ಬುಧವಾರ, ಸೆಪ್ಟೆಂಬರ್ 30, 2020
25 °C

PV Web Exclusive | ಉದ್ಯೋಗ ಕೇಳೋದೇ ಉದ್ಯೋಗ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಹಿಂದೊಮ್ಮೆ ನಮ್ಮ ಪ್ರಧಾನ ಮಂತ್ರಿಗಳು ಪಕೋಡಾ ಮಾರೋದು ಕೂಡ ಒಂದು ಉದ್ಯೋಗ ಎಂದು ಹೇಳಿಕೆ ನೀಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಈಗ ಕೊರೊನಾ ಬಂದು ಹಾದಿಬದಿಯಲ್ಲಿ ಪಕೋಡಾ ಮಾರುವ ಉದ್ಯೋಗವನ್ನೂ ಕಿತ್ತುಕೊಂಡಿದೆ. ಕೊರೊನಾ ಬರುವುದಕ್ಕೆ ಮೊದಲೇ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಇರುವ ಅಲ್ಪಸ್ವಲ್ಪ ಅವಕಾಶವನ್ನೂ ಕೊರೊನಾ ಕಸಿದುಕೊಂಡಿದೆ. ಕಳೆದ ಏಪ್ರಿಲ್ ತಿಂಗಳಿನಿಂದ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಷ್ಟು ವರ್ಷ ಯುವ ಜನರು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಇಲ್ಲ ಎಂದು ನಗರ ಪ್ರದೇಶಕ್ಕೆ ವಲಸೆ ಬರುತ್ತಿದ್ದರು. ಆದರೆ ಈಗ ನಗರ ಪ್ರದೇಶದಲ್ಲಿಯೂ ಉದ್ಯೋಗದ ಕೊರತೆ ಎದುರಾಗಿದೆ. ಅದಕ್ಕಾಗಿಯೇ ನಮ್ಮ ದೇಶದ ಯುವ ಜನರು ಈಗ ಪ್ರಧಾನಿ ನರೇಂದ್ರ ಮೋದಿಯವರಿಗೇ ನೇರವಾಗಿ ‘ಉದ್ಯೋಗ ಕೊಡಿ’ ಎಂದು ಟ್ವಿಟರ್ ಆಂದೋಲನವನ್ನು ಆರಂಭಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಈಗ ಇದರದ್ದೇ ಹವಾ.

ಭಾರತದ ಮಟ್ಟಿಗೆ ಇದೊಂದು ಗಮನಾರ್ಹ ವಿದ್ಯಮಾನ. ಭಾರತದಲ್ಲಿ ಈ ಹಿಂದೆಯೂ ಯುವ ಜನಾಂಗದ ಸಾಕಷ್ಟು ಹೋರಾಟಗಳು ನಡೆದಿದ್ದವು. ಆದರೂ ಭಾರತೀಯ ಮನಸ್ಸು ಹೇಗೆ ಎಂದರೆ ಯಾವುದೇ ಸಮಸ್ಯೆಗಳಿಗೆ ಅದು ಬೇರೆಯವರನ್ನು ದೂರುವುದಿಲ್ಲ. ‘ಇದೆಲ್ಲ ನಮ್ಮ ಕರ್ಮ, ಪೂರ್ವ ಜನ್ಮದ ಫಲ’ ಎಂದು ಸುಮ್ಮನಾಗುವುದೇ ಹೆಚ್ಚು. ವಿದ್ಯಾವಂತರೂ ಕೂಡ ನಿರುದ್ಯೋಗ ಸಮಸ್ಯೆಗೆ ಸರ್ಕಾರವನ್ನು ದೂರುವ ಬದಲು ‘ನಮ್ಮ ಹಣೆ ಬರಹವೇ ಇಷ್ಟು’ ಎಂದು ಬಾಯಿಮುಚ್ಚಿಕೊಂಡಿರುವುದೇ ಜಾಸ್ತಿ. ತಮ್ಮ ಮಕ್ಕಳಿಗೆ ಉದ್ಯೋಗ ಸಿಗಲಿಲ್ಲ ಎಂದರೆ ಸಾಮಾನ್ಯವಾಗಿ ಭಾರತೀಯರು ಆಡಳಿತವನ್ನು ದೂಷಿಸುವುದನ್ನು ಬಿಟ್ಟು ಜ್ಯೋತಿಷಿಗಳ ಬಳಿಗೆ ಹೋಗಿ ಮಕ್ಕಳ ಜಾತಕ ಫಲ ಹೇಗಿದೆ ಎಂದು ಕೇಳುವುದೇ ಅಧಿಕ. ಅದಕ್ಕಾಗಿಯೇ ನಿರುದ್ಯೋಗ, ಶೈಕ್ಷಣಿಕ ಸಮಸ್ಯೆ, ಆರೋಗ್ಯ ಸಮಸ್ಯೆ ನಮ್ಮ ಯಾವುದೇ ಚುನಾವಣೆಯಲ್ಲಿಯೂ ಮುಖ್ಯ ವಿಷಯ ಆಗುವುದೇ ಇಲ್ಲ. ಆದರೂ ನಮ್ಮ ಯುವಕರು ಮೈ ಕೊಡವಿಕೊಂಡು ಈಗ ‘ಉದ್ಯೋಗ ಕೊಡಿ’ ಎಂಬ ಆಂದೋಲನವನ್ನು ಆರಂಭಿಸಿರುವುದು ದೇಶದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆ ಎಂದೇ ಹೇಳಬೇಕು.

ನೋಟು ಅಮಾನ್ಯೀಕರಣ, ಅಸಮರ್ಪಕ ಜಿಎಸ್ಟಿ ಕಾಯ್ದೆ ಜಾರಿಯೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಲು ಕಾರಣ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಇದನ್ನು ಆಡಳಿತ ಪಕ್ಷ ಒಪ್ಪಿಕೊಳ್ಳಲೇ ಬೇಕು ಎಂದಿಲ್ಲ. ಆದರೆ ವಿರೋಧ ಪಕ್ಷಗಳ ಆರೋಪದಲ್ಲಿ ಕಾಳೆಷ್ಟು ಜೊಳ್ಳೆಷ್ಟು ಎಂದು ನೋಡುವ ಸಾಹಸವನ್ನಾದರೂ ಆಡಳಿತ ಪಕ್ಷ ಮಾಡಬೇಕಿತ್ತು. ಯಾಕೆಂದರೆ ಕಳೆದ ಕೆಲವು ವರ್ಷಗಳಿಂದ ಭಾರತದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಈಗಂತೂ ಜಿಡಿಪಿ ಪಾತಾಳಕ್ಕೆ ಕುಸಿದು ಹೋಗಿದೆ.

ಕುಸಿದ ಆರ್ಥಿಕತೆಗೆ ಚೇತನ ನೀಡುವುದಕ್ಕಾಗಿಯೇ ಕೇಂದ್ರ ಸರ್ಕಾರ ₹ 20 ಲಕ್ಷ ಕೋಟಿ ಪ್ಯಾಕೇಜ್ ಪ್ರಕಟಿಸಿತು. ಬಡವರಿಗೆ ಉದ್ಯೋಗ ಕಲ್ಪಿಸುವುದಕ್ಕಾಗಿ ₹ 50 ಸಾವಿರ ಕೋಟಿಯ ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ ಆರಂಭಿಸಿತು. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ನೆರವಾಗಲು ₹ 20 ಸಾವಿರ ಕೋಟಿ ಪ್ಯಾಕೇಜ್ ಪ್ರಕಟಿಸಿತು. ಆದರೂ ಆರ್ಥಿಕತೆ ಮೇಲೇಳುತ್ತಲೇ ಇಲ್ಲ. ನಿರುದ್ಯೋಗದ ಪ್ರಮಾಣ ಹೆಚ್ಚುತ್ತಲೇ ಇದೆ.

ಕೊರೊನಾ ಕಾರಣದಿಂದ ಮಾರ್ಚ್ ತಿಂಗಳಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಹೇರಿದ ನಂತರವಂತೂ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ನಂತರದ ದಿನಗಳಲ್ಲಿ ಲಾಕ್ ಡೌನ್ ಅನ್ನು ಹಂತಹಂತವಾಗಿ ತೆರವು ಮಾಡುತ್ತಾ ಬಂದರೂ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಾಣುತ್ತಿಲ್ಲ. ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್ ತಿಂಗಳಿನಲ್ಲಿ ನಿರುದ್ಯೋಗದ ಪ್ರಮಾಣ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸುಳ್ಳಾಗಿದೆ.

ಭಾರತೀಯ ಆರ್ಥಿಕತೆ ನಿಗಾ ಕೇಂದ್ರ (ಸಿಎಂಐಇ) ಬಿಡುಗಡೆ ಮಾಡಿದ ವರದಿಯನ್ನು ನೋಡಿದರೆ ದೇಶದ ಸ್ಥಿತಿಯ ಬಗ್ಗೆ ಭಯ ಉಂಟಾಗುತ್ತದೆ. ಈ ವರದಿ ಪ್ರಕಾರ ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್ ನಲ್ಲಿ ಹೆಚ್ಚಾಗಿದೆ. ಜುಲೈ ನಲ್ಲಿ ಶೇ 9.15 ಇದ್ದಿದ್ದು ಆಗಸ್ಟ್ ನಲ್ಲಿ ಶೇ 9.83ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶದಲ್ಲಿ ಪ್ರತಿ 10 ಮಂದಿಯಲ್ಲಿ ಒಬ್ಬರಿಗೆ ಉದ್ಯೋಗ ನಷ್ಟವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೂಡ ನಿರುದ್ಯೋಗದ ಪ್ರಮಾಣ ಹೆಚ್ಚಳವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜುಲೈ ತಿಂಗಳಿನಲ್ಲಿ ಶೇ 6.66ರಷ್ಟಿದ್ದ ನಿರುದ್ಯೋಗ ಆಗಸ್ಟ್ ನಲ್ಲಿ ಶೇ 7.65ಕ್ಕೆ ಹೆಚ್ಚಾಗಿದೆ.

ನಿರುದ್ಯೋಗದ ಪ್ರಮಾಣದಲ್ಲಿ ಹರಿಯಾಣ (ಶೇ 33.5) ಮೊದಲ ಸ್ಥಾನದಲ್ಲಿದ್ದರೆ ತ್ರಿಪುರಾ (ಶೇ 27.9) ಎರಡನೇ ಸ್ಥಾನದಲ್ಲಿದೆ. ಕರ್ನಾಟಕ (ಶೇ 0.5) ಕೊನೆಯ ಸ್ಥಾನದಲ್ಲಿದೆ ಎನ್ನುವುದೇ ಸಮಾಧಾನ. ಕೊರೊನಾ ಕಾಲದಲ್ಲಿ ದೇಶದಲ್ಲಿ ಸುಮಾರು 2 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ವೇತನ ಪಡೆಯುತ್ತಿದ್ದ ನೌಕರರೂ ವೇತನ ಕಳೆದುಕೊಂಡು ನವ ನಿರುದ್ಯೋಗಿಗಳಾಗಿದ್ದಾರೆ.

ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆಯನ್ನು ನೀಡಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತ್ತು. 2014ರಿಂದ ಇಲ್ಲಿವರೆಗೆ 12 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಉದ್ಯೋಗ ಸೃಷ್ಟಿಯಾಗುವ ಮಾತು ಹಾಗಿರಲಿ, ಇರುವ ಉದ್ಯೋಗವನ್ನು ಉಳಿಸಿಕೊಳ್ಳಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ವಿಶ್ವದಲ್ಲಿಯೇ ಅತಿ ಹೆಚ್ಚು ಯುವಕರನ್ನು ಹೊಂದಿದ ದೇಶ ನಮ್ಮದು. ನಮ್ಮ ಅರ್ಹ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ನೀಡದಿದ್ದರೆ ದೇಶ ಇನ್ನಷ್ಟು ಅಧೋಗತಿಗೆ ಹೋಗುವುದು ಖಂಡಿತ.

ಉದ್ಯೋಗ ಕೊಡಿ ಎಂದು ಪ್ರಧಾನಿಯನ್ನು ಕೇಳುವ ಆಂದೋಲನವನ್ನು ಯುವ ಕಾಂಗ್ರೆಸ್ ಆಗಸ್ಟ್ ತಿಂಗಳಿನಲ್ಲಿ ಆರಂಭಿಸಿತು. ಅದಾದ ನಂತರ ಈಗ ಅದು ಕೇವಲ ಕಾಂಗ್ರೆಸ್ ಪಕ್ಷದ ಆಂದೋಲನವಾಗಿ ಉಳಿದುಕೊಂಡಿಲ್ಲ. ದೇಶದ ಎಲ್ಲ ಭಾಗಗಳಿಂದಲೂ ಯುವಕರು ‘ಉದ್ಯೋಗ ಕೊಡಿ’ ಎಂಬ ಆಂದೋಲನವನ್ನು ಆರಂಭಿಸಿದ್ದಾರೆ. ಉದ್ಯೋಗ ಕೊಡಿ ಎಂದು ಕೇಳುವುದೇ ಒಂದು ಉದ್ಯೋಗವಾಗಿದೆ. ಇದು ಇನ್ನಷ್ಟು ತೀವ್ರವಾಗುವುದರೊಳಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳದಿದ್ದರೆ ಅದು ದೇಶಕ್ಕೆ ಒಳ್ಳೆಯದಲ್ಲ. ಯುವಕರು ಭಯೋತ್ಪಾದಕರಾಗುವುದನ್ನು ತಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡುತ್ತಾರೆ. ಆದರೆ ದುಡಿಯುವ ಕೈಗಳನ್ನು ಬಹಳ ದಿನ ಖಾಲಿ ಇಟ್ಟರೆ ಅದು ಏನನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗದು. ಮಾಯೆ ಈಗ ಕೊಂಚ ಸರಿದ ಹಾಗಿದೆ. ಎಲ್ಲರನ್ನೂ ಎಲ್ಲ ಕಾಲಕ್ಕೂ ಮರುಳು ಮಾಡುವುದು ಸಾಧ್ಯವಿಲ್ಲ ಎಂಬ ಅರಿವು ಅಲ್ಲಲ್ಲಿ ಕಾಣತೊಡಗಿದೆ.      

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು