ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಅತಿಥ್ಯದಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್: ಲಾರ್ಡ್ಸ್‌ನಿಂದ ಮೊಟೇರಾವರೆಗೆ..

ಭಾರತದ ಅತಿಥ್ಯದಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್
Published 30 ಸೆಪ್ಟೆಂಬರ್ 2023, 23:30 IST
Last Updated 30 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ 1983ರಲ್ಲಿ ವಿಶ್ವಕಪ್ ಜಯಿಸಿದ ಭಾರತ ತಂಡ ಸ್ವದೇಶಕ್ಕೆ ಬಂದಿಳಿದಿತ್ತು. ಆಟಗಾರರಿಗೆ ನಗದು ಪುರಸ್ಕಾರ ನೀಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯವರ(ಬಿಸಿಸಿಐ) ಬಳಿ ದುಡ್ಡು ಇರಲಿಲ್ಲ. ಅದಕ್ಕಾಗಿ ಗಾನಕೋಗಿಲೆ ಲತಾ ಮಂಗೇಶ್ಕರ್ ಸಂಗೀತ ಕಾರ್ಯಕ್ರಮ ನಡೆಸಿ ಹಣ ಸಂಗ್ರಹಿಸಿಕೊಟ್ಟರು. ಅದರಿಂದಾಗಿ ಕಪಿಲ್ ದೇವ್ ಬಳಗದ ಆಟಗಾರರಿಗೆ ತಲಾ ಒಂದು ಲಕ್ಷ ರೂಪಾಯಿ ಲಭಿಸಿತ್ತು.

ಇದಾಗಿ 40 ವರ್ಷಗಳು ಸರಿದಿವೆ. ಈ ಅವಧಿಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ವಿಶ್ವದ ಶ್ರೀಮಂತ ಕ್ರೀಡಾಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಕ್ರಿಕೆಟ್ ಕ್ಷೇತ್ರದ ದೊಡ್ಡಣ್ಣನೇ ಆಗಿದೆ. ಅದರ ಸಂಪತ್ತು ಸಾವಿರಾರು ಕೋಟಿ ರೂಪಾಯಿ ಇದೆ. ಆಟಗಾರರೂ ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ. ಬೇರೆ ದೇಶಗಳ ಕ್ರಿಕೆಟ್ ಮಂಡಳಿಗಳೂ ಭಾರತ ತಂಡದ ಎದುರು ಆಡಲು ಹಾತೊರೆಯುತ್ತಿವೆ. ತಮ್ಮ ದೇಶಗಳಲ್ಲಿ ಭಾರತಕ್ಕೆ ಆತಿಥ್ಯ ನೀಡಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ) ಅನುಮತಿ ಪಡೆಯಲು ಹರಸಾಹಸ ಪಡುತ್ತಿವೆ. ಭಾರತ ತಂಡ ಆಡಿದರೆ ಅವರಿಗೂ ಆದಾಯ ಸಿಗುತ್ತದೆ ಎಂಬುದು ಶತಃಸಿದ್ಧ.

ಇಷ್ಟೆಲ್ಲಕ್ಕೂ ಕಾರಣ ಭಾರತದಲ್ಲಿರುವ ಕ್ರಿಕೆಟ್ ಅಭಿಮಾನಿಗಳ ಬೃಹತ್ ಬಳಗ. ಅದನ್ನು ಸೃಷ್ಟಿಸಿದ ಶ್ರೇಯ ಏಕದಿನ ಕ್ರಿಕೆಟ್‌ಗೆ ಸಲ್ಲಬೇಕು.  ಕಪಿಲ್ ಬಳಗವು ವಿಶ್ವಕಪ್ ಜಯಿಸಿದ ಕಾಲಘಟ್ಟದಲ್ಲಿಯೇ ದೇಶಕ್ಕೆ ಟೆಲಿವಿಷನ್ ಕೂಡ ಕಾಲಿಟ್ಟಿತ್ತು. ಕ್ರಿಕೆಟ್ ಮತ್ತು ಟೆಲಿವಿಷನ್ ‘ಜೊತೆಯಾಟ’ ರಂಗೇರಿತು. ಏಕದಿನ ಕ್ರಿಕೆಟ್‌ ಜನಪ್ರಿಯತೆ ತುತ್ತತುದಿಗೆ ಏರಿತು. ಮಾರುಕಟ್ಟೆ ಜಗತ್ತು ಪ್ರಚಾರಕ್ಕಾಗಿ ಮುಗಿಬಿದ್ದಿತು. ಕ್ರಿಕೆಟ್ ಜನಪ್ರಿಯತೆ ಹೆಚ್ಚಿಸಲು ನಿಯಮಗಳಲ್ಲಿ ಬದಲಾವಣೆಗಳಾದವು. ಹೀಗಾಗಿ ಕ್ರಿಕೆಟ್ ಆಟವೇ ಇವತ್ತು ದೊಡ್ಡ ಮಾರುಕಟ್ಟೆಯಾಗಿ ಬೆಳೆದಿದೆ. ಅಷ್ಟೇ ಅಲ್ಲ, ಇವತ್ತಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬರೂ ಕ್ರಿಕೆಟ್‌ನೊಂದಿಗೆ ನಂಟು ಬೆಸೆಯಲು ತುಡಿಯುತ್ತಾರೆ. ಅದಕ್ಕಾಗಿಯೇ ಗೇಮಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ತಂಡ ಕಟ್ಟುತ್ತಾರೆ. ವರ್ಚುವಲ್‌ ಗೇಮಿಂಗ್, ಗಲ್ಲಿ ಕ್ರಿಕೆಟ್, ಕಾರ್ಪೊರೇಟ್‌ ಕ್ರಿಕೆಟ್‌ಗಳಲ್ಲಿ ಆಡಿ ತಾವೇ ‘ತಾರೆ’ಗಳಂತೆ ಬೀಗುತ್ತಾರೆ. ಅಷ್ಟರಮಟ್ಟಿಗೆ ಕ್ರಿಕೆಟ್ ಇವತ್ತು ‘ಜನಪದ’ವಾಗಿಬಿಟ್ಟಿದೆ.

[object Object]
ವಿಶ್ವಕಪ್ ಗೆದ್ದ ನಂತರ ಸಚಿನ್ ತೆಂಡೂಲ್ಕರ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಸುತ್ತು ಬಂದ ಮುನಾಫ್ ಪಟೇಲ್

ವಿಪರ್ಯಾಸ ನೋಡಿ, ಕ್ರಿಕೆಟ್‌ ಜನಪ್ರಿಯತೆಯ ಉತ್ತುಂಗದ ಈ ಕಾಲದಲ್ಲಿಯೂ ಫಿಫ್ಟಿ–50 ಮಾದರಿಯ ಆಟವು ಅಸ್ತಿತ್ವಕ್ಕಾಗಿ ಪರದಾಡಬೇಕಾದ ಸ್ಥಿತಿಗೆ ಬಂದಿದೆ. ಇದೇ ಹೊತ್ತಿನಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಆತಿಥ್ಯ ವಹಿಸಲು ಭಾರತ ಸಜ್ಜಾಗಿದೆ. ಇದೇ ಅಕ್ಟೋಬರ್ 5ರಂದು ಟೂರ್ನಿಯ ಮೊದಲ ಪಂದ್ಯ ಅಹಮದಾಬಾದಿನ ಮೊಟೇರಾದಲ್ಲಿರುವ ನರೇಂದ್ರ ಮೋದಿ ಕ್ರಿಕೆಟ್ ಅಂಗಳದಲ್ಲಿ ನಡೆಯಲಿದೆ. 14ರಂದು ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ನಡೆಯುವುದು ಇಲ್ಲಿಯೇ. ನವೆಂಬರ್ 19ರಂದು ಫೈನಲ್ ಪಂದ್ಯವೂ ಇದೇ ಮೈದಾನದಲ್ಲಿ ನಡೆಯಲಿದೆ. ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರಿಗೆ ಆಸನ ಸಾಮರ್ಥ್ಯ ಹೊಂದಿರುವ ಈ ಕ್ರೀಡಾಂಗಣ ವಿಶ್ವದಲ್ಲಿಯೇ ದೊಡ್ಡ ಕ್ರಿಕೆಟ್ ಕ್ರೀಡಾಂಗಣ. ಏಕದಿನ ಕ್ರಿಕೆಟ್‌ನ ಪುನುರುತ್ಥಾನಕ್ಕೂ ಇದು ವೇದಿಕೆಯಾಗಬಹುದೇ ಎಂಬ ಕುತೂಹಲ ಈಗ ಗರಿಗೆದರಿದೆ.  

ಆತಂಕ ಇದೇ ಮೊದಲಲ್ಲ

ಈಗ ‘ಒಂದು ದಿನ’ ಕ್ರಿಕೆಟ್ ಮಾದರಿಯು ಎದುರಿಸುತ್ತಿರುವ ಆತಂಕವನ್ನು ಐದು ದಶಕಗಳ ಹಿಂದೆ ಟೆಸ್ಟ್ ಕ್ರಿಕೆಟ್ ಕೂಡ ಅನುಭವಿಸಿತ್ತು. 1971ರಲ್ಲಿ ಏಕದಿನ ಕ್ರಿಕೆಟ್ ಮಾದರಿ ಶುರುವಾದಾಗ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಅಭಿಮಾನಿಗಳ ಅಭಿರುಚಿ ಬದಲಾಗತೊಡಗಿತು.

ಏಕದಿನ ಕ್ರಿಕೆಟ್ ಮಾದರಿಯು 1971ರಲ್ಲಿಯೇ ಶುರುವಾಯಿತು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. 1975 ಮತ್ತು 1979ರಲ್ಲಿ ವಿಶ್ವಕಪ್ ಟೂರ್ನಿಗಳೂ ನಡೆದವು. ಈ ನಡುವೆ ಕೆರ್‍ರಿ ಪ್ಯಾಕರ್ ವಿಶ್ವ ಸರಣಿ ಕ್ರಿಕೆಟ್ ಸದ್ದು ಮಾಡಿತು. ಟೆಲಿವಿಷನ್‌ ಜೊತೆಗೆ ಕ್ರಿಕೆಟ್ ಸಖ್ಯ ಆರಂಭವಾಯಿತು. ಇದರಿಂದಾಗಿ ಐದು ದಿನಗಳ ಟೆಸ್ಟ್ ಆಟವು ಸಪ್ಪೆ ಎನಿಸಿ, ಜನ ದೂರ ಸರಿಯುವ ಆತಂಕ ಆಗಲೇ ಎದುರಾಗಿತ್ತು. ಆಟಗಾರರಿಗೆ ಏಕದಿನ ಕ್ರಿಕೆಟ್‌ಗೆ ಬೇಕಾದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಟೆಸ್ಟ್ ಅಗತ್ಯ ಎಂಬ ಅಂಶ ಮನವರಿಕೆಯಾಯಿತು. ಆಗಿನ ಕಾಲಘಟ್ಟದಲ್ಲಿ ಯಾವ ಕ್ರಿಕೆಟಿಗನೂ ಟೆಸ್ಟ್ ನಿಲ್ಲಿಸಿಬಿಡಿ ಎಂದು ಹೇಳಲಿಲ್ಲ. ಆದರೆ ಈಗ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್‌, ಭಾರತದ ಸಚಿನ್ ತೆಂಡೂಲ್ಕರ್, ಆರ್. ಅಶ್ವಿನ್ ಅವರಂತಹ ಕ್ರಿಕೆಟಿಗರೇ ಏಕದಿನ ಮಾದರಿ ಬೇಕೆ ಎಂದು ಪ್ರಶ್ನಿಸಿದ್ದಾರೆ.

2004ರಲ್ಲಿ ಟಿ20 ಆರಂಭವಾದ ನಂತರ ಏಕದಿನ ಕ್ರಿಕೆಟ್‌ ಅಸ್ತಿತ್ವಕ್ಕೆ ಕೊಡಲಿಪೆಟ್ಟು ಬೀಳುವ ಲಕ್ಷಣಗಳು ಗೋಚರಿಸಿದ್ದವು. ಸಾಂಪ್ರದಾಯಿಕ ಕ್ರಿಕೆಟಿಗರೂ ಈ ಮಾದರಿಯ ಬಗ್ಗೆ ಮೂಗು ಮುರಿದಿದ್ದರು. ‘ಟಿ20 ಮಾದರಿ ಕ್ರಿಕೆಟ್ಟೇ ಅಲ್ಲ’ ಎಂದವರಿದ್ದರು. ಆದರೆ ಇದು ಚಿನ್ನದ ಗಣಿ ಎಂಬ ಅಂಶ ಬೆಳಕಿಗೆ ಬಂದದ್ದು 2007ರಲ್ಲಿ. ಆ ವರ್ಷ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. ಆಗ ಸಿಕ್ಕ ಸ್ಪಂದನವೇ 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹುಟ್ಟಿಗೆ ಕಾರಣವಾಯಿತು. ಇದೇ ಗೇಮ್ ಚೇಂಜರ್ ಕೂಡ ಆಯಿತು. 

[object Object]
ವಿಶ್ವಕಪ್‌ 

ನಾಯಕತ್ವಕ್ಕೆ ಸವಾಲು

ಕ್ರಿಕೆಟ್ ಆಟ, ನೋಟ ಎಷ್ಟೇ ಬದಲಾಗಲಿ; ಸೋಲು, ಗೆಲುವುಗಳಿಗೆ ಯಾವುದೇ ಆಟಗಾರ ಕಾಣಿಕೆ ನೀಡಲಿ, ಬಿಡಲಿ; ಖ್ಯಾತಿ, ಅಪಖ್ಯಾತಿಗಳು ಮಾತ್ರ ನಾಯಕನಿಗೆ ಬರುತ್ತವೆ. ಅದೂ ವಿಶ್ವಕಪ್ ಟೂರ್ನಿಗಳ ಫಲಿತಾಂಶಗಳು ನಾಯಕನ ಸುತ್ತಮುತ್ತಲೇ ಇರುತ್ತವೆ. ಭಾರತದ ಮಟ್ಟಿಗಂತೂ ಈ ಸಂಪ್ರದಾಯ ಬೇರೆಲ್ಲ ದೇಶಗಳಿಗಿಂತಲೂ ಹೆಚ್ಚು.

ಅದಕ್ಕಾಗಿಯೇ ಭಾರತ ತಂಡದ ನಾಯಕತ್ವವನ್ನು ಯಾರೇ ವಹಿಸಿಕೊಂಡರೂ ಅವರನ್ನು ಕಪಿಲ್ ದೇವ್ ಅಥವಾ ಮಹೇಂದ್ರ ಸಿಂಗ್ ಧೋನಿ ಅವರೊಟ್ಟಿಗೆ ತುಲನೆ ಮಾಡುವುದು ಈಗ ರೂಢಿಯಾಗಿಬಿಟ್ಟಿದೆ. ಅವರಿಬ್ಬರೂ ವಿಶ್ವಕಪ್ ಗೆದ್ದು ಕೊಟ್ಟಿರುವುದೇ ಇದಕ್ಕೆ ಕಾರಣ. ಕಪಿಲ್ ಸಾಧನೆಮಾಡಿದ್ದ ಕಾಲಕ್ಕೂ ಧೋನಿ ಕಪ್‌ ಗೆದ್ದ ಕಾಲಕ್ಕೂ ಅಜಗಜಾಂತರ. ಕಪಿಲ್ ಆಡುತ್ತಿದ್ದ ಸಂದರ್ಭದಲ್ಲಿ ಕ್ರಿಕೆಟ್‌ ಬೆಳವಣಿಗೆಯು ಇನ್ನೂ ಬಾಲ್ಯಾವಸ್ಥೆಯಲ್ಲಿಯೇ ಇತ್ತು. ಆದರೆ ಧೋನಿ ಆಡಿದ ಸಂದರ್ಭದಲ್ಲಿ ಬೆಳೆದು ಹೆಮ್ಮರವಾಗಿತ್ತು. ಟಿ20 ಬಿರುಗಾಳಿಗೆ ಅದು ಬಿದ್ದು ಹೋಗದಂತೆ ಕಾಪಾಡುವ ಸವಾಲು ಎದುರಲ್ಲಿ ಇತ್ತು. 

ಕಪಿಲ್ ಮತ್ತು ಧೋನಿ ಸಾಧನೆಯ ನಡುವಿನ 28 ವರ್ಷಗಳೂ ಭಾರತದ ಕ್ರಿಕೆಟ್‌ ಮಟ್ಟಿಗೆ ಪ್ರಮುಖವಾಗಿದ್ದವು. ಈ ಅವಧಿಯಲ್ಲಿ ಎರಡು ಬಾರಿ (1987 ಮತ್ತು 1996) ಭಾರತ ವಿಶ್ವಕಪ್ ಟೂರ್ನಿಗಳಿಗೆ ಆತಿಥ್ಯ ವಹಿಸಿತ್ತು. ಆದರೆ ಗೆದ್ದಿರಲಿಲ್ಲ. ಕಪಿಲ್ ನಂತರ ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ನಾಯಕತ್ವವನ್ನೂ ಭಾರತ ಕಂಡಿತ್ತು. ಅಜರ್ ಉತ್ತಮ ಆಟಗಾರ ಮತ್ತು ನಾಯಕ ಎಂಬುದರಲ್ಲಿ ಸಂಶಯವೇ ಇರಲಿಲ್ಲ. ಆದರೆ, ಅವರಿಗೆ ಅಂಟಿದ ಮ್ಯಾಚ್‌ಫಿಕ್ಸಿಂಗ್ ಕಳಂಕ ಭಾರತದ ಕ್ರಿಕೆಟ್‌ಗೇ ಸಂಚಕಾರ ತಂದಿತ್ತು. ನಂತರ ಗಂಗೂಲಿ ನಾಯಕತ್ವದಲ್ಲಿ ಸಚಿನ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ದ್ರಾವಿಡ್, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಹರಭಜನ್ ಸಿಂಗ್ ತಂಡಕ್ಕೆ ಮರುಜೀವ ತುಂಬಿದರು. 2003ರ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಅಲ್ಪ ಅಂತರದಲ್ಲಿ ತಪ್ಪಿಸಿಕೊಂಡಿದ್ದ ತಂಡವು 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾತಾಳ ಕಂಡಿತ್ತು. ಇದರಿಂದಾಗಿಯೇ 2011ರ ವಿಶ್ವಕಪ್ ಟೂರ್ನಿಯ ಜಯ ಭಾರತಕ್ಕೆ ಮಹತ್ವದ್ದಾಯಿತು. 

ತಂಡವನ್ನು ಈ ಮಟ್ಟಕ್ಕೆ ಕರೆದೊಯ್ಯಲು ಧೋನಿ ಮುಂದಿದ್ದ ಹಾದಿ ಸುಲಭವಾಗಿರಲಿಲ್ಲ. ಟಿ20 ಕ್ರಿಕೆಟ್ ಭರಾಟೆಯು ಒಡ್ಡಿದ ಸವಾಲುಗಳನ್ನು ಎದುರಿಸುವ ಒತ್ತಡ ಕೂಡ ತಂಡಗಳ ನಾಯಕರು ಮತ್ತು ಕೋಚ್‌ಗಳ ಮುಂದಿತ್ತು. ಮೂರು ಮಾದರಿಗಳಲ್ಲಿಯೂ ಆಡುವ  ಆಟಗಾರರನ್ನು ಮಾನಸಿಕ ಮತ್ತು ದೈಹಿಕವಾಗಿ ಸಬಲಗೊಳಿಸಿ, ದುಡಿಸಿಕೊಳ್ಳುವ ಹೊಸ ಕಲೆಯನ್ನು ಕಲಿಯಲೇಬೇಕಾದ ಒತ್ತಡವೂ ಇತ್ತು. ಈ ಸವಾಲಿನಲ್ಲಿ ಧೋನಿ ಮತ್ತು ಆಗಿನ ಕೋಚ್ ಗ್ಯಾರಿ ಕರ್ಸ್ಟನ್ ಗೆದ್ದರು. 2013ರಲ್ಲಿ ಧೋನಿ ಬಳಗವು ಚಾಂಪಿಯನ್ಸ್‌ ಟ್ರೋಫಿ ಕೂಡ ಜಯಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಭಾರತ ಒಂದೂ ಐಸಿಸಿ ಟ್ರೋಫಿ ಗೆದ್ದಿಲ್ಲ.

ಟಿ20, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಮತ್ತು ಏಕದಿನ ಮಾದರಿಗಳಲ್ಲಿ ನಾಕೌಟ್‌ ಹಂತಗಳಲ್ಲಿ ಭಾರತ ಎಡವಿದೆ. 2017ರಲ್ಲಿ ಏಕದಿನ ಮತ್ತು ಟಿ20 ತಂಡಗಳ ನಾಯಕತ್ವ ವಹಿಸಿಕೊಂಡ ವಿರಾಟ್ ಕೊಹ್ಲಿ ಅವರಿಗೆ ಈ ವೈಫಲ್ಯವೇ ಮುಳುವಾಗಿದ್ದು. ಸಚಿನ್ ತೆಂಡೂಲ್ಕರ್ ಅವರ ರನ್‌ಗಳ ದಾಖಲೆಯನ್ನು ಮೀರಿನಿಲ್ಲುವ ಸಮರ್ಥ ಆಟಗಾರನೆಂಬ ಹೆಗ್ಗಳಿಕೆಯಿರುವ ‘ಕಿಂಗ್‌ ಕೊಹ್ಲಿ’ ದ್ವಿಪಕ್ಷೀಯ ಸರಣಿಗಳಲ್ಲಿ ನಾಯಕರಾಗಿ ಉತ್ತಮ ಫಲಿತಾಂಶವನ್ನೇ ಹೊಂದಿದ್ದರು. ಆದರೆ ಪ್ರಶಸ್ತಿ ಜಯಿಸದೇ ಇರುವುದು ಅವರ ನಾಯಕತ್ವಕ್ಕೆ ಕಪ್ಪುಚುಕ್ಕೆಗಳಾದವು. ಟಿ20 ಮತ್ತು ಟೆಸ್ಟ್ ನಾಯಕತ್ವವನ್ನು ತಾವಾಗಿಯೇ ಬಿಟ್ಟರು. ಏಕದಿನ ನಾಯಕತ್ವದಿಂದ ಅವರನ್ನು ಬಿಸಿಸಿಐ ಕೆಳಗಿಳಿಸಿತ್ತು.

[object Object]
ರೋಹಿತ್‌ ಶರ್ಮಾ

ಕೊಹ್ಲಿ ನಂತರ ಚುಕ್ಕಾಣಿ ಹಿಡಿದಿರುವ ರೋಹಿತ್ ಶರ್ಮಾ ಅವರ ಎದುರು ಇರುವ ಸವಾಲುಗಳು ಇನ್ನೂ ಭಿನ್ನ, ಆದರೆ ಕಠಿಣವಲ್ಲ. ಏಕಕಾಲಕ್ಕೆ ನಾಲ್ಕು ರಾಷ್ಟ್ರೀಯ ತಂಡಗಳನ್ನು ರಚಿಸಬಹುದಾದಷ್ಟು ಆಟಗಾರರು ಬೆಂಚ್‌ನಲ್ಲಿದ್ದಾರೆ. ಸೀನಿಯರ್ ಮತ್ತು ಜೂನಿಯರ್‌ಗಳು ಸಮಬಲದ ಪೈಪೋಟಿ ನಡೆಸುತ್ತಿದ್ದಾರೆ. ಅಲ್ಲದೇ ಕೋಟಿ ಕೋಟಿ ಹಣ ತಂದುಕೊಡುವ ಐಪಿಎಲ್‌ನಲ್ಲಿ ನೀಡುವ ಪ್ರದರ್ಶನವೂ ಮಾನದಂಡವಾಗುತ್ತಿದೆ. ಇವೆಲ್ಲವೂ ತಂಡದ ಆಯ್ಕೆ ಮೇಲೆ ಪ್ರಭಾವ ಬೀರುತ್ತಿವೆ. ಆದ್ದರಿಂದ 11ರ ಬಳಗವನ್ನು ಕಣಕ್ಕಿಳಿಸಿವುದು ಸುಲಭದ ಮಾತಲ್ಲ. ಆರ್. ಅಶ್ವಿನ್ ಅವರಂತಹ ಅನುಭವಿ ಆಟಗಾರನೂ ಯುವ ಆಟಗಾರ ಅಕ್ಷರ್ ಪಟೇಲ್ ಅವರ ಬದಲಿಗೆ ಸ್ಥಾನ ಪಡೆಯುವಂತಹ ಪೈಪೋಟಿಯ ಜಗತ್ತು ನಿರ್ಮಾಣವಾಗಿದೆ.

ಇದರ ನಡುವೆಯೂ ಕಳೆದ ತಿಂಗಳವರೆಗೂ ಗಾಯಾಳುಗಳಾಗಿದ್ದ ಜಸ್‌ಪ್ರೀತ್ ಬೂಮ್ರಾ,  ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್ ಫಿಟ್‌ ಆಗಿದ್ದಾರೆ. ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಇಶಾನ್ ಕಿಶನ್ ಫಾರ್ಮ್‌ಗೆ ಮರಳಿದ್ದಾರೆ. ಆಲ್‌ರೌಂಡರ್‌ ತ್ರಿವಳಿಗಳಾದ ರವೀಂದ್ರ ಜಡೇಜ, ಹಾರ್ದಿಕ್ ಪಾಂಡ್ಯ ಮತ್ತು ಆರ್. ಅಶ್ವಿನ್ ಇವರಲ್ಲಿ ಯಾರು ಕಪಿಲ್ ದೇವ್ ಅಥವಾ 2011ರ ಯುವರಾಜ್ ಸಿಂಗ್  ಅವರ ಸ್ಥಾನ ತುಂಬಲಿದ್ದಾರೆ ಎಂಬ ಕುತೂಹಲವಿದೆ. ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಅವರ ಸ್ವಿಂಗ್ ಕೂಡ ಪರಿಣಾಮಕಾರಿಯಾಗಬಲ್ಲವು.  ಆದ್ದರಿಂದ ರೋಹಿತ್‌ ಕೆಲಸ ಸುಲಭವಾಗಲಿದೆ. ಇಷ್ಟರ ಮಧ್ಯೆ ಅವರು ತಮ್ಮ ಸ್ವಂತ ಬ್ಯಾಟಿಂಗ್ ಫಾರ್ಮ್ ಹಾಗೂ ನಿರ್ಧಾರ ಕೈಗೊಳ್ಳುವ ತಂತ್ರಗಾರಿಕೆ ಸುಧಾರಿಸಿಕೊಳ್ಳಬೇಕಿರುವುದೇ ಪ್ರಮುಖ ಸವಾಲಾಗಲಿದೆ. 

ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳು ಭಾರತಕ್ಕೆ ಕಠಿಣ ಪೈಪೋಟಿಯೊಡ್ಡಬಲ್ಲವು. ಮೊದಲೆರಡು ವಿಶ್ವಕಪ್ ಟೂರ್ನಿಗಳ ಚಾಂಪಿಯನ್ ವೆಸ್ಟ್ ಇಂಡೀಸ್ ಈ ಬಾರಿ ಅರ್ಹತೆ ಗಿಟ್ಟಿಸಿಲ್ಲ. ಅಫ್ಗಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಅಚ್ಚರಿಯ ಫಲಿತಾಂಶ ನೀಡುವುದನ್ನೂ ಅಲ್ಲಗಳೆಯಲಾಗದು. ಈ ಸಲ ವಿಶ್ವ ಚಾಂಪಿಯನ್ ಯಾರಾಗುತ್ತಾರೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ಏಕದಿನ ಕ್ರಿಕೆಟ್‌ ಮಾದರಿಯ ಭವಿಷ್ಯ ಹೇಗಿರಲಿದೆ ಎಂದು ಅಭಿಮಾನಿಗಳ ದಂಡು ನಿರ್ಣಯಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT