ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಾನ್ವೇಷಣೆ | ಮಾನವನ ವರ್ಣತಂತು ಸಂಖ್ಯಾದೋಷಗಳು

Published 24 ಜುಲೈ 2023, 0:08 IST
Last Updated 24 ಜುಲೈ 2023, 0:08 IST
ಅಕ್ಷರ ಗಾತ್ರ

'ತಾರೆ ಜಮಿನ್ ಪರ್' ಎಂಬ ಚಿತ್ರವು ವಿಶೇಷ ಚೇತನ (ಬುದ್ಧಿಮಾಂದ್ಯ) ಮಕ್ಕಳ ಸಮಸ್ಯೆಯನ್ನು ಸಾಮಾಜಿಕ ದೃಷ್ಟಿಯಿಂದ ತೋರಿಸಿ ಜನರು ಗಂಭೀರವಾಗಿ ಚಿಂತಿಸುವಂತೆ ಮಾಡಿತು. ನಮ್ಮ ಸುತ್ತಮುತ್ತ ಹಲವಾರು ಅಂತಹ ಮಕ್ಕಳನ್ನು ಕಂಡಾಗ ಬೇಸರವಾಗುವುದು. ಇಂತಹ ಸಮಸ್ಯೆಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ನೋಡಿದಾಗ ಪ್ರಾಕೃತಿಕವಾಗಿ ಆಗುವ ಒಂದು ಆಕಸ್ಮಿಕ ಕ್ರಿಯೆಯಿಂದ ಆ ರೀತಿಯ ಮಕ್ಕಳ ಕಷ್ಟಕ್ಕೆ ಕಾರಣವಾಗುವುದು.

ಮಾನವನ ಪ್ರತಿ ಜೀವಕೋಶದಲ್ಲಿ 46 ವರ್ಣತಂತುಗಳಿವೆ. ಇವುಗಳಲ್ಲಿ 44 ನ್ನು ಕೋಶಕಾಯಕ (Somatic chromosomes) ವರ್ಣತಂತುಗಳೆಂದು ಮತ್ತು ಉಳಿದ ಎರಡನ್ನು ಲೈಂಗಿಕ (Sex chromosomes) ವರ್ಣತಂತುಗಳೆಂದು ಪರಿಗಣಿಸಲಾಗಿದೆ. ಈ ವಿವಿಧ ವರ್ಣತಂತುಗಳಲ್ಲಿ ಹುದುಗಿರುವ ಗುಣಾಣುಗಳು (Genes) ನಮ್ಮ ಎಲ್ಲಾ ಗುಣಲಕ್ಷಣಗಳನ್ನು ನಿರ್ವಹಿಸುವ ಅನುವಂಶೀಯ ರಾಸಾಯನಿಕಗಳು. ಗಂಡು ಮಕ್ಕಳಲ್ಲಿ (44 ಮತ್ತು XY) ಹೆಣ್ಣು ಮಕ್ಕಳಲ್ಲಿ (44 ಮತ್ತು XX) ಸಂಖ್ಯೆಯ ವರ್ಣತಂತುಗಳಿರುತ್ತವೆ.

ಪ್ರತಿಯೊಬ್ಬರ ಜೀವಕೋಶದಲ್ಲಿರುವ ವರ್ಣತಂತುಗಳಲ್ಲಿ 23 ತಂದೆಯ ವರ‍್ಯಾಣುವಿನಿಂದಲೂ ಮತ್ತು 23 ತಾಯಿಯ ಅಂಡಾಣುವಿನಿಂದಲೂ ಬಂದಿರುತ್ತವೆ. ಈ ಲಿಂಗಾಣುಗಳ (ವೀರ‍್ಯಾಣು ಮತ್ತು ಅಂಡಾಣು) ಉತ್ಪತ್ತಿ ಕಾಲದಲ್ಲಿ ಪ್ರತಿಯೊಂದು ಲಿಂಗಾಣುವಿಗೆ ಹಂಚಿಕೆಯಾಗಬೇಕಾದ ವರ್ಣತಂತುಗಳ ನಿರ್ಧಿಷ್ಟ ಸಂಖ್ಯೆಯಲ್ಲಿ (23) ಏರುಪೇರಾಗಿ ಒಂದಕ್ಕಿಂತ ಹೆಚ್ಚು ಅಥವಾ ಕಡಿಮೆ ವರ್ಣತಂತುಗಳು ಹಂಚಿಕೆಯಾಗುತ್ತವೆ. ಅಂತಹ ಸಂಖ್ಯೆ ಹೆಚ್ಚು-ಕಡಿಮೆಯಾದ ಲಿಂಗಾಣುವಿನಿಂದ ಹುಟ್ಟುವ ಮಕ್ಕಳಲ್ಲಿ ವರ್ಣತಂತು ಸಂಖ್ಯಾ ದೋಷವುಂಟಾಗುವುದು. ಹಲವಾರು ರೀತಿಯ ವರ್ಣತಂತು ಸಂಖ್ಯಾ ದೋಷಗಳಿದ್ದು ಕೆಲವನ್ನು ಇಲ್ಲಿ ವಿವರಿಸಲಾಗಿದೆ. 

ಕ್ರೊಮೊಸೋಮ್ಸ್‌
ಕ್ರೊಮೊಸೋಮ್ಸ್‌ ಚಿತ್ರ ಕೃಪೆ : ವೆಸೆಕ್ಸ್ ರೆಗ್

ಕ್ಲೈನ್‌ ಫೆಲ್ಟರ್‌ ರೋಗಕೂಟ (ಕ್ಲೈನ್‌ ಫೆಲ್ಟರ್ ಸಿಂಡ್ರೋಮ್): ಇದು ಗಂಡು ಮಕ್ಕಳ ಜೀವಕೋಶಗಳಲ್ಲಿ ಲೈಂಗಿಕ ವರ್ಣತಂತುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತದೆ. ಇವರಲ್ಲಿ ಲಿಂಗ ನಿರ್ಧರಿಸುವ ವರ್ಣತಂತುಗಳ ಸಂಖ್ಯೆ ಎರಡಕ್ಕೆ ಬದಲಾಗಿ ಮೂರು ಅಥವ ಹೆಚ್ಚು ಆಗಿರುತ್ತದೆ. ಇಂತಹವರ ಲಕ್ಷಣಾವಳಿಗಳಲ್ಲಿ ಪ್ರಮುಖವಾದದ್ದು ಹೆಣ್ಣಿನಂತಹ ಧ್ವನಿ. ತೊದಲು ಮಾತು. ಬಾಗಿದ ಮೊಳಕಾಲು. ಮುಖದಲ್ಲಿ ಕಡಿಮೆ ಕೂದಲುಗಳಿರುತ್ತವೆ. ಸಣ್ಣ ವೃಷಣಗಳಿದ್ದು ನಪುಂಸಕರಾಗಿರುತ್ತಾರೆ. ಬುದ್ಧಿಶಕ್ತಿಯು ಸಾಮಾನ್ಯವಾಗಿರುತ್ತದೆ.

ಡೌನ್ಸ ರೋಗಕೂಟ (ಡೌನ್ಸ ಸಿಂಡ್ರೋಮ್): ಮಾನವರಲ್ಲಿ 21 ನೇ ವರ್ಣತಂತುವಿನ ಮೂರು ಪ್ರತಿಗಳಿದ್ದಾಗ ಉಂಟಾಗುವು ನ್ಯೂನತೆ (ಚಿತ್ರ). ಇದನ್ನು ತ್ರಿಕಾಯ (Trisomy) ಸ್ಥಿತಿ ಎನ್ನುವರು. ಚಪ್ಪಟೆ ಮುಖ ಮತ್ತು ಸಣ್ಣ ಕುತ್ತಿಗೆ ಇರುತ್ತದೆ. ದೊಡ್ಡ ನಾಲಿಗೆ ಹೊರಚಾಚಿರುತ್ತದೆ. ತೇಲು ಕಣ್ಣುಗಳು. ಚಿಕ್ಕದಾದ ಕಿವಿಗಳಿರುತ್ತವೆ. ಕೈಗಳು ಅಗಲವಾಗಿದ್ದು ಚಿಕ್ಕದಾಗಿರುತ್ತವೆ. ಕಡಿಮೆ ಅಥವಾ ಮಧ್ಯಮ ವರ್ಗದ ಮಾನಸಿಕ ತೊಂದರೆಗಳಾಗಬಹುದು. ಮೂಳೆಗಳ ಬೆಳವಣಿಗೆ ಸರಿಯಿರುವುದಿಲ್ಲ. ಆದರೂ ಸಾಮಾನ್ಯ ಜೀವನ ನಡೆಸಬಹುದು. ತಾಯಿಯಲ್ಲಿನ ವೈರಸ್‌ ಸೋಂಕು, ವಯಸ್ಸಾದ ಅಂಡಾಣು ಅಥವಾ ಹಾನಿಕಾರಕ ವಿಕಿರಣಗಳಿಂದ ಈ ಪರಿಸ್ಥಿತಿ ಉಂಟಾಗಬಹುದು.

ಟರ್ನರ್ ರೋಗಕೂಟ (ಟರ್ನರ್ ಸಿಂಡ್ರೋಮ್): ಇದು ಹೆಣ್ಣು ಮಕ್ಕಳಲ್ಲಿ ಕಾಣುವ ವರ್ಣತಂತು ದೋಷ. ಇವರಲ್ಲಿ ಒಂದು ಲೈಂಗಿಕ ವರ್ಣತಂತು ಕಡಿಮೆಯಿರುತ್ತದೆ. ಒಟ್ಟು ವರ್ಣತಂತುಗಳ ಸಂಖ್ಯೆ 45 ಮಾತ್ರ. ಈ ಸಮಸ್ಯೆ ಇರುವ ಹೆಣ್ಣು ಸಾಮಾನ್ಯವಾಗಿ ಕುಳ್ಳಗಿದ್ದು ಅಗಲವಾದ ಎದೆಯನ್ನು ಹೊಂದಿರುತ್ತಾರೆ. ಕುತ್ತಿಗೆಯ ಚರ್ಮದಲ್ಲಿ ಸುಕ್ಕುಗಳಿರುತ್ತವೆ. ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಬಂಜೆಯಾಗಿರುತ್ತಾರೆ.

ದೋಷ ಪತ್ತೆ ಹಚ್ಚುವಿಕೆ: ಗರ್ಭಿಣಿಯಾದ ಹತ್ತು ವಾರಗಳಲ್ಲಿ ಕರುಳ ಬಳ್ಳಿಯಿಂದ ಪಡೆದ ರಕ್ತ ಅಥವಾ ಭ್ರೂಣದ್ರವವನ್ನು ಸೂಕ್ತ ಪರೀಕ್ಷೆಗೊಳಪಡಿಸುವುದು. ಅಲ್ಟ್ರಾ ಸೌಂಡ್ ಸ್ಕಾನಿಂಗ್ ಮೂಲಕವೂ ಭ್ರೂಣದ ಬೆಳವಣಿಗೆಯನ್ನು ಗಮನಿಸಿ ನ್ಯೂನತೆಗಳನ್ನು ಪತ್ತೆ ಹಚ್ಚಬಹುದು.

ಸೂಕ್ತ ಪರಿಹಾರವಿಲ್ಲದ ಸಂಖ್ಯಾದೋಷವಿದು. ಭ್ರೂಣಾವಸ್ಥೆಯಲ್ಲಿಯೇ ಪತ್ತೆ ಹಚ್ಚಬೇಕು. ಇಂತಹ ಮಕ್ಕಳ ತಂದೆ-ತಾಯಿಯರಿಗೆ ಸೂಕ್ತ ವೈಜ್ಞಾನಿಕ ಮಾರ್ಗದರ್ಶನ ಅಗತ್ಯವಿದೆ. ಪ್ರಕೃತಿಯಲ್ಲಾಗುವ ಈ ಆಕಸ್ಮಿಕಕ್ಕೆ ಮಕ್ಕಳ ಜೀವನ ಬಲಿಯಾಗುವುದು ಮಾನವ ಸಮಾಜದ ವಿರ್ಪಯಾಸ.

(ಲೇಖಕರು: ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷö್ಮಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT