ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೌಢಶಿಕ್ಷಣ: ಶಾಲೆಯಿಂದ ಹೊರಗುಳಿದವರ ಪೈಕಿ ಬಾಲಕಿಯರಿಗಿಂತ ಬಾಲಕರೇ ಅಧಿಕ; ವರದಿ

Last Updated 4 ಜುಲೈ 2021, 10:58 IST
ಅಕ್ಷರ ಗಾತ್ರ

ನವದೆಹಲಿ: ಪ್ರಾಥಮಿಕ ಶಿಕ್ಷಣ (1 ರಿಂದ 5) ಸೇರಿದಂತೆ ಪ್ರೌಢ ಶಿಕ್ಷಣದ ಹಂತದಲ್ಲಿ ಹೆಚ್ಚಿನ ಬಾಲಕರು ಶಾಲೆಯಿಂದ ಹೊರಗುಳಿದಿದ್ದರೆ, 2019-20ರಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ತರಗತಿಗಳಲ್ಲಿ (6 ರಿಂದ 8) ಬಾಲಕರಿಗಿಂತಲೂ ಬಾಲಕಿಯರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಶಿಕ್ಷಣದ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ(UDISE+) ಮಾಹಿತಿ ನೀಡಿದೆ.

ದೇಶದಲ್ಲಿ ಪ್ರೌಢ ಶಿಕ್ಷಣ ಹಂತದಲ್ಲಿ ಶಾಲೆಯಿಂದ ಹೊರಗುಳಿದವರ ದರವು ಶೇ 17 ಕ್ಕಿಂತ ಹೆಚ್ಚಿದ್ದರೆ, ಹಿರಿಯ ಪ್ರಾಥಮಿಕ ಶಿಕ್ಷಣ ತರಗತಿಗಳಲ್ಲಿ (6 ರಿಂದ 8) ಮತ್ತು ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕ್ರಮವಾಗಿ ಶೇ 1.8 ಮತ್ತು 1.5 ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಶಾಲೆಯಿಂದ ಹೊರಗುಳಿದ ಬಾಲಕಿಯರ ಶೇಕಡವಾರು ಪ್ರಮಾಣ 1.2ರಷ್ಟಿದ್ದರೆ, ಬಾಲಕರದ್ದು ಶೇ 1.7ರಷ್ಟಿದೆ. ಅದೇ ರೀತಿ ಪ್ರೌಢಶಿಕ್ಷಣ ಹಂತದಲ್ಲಿ ಬಾಲಕಿಯರಿಗಿಂತ (ಶೇ 18.3) ಬಾಲಕರ (ಶೇ 16.3) ಪ್ರಮಾಣವೇ ಹೆಚ್ಚಾಗಿದೆ.

ಉನ್ನತ ಪ್ರಾಥಮಿಕ ಶಿಕ್ಷಣ ತರಗತಿಗಳಲ್ಲಿ ಶಾಲೆಯಿಂದ ಹೊರಗುಳಿದ ಬಾಲಕರ ಪ್ರಮಾಣ (ಶೇ 1.4) ಬಾಲಕಿಯರಿಗಿಂತ (ಶೇ 2.2) ಕಡಿಮೆಯಾಗಿದೆ. ವರದಿಯ ಪ್ರಕಾರ, ದೇಶದಲ್ಲಿ ಸುಮಾರು 30 ಪ್ರತಿಶತದಷ್ಟು ವಿದ್ಯಾರ್ಥಿಗಳು ಪ್ರೌಢ ಶಿಕ್ಷಣದಿಂದ 11, 12ನೇ ತರಗತಿಗೆ ಸೇರ್ಪಡೆಯಾಗುವುದಿಲ್ಲ.

'ಪೂರ್ವ ಪ್ರಾಥಮಿಕದಿಂದ ಉನ್ನತ ಮಾಧ್ಯಮಿಕ ಹಂತದವರೆಗೆ 15 ಲಕ್ಷಕ್ಕೂ ಹೆಚ್ಚು ಶಾಲೆಗಳು, ಸುಮಾರು 97 ಲಕ್ಷ ಶಿಕ್ಷಕರು ಮತ್ತು 26.5 ಕೋಟಿ ವಿದ್ಯಾರ್ಥಿಗಳಿದ್ದು, ಭಾರತೀಯ ಶಾಲಾ ಶಿಕ್ಷಣ ವ್ಯವಸ್ಥೆಯು ವಿಶ್ವದ ಅತಿದೊಡ್ಡ ವ್ಯವಸ್ಥೆಯಾಗಿದೆ. ಪ್ರೌಢಶಿಕ್ಷಣಕ್ಕೆ 3.8 ಕೋಟಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅವರಲ್ಲಿ ಶೇ 44.3ರಷ್ಟು ಸರ್ಕಾರಿ ಶಾಲೆಗಳಲ್ಲಿ, ಶೇ 20ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮತ್ತು ಸುಮಾರು 35 ಪ್ರತಿಶತದಷ್ಟು ವಿದ್ಯಾರ್ಥಿಗಳು ಖಾಸಗಿ ಅನುದಾನರಹಿತ ಶಾಲೆಗಳಲ್ಲಿದ್ದಾರೆ' ಎಂದು ವರದಿ ತಿಳಿಸಿದೆ.

ಪ್ರಾಥಮಿಕ ಶಿಕ್ಷಣಕ್ಕಾಗಿ ಡಿಐಎಸ್ಇ ಮತ್ತು ಪ್ರೌಢ ಶಿಕ್ಷಣಕ್ಕಾಗಿ ಎಸ್‌ಇಎಂಐಎಸ್ ಅನ್ನು ಸಂಯೋಜಿಸುವ ಮೂಲಕ ಶಿಕ್ಷಣ ಸಚಿವಾಲಯವು 2012-13ರಲ್ಲಿ ಪ್ರಾರಂಭಿಸಿದ ಶಾಲಾ ಶಿಕ್ಷಣದ ಏಕೀಕೃತ ಜಿಲ್ಲಾ ಮಾಹಿತಿ (ಯುಡಿಐಎಸ್ಇ) ವ್ಯವಸ್ಥೆಯು ಶಾಲಾ ಶಿಕ್ಷಣದ ಅತಿದೊಡ್ಡ ನಿರ್ವಹಣಾ ಮಾಹಿತಿ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದು 15 ಲಕ್ಷಕ್ಕೂ ಹೆಚ್ಚು ಶಾಲೆಗಳು, 85 ಲಕ್ಷ ಶಿಕ್ಷಕರು ಮತ್ತು 25 ಕೋಟಿ ಮಕ್ಕಳನ್ನು ಒಳಗೊಂಡಿದೆ.

ಯುಡಿಐಎಸ್‌ಐ+ ಯುಡಿಐಎಸ್ಇಯ ನವೀಕರಿಸಿದ ಮತ್ತು ಸುಧಾರಿತ ಆವೃತ್ತಿಯಾಗಿದೆ.

19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರೌಢ ಶಿಕ್ಷಣ ಹಂತದಲ್ಲಿ (9 ಮತ್ತು 10 ನೇ ತರಗತಿ) ಶಾಲೆಯಿಂದ ಹೊರಗುಳಿದವರ ಪ್ರಮಾಣವು ದೇಶದಲ್ಲಿ ಶಾಲೆಯಿಂದ ಹೊರಗುಳಿದವರ ಒಟ್ಟಾರೆ ದರಕ್ಕಿಂತ (ಶೇ 17.3) ಹೆಚ್ಚಾಗಿದೆ ಎಂದು ವರದಿ ಬಹಿರಂಗಪಡಿಸಿದೆ. ಈ ಪೈಕಿ ತ್ರಿಪುರ, ಸಿಕ್ಕಿಂ, ನಾಗಾಲ್ಯಾಂಡ್, ಮೇಘಾಲಯ, ಮಧ್ಯಪ್ರದೇಶ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಶೇ 25 ಕ್ಕಿಂತಲೂ ಹೆಚ್ಚಾಗಿದೆ. ಇತರೆ ನಾಲ್ಕು ರಾಜ್ಯಗಳಲ್ಲಿ ಶೇ 30ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ.

ಈಶಾನ್ಯ ಮತ್ತು ಪೂರ್ವ ಪ್ರದೇಶಗಳ ಬಹುಪಾಲು ರಾಜ್ಯಗಳು ಹೆಚ್ಚಿನ ದರವನ್ನು ಹೊಂದಿದ್ದರೆ, ದೆಹಲಿಯಲ್ಲೂ ಶೇ 20 ಕ್ಕಿಂತಲೂ ಹೆಚ್ಚಿನ ದರವನ್ನು ಹೊಂದಿದೆ. ಪಂಜಾಬ್ (ಇದು ಶೇ 1.5 ಕ್ಕಿಂತ ಕಡಿಮೆ), ಚಂಡೀಗಢ (ಶೇ 9.5), ಕೇರಳ (ಶೇ 8), ಮಣಿಪುರ (ಶೇ 9.6), ತಮಿಳುನಾಡು (ಶೇ 9.6) ಮತ್ತು ಉತ್ತರಾಖಂಡದಲ್ಲಿ ಶೇ 9.8ರಷ್ಟು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ.

ವರದಿಯ ಪ್ರಕಾರ, ಬಾಲಕಿಯರ ಒಟ್ಟಾರೆ ಶಾಲೆಯಿಂದ ಹೊರಗುಳಿದಿರುವ ದರವು ಬಾಲಕರಿಗಿಂತ ಶೇ 2ರಷ್ಟು ಕಡಿಮೆಯಾಗಿದೆ.

ಪಂಜಾಬ್‌ನಲ್ಲಿ ಶಾಲೆಯಿಂದ ಹೊರಗುಳಿದಿರುವ ಬಾಲಕಿಯರ ದರವು ಶೂನ್ಯವನ್ನು ದಾಖಲಿಸಿದರೆ, ಅಸ್ಸಾಂ (ಶೇ 35.2)ಪ್ರೌಢಶಿಕ್ಷಣ ಹಂತದಲ್ಲಿ ಹೆಚ್ಚಿನ ಪ್ರಮಾಣವನ್ನು ಹೊಂದಿದೆ. ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗುಳಿದ ಬಾಲಕರ ಪ್ರಮಾಣವು ಶೇ 30 ಕ್ಕಿಂತ ಹೆಚ್ಚಿದೆ. ಗೋವಾದಂತಹ ರಾಜ್ಯಗಳಲ್ಲಿ ಬಾಲಕರ (ಶೇ 21.2) ದರವು ಬಾಲಕಿಯರಿಗಿಂತ (ಶೇ 11.8) ಸುಮಾರು ಶೇ 10ರಷ್ಟು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT