ಶನಿವಾರ, ಜನವರಿ 29, 2022
23 °C

ತಜ್ಞರ ಉತ್ತರ | ಬಿಟೆಕ್‌ (ಸಿಎಸ್‌) ಮತ್ತು ಬಿಸಿಎ/ಎಂಸಿಎ ನಡುವಿನ ವ್ಯತ್ಯಾಸಗಳೇನು?

ವಿ.ಪ್ರದೀಪ್‌ ಕುಮಾರ್ Updated:

ಅಕ್ಷರ ಗಾತ್ರ : | |

Prajavani

1. ಬಿಎಸ್‌ಸಿ (ಸಿಎಸ್‌), ಬಿಸಿಎ ಮತ್ತು ಎಂಸಿಎ ಕೋರ್ಸ್‌ಗಳಲ್ಲೂ ಕಂಪ್ಯೂಟರ್ ವಿಜ್ಞಾನ (ಸಿಎಸ್), ಮಾಹಿತಿ ವಿಜ್ಞಾನ (ಐಎಸ್) ವಿಷಯಗಳನ್ನು ಕಲಿಸಲಾಗುತ್ತದೆ. ಹಾಗಾಗಿ ಈ ಕೋರ್ಸ್‌ಗಳಿಗೂ ಎಂಜಿನಿಯರಿಂಗ್‌ (ಸಿಎಸ್/ಐಎಸ್) ಕೋರ್ಸ್‌ಗಳಿಗೂ ಇರುವ ವ್ಯತ್ಯಾಸಗಳೇನು?

–ಕಿರಣ್ ರಾಜ್, ಊರು ತಿಳಿಸಿಲ್ಲ.

ಎಂಜಿನಿಯರಿಂಗ್‌ (ಸಿಎಸ್/ಐಎಸ್), ಬಿಎಸ್‌ಸಿ (ಸಿಎಸ್), ಬಿಸಿಎ ಮತ್ತು ಎಂಸಿಎ ಕೋರ್ಸ್‌ಗಳಲ್ಲಿ ಕಲಿಸುವ ಮೂಲ ವಿಷಯ ಒಂದೇ ಆದರೂ ವ್ಯತ್ಯಾಸಗಳಿವೆ.

ಎಂಜಿನಿಯರಿಂಗ್ ಕೋರ್ಸ್‌ಗಳು ಕಂಪ್ಯೂಟರ್ ವಿಜ್ಞಾನದ ತಾಂತ್ರಿಕತೆಯತ್ತ ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಮೊದಲ ಎರಡು ಸೆಮಿಸ್ಟರ್‌ಗಳಲ್ಲಿ ಮೂಲ ಎಂಜಿನಿಯರಿಂಗ್ ಕೋರ್ಸ್‌ಗಳ ವಿಷಯಸೂಚಿಯಿರುತ್ತದೆ. ಮೂರನೇ ಸೆಮಿಸ್ಟರ್‌ನಿಂದ ನೀವು ಆಯ್ಕೆ ಮಾಡಿರುವ ವಿಷಯದ ಕಲಿಕೆ ಪ್ರಾರಂಭವಾಗುತ್ತದೆ.

ಎಂಸಿಎ ಕೋರ್ಸ್, ಕಂಪ್ಯೂಟರ್ ವಿಜ್ಞಾನದ ಸಿದ್ಧಾಂತಗಳು ಮತ್ತು ಅಪ್ಲಿಕೇಷನ್ಸ್ ಕುರಿತು ಹೆಚ್ಚು ಕೇಂದ್ರೀಕೃತವಾಗಿರುತ್ತವೆ. ಎಂಸಿಎ ಕೋರ್ಸ್ ಅರ್ಹತೆಗೆ ಯಾವುದಾದರೂ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಪದವಿ ಅಥವಾ ಪಿಯುಸಿ ಪರೀಕ್ಷೆಯಲ್ಲಿ ಗಣಿತವನ್ನು ಓದಿರಬೇಕು. ಬಿಎಸ್‌ಸಿ (ಸಿಎಸ್) ಅಥವಾ ಬಿಸಿಎ ನಂತರ ಎಂಸಿಎ ಮಾಡುವುದರಿಂದ ಕಂಪ್ಯೂಟರ್ ವಿಜ್ಞಾನದ ಅರಿವು, ಪರಿಣತಿ ಸ್ವಲ್ಪ ಮಟ್ಟಿಗಿದ್ದು ಎಂಸಿಎ ಕೋರ್ಸ್‌  ಸುಲಭವಾಗುತ್ತದೆ. ಎಂಜಿನಿಯರಿಂಗ್ ಮಾಡಲು ನಾಲ್ಕು ವರ್ಷಗಳು ಬೇಕಾದರೆ, ಪದವಿ ಕೋರ್ಸ್ ನಂತರ ಎಂಸಿಎ ಮಾಡಲು ಐದು ವರ್ಷಗಳಾಗುತ್ತವೆ. ಉದ್ಯಮ ವಲಯದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಮಹತ್ವವನ್ನು ಎಂಜಿನಿಯರಿಂಗ್ ಪದವಿಗೆ ನೀಡುವುದು ಸಾಮಾನ್ಯ.

ಒಟ್ಟಾರೆ ಹೇಳುವುದಾದರೆ, ಪಿಯುಸಿ ನಂತರ ಎಂಜಿನಿಯರಿಂಗ್ ಮಾಡುವುದು ಉತ್ತಮ ಆಯ್ಕೆ. ಆದರೆ, ಈಗಾಗಲೇ ಪದವಿ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳು ಎಂಸಿಎ ಮಾಡಿ ಎಂಜಿನಿಯರಿಂಗ್ ಕೋರ್ಸ್‌ಗೆ ಸರಿಸಮಾನ ಎನ್ನಬಹುದಾದ ತಜ್ಞತೆಯನ್ನು ಪಡೆದುಕೊಳ್ಳಬಹುದು.

2. ನಾನು ಡಿಪ್ಲೊಮಾ (ಅನಿಮೇಷನ್) ಮುಗಿಸಿ ನಂತರ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದೇನೆ. ಈಗ ನನಗೆ ಬಿಎಸ್‌ಸಿ ಮಾಡುವ ಆಸೆ; ಆದರೆ ಮನೆಯಲ್ಲಿ ಒಪ್ಪುತ್ತಿಲ್ಲ. ಕೆಲಸಕ್ಕೆ ಸೇರೋಣವೆಂದರೆ, ಅಷ್ಟಾಗಿ ಇಂಗ್ಲಿಷ್ ಬರುವುದಿಲ್ಲ. ದಯವಿಟ್ಟು ಪರಿಹಾರ ತಿಳಿಸಿ.

–ಮೇಘಶ್ರೀ, ಬೆಂಗಳೂರು.

ಮುಂದೆ ವಿದ್ಯಾಭ್ಯಾಸವನ್ನು ಮುಂದುವರೆಸಬೇಕೇ ಅಥವಾ ಕೆಲಸಕ್ಕೆ ಸೇರಬೇಕೇ ಎನ್ನುವುದನ್ನು ನಿರ್ಧರಿಸಿ, ಅದರಂತೆ ಮುಂದುವರಿಯಿರಿ. ಇಂಗ್ಲಿಷ್ ಕಲಿಕೆ ಕುರಿತ ಮಾರ್ಗದರ್ಶನವನ್ನು ಕಳೆದ ತಿಂಗಳ 27ನೇ ತಾರೀಖಿನ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.

3. ನಾನು ಈಗ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌. ಬಿಎಸ್‌ಸಿ ಮುಗಿಸಿದ್ದು, ಶಿಕ್ಷಕನಾಗುವ ಆಸೆ. ಮುಂದಿನ ದಾರಿ ತಿಳಿಸಿ.

–ದೇವರಾಜ್, ಊರು ತಿಳಿಸಿಲ್ಲ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಲು ಪದವಿಯ ನಂತರ ಬಿಇಡಿ ಮಾಡಿ ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದಕ್ಕೂ ಮುನ್ನ, ಖಾಸಗಿ ಶಾಲೆಗಳಲ್ಲಿ ಅಥವಾ ಟ್ಯೂಷನ್ ಕೇಂದ್ರಗಳಲ್ಲಿ ಶಿಕ್ಷಕರಾಗಲು ಪ್ರಯತ್ನಿಸಿ, ಈ ವೃತ್ತಿ ನಿಮಗೆ ಸರಿಹೊಂದುವುದೇ ಎಂದು ಪರೀಕ್ಷಿಸಿ.

4. ನಾನು ಬಿಕಾಂ ಪದವಿ ಮುಗಿಸಿದ್ದೇನೆ. ಪಿಎಸ್‌ಐ ಆಗಬೇಕು ಅಂತ ಅಂದುಕೊಂಡಿದ್ದೇನೆ ಹಾಗೂ ಅದರ ತಯಾರಿಯ ಜೊತೆಗೆ ಎಂಕಾಂ ಮಾಡಬೇಕು ಎಂದುಕೊಂಡಿದ್ದೇನೆ. ಈ ನಿರ್ಧಾರ ಸರಿಯೇ ಅಥವಾ ನನ್ನ ಪಿಎಸ್‌ಐ ಆಗುವ ಗುರಿಗೆ ಅಡ್ಡವಾಗಲಿದೆಯೇ? ಎಂಕಾಂ ಮಾಡುವುದರಿಂದ ಬೇರೆ ಯಾವ ಅವಕಾಶಗಳು ಸಿಗಲಿವೆ, ದಯಮಾಡಿ ತಿಳಿಸಿ.

–ಶಿವಕುಮಾರ್, ಊರು ತಿಳಿಸಿಲ್ಲ.

ವೃತ್ತಿಯೋಜನೆಯಂತೆ ಪಿಎಸ್‌ಐ ಪರೀಕ್ಷೆಗೆ ತಯಾರಾಗುತ್ತಿರುವ ನಿಮಗೆ ಎಂಕಾಂ ಅಗತ್ಯವಿದೆಯೇ ಎಂದು ಇನ್ನೊಮ್ಮೆ ಯೋಚಿಸಿ. ಆದರೆ, ಎರಡನ್ನೂ ಮಾಡಬೇಕೆನಿಸಿದರೆ ಸಮಯವನ್ನು ನಿಭಾಯಿಸುವುದು ಕಷ್ಟವೇನಲ್ಲ. ಎಂಕಾಂ ನಂತರ ಬ್ಯಾಂಕಿಂಗ್, ಇನ್ಶೂರೆನ್ಸ್‌, ಇನ್ವೆಸ್ಟ್‌ಮೆಂಟ್ಸ್‌, ಕಸ್ಟಮ್ಸ್, ಅಕೌಂಟಿಂಗ್, ಟ್ಯಾಕ್ಸೇಷನ್ ಇತ್ಯಾದಿ ವಲಯಗಳಲ್ಲಿ ಉದ್ಯೋಗಾವಕಾಶಗಳಿವೆ. ಸಮಯದ ನಿರ್ವಹಣೆ ಕುರಿತ ಹೆಚ್ಚಿನ ಮಾರ್ಗದರ್ಶನಕ್ಕೆ ಈ ವೀಡಿಯೊ ವೀಕ್ಷಿಸಿ: https://www.youtube.com/watch?v=AnAbzbLsFvM

5. ನಾನು ಬಿಎ ಓದುತ್ತಿದ್ದೇನೆ. ಬ್ಯಾಂಕ್‌ ಕೆಲಸಗಳ ಬಗ್ಗೆ ತಿಳಿಸಿ.

–ಅರ್ಪಿತಾ ಆರ್, ಊರು ತಿಳಿಸಿಲ್ಲ.

6. ನಾನು ಮೊದಲನೇ ವರ್ಷದ ಬಿಎ ಓದುತ್ತಿದ್ದೇನೆ. ನನಗೆ ಬ್ಯಾಂಕ್‌ನಲ್ಲಿ ಕೆಲಸ ಮಾಡಲು ಇಷ್ಟ. ಆದರೆ ಬಿಎ ನಂತರ ಬ್ಯಾಂಕ್‌ನಲ್ಲಿ ಕೆಲಸ ಮಾಡಲು ಸಾಧ್ಯವಾಗುವುದೇ? ಈ ಬಗ್ಗೆ ದಯವಿಟ್ಟು ತಿಳಿಸಿಕೊಡಿ.

–ರಕ್ಷಿತ ರವಿಚಂದ್ರ, ಮೈಸೂರು

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ಬಿಎ ಪದವಿಯ ನಂತರ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ನಡೆಸುವ ಪ್ರೊಬೆಷನರಿ ಆಫೀಸರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬ್ಯಾಂಕಿಂಗ್ ವೃತ್ತಿಯನ್ನು ಅನುಸರಿಸಬಹುದು. ಐಬಿಪಿಎಸ್ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದಂತೆ ಮೂರು ಹಂತಗಳಿರುತ್ತವೆ. ಬಿಎ ಪದವಿಯನ್ನು ಮುಗಿಸುವುದರೊಳಗೆ ಬ್ಯಾಂಕಿಂಗ್ ಮತ್ತು ಫೈನಾನ್ಸ್ ಸಂಬಂಧಿತ ಅರೆಕಾಲಿಕ ಕೋರ್ಸ್‌ಗಳನ್ನು ಮಾಡುವುದರಿಂದ ಈ ಕ್ಷೇತ್ರದಲ್ಲಿನ ಸವಾಲುಗಳು ಮತ್ತು ಅವಕಾಶಗಳ ಅರಿವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ನೆರವಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://ibps.in/

7. ನಾನು ಬಿಎಸ್‌ಸಿ ಎರಡನೇ ವರ್ಷದಲ್ಲಿ ಓದುತ್ತಿದ್ದೀನಿ. ಇದರ ಜೊತೆಗೆ ನಾನು ಯುಪಿಎಸ್‌ಸಿ ಪರೀಕ್ಷೆಗೆ ಯಾವ ರೀತಿಯಲ್ಲಿ ಅಭ್ಯಾಸ ಮಾಡಬೇಕು. ದಯವಿಟ್ಟು ಮಾರ್ಗದರ್ಶನ ನೀಡಿ.

–ಅಮರೇಶ್, ಲಿಂಗಸಗೂರು

8. ಸರ್, ನಾನು ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು. ಆದರೆ ನನ್ನ ಒಂದು ವರ್ಷದ ಪದವಿ ಕೋರ್ಸ್ ಬಾಕಿ ಇದೆ. ಆದರೆ, ಈಗ ಯುಪಿಎಸ್‌ಸಿ ಪ್ರವೇಶ ಹೇಗೆ? ಓದುವುದು ಹೇಗೆ?

–ಪ್ರಸನ್ನ ವೀರಣ್ಣ, ಊರು ತಿಳಿಸಿಲ್ಲ.

ಯಾವುದಾದರೂ ಪದವಿ ಕೋರ್ಸ್ ಉತ್ತೀರ್ಣರಾದ ನಂತರ ಯುಪಿಎಸ್‌ಸಿ ಪರೀಕ್ಷೆ ಬರೆಯಬಹುದು. ಯುಪಿಎಸ್‌ಸಿ ಪರೀಕ್ಷೆಯ ತಯಾರಿ ಕುರಿತು ಕಳೆದ ವರ್ಷದ ಜೂನ್ 28ನೇ ತಾರೀಖಿನ ಪ್ರಶ್ನೋತ್ತರದಲ್ಲಿ ಮತ್ತು ಪ್ರಬಂದ ರಚನೆಯ ಬಗ್ಗೆ ಕಳೆದ ವರ್ಷದ ಆಗಸ್ಟ್ 30ನೇ ತಾರೀಖಿನ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/how-to-succeed-in-entrance-exams/

9. ಸರ್, ನಾನು ತೆಲಂಗಾಣದವನು. ನನ್ನ ಎಲ್ಲಾ ಗುರುತಿನ ಚೀಟಿಗಳಲ್ಲಿ ತೆಲಂಗಾಣದ ವಿಳಾಸವಿದೆ. ಆದರೆ ನಾನು 8ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಕರ್ನಾಟಕದಲ್ಲಿ ಓದಿದ್ದೇನೆ. ನಾನು ಈಗ ಕೆಪಿಎಸ್‌ಸಿ, ಕೆಎಸ್‌ಪಿ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದೇ? ಅನ್ಯ ರಾಜ್ಯದವರಿಗೆ ಕರ್ನಾಟಕದಲ್ಲಿ ಮೀಸಲಾತಿ ಇದೆಯೇ?

–ಮಹೇಶ್, ತೆಲಂಗಾಣ.

ನಮಗಿರುವ ಮಾಹಿತಿಯಂತೆ, ಕೆಪಿಎಸ್ ನೇಮಕಾತಿಗೆ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು ಮತ್ತು ಈ ಬಗ್ಗೆ ವಾಸಸ್ಥಳ/ನಿವಾಸಿ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಕೆಪಿಎಸ್‌ಸಿ ಪರೀಕ್ಷೆಯನ್ನು ಅನ್ಯ ರಾಜ್ಯದವರೂ ಬರೆಯಬಹುದು. ಕನ್ನಡ ಭಾಷೆಯನ್ನು ಓದುವ, ಬರೆಯುವ ಮತ್ತು ಮಾತನಾಡುವ ಪರಿಣತಿ ಇರಬೇಕು ಹಾಗೂ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಯಾವುದೇ ಮೀಸಲಾತಿ ಇರುವುದಿಲ್ಲ.

10. ಸರ್, ನಾನು ಪಿಯುಸಿ ಪರೀಕ್ಷೆಯನ್ನು ಮಹಾರಾಷ್ಟ್ರದಲ್ಲಿ ಮಾಡಿದ್ದು ಅಂಕಪಟ್ಟಿಯಲ್ಲಿ ನನ್ನ ಹೆಸರನ್ನು ತಪ್ಪಾಗಿ ನಮೂದಿಸಲಾಗಿದೆ. ಹಾಗಾಗಿ, ಕರ್ನಾಟಕದಲ್ಲಿ ಮಾಡಿರುವ ಪದವಿ ಪರೀಕ್ಷೆಯ ಅಂಕಪಟ್ಟಿಯಲ್ಲೂ ಇದೇ ರೀತಿ ತಪ್ಪಾಗಿದೆ. ಪರಿಹಾರ ತಿಳಿಸಿ.

–ರಮೇಶ ರಾಠೋಡ, ವಿಜಯಪುರ.

ಪಿಯುಸಿ ಅಂಕಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ವ್ಯವಸ್ಥೆ ಇದೆ. ಇದಕ್ಕಾಗಿ, ನಿಗದಿತ ಅರ್ಜಿ ನಮೂನೆಯ ಪ್ರಕಾರ ಕಾಲೇಜಿನ ಮುಖಾಂತರ ಮಹಾರಾಷ್ಟ್ರ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಗೆ ಅರ್ಜಿ ಸಲ್ಲಿಸಿ. ಅದೇ ರೀತಿ, ಪದವಿ ಅಂಕಪಟ್ಟಿಯ ಲೋಪದೋಶಗಳನ್ನು ಸರಿಪಡಿಸಲು ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿ.

11. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಪರೀಕ್ಷೆಯ ಕೊನೆಯ ಪ್ರಾಯೋಗಿಕ ಪರೀಕ್ಷೆ ಬರೆದು ನಿಲ್ಲಿಸಿದ್ದೇನೆ. ಈಗ ನಾನು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬೇಕು. ಹಾಗಾದರೆ, ಏನು ಮಾಡಬೇಕು?

–ಹೆಸರು, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ ಅನುತ್ತೀರ್ಣ ಅರ್ಜಿ ಅಥವಾ ಹಿಂದಿನ ಎಂಸಿಎ (ಮಾರ್ಕ್ಸ್‌ಕಾರ್ಡ್‌ ಕಮ್ ಅಪ್ಲಿಕೇಷನ್) ಆಧಾರದ ಮೇಲೆ ಪರೀಕ್ಷಾ ಶುಲ್ಕವನ್ನು ಕಾಲೇಜಿನ ಮುಖಾಂತರ ಕಟ್ಟಿ ಪರೀಕ್ಷೆಯನ್ನು ಬರೆಯ ಬೇಕು. ಹೆಚ್ಚಿನ ವಿವರಗಳಿಗಾಗಿ ನಿಮ್ಮ ಕಾಲೇಜನ್ನು ಸಂಪರ್ಕಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು