ಸೋಮವಾರ, ಮೇ 16, 2022
23 °C

ಪಿಎಸ್‌ಐ ಹುದ್ದೆ ನೇಮಕಾತಿ ಪ್ರಕ್ರಿಯೆ ಹೇಗೆ?

ಬಿ.ಆರ್. ಮೋಹನ್‌ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಅಧಿಸೂಚನೆಯನ್ನು ಹೊರಡಿಸಿರುವುದು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳ ನೇಮಕಾತಿ ನಿರೀಕ್ಷೆಯಲ್ಲಿದ್ದ ಯುವ ಸಮೂಹದಲ್ಲಿ ಭರವಸೆ ಮೂಡಿಸಿದೆ ಎನ್ನಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗಲು ಬೇಕಾಗಿರುವ ಕಠಿಣ ಪರಿಶ್ರಮ, ದೃಢ ಸಂಕಲ್ಪ ಮತ್ತು ಅವಿರತ ಪ್ರಯತ್ನಗಳ ಹಾದಿ ತುಳಿದಲ್ಲಿ, ಪೊಲೀಸ್ ಇಲಾಖೆಯಲ್ಲಿ ಹುದ್ದೆಗಳನ್ನು ಪಡೆಯಬಹುದಾಗಿದೆ. 

ಅರ್ಜಿಗಳನ್ನು ಸಲ್ಲಿಸಲು ಫೆಬ್ರುವರಿ 22 ಕೊನೆಯ ದಿನವಾಗಿದ್ದು, ಹೆಚ್ಚಿನ ವಿವರಗಳನ್ನು ಪೊಲೀಸ್ ಇಲಾಖೆಯ ವೆಬ್ ಲಿಂಕ್ http://rec20.ksp-on*ine.in/ ಇಲ್ಲಿ ಪಡೆಯಬಹುದಾಗಿದೆ.

ಆಯ್ಕೆ ಪ್ರಕ್ರಿಯೆ

ದೈಹಿಕ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ

* ದೇಹದಾರ್ಢ್ಯತೆ ಪರೀಕ್ಷೆ: (ಸಹಿಷ್ಣುತೆ ಪರೀಕ್ಷೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳಿಗೆ ಮಾತ್ರ)

* ಎಲ್ಲಾ ನೇರ ಅಭ್ಯರ್ಥಿಗಳಿಗೆ, ಸೇವಾನಿರತ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅನ್ವಯಿಸುವಂತೆ ಎತ್ತರ: ಕನಿಷ್ಠ 168 ಸೆಂ.ಮೀ. ಎದೆ ಸುತ್ತಳತೆ : 86 ಸೆಂ.ಮೀ. (ಪೂರ್ತಿ ವಿಸ್ತರಿಸಿದಾಗ) ಕನಿಷ್ಠ ವಿಸ್ತರಣೆ 5 ಸೆಂ.ಮೀ.

*ಮಹಿಳಾ ಅಭ್ಯರ್ಥಿಗಳಿಗೆ ಅನ್ವಯಿಸುವಂತೆ:

ಎತ್ತರ: ಕನಿಷ್ಠ 157 ಸೆಂ.ಮೀ., ತೂಕ: ಕನಿಷ್ಠ 45 ಕೆ.ಜಿ.

ಅಭ್ಯರ್ಥಿಗಳು 1600 ಮೀಟರ್ ಓಟವನ್ನು ಏಳು ನಿಮಿಷಗಳೊಳಗಾಗಿ ಹಾಗೂ ಮಹಿಳಾ, ಸೇವಾನಿರತ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 400 ಮೀಟರ್ ಓಟವನ್ನು ಎರಡು ನಿಮಿಷಗಳೊಳಗಾಗಿ ಪೂರ್ಣಗೊಳಿಸಿದರೆ ಮಾತ್ರ ಮುಂದಿನ 7 ಸಹಿಷ್ಣುತೆ ಪರೀಕ್ಷೆಗೆ ಅರ್ಹಗೊಳ್ಳುವರು. ಇದರ ಜೊತೆಗೆ ಉದ್ದ ಜಿಗಿತ ಅಥವಾ ಎತ್ತರ ಜಿಗಿತ ಮತ್ತು ಗುಂಡು ಎಸೆತ ಪರೀಕ್ಷೆ ಇರುತ್ತದೆ.

ಲಿಖಿತ ಪರೀಕ್ಷೆ

ಲಿಖಿತ ಪರೀಕ್ಷೆಯು ಪದವಿ ಮಟ್ಟದ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

ಪತ್ರಿಕೆ-1, 50 ಅಂಕಗಳು: ಈ ಪ್ರಶ್ನೆಪತ್ರಿಕೆಯಲ್ಲಿ ಪ್ರಬಂಧ ಬರಹ, ಸಾರಾಂಶ ಬರಹ, ಭಾಷಾಂತರ ಪ್ರಶ್ನೆಗಳು ಇರುತ್ತವೆ. ಪ್ರಬಂಧ ಬರಹದಲ್ಲಿ 600 ಶಬ್ದಗಳ ಮಿತಿಯನ್ನು ಮೀರಬಾರದು. ಪ್ರಬಂಧದ ಜೊತೆ ಸಾರಾಂಶ ಬರಹ ಪ್ರಶ್ನೆಯನ್ನೂ ಕೊಡಲಾಗುವುದು. ಅಭ್ಯರ್ಥಿಗಳು ಕೊಡಲಾಗಿರುವ ಉತ್ತರ ಪತ್ರಿಕೆಯಲ್ಲಿ ಉತ್ತರಿಸತಕ್ಕದ್ದು ಹಾಗೂ ಹೆಚ್ಚುವರಿ ಉತ್ತರ ಪತ್ರಿಕೆಗಳನ್ನು ಕೊಡಲಾಗುವುದಿಲ್ಲ. ಈ ಪರೀಕ್ಷೆಯ ಅವಧಿ ಒಂದು ಗಂಟೆ ಮೂವತ್ತು ನಿಮಿಷಗಳು. (20 ಅಂಕಗಳು ಪ್ರಬಂಧಕ್ಕೆ, 10 ಅಂಕಗಳು ಸಾರಾಂಶ ಬರಹಕ್ಕೆ ಹಾಗೂ 20 ಅಂಕಗಳು ಕನ್ನಡದಿಂದ ಇಂಗ್ಲಿಷ್‌ಗೆ ಮತ್ತು ಇಂಗ್ಲಿಷ್‌ನಿಂದ ಕನ್ನಡ ಭಾಷಾಂತರಕ್ಕೆ) ಇದರಲ್ಲಿ ಕನಿಷ್ಠ ಅಂಕಗಳು ಇರುವುದಿಲ್ಲ.

ಪತ್ರಿಕೆ-2, 150 ಅಂಕಗಳು: ಈ ಪ್ರಶ್ನೆಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿರುತ್ತದೆ. 150 ಅಂಕಗಳಿಗೆ ವಸ್ತುನಿಷ್ಠ (ಆಬ್ಜೆಕ್ಟಿವ್) ಮಾದರಿಯದಾಗಿದ್ದು, ಬಹುವಿಧ ಆಯ್ಕೆ ಉತ್ತರಗಳ ಲಿಖಿತ ಪರೀಕ್ಷೆ ಇರುತ್ತದೆ. ಇವುಗಳನ್ನು ಉತ್ತರಿಸಲು ಒಂದು ಗಂಟೆ ಮೂವತ್ತು ನಿಮಿಷ ಸಮಯ ನೀಡಲಾಗುತ್ತದೆ. ಈ ಪ್ರಶ್ನೆ ಪತ್ರಿಕೆಯಲ್ಲಿ ಅಭ್ಯರ್ಥಿಯ ಮಾನಸಿಕ ಸಾಮರ್ಥ್ಯವನ್ನು ಅಳೆಯಲಾಗುವುದು. ಪ್ರಶ್ನೆ ಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ಜ್ಞಾನವನ್ನೊಳಗೊಂಡ ಸಾಮಾನ್ಯ ಅಧ್ಯಯನ, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಭಾರತೀಯ ಸಂವಿಧಾನ, ಇತಿಹಾಸ, ಭೂಗೋಳ, ವಿಜ್ಞಾನ, ಕಲೆ, ಸಾಹಿತ್ಯ, ಮಾನಸಿಕ ಸಾಮರ್ಥ್ಯ ಮತ್ತು ನೀತಿ ಶಿಕ್ಷಣ ಇತ್ಯಾದಿಗಳ ಬಗ್ಗೆ ಪ್ರಶ್ನೆಗಳು ಇರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ ಅಂತಹುದೇ ಪ್ರಶ್ನೆಯ ಸರಿ ಉತ್ತರದ ಶೇ 25 (0.375) ರಷ್ಟು ಅಂಕಗಳನ್ನು ಕಳೆಯಲಾಗುವುದು. ಅಭ್ಯರ್ಥಿಗಳು ಎರಡು ಪತ್ರಿಕೆಗಳಿಗೂ ಹಾಜರಾಗುವುದು ಕಡ್ಡಾಯವಾಗಿರುತ್ತದೆ.

(ಲೇಖಕ: ನಿರ್ದೇಶಕರು, ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ತರಬೇತಿ ಪರೀಕ್ಷೆ ಕೇಂದ್ರ, ಬೆಂಗಳೂರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು