ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿವಿಲ್‌ ಜಡ್ಜ್‌ ಪರೀಕ್ಷೆಗೆ ಸಿದ್ಧತೆ ಹೇಗೆ?

Last Updated 26 ಫೆಬ್ರುವರಿ 2023, 21:30 IST
ಅಕ್ಷರ ಗಾತ್ರ

lನಾನು ಅಂತಿಮ ವರ್ಷದ ಎಲ್‌ಎಲ್‌ಬಿ ಪದವಿ ಓದುತ್ತಿದ್ದೇನೆ. ವಿದ್ಯಾಭ್ಯಾಸದ ಜೊತೆಗೆ ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆ ಬರೆಯಬಹುದೇ?

ಹೆಸರು, ಊರು ತಿಳಿಸಿಲ್ಲ.

lಕಾನೂನು ಪದವಿಯನ್ನು ಮಾಡಿದ್ದೇನೆ. ಸಿವಿಲ್ ನ್ಯಾಯಾಧೀಶರಾಗಲು ಅರ್ಹತೆಯೇನು? ಮತ್ತು ಜಿಲ್ಲಾ ನ್ಯಾಯಧೀಶರಾಗಲು ಇರುವ ಅರ್ಹತೆಯೇನು?

ಹೆಸರು, ಊರು ತಿಳಿಸಿಲ್ಲ.

ಕಾನೂನು ಪದವಿಯ ನಂತರ ಕಡ್ಡಾಯವಾಗಿ ವಕೀಲರಾಗಿ ನೋಂದಣಿ ಆಗಿರಬೇಕು ಹಾಗೂ ಹೈಕೋರ್ಟ್‌ಗಳು, ಸಿವಿಲ್ ನ್ಯಾಯಾಧೀಶರ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಈ ಪರೀಕ್ಷೆಯಲ್ಲಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಮೌಖಿಕ ಪರೀಕ್ಷೆಯಿರುತ್ತದೆ. ಪೂರ್ವಭಾವಿ ಪರೀಕ್ಷೆಯ ಅಂಕಗಳನ್ನು ಮುಖ್ಯ ಪರೀಕ್ಷೆಯ ಅರ್ಹತೆಗಾಗಿ ಮಾತ್ರ ಪರಿಗಣಿಸಲಾಗುತ್ತದೆ. ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಮತ್ತು ಹೆಚ್ಚಿನ ಮಾಹಿತಿಗಾಗಿ ಗಮನಿಸಿ:

https://karnatakajudiciary.kar.nic.in/recruitmentNotification.php

lನಾನು ಬಿಎ 2ನೇ ವರ್ಷದ ವಿದ್ಯಾರ್ಥಿ. ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಆಗಬೇಕೆಂದುಕೊಂಡಿದ್ದೇನೆ. ಇದಕ್ಕಾಗಿ ತಯಾರಿ ಹೇಗೆ? ಸಮಯದ ನಿರ್ವಹಣೆ ಹೇಗೆ ಮತ್ತು ಯಾವ ರೀತಿ ಓದಬೇಕು? ನಾನು ಕನ್ನಡ ಮಾಧ್ಯಮದಲ್ಲಿ ಓದಿರುವುದರಿಂದ ಇಂಗ್ಲಿಷ್ ಕಷ್ಟವೆನಿಸುತ್ತದೆ. ಯಾವ ರೀತಿ ಇಂಗ್ಲಿಷ್ ಕಲಿಯಬೇಕು ತಿಳಿಸಿ

ಜೆ.ಬಿ. ಕಟ್ಟಿಮನಿ, ಊರು ತಿಳಿಸಿಲ್ಲ.

ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌(ಪಿಎಸ್‌ಐ) ಆಗಲು ಯಾವುದಾದರೂ ಪದವಿಯ ಜೊತೆ ನಾಯಕತ್ವದ ಕೌಶಲ, ದಿಟ್ಟತನ, ಸಹಭಾಗಿತ್ವದ ಕೌಶಲ, ಉತ್ತಮ ಸಂವಹನ, ಪರಿಶೋಧನಾ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳ ಜೊತೆ ಸಕಾರಾತ್ಮಕ ಧೋರಣೆಯಿರಬೇಕು. ಮಾನಸಿಕ ಮತ್ತು ದೈಹಿಕ ಸದೃಢತೆಯಿರಬೇಕು.

ಪ್ರಮುಖವಾಗಿ ಈ ವೃತ್ತಿ ನಿಮಗೆ ಒಪ್ಪುತ್ತದೆಯೇ ಎಂದು ಖಚಿತವಾಗಬೇಕು. ಕರ್ನಾಟಕ ಪೊಲೀಸ್ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ ಮತ್ತು ವಿಷಯಸೂಚಿಗೆ ಗಮನಿಸಿ: https://prepp.in/karnataka-police-exam

ಇಂಗ್ಲಿಷ್ ಭಾಷೆಯನ್ನು ಕಲಿಯುವುದರ ಬಗ್ಗೆ ಕಳೆದ ವರ್ಷದ ಅಕ್ಟೋಬರ್ 3ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಪರಿಣಾಮಕಾರಿ ಓದುವಿಕೆ ಮತ್ತು ಸಮಯದ ನಿರ್ವಹಣೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊಗಳನ್ನು ವೀಕ್ಷಿಸಿ: https://www.youtube.com/@ExpertCareerConsultantAuthor https://www.youtube.com/watch?v=AnAbzbLsFvM

l ನಾನು ಪ್ರಥಮ ವರ್ಷದ ಎಂಎ (ಅರ್ಥಶಾಸ್ತ್ರ) ಓದುತ್ತಿದ್ದೇನೆ. ಇದನ್ನು ಬಿಟ್ಟು ಬಿ.ಇಡಿ ಮಾಡಬೇಕು ಅಂದುಕೊಂಡಿದ್ದೀನಿ. ಯಾವುದು ಮಾಡಿದರೆ ಸೂಕ್ತ?

ಹೆಸರು, ಊರು ತಿಳಿಸಿಲ್ಲ.

ಖಚಿತವಾದ ವೃತ್ತಿಯೋಜನೆಯಿಲ್ಲದೆ ಕೋರ್ಸ್‌ಗಳನ್ನು ಮಾಡಿದರೆ ಇಂತಹ ಗೊಂದಲಗಳು ಸಾಮಾನ್ಯ. ಜೀವನದಲ್ಲಿ ನಿರ್ದಿಷ್ಟವಾದ, ಸ್ಪಷ್ಟವಾದ, ಸಾಧಿಸಬಹುದಾದ, ಮತ್ತು ಅಳೆಯಬಹುದಾದ ಗುರಿಯಿರಬೇಕು. ಬಾಳಿಗೊಂದು ಗುರಿ ಇದ್ದರೆ, ನಮ್ಮಲ್ಲಿರುವ ಸುಪ್ತ ಶಕ್ತಿಗಳನ್ನು ಆ ಗುರಿಯೆಡೆಗೆ ಕೇಂದ್ರೀಕರಿಸಿ, ವೃತ್ತಿಯಲ್ಲಿ ಯಶಸ್ಸು ಮತ್ತು ಜೀವನದಲ್ಲಿ ಸಂತೃಪ್ತಿಯನ್ನು ಪಡೆಯಬಹುದು. ಎಂಎ (ಅರ್ಥಶಾಸ್ತ್ರ) ಮತ್ತು ಬಿ.ಇಡಿ ಸಂಬಂಧಿತ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಜ್ಞಾನ, ಆಸಕ್ತಿ, ಅಭಿರುಚಿ, ಸಾಮರ್ಥ್ಯ ಮತ್ತು ಕೌಶಲಗಳು ವಿಭಿನ್ನ. ಹಾಗಾಗಿ, ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆತ್ಮಸಂತೃಪ್ತಿಯನ್ನು ತಂದುಕೊಡುವ ವೃತ್ತಿಯೋಜನೆಯನ್ನು ಮಾಡಿ ಅದರಂತೆ ಮುಂದಿನ ನಿರ್ಧಾರವನ್ನು ಮಾಡುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ವೀಕ್ಷಿಸಿ: https://www.youtube.com/watch?v=oyUMPrEKPPU

l ನಾನು ಅಂತಿಮ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡುತ್ತಿದ್ದೇನೆ. ಇದಾದ ನಂತರ ಏನು ಮಾಡಬೇಕು ತಿಳಿಯುತ್ತಿಲ್ಲ. ಸಲಹೆ ನೀಡಿ.

ಹೆಸರು, ಊರು ತಿಳಿಸಿಲ್ಲ.

ಸಾಮಾನ್ಯವಾಗಿ ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಪ್ರತಿಭೆಯನ್ನು ಆಧರಿಸಿ ವೃತ್ತಿಯೋಜನೆಯನ್ನು ಮಾಡಿ, ಅದರಂತೆ ಕೋರ್ಸ್ ಆಯ್ಕೆ ಮಾಡಬೇಕು. ವೃತ್ತಿಯೋಜನೆಯನ್ನು ಮಾಡದೆ, ಕೋರ್ಸ್ ಆಯ್ಕೆ ಮಾಡಿದರೆ ಇಂತಹ ಗೊಂದಲಗಳು ಸಾಮಾನ್ಯ.

ಮೆಕ್ಯಾನಿಕಲ್ ಎಂಜಿನಿಯರಿಂಗ್ ನಂತರವಿರುವ
ಈ ಆಯ್ಕೆಗಳನ್ನು ಪರಿಶೀಲಿಸಬಹುದು:

ಕ್ಯಾಂಪಸ್ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.

ನಿಮಗೆ ಆಸಕ್ತಿಯಿರುವ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಲ್ಪಾವಧಿ ವೃತ್ತಿಪರ ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್‌ಗಳನ್ನು ಮಾಡಿ ವೃತ್ತಿಯ ಅವಕಾಶಗಳನ್ನು ಬಳಸಿಕೊಳ್ಳಬಹುದು.

ಹೆಚ್ಚಿನ ತಜ್ಞತೆಗಾಗಿ ಎಂಟೆಕ್/ಎಂಇ
(ಮೆಕ್ಯಾನಿಕಲ್, ಆಟೊಮೊಬೈಲ್, ಏರೊನಾಟಿಕಲ್ ಇತ್ಯಾದಿ) ಮಾಡಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

l ನಾನು ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಇದಾದ ನಂತರ ಬಿ.ಎ, ಎಲ್‌ಎಲ್‌ಬಿ ಮಾಡಬೇಕೆಂದು ಕೊಂಡಿದ್ದೇನೆ. ದಯವಿಟ್ಟು ಆಯ್ಕೆ ಪ್ರಕ್ರಿಯೆ, ಶುಲ್ಕಗಳ ಬಗ್ಗೆ ಮಾರ್ಗದರ್ಶನ ನೀಡಿ.

ಹೆಸರು, ಊರು ತಿಳಿಸಿಲ್ಲ.

ವಕೀಲಿ ವೃತ್ತಿಯನ್ನು ಅನುಸರಿಸಬೇಕೆನ್ನುವ ನಿಮ್ಮ ವೃತ್ತಿಯೋಜನೆ ಖಚಿತವಾಗಿದ್ದಲ್ಲಿ, ಐದು ವರ್ಷದ ಇಂಟಿಗ್ರೇಟೆಡ್ ಬಿಎ, ಎಲ್‌ಎಲ್‌ಬಿ ಕೋರ್ಸ್ ಮಾಡುವುದು ಸೂಕ್ತ. ಸಿಎಲ್‌ಎಟಿ, ಎಲ್‌ಎಸ್‌ಎಟಿ, ಎಐಎಲ್‌ಇಟಿ ಮುಂತಾದ ಪರೀಕ್ಷೆಗಳ ಮೂಲಕ ಕೆಲವು ಸರ್ಕಾರಿ ಕಾಲೇಜುಗಳೂ ಸೇರಿದಂತೆ ಪ್ರತಿಷ್ಟಿತ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ರವೇಶವನ್ನು ಪಡೆಯಬಹುದು. ಕಾಲೇಜು ಶುಲ್ಕ, ಹಾಸ್ಟೆಲ್ ವೆಚ್ಚ ಇತ್ಯಾದಿಗಳು ನೀವು ಯಾವ ಕಾಲೇಜು (ಸರ್ಕಾರಿ, ಖಾಸಗಿ) ಸೇರುತ್ತೀರಿ ಎನ್ನುವುದನ್ನು ಅವಲಂಬಿಸಿರುತ್ತದೆ. ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿಧ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಷಿಪ್ ಸೌಲಭ್ಯಗಳಿವೆ. ಶೈಕ್ಷಣಿಕ ಸಾಲದ ಅವಶ್ಯಕತೆಯಿದ್ದಲ್ಲಿ, ಆಕರ್ಷಕ ಬಡ್ಡಿ ದರ ಮತ್ತು ವಿದ್ಯಾರ್ಥಿ ಸ್ನೇಹಿ ನಿಯಮಗಳೊಂದಿಗೆ ದೇಶದಲ್ಲಿರುವ ಎಲ್ಲಾ ಬ್ಯಾಂಕ್‌ಗಳು ನೀಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT