ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣ: ವಿದ್ಯಾರ್ಥಿಗಳ ನೆರವಿಗೆ ಕೃತಕ ಬುದ್ಧಿಮತ್ತೆ

Last Updated 11 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಗೃಹ ಬಳಕೆಯಿಂದ ಹಿಡಿದು ಆರೋಗ್ಯ ಸೇವಾ ಕ್ಷೇತ್ರದವರೆಗೂ ಕೃತಕ ಬುದ್ಧಿಮತ್ತೆಯ ಬಳಕೆ ವ್ಯಾಪಕವಾಗಿದೆ. ಹೀಗಿರುವಾಗ ಶೈಕ್ಷಣಿಕ ವಲಯವನ್ನು ಬಿಡಲಾದೀತೇ? ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಯಾವ ರೀತಿ ಇದನ್ನು ಬಳಸಬಹುದು ಎಂಬುದನ್ನು ನೋಡೋಣ.

ಕೋವಿಡ್‌ನಿಂದಾಗಿ ಮನೆಯಲ್ಲೇ ಕುಳಿತು ಆನ್‌ಲೈನ್‌ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕೆ ವಿವಿಧ ಅಪ್ಲಿಕೇಶನ್‌ಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮಶೀನ್‌ ಲರ್ನಿಂಗ್‌ ಅನ್ನು ಬಳಸಲಾಗಿದೆ. ಈ ತಂತ್ರಜ್ಞಾನದಿಂದ ವಿದ್ಯಾರ್ಥಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಅಧ್ಯಯನದ ರೂಪುರೇಷೆ ಮಾಡಿಕೊಳ್ಳಬಹುದು. ಅದರಂತೆ ಗೂಗಲ್‌ ಕ್ಲೌಡ್‌, ಗೂಗಲ್‌ ಡಾಕ್ಸ್‌, ಶೀಟ್ಸ್‌, ಸ್ಲೈಡ್ಸ್‌ ಮೊದಲಾದ ಅಪ್ಲಿಕೇಶನ್‌ಗಳಲ್ಲಿ ಕೂಡ ಇದನ್ನು ಬಳಸುವುದು ಸಾಮಾನ್ಯ. ಆಗ್ಯುಮೆಂಟೆಡ್‌ ರಿಯಾಲಿಟಿ ತಂತ್ರಜ್ಞಾನದಿಂದ ವಿದ್ಯಾರ್ಥಿಗಳು ತರಗತಿಯಲ್ಲಿ ಕೂತು ಪಾಠ ಕೇಳಿದ ಅನುಭವವನ್ನು ಪಡೆಯಬಹುದು.

ನಿತ್ಯದ ಪಾಠದ ಜೊತೆ ಕಿರು ಪರೀಕ್ಷೆಗಳನ್ನು ಸಹ ಈ ಕೋವಿಡ್‌ ಸಂದರ್ಭದಲ್ಲಿ ಆನ್‌ಲೈನ್‌ನಲ್ಲೇ ಮಾಡುತ್ತಿರುವುದು ಗೊತ್ತೇ ಇದೆ. ಇದಕ್ಕಾಗಿ ರಿಮೋಟ್‌ ಶಿಸ್ತುಪಾಲನಾ ಸೇವೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಈ ಕಿರು ಪರೀಕ್ಷೆಗಳನ್ನು ಬರೆಯುವುದರ ಜೊತೆಗೆ ಅವರ ಉತ್ತರ ಪತ್ರಿಕೆಗಳನ್ನು ಯಾವುದೇ ಪಕ್ಷಪಾತವಿಲ್ಲದೇ ಮೌಲ್ಯಮಾಪನ ನಡೆಸಲು ಅನುಕೂಲ. ಉನ್ನತ ಮಟ್ಟದ ಪರೀಕ್ಷೆಗಳಾದ ಎಲ್‌ಎಸ್‌ಎಟಿ, ಜಿಎಂಎಟಿ ಮೊದಲಾದವುಗಳನ್ನು ಕೃತಕ ಬುದ್ಧಿಮತ್ತೆಯ ಮೂಲಕವೇ ಶಿಸ್ತುಪಾಲನೆಗೆ ಒಳಪಡಿಸಲಾಗುತ್ತದೆ.

ಮಷೀನ್‌ ಲರ್ನಿಂಗ್‌ನಿಂದ ಪ್ರಬಂಧ ಬರವಣಿಗೆ

ವಿದ್ಯಾರ್ಥಿಗಳು ವಿನೂತನ ತಂತ್ರಜ್ಞಾನದಿಂದ ಪ್ರಬಂಧಗಳು, ರೆಸ್ಯೂಮೆ ಮೊದಲಾದವುಗಳನ್ನು ಬರೆಯಲು ಸಾಧ್ಯ. ಗ್ರಾಮರ್ಲಿಯಂತಹ ಸಾಫ್ಟ್‌ವೇರ್‌ ಇದಕ್ಕೆ ಬಳಕೆಯಾಗುತ್ತಿದ್ದು, ವ್ಯಾಕರಣ, ವಾಕ್ಯಗಳ ರಚನೆ ಮೊದಲಾದವುಗಳನ್ನು ಕೃತಕ ಬುದ್ಧಿಮತ್ತೆ ಬಳಸಿ ಸರಿಪಡಿಸಬಹುದು. ಕೆಲವು ಅಪ್ಲಿಕೇಶನ್‌ಗಳಲ್ಲಿ ಮಶೀನ್‌ ಲರ್ನಿಂಗ್‌ ಅನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಒಂದು ನೆನಪಿಡಿ, ವಿದ್ಯಾರ್ಥಿಗಳಿಗೆ ಈ ಅಪ್ಲಿಕೇಶನ್‌ಗಳು ಒಂದು ಮಟ್ಟದವರೆಗೆ ನೆರವು ನೀಡುತ್ತವೆಯೇ ಹೊರತು, ತಾವೇ ಬರೆದುಕೊಡುವ ಕೆಲಸ ಮಾಡಲು ಸಾಧ್ಯವಿಲ್ಲ!

ಸಂದರ್ಶನಕ್ಕೂ ನೆರವು

ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರ, ಸಂದರ್ಶನ ಎದುರಿಸುವುದೂ ಅದರ ಒಂದು ಭಾಗ. ಇದಕ್ಕೆ ಕೃತಕ ಬುದ್ಧಿಮತ್ತೆ ಅಳವಡಿಸಿಕೊಂಡ ತಂತ್ರಜ್ಞಾನ ನೆರವಿಗೆ ಬರುತ್ತದೆ. ಈ ಟೂಲ್‌ಗಳು ಅಣಕು ಸಂದರ್ಶನ ಎದುರಿಸಲು ವಿದ್ಯಾರ್ಥಿಗಳಿಗೆ ನೆರವಾಗುತ್ತವೆ. ಹಾಗೆಯೇ ಫೀಡ್‌ಬ್ಯಾಕ್ ಕೂಡ ನೀಡುತ್ತವೆ. ಅಂದರೆ ಮುಖಭಾವ, ದೈಹಿಕ ಹಾವಭಾವ, ದನಿಯ ಏರಿಳಿತ ಮೊದಲಾದವುಗಳನ್ನು ಸರಿಪಡಿಸಿಕೊಳ್ಳಲು ಇದು ಸಹಾಯಕ. ವಿದ್ಯಾರ್ಥಿ ಇದರಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು. ಅಂತಿಮವಾಗಿ ನಡೆಯುವ ವಿಶ್ವವಿದ್ಯಾಲಯ ಅಥವಾ ಕಂಪನಿಯ ಸಂದರ್ಶನದಲ್ಲಿ ಅವಶ್ಯಕ ಕೌಶಲಗಳನ್ನು ರೂಢಿಸಿಕೊಂಡು ಯಶಸ್ಸು ಗಳಿಸಬಹುದು.

ಚಾಟ್‌ಬೋಟ್‌

ಇಂದಿನ ತಲೆಮಾರಿನ ವಿದ್ಯಾರ್ಥಿಗಳು ಅಂತರ್ಜಾಲ ಮತ್ತು ಸ್ಮಾರ್ಟ್‌ಫೋನ್‌ಗೆ ಅಂಟಿಕೊಂಡ ಪರಿ ಅಚ್ಚರಿ ಹುಟ್ಟಿಸುವಂತಹದ್ದು. ಆದರೆ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ಈ ನಡವಳಿಕೆಯನ್ನು ಬಳಸಿಕೊಂಡಿವೆ. ಆನ್‌ಲೈನ್‌ ಶಿಕ್ಷಣದಲ್ಲಿ ವೆಬ್‌ಸೈಟ್‌, ಮೊಬೈಲ್‌ ಆ್ಯಪ್‌ ಹಾಗೂ ಇನ್ನಿತರ ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಚಾಟ್‌ಬೋಟ್‌ (ವರ್ಚುವಲ್‌ ಸಹಾಯಕ) ಅಳವಡಿಸಿವೆ. ವಿದ್ಯಾರ್ಥಿಗಳು ಹಾಕುವ ಸಾವಿರಾರು ಪ್ರಶ್ನೆಗಳನ್ನು ಈ ಚಾಟ್‌ಬೋಟ್‌ ಅರ್ಥ ಮಾಡಿಕೊಂಡು ಉತ್ತರ ನೀಡುತ್ತದೆ. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಬಗ್ಗೆ ಒಳ್ಳೆಯ ಅನುಭವ ಇರಬಹುದು.

ಉನ್ನತ ಶಿಕ್ಷಣ ವಲಯ ಡಿಜಿಟಲ್‌ ಆಗಿ ರೂಪಾಂತರಗೊಂಡಿದ್ದು ಅದಕ್ಕಾಗಿ ಕೃತಕ ಬುದ್ಧಿಮತ್ತೆಯನ್ನುದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡಿರುವುದನ್ನು ನ್ಯೂಯಾರ್ಕ್‌ ವಿಶ್ವವಿದ್ಯಾಲಯ, ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯ ಮೊದಲಾದ ವೆಬ್‌ಸೈಟ್‌ಗೆ ಹೋಗಿ ಪರೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT