ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಮಯದಲ್ಲೂಸಾಗುತಿರಲಿ ಸ್ವಯಂ ಅಧ್ಯಯನ

ಅಕ್ಷರ ಗಾತ್ರ

ಕೋವಿಡ್‌ ಸಾಂಕ್ರಾಮಿಕ ಎಲ್ಲರಿಗೂ ಒಂದಿಲ್ಲೊಂದು ಸಮಸ್ಯೆ ಒಡ್ಡಿದೆ. ಸ್ಪರ್ಧಾರ್ಥಿಗಳೂ ಇದಕ್ಕೆ ಹೊರತಾಗಿಲ್ಲ. ಲಾಕ್‌ಡೌನ್‌ ಕಾರಣ ರದ್ದಾದ ಸ್ಪರ್ಧಾತ್ಮಕ ಪರೀಕ್ಷೆಗಳು, ಬಾಗಿಲು ಮುಚ್ಚಿದ ಕೋಚಿಂಗ್ ಕೇಂದ್ರಗಳು, ಬೀಗ ಹಾಕಿದ ಗ್ರಂಥಾಲಯಗಳು, ಅದ್ಯಾವಾಗ ಅಂದುಕೊಂಡ ಗುರಿ ಸಾಧನೆಯೊಂದಿಗೆ ಊರು ಸೇರುತ್ತೇನೆ ಎಂಬ ತವಕ...

ಬೆಂಗಳೂರು, ಧಾರವಾಡ, ಮೈಸೂರು, ವಿಜಯಪುರ, ಕಲಬುರ್ಗಿ… ಮುಂತಾದ ಊರುಗಳಿಗೆ ತರಬೇತಿ ಪಡೆಯಲು ತೆರಳಿರುವ ಲಕ್ಷಾಂತರ ಸ್ಪರ್ಧಾರ್ಥಿಗಳು ಎದುರಿಸುತ್ತಿರುವ ಸಂಕಷ್ಟಗಳಿವು.

ಸರಿಸುಮಾರು ಒಂದು ವರ್ಷದ ಲಾಕ್‌ಡೌನ್‌ ನಂತರ ಆರಂಭವಾಗಿದ್ದ ಕೋಚಿಂಗ್ ಕೇಂದ್ರಗಳು ಮತ್ತೆ ಬಾಗಿಲು ಮುಚ್ಚಿವೆ. ಕೋವಿಡ್‌ ಅಬ್ಬರ ಮತ್ತೊಮ್ಮೆ ಹೆಚ್ಚಾಗಿದೆ. ಹೀಗಾಗಿ, ಸ್ಪರ್ಧಾರ್ಥಿಗಳು ತಮ್ಮೂರಿಗೆ ಮರಳಬೇಕಾದ ಅಥವಾ ಈಗಿರುವ ಊರಿನಲ್ಲಿಯೇ ಸುರಕ್ಷಿತವಾಗಿ ಇರಬೇಕಾದ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಂಥ ಪರಿಸ್ಥಿತಿಯಲ್ಲಿ ಸ್ಪರ್ಧಾರ್ಥಿಗಳು ತಮ್ಮ ಭವಿಷ್ಯಕ್ಕೆ ತಾವೇ ಹೊಣೆಗಾರರು ಎಂಬುದನ್ನು ಅರಿತು ಸ್ವಯಂ ಅಧ್ಯಯನದಲ್ಲಿ ತೊಡಗುವುದೇ ಜಾಣ್ಮೆ. ಸ್ವಯಂ ಅಧ್ಯಯನಕ್ಕೆ ನೆರವಾಗುವ ಕೆಲ ಅಂಶಗಳು ಹೀಗಿವೆ.

ಮೊಬೈಲ್, ಅಂತರ್ಜಾಲ ಸದ್ಬಳಕೆ ಮಾಡಿಕೊಳ್ಳಿ

ಈಗ ಹೆಚ್ಚು ಕಡಿಮೆ ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್‌ಫೋನ್‌ ಇದೆ. ಅದನ್ನು ಬಳಸಿಕೊಂಡು ಅಧ್ಯಯನಕ್ಕೆ ಅತ್ಯುಪಯುಕ್ತವಾದ gktoday, testbook, sarkariexam, jagranjosh, careerpower, collegedunia, adda247, gradeup, embibe, indiatoday, examsdaily, nextias ನಂಥ ಜಾಲತಾಣಗಳಿಗೆ ಭೇಟಿ ನೀಡಿ, ದಿನನಿತ್ಯದ ಅಪ್‌ಡೇಟ್‌ ಆಧರಿಸಿ ನೋಟ್ಸ್‌ ಮಾಡಿಟ್ಟುಕೊಳ್ಳಿ. kpsc, upsc, ibps, ssc, railways ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ. ಉದ್ಯೋಗಾವಕಾಶಗಳು, ಪಠ್ಯಕ್ರಮ, ಅರ್ಹತೆಗಳ ಮಾಹಿತಿ ಪಡೆಯಿರಿ.

ಉತ್ತಮ ಆಕರ ಗ್ರಂಥಗಳನ್ನು ಓದಿ, ಕಿರುಟಿಪ್ಪಣಿ ಮಾಡಿಕೊಳ್ಳಿ

ನೀವು ಎದುರಿಸುತ್ತಿರುವ ಪರೀಕ್ಷೆಗೆ ಸಂಬಂಧಿಸಿದ ಉತ್ತಮವಾದ ಆಕರ ಗ್ರಂಥಗಳು, ಹಳೆ ಪ್ರಶ್ನೆಪತ್ರಿಕೆಗಳು, ದಿನಪತ್ರಿಕೆಗಳನ್ನು ಸಂಗ್ರಹಿಸಿ. ಈ ನಿಟ್ಟಿನಲ್ಲಿ ಈಗಾಗಲೇ ಪರೀಕ್ಷೆ ಎದುರಿಸಿದವರು, ಬೋಧಕರ ಮಾರ್ಗದರ್ಶನ ಪಡೆಯಿರಿ. ಇದರ ಜೊತೆ 5ರಿಂದ 12ನೇ ತರಗತಿವರೆಗಿನ ಸಿಬಿಎಸ್‌ಇ ಪಠ್ಯಪುಸ್ತಕಗಳನ್ನು ಪರಾಮರ್ಶಿಸಿ. ಈ ಓದನ್ನು ಆಧರಿಸಿ ಕಿರುಟಿಪ್ಪಣಿ ಮಾಡಿಟ್ಟುಕೊಳ್ಳಿ.

ಆನ್‌ಲೈನ್‌ ಕೋಚಿಂಗ್, ಯೂಟ್ಯೂಬ್ ತರಗತಿಗೆ ಚಂದಾದಾರರಾಗಿ

ಈಚೆಗೆ ಬಹುತೇಕ ತರಬೇತಿ ಕೇಂದ್ರಗಳು ಆನ್‌ಲೈನ್ ತರಬೇತಿಯನ್ನು ಆರಂಭಿಸಿವೆ. ಇರುವುದರಲ್ಲಿಯೇ ಉತ್ತಮವಾದ ಆನ್‌ಲೈನ್‌ ತರಬೇತಿ ತರಗತಿ ಆಯ್ದುಕೊಂಡು ಅದಕ್ಕೆ ಚಂದಾದಾರರಾಗಿ. ಗುಣಮಟ್ಟದ ಬೋಧನೆಗೆ ಹೆಸರಾದ ಹಲವು ಬೋಧಕರು ತಮ್ಮದೇ ಆದ ಯೂಟ್ಯೂಬ್‌ ಚಾನೆಲ್‌ಗಳನ್ನು ಆರಂಭಿಸಿದ್ದಾರೆ. ಬಹುತೇಕ ಯೂಟ್ಯೂಬ್‌ ಪಾಠಗಳು ಉಚಿತವಾಗಿಯೇ ಲಭ್ಯ ಇವೆ. ಇದರ ಲಾಭ ಪಡೆಯಿರಿ.

ಸ್ನೇಹಿತರ ಜೊತೆ ಗುಂಪು ಚರ್ಚೆಯಲ್ಲಿ ಪಾಲ್ಗೊಳ್ಳಿ

ನೀವು ನಿಮ್ಮೂರಿನಲ್ಲೇ ಇರಿ ಅಥವಾ ಪರ ಊರಿನಲ್ಲೇ ಇರಿ. ಸಮಾನಮನಸ್ಕ, ಪರೀಕ್ಷೆಗೆ ಸಿದ್ಧರಾಗುತ್ತಿರುವ ಸ್ನೇಹಿತರನ್ನು ಗುರುತಿಸಿ. ಅವರ ಜತೆಗೂಡಿ ಸ್ಟಡಿ ಗ್ರೂಪ್‌ ರಚಿಸಿಕೊಳ್ಳಿ. ಗುಂಪಿನ ಸದಸ್ಯರ ಸಂಖ್ಯೆ 4ನ್ನು ಮೀರದಿರಲಿ. ಆ ಸ್ನೇಹಿತರ ಜೊತೆಗೂಡಿ ಅಧ್ಯಯನ ಸಂಬಂಧಿತ ಚರ್ಚೆ ಕೈಗೊಳ್ಳಿ. ಚರ್ಚೆ ಗೂಗಲ್ ಮೀಟ್ ಅಥವಾ ಝೂಮ್‌ ಅಪ್ಲಿಕೇಷನ್ ಮೂಲಕವಾದರೂ ನಡೆಯಲಿ.

ಸಮರ್ಪಕವಾದ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ

ನಿಮ್ಮ ಆಸಕ್ತಿ, ಅಗತ್ಯಕ್ಕೆ ತಕ್ಕಂತೆ ಅಧ್ಯಯನದ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಓದಿ. ಒಂದು ದಿನಕ್ಕೆ 12 ಗಂಟೆ ಓದು, 7 ಗಂಟೆ ನಿದ್ದೆ, ಊಟ ತಿಂಡಿಗೆ 2 ಗಂಟೆ, ಮನರಂಜನೆಗೆ 1 ಗಂಟೆ, ದಿನನಿತ್ಯದ ಕೆಲಸಗಳಿಗೆ 2 ಗಂಟೆ ಹೀಗೆ ವೇಳೆಯನ್ನು ಹೊಂದಿಸಿಕೊಳ್ಳಿ. ಓದಿನ 12 ಗಂಟೆಗಳನ್ನು ಸಮವಾಗಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಎಂದು ನಾಲ್ಕು ಭಾಗಗಳಲ್ಲಿ ವಿಂಗಡಿಸಿಕೊಂಡು ಆ ಅವಧಿಯಲ್ಲಿ ಓದು, ಬರವಣಿಗೆ, ಹಳೆಯ ಪ್ರಶ್ನೆಪತ್ರಿಕೆಗಳ ಪರಾಮರ್ಶೆ ಮತ್ತು ವಿಷಯ ಪುನಾರಾವರ್ತನೆಗೂ ಸಮಯ ಮೀಸಲಿಡಿ.

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ

ನಿಮ್ಮ ಬಗ್ಗೆ ನಿಮಗೆ ಅಭಿಮಾನವಿರಲಿ. ನನ್ನಿಂದ ಮಾಡಲು ಸಾಧ್ಯವಿದೆ ಎಂಬ ಭಾವ ನಿಮ್ಮದಾಗಿರಲಿ. ವಿಷಮ ಪರಿಸ್ಥಿತಿಗಳು ಹಾಗೂ ಪರೀಕ್ಷೆಗಳೇ ಅಂತಿಮವಲ್ಲ, ಈ ಬಾರಿ ಸೋಲಾದರೂ ಪರವಾಗಿಲ್ಲ. ಮತ್ತೊಮ್ಮೆ ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಿ.

(ಲೇಖಕರು: ನಿರ್ದೇಶಕರು, ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT