ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ಆತಂಕ ಬಿಡಿ, ಚೆನ್ನಾಗಿ ಅಭ್ಯಾಸ ಮಾಡಿ: ಡಿಡಿಪಿಯು ನಾಗಮಲ್ಲೇಶ್‌ ಕಿವಿಮಾತು

22ರಿಂದ ದ್ವಿತೀಯ ಪಿಯು ಪರೀಕ್ಷೆ: ‘ಪ್ರಜಾವಾಣಿ’ ಫೋನ್‌ ಇನ್‌ನಲ್ಲಿ ಡಿಡಿಪಿಯು ನಾಗಮಲ್ಲೇಶ್‌ ಕಿವಿಮಾತು
Last Updated 18 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಪರೀಕ್ಷೆ ಬಗ್ಗೆ ಭಯ, ಅಳುಕು ಬೇಡ. ಚೆನ್ನಾಗಿ ಅಭ್ಯಾಸ ಮಾಡಿ. ರಾತ್ರಿ ಒಳ್ಳೆ ನಿದ್ದೆ ಮಾಡಿ. ಮಾದರಿ ಪ್ರಶ್ನೆಪತ್ರಿಕೆಗಳನ್ನು, ಪರೀಕ್ಷಾ ಕೈಪಿಡಿಗಳನ್ನು ಅಧ್ಯಯನ ಮಾಡಿ. ಧೈರ್ಯ, ವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಉತ್ತಮ ಅಂಕ ಬರುವುದು ಖಚಿತ...

–ಇದೇ 22ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯಲು ಸಜ್ಜಾಗುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಯು) ನಾಗಮಲ್ಲೇಶ್‌ ಅವರು ನೀಡಿದ ಸಲಹೆ ಇದು.

‘ಪ್ರಜಾವಾಣಿ’ಯು ಸೋಮವಾರ ಹಮ್ಮಿಕೊಂಡಿದ್ದ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳು ಪ‍ರೀಕ್ಷಾ ಭಯ, ಮಾಡುತ್ತಿರುವ ಸಿದ್ಧತೆಗಳು, ಪ್ರಶ್ನೆ ಪತ್ರಿಕೆಗಳ ರೂಪುರೇಷೆ, ಪರೀಕ್ಷೆಯನ್ನು ಯಶಸ್ವಿಯಾಗಿ‌ ನಡೆಸಲು ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಡಿಡಿಪಿಯು ಅವರಿಗೆ ಪ್ರಶ್ನೆಗಳನ್ನು ಕೇಳಿದರು. ಎಲ್ಲ ಪ್ರಶ್ನೆಗಳಿಗೂ ವಿವರವಾಗಿ ಉತ್ತರಿಸಿದ ನಾಗಮಲ್ಲೇಶ್‌ ಅವರು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಆತ್ಮಸ್ಥೈರ್ಯ ತುಂ‌ಬಿ: ಗುಂಡ್ಲುಪೇಟೆ ತಾಲ್ಲೂಕಿನ ಲಕ್ಕೂರಿನಿಂದ ಕರೆ ಮಾಡಿದ್ದ ಗಿರೀಶ್‌ ಅವರು, ಪರೀಕ್ಷೆ ಎದುರಿಸುತ್ತಿರುವ ಮಕ್ಕಳಲ್ಲಿ ಉಂಟಾಗಿರುವ ಭಯವನ್ನು ಎದುರಿಸಲು ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಇಲಾಖೆ, ಬೋಧಕರು ವಿದ್ಯಾರ್ಥಿಗ
ಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ವಿನಂತಿಸಿಕೊಂಡರು.

ನಾಗಮಲ್ಲೇಶ್‌ ಅವರು ಪ್ರತಿಕ್ರಿಯಿಸಿ, ‘ಕೋವಿಡ್‌ ಕಾರಣದಿಂದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಪರೀಕ್ಷೆ ನಡೆದಿಲ್ಲ. ಈ ಬಾರಿ ಕೋವಿಡ್‌ ಸಮಸ್ಯೆ ಇಲ್ಲ. ಪಾಠಗಳೆಲ್ಲ ನಡೆದಿವೆ. ಎಂದಿನಂತೆ ಪರೀಕ್ಷೆಗಳು ನಡೆಯಲಿವೆ. ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ಕಾಲೇಜು ಹಂತದಲ್ಲಿ ಎರಡು ಪರೀಕ್ಷೆಗಳನ್ನು ಮಾಡಿದ್ದೇವೆ. ಅಂತಿಮ ಪರೀಕ್ಷೆಯಲ್ಲಿ ಬರುವ ಪ್ರಶ್ನೆ ಪತ್ರಿಕೆಗಳ ರೀತಿಯಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗಿತ್ತು. ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಲ್ಲಿ ಮತ್ತೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ’ ಎಂದರು.

ಪರೀಕ್ಷೆ ಬಗ್ಗೆ ಭಯ, ತಳಮಳ: ಚಾಮರಾಜನಗರ ತಾಲ್ಲೂಕಿನ ಮರಿಯಾಲದಿಂದ ಕರೆ ಮಾಡಿದ್ದ ವಿದ್ಯಾರ್ಥಿ ಶಶಾಂಕ್‌, ‘ಪರೀಕ್ಷೆಯನ್ನು ನೆನೆಸಿಕೊಂಡಾಗ ಗಾಬರಿಯಾಗುತ್ತಿದೆ. ಓದಿದ್ದು ಮರೆತು ಹೋಗುತ್ತಿದೆ. ಏನು ಮಾಡುವುದು’ ಎಂದು ಪ್ರಶ್ನಿಸಿದರು.

‘ಪರೀಕ್ಷೆಯ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಓದುವಾಗ ಕಷ್ಟದ ವಿಷಯಗಳಿಗೆ ಆದ್ಯತೆ ಕೊಡಿ. ಬರೆದು ಕಲಿಯಿರಿ. ಐದಾರು ವರ್ಷಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ, ಪ್ರಶ್ನೆಗಳು ಸರಳವಾಗಿಯೇ ಇರುತ್ತವೆ. ಭಯ ಪಡದೆ ವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಪರೀಕ್ಷೆ ಕಷ್ಟ ಇರಬಹುದು ಎಂದು ಯೋಚಿಸಿಕೊಂಡೇ ಓದಲು ಕುಳಿತರೆ ಓದಿದ್ದು ಅರ್ಥವಾಗದಿರುವ ಸಾಧ್ಯತೆ ಇರುತ್ತದೆ. ಅಂತಹ ಪ್ರಯತ್ನ ಮಾಡಬೇಡಿ’ ಎಂದು ಡಿಡಿಪಿಯು ಕಿವಿ ಮಾತು ಹೇಳಿದರು.

ಪ್ರಶ್ನೆ ಪತ್ರಿಕೆ ಹೇಗಿರುತ್ತದೆ?: ಫೋನ್‌ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿದ ಬಹುತೇಕ ವಿದ್ಯಾರ್ಥಿಗಳು ಹಾಗೂ ಪೋಷಕರ ಪ್ರಶ್ನೆಗಳು ಪ್ರಶ್ನೆಪತ್ರಿಕೆಯ ರೂಪುರೇಷೆಯ ಬಗ್ಗೆಯೇ ಇತ್ತು.

ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡಿನಿಂದ ಕರೆ ಮಾಡಿದ್ದ ಪೋಷಕ ಮಂಜುನಾಥ್‌, ಹನೂರಿನಿಂದ ಕರೆ ಮಾಡಿದ್ದ ವಿದ್ಯಾರ್ಥಿನಿಯರಾದ ಅಮಾನ್‌ ಅಂಜುಂ, ಅಲಿಯಾ ಫಾತಿಮಾ, ಯಳಂದೂರಿನ ವಿದ್ಯಾರ್ಥಿ ಮಹದೇವು, ಚಾಮರಾಜನಗರದ ವಿದ್ಯಾರ್ಥಿನಿಯರಾದ ರಾಜೇಶ್ವರಿ ಬಿ.ಎನ್‌., ಸುಷ್ಮಾ, ಸಂಜನಾ, ಯಳಂದೂರಿನಿಂದ ಕರೆ ಮಾಡಿದ್ದ ಪೋಷಕಿ ಗಾಯತ್ರಿ ಅವರು ‘ಪ್ರಶ್ನೆಪತ್ರಿಕೆಗಳು ಹೇಗಿರಲಿವೆ? ಸರಳ ಪ್ರಶ್ನೆಗಳು ಇರಲಿವೆಯೇ? ಮಾದರಿ ಪ್ರಶ್ನೆ ಪತ್ರಿಕೆಗಳ ಆಧಾರದಲ್ಲಿ ಇಲಾಖೆ ನೀಡಿರುವ ನೀಲನಕ್ಷೆಯಂತೆಯೇ ಇರುತ್ತವೆಯೇ’ ಎಂದು ಪ್ರಶ್ನಿಸಿದರು.

ಎಲ್ಲರ ಪ್ರಶ್ನೆಗಳಿಗೂ ಉತ್ತರಿಸಿದ ನಾಗಮಲ್ಲೇಶ್‌, ‘ಪದವಿ ಪೂರ್ವ ಶಿಕ್ಷಣ ಇಲಾಖೆ ರೂಪಿಸಿರುವ ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ಈಗಾಗಲೇ ನಡೆದಿರುವ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ನೀಡಿರುವ ಪ್ರಶ್ನೆ ಪತ್ರಿಕೆಗಳ ಮಾದರಿಯಲ್ಲೇ ಪ್ರಶ್ನೆ ಪತ್ರಿಕೆ ಇರುತ್ತವೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ’ ಎಂದರು.

ಹೆಚ್ಚುವರಿ ಪ್ರಶ್ನೆಗಳು: ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಬಾರಿಯ ಪ್ರಶ್ನೆಪತ್ರಿಕೆಗಳಲ್ಲಿ ಹೆಚ್ಚವರಿ ಪ್ರಶ್ನೆಗಳು ಇರಲಿವೆ. ಉದಾಹರಣೆಗೆ ಹಿಂದೆ ಒಂದು ಅಂಕದ 12 ಪ್ರಶ್ನೆಗಳನ್ನು ಕೇಳಿ, 10ಕ್ಕೆ ಉತ್ತರ ಬರೆಯುವಂತೆ ಹೇಳಲಾಗುತ್ತಿತ್ತು. ಈ ಬಾರಿ 15 ಪ್ರಶ್ನೆಗಳನ್ನು ಕೇಳಲಾಗುತ್ತದೆ. ವಿದ್ಯಾರ್ಥಿಗಳು 10 ಪ್ರಶ್ನೆಗಳನ್ನು ಉತ್ತರಿಸಿದರೆ ಸಾಕು. ಅದೇ ರೀತಿ, ಎರಡು ಅಂಕ, ಐದು ಅಂಕಗಳ ಪ್ರಶ್ನೆಗಳನ್ನೂ ಹೆಚ್ಚುವರಿಯಾಗಿ ಕೇಳಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಉತ್ತರಿಸಲು ಹೆಚ್ಚು ಆಯ್ಕೆ ಸಿಕ್ಕಿದಂತಾಗುತ್ತದೆ’ ಎಂದರು.

ಚಾಮರಾಜನಗರದಿಂದ ಕರೆ ಮಾಡಿದ್ದ ಸಂಜನಾ ಎಂಬ ವಿದ್ಯಾರ್ಥಿನಿ, ಪರೀಕ್ಷಾ ಕೇಂದ್ರದಲ್ಲಿನ ಆಸನದ ವ್ಯವಸ್ಥೆ ಬಗ್ಗೆ ಪ್ರಶ್ನಿಸಿದರು. ಪ್ರತಿ ಪರೀಕ್ಷೆಗೂ ಕೊಠಡಿಗಳು ಬದಲಾಗುತ್ತವೆಯೇ ಎಂದು ಕೇಳಿದರು.

‘ವಿಷಯ ಆಧರಿತವಾಗಿ ಪರೀಕ್ಷಾ ಕೊಠಡಿಗಳು ಬದಲಾಗಲಿವೆ. ಉದಾಹರಣೆ ಭಾಷಾ ವಿಷಯದ ಪರೀಕ್ಷೆಗಳ ಸಂದರ್ಭದಲ್ಲಿ ಎಲ್ಲ ವಿಭಾಗದ ವಿದ್ಯಾರ್ಥಿಗಳೂ ಇಂದೇ ಕೊಠಡಿಯಲ್ಲಿ ಇರಬಹುದು’ ಎಂದು ಡಿಡಿಪಿಯು ಹೇಳಿದರು.

ಕೋವಿಡ್‌ ನಿಯಮ ಪಾಲನೆ ಕಡ್ಡಾಯ ಅಲ್ಲ

ಕೋವಿಡ್ ಪರಿಸ್ಥಿತಿ ಸಂಪೂರ್ಣವಾಗಿ ತಿಳಿಯಾಗಿರುವುದರಿಂದ ಈ ಬಾರಿಯ ಪರೀಕ್ಷೆಯಲ್ಲಿ ಕೋವಿಡ್‌ ನಿಯಮಗಳ ಪಾಲನೆ ಕಡ್ಡಾಯವಲ್ಲ. ವಿದ್ಯಾರ್ಥಿಗಳು, ಪರೀಕ್ಷಾ ಕರ್ತವ್ಯದಲ್ಲಿರುವವರು ಸ್ವಯಂ ಪ್ರೇರಿತರಾಗಿ ಧರಿಸುವುದಕ್ಕೆ ತೊಂದರೆ ಇಲ್ಲ.

ಕೆಮ್ಮು, ಜ್ವರ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದರು ಮಾಸ್ಕ್‌ ಧರಿಸಿವುದು ಒಳ್ಳೆಯದು. ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ಇರಲಿದ್ದಾರೆ.

ಹೆಚ್ಚುವರಿ ಒಂದು ಗಂಟೆ ಅವಧಿ:ಶೇ 60ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರಿಗೆ ಪರೀಕ್ಷೆ ಬರೆಯಲು ಹೆಚ್ಚುವರಿ ಒಂದು ಗಂಟೆ ಅವಧಿಯನ್ನು ನೀಡಲಾಗುತ್ತದೆ.

ಪೂರ್ಣ ಪ್ರಮಾಣದ ದೃಷ್ಟಿ ದೋಷ ಹೊಂದಿರುವವರು, ಶೇ 80ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿ, ಪರೀಕ್ಷೆ ಬರೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯಲ್ಲಿರುವ ಅಂಗವಿಕಲರಿಗೆ ಪರೀಕ್ಷೆ ಬರೆಯಲು ಸಹಾಯಕರ ನೆರವು ಪಡೆ‌ಯುವುದಕ್ಕೆ ಅವಕಾಶ ಇದೆ.ಬ್ರೈಲ್‌ ಲಿಪಿಯಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಇಲ್ಲ.

ಸಿಸಿಟಿವಿ ಕ್ಯಾಮೆರಾ ಕಣ್ಗಾವಲು: ಪ್ರಶ್ನೆಪತ್ರಿಕೆಗಳ ಕಟ್ಟು ತೆರೆಯುವುದು, ವಿತರಿಸುವುದು, ಉತ್ತರ ಪತ್ರಿಕೆಗಳನ್ನು ಕಟ್ಟುವುದು... ಈ ಎಲ್ಲ ಪ್ರಕ್ರಿಯೆಗಳು ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ನಡೆಯಲಿವೆ.

ಸಮವಸ್ತ್ರ ನಿಯಮ ಪಾಲನೆ:ಯಾವ ಕಾಲೇಜುಗಳಲ್ಲಿ ಸಮವಸ್ತ್ರ ವ್ಯವಸ್ಥೆ ಇದೆಯೋ, ಅಲ್ಲಿನ ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಾಗ ಸಮವಸ್ತ್ರ ಧರಿಸುವುದು ಕಡ್ಡಾಯ. ಪರೀಕ್ಷಾ ಕೊಠಡಿಯೊಳಗೆ ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ ದಿರಿಸು ಧರಿಸುವಂತಿಲ್ಲ.

ನೀರು ತರಬಹುದೇ? ಗಡಿಯಾರ ಕಟ್ಟಬಹುದೇ?

ಚಾಮರಾಜನಗರದ ವಿದ್ಯಾರ್ಥಿನಿ ಗೌರಿ ಕರೆ ಮಾಡಿ, ‘ಪರೀಕ್ಷಾ ಕೊಠಡಿಯೊಳಕ್ಕೆ ನಾವು ನೀರು ತೆಗೆದುಕೊಂಡು ಬರಬಹುದೇ? ಕೈಗಡಿಯಾರ ಕಟ್ಟಬಹುದೇ’ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಡಿಡಿಪಿಯು, ‘ನೀರು ತೆಗೆದುಕೊಂಡು ಬರುವುದಕ್ಕೆ ಅವಕಾಶ ಇದೆ. ನಾವು ಕೂಡ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆ. ಸಾಮಾನ್ಯ ಕೈಗಡಿಯಾರ ಕಟ್ಟಿಕೊಂಡು ಬರುವುದಕ್ಕೆ ತೊಂದರೆ ಇಲ್ಲ. ಆದರೆ, ಎಲೆಕ್ಟ್ರಾನಿಕ್‌ ಗಡಿಯಾರಗಳಿಗೆ ನಿರ್ಬಂಧ ಇದೆ. ಕ್ಯಾಲ್ಕುಲೇಟರ್‌ ತರುವಂತಿಲ್ಲ’ ಎಂದರು.

ಗಣಿತ ಪರೀಕ್ಷೆ ಕಷ್ಟ ಇರಬಹುದೇ?

ಯಳಂದೂರಿನ ವಿದ್ಯಾರ್ಥಿ ಹರ್ಷ ಕರೆ ಮಾಡಿ, ‘ಗಣಿತ ವಿಷಯ ಪರೀಕ್ಷೆ ಕಷ್ಟ ಇರಬಹುದೇ’ ಎಂದು ಕೇಳಿದರು.

‘ಯಾವುದೇ ವಿಷಯದ ಪ್ರಶ್ನೆ ಪತ್ರಿಕೆ ಕಷ್ಟವಿರುವುದಿಲ್ಲ. ಎಲ್ಲ ಸರಳವಾಗಿರುತ್ತದೆ. ನಿಮಗೆ ನಿಗದಿ ಪಡಿಸಿದ ಪಠ್ಯದಿಂದಲೇ ಪ್ರಶ್ನೆಗಳನ್ನು ಕೇಳಲಾಗುತ್ತದೆ. ವಿದ್ಯಾರ್ಥಿಗಳಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶ ಇಲಾಖೆಯ ಅಧಿಕಾರಿಗಳಿಗಾಗಲಿ, ಬೋಧಕರಿಗಾಗಲಿ ಇರುವುದಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಶ್ನೆ ಪತ್ರಿಕೆಗಳಲ್ಲಿ ಹೆಚ್ಚುವರಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ವಿಷಯಾವಾರು ಪರೀಕ್ಷಾ ಕೈಪಿಡಿಗಳನ್ನೂ ನೀಡಲಾಗಿದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ಮನಸ್ಸು ಮಾಡಿದರೆ ಶೇ 60ರಷ್ಟು ಅಂಕಗಳನ್ನು ಪಡೆಯುವುದು ಕಷ್ಟವೇನಲ್ಲ’ ಎಂದು ನಾಗಮಲ್ಲೇಶ್‌ ಹೇಳಿದರು.

ನಿರ್ವಹಣೆ: ಸೂರ್ಯನಾರಾಯಣ ವಿ.

ಚಿತ್ರ: ಸಿ.ಆರ್‌.ವೆಂಕಟರಾಮು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT