾವರಣ ಸೃಷ್ಟಿಸುವುದು ಅಗತ್ಯ.

ಕೆಲ ಮಕ್ಕಳಿಗೆ ಪ್ರಾಸಬದ್ಧ ಶಿಶುಗೀತೆಗಳೆಂದರೆ ಬಲು ಇಷ್ಟ. ಅವುಗಳನ್ನು ಆಲಿಸುತ್ತಾ, ಹಾಡುತ್ತಾ ಬೆಳೆಯುವುದರಿಂದ ಅದರಲ್ಲಿನ ಪ್ರಾಸ ಪದಗಳು ಮನಸ್ಸನ್ನು ಬಹಳ ಬೇಗ ತಲುಪುತ್ತವೆ. ಹಾಗಾಗಿ ಮಕ್ಕಳಿಗೆ ಕೆಲವು ಪ್ರಾಸ ಪದಗಳು, ಅದಕ್ಕೆ ಪೂರಕ ಸುಳಿವು ಪದಗಳನ್ನು ಆರಂಭಿಕ ಹಂತದಲ್ಲಿ ನೀಡುವುದರಿಂದ ಬರವಣಿಗೆ ಸುಲಭವಾಗುತ್ತದೆ. ಮೊದ ಮೊದಲು ನಾಲ್ಕು ಸಾಲಿನ ಚುಟುಕಗಳು, ಶಿಶುಪ್ರಾಸಗಳು ಅವರ ಲೇಖನಿಯಲ್ಲಿ ಹೊರಹೊಮ್ಮಿದರೆ ಅದೇ ಚಂದ. ಸಣ್ಣ ಸಣ್ಣ ಬರವಣಿಗೆಗಳೇ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಮುಂದೆ ಕವನ, ಕಥೆ, ಲೇಖನಗಳ ಪುಸ್ತಕ ಪ್ರಕಟ ಮಾಡಲು ಇವೆಲ್ಲಾ ಪುಟ್ಟ ಹೆಜ್ಜೆಗಳು.

ವಾಚನವೂ ಒಂದು ಅಭ್ಯಾಸ

ಓದುವ, ಓದಿದ ವಿಷಯಗಳನ್ನು ವಾಚಿಸುವ ಅಭ್ಯಾಸವೂ ಸಾಹಿತ್ಯ ಅಭಿರುಚಿ ಬೆಳೆಸುವ ಒಂದು ಭಾಗ. ಓದಿದ ಪ್ರಬಂಧ, ಕವಿತೆಯಂತಹ ಸಾಹಿತ್ಯವನ್ನು ಉತ್ತಮವಾಗಿ ವಾಚಿಸುವಂತಹ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು. ವಾಗ್ಮಿಗಳ ಭಾಷಣಗಳನ್ನು ಆಲಿಸಬೇಕು. ಕವಿಗೋಷ್ಠಿಗಳಲ್ಲಿ ಕವಿತಾ ವಾಚನವನ್ನು ಮಕ್ಕಳಿಗೆ ಗಮನಿಸುವಂತೆ ಸೂಚಿಸಬೇಕು. ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಬೇಕು. ಮಕ್ಕಳಲ್ಲಿ ಉತ್ತಮ ವಾಚನ ಕೌಶಲ ಬೆಳೆದಂತೆಲ್ಲಾ ವೇದಿಕೆಗಳಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ತಾವೇ ನಿರರ್ಗಳವಾಗಿ ಭಾಷಣ, ಕವನ ವಾಚನ, ಕಥಾ ನಿರೂಪಣೆಯನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲರು. ಶಾಲಾ ಹಂತದಲ್ಲಿ ಇಂಥ ಸಾಹಿತ್ಯದ ವೇದಿಕೆಗಳನ್ನು ಕಲ್ಪಿಸಿಕೊಟ್ಟರೆ, ಮಕ್ಕಳಲ್ಲಿರುವ ಸಭಾಕಂಪನವನ್ನೂ ದೂರ ಮಾಡಬಹುದು.

ನಮ್ಮದೇ ಶಾಲಾ ಪತ್ರಿಕೆ

ಶಾಲೆಯಲ್ಲಿರುವ ಸಾಹಿತ್ಯಾಸಕ್ತ ಶಿಕ್ಷಕರು ಮಕ್ಕಳಿಂದಲೇ ‘ಶಾಲಾ ಪತ್ರಿಕೆ’ ರೂಪಿಸಬಹುದು. ವಿದ್ಯಾರ್ಥಿಗಳೇ ಒಂದು ಸಂಪಾದಕ ಮಂಡಳಿ ರಚಿಸಿಕೊಂಡು, ಶಿಕ್ಷಕರ ಸಹಭಾಗಿತ್ವದಲ್ಲಿ ಪತ್ರಿಕೆ ಹೊರತರಬಹುದು. ಇದರಿಂದ ಮಾಸ ಪತ್ರಿಕೆ, ತ್ರೈಮಾಸಿಕ ಪತ್ರಿಕೆಗಳ ಮೂಲಕ ಮಕ್ಕಳ ಮನಸ್ಸನ್ನು ಪತ್ರಿಕಾ ಪ್ರಪಂಚಕ್ಕೆ ಅಣಿಗೊಳಿಸಬಹುದು. ಮಕ್ಕಳಲ್ಲಿರುವ ಬರವಣಿಗೆ ಹವ್ಯಾಸಕ್ಕೆ ಪುಷ್ಟಿ ದೊರೆಯುತ್ತದೆ. ಈಗಾಗಲೇ ರಾಜ್ಯದ ಹಲವು ಶಾಲೆಗಳಲ್ಲಿ ಮಕ್ಕಳು, ಶಿಕ್ಷಕರು ಸೇರಿ, ‘ಪೆನ್ಸಿಲ್’, ‘ಮಕ್ಕಳ ಮಂದಾರ’, ‘ಪಾತರಗಿತ್ತಿ’, ‘ಬಹುಮುಖಿ’ ಯಂತಹ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದಾರೆ. ಇವು ಮಕ್ಕಳಲ್ಲಿರುವ ಸಾಹಿತ್ಯಾಸಾಕ್ತಿಯ ಬಿಂಬಗಳಾಗಿವೆ.  

ಭಿತ್ತಿಪತ್ರದೊಂದಿಗೆ ಉತ್ತೇಜನ

ಮಕ್ಕಳು ಬರೆದ ಬರಹಗಳನ್ನು ಶಾಲೆಯಲ್ಲಿರುವವರು ಓದಿ, ಮೆಚ್ಚುಗೆ ಸೂಚಿಸಿದಾಗ ಮತ್ತಷ್ಟು ಬರೆಯಲು ಉತ್ಸಾಹ ಹೆಚ್ಚುತ್ತದೆ. ಮಕ್ಕಳ ಬರಹಗಳನ್ನು ಸ್ಥಳೀಯ ಓದುಗರಿಗೆ ತಲುಪಿಸಲು ಭಿತ್ತಿಪತ್ರ ಅಥವಾ ಬ್ಯಾನರ್‌ಗಳನ್ನು ಮಾಡಿಸಬಹುದು. ಮಕ್ಕಳ ಕೈ ಬರಹವನ್ನೇ ಸ್ಕ್ಯಾನ್ ಮಾಡಿಸಿ, ಭಿತ್ತಿಪತ್ರ ಅಥವಾ ಬ್ಯಾನರ್ ಮಾಡಿ ಊರಿನ ಕೇಂದ್ರ ಸ್ಥಳದಲ್ಲಿ ಪ್ರದರ್ಶಿಸಬಹುದು. ಆಯಾ ಗ್ರಾಮದ ಗ್ರಾಮ ಪಂಚಾಯತಿ ಕಚೇರಿ ಮುಂದೆ ಈ ಬ್ಯಾನರ್‌ಗಳನ್ನು ಪ್ರದರ್ಶಿಸುವುದರಿಂದ ಹೆಚ್ಚು ಜನರನ್ನು ತಲುಪಬಹುದು. ಪ್ರತಿ ತಿಂಗಳಿಗೊಮ್ಮೆ ಹೊಸ ಬರಹಗಳನ್ನು ಹಾಕಿ, ಹೊಸ ಬ್ಯಾನರ್ ಮಾಡುವುದರಿಂದ ಓದುಗರಿಗೂ ಕುತೂಹಲ ಬೆಳೆಯುತ್ತದೆ. ಮಕ್ಕಳಲ್ಲೂ ಹೊಸತನದ ಕ್ರಿಯಾಶೀಲತೆ ಪಡಿಮೂಡುತ್ತದೆ.

ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವುದರಿಂದ ಗ್ರಂಥಾಲಯದ ಸದುಪಯೋಗ ಮಾಡಿಕೊಳ್ಳುವ ಹವ್ಯಾಸ ಬೆಳೆಯುತ್ತದೆ. ‘ಪುಸ್ತಕಗಳಿಗಿಂತ ಒಳ್ಳೆಯ ಮಿತ್ರ ಬೇರೊಬ್ಬರಿಲ್ಲ’ ಎಂಬಂತೆ, ಜೀವನದ ಯಾವುದೇ ಸಂದರ್ಭದಲ್ಲೂ ಒತ್ತಡದ ಸನ್ನಿವೇಶ ಎದುರಾದರೂ, ಪುಸ್ತಕ ಪ್ರೀತಿ ಮನಸ್ಸನ್ನು ನಿರಾಳ ಮಾಡುತ್ತದೆ. ಎಳವೆಯಲ್ಲಿಯೇ ಮಕ್ಕಳಿಗೆ ಸಾಹಿತ್ಯದ ಬೀಜ ಬಿತ್ತಿ ಸಾಹಿತ್ಯದ ಲೋಕದಲ್ಲಿ ಸಮೃದ್ಧವಾಗಿ ಮಕ್ಕಳು ಬೆಳೆಯಲು ಹಿರಿಯರು ಪ್ರೇರೇಪಿಸಬೇಕಿದೆ.

ಅನುದಾನದ ಸಹಕಾರ

ಮಕ್ಕಳಲ್ಲಿ ಕ್ರಿಯಾಶೀಲ ಸಾಹಿತ್ಯದ ಚಟುವಟಿಕೆಗಳನ್ನು ಉದ್ದೀಪನಗೊಳಿಸಲು ಶಾಲೆಗಳಿಗೆ ಆರ್ಥಿಕ ನೆರವು ಅಗತ್ಯ. ಇಂತಹ ಚಟುವಟಿಕೆಗಳಿಗೆ ಸಹಕಾರ ನೀಡುವ ಕೆಲವು ಸಂಸ್ಥೆಗಳಿವೆ. ಅದರಲ್ಲಿ  ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆ ಕೂಡ ಒಂದು. ಈ ಸಂಸ್ಥೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕಲೆ ಮತ್ತು ಸಾಹಿತ್ಯದ ಮೂಲಕ ಪಠ್ಯಂತರ್ಗತ ಕಲಿಕಾ ಪ್ರಯೋಗಗಳನ್ನು ನಡೆಸಲು ಆಸಕ್ತ ಶಿಕ್ಷಕರಿಗೆ ಮತ್ತು ಕಲಾವಿದರಿಗೆ ಅನುದಾನ ನೀಡುತ್ತದೆ. ಆಸಕ್ತರಿಂದ ಅರ್ಜಿ ಆಹ್ವಾನಿಸಿ, ಆಯ್ಕೆ ಪ್ರಕ್ರಿಯೆ ಮೂಲಕ ಆಯ್ದ ಶಾಲೆಗಳಿಗೆ ಈ ನೆರವು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ: https://indiaifa.org/ ನೋಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು