ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೂರ್ತಿಯ ಉದ್ಯಮಿ: ಉದ್ಯೋಗದ ದಣಿವು, ಉದ್ಯಮದ ಆರಂಭ

ಸ್ಫೂರ್ತಿಯ ಉದ್ಯಮಿ
Last Updated 11 ನವೆಂಬರ್ 2020, 19:30 IST
ಅಕ್ಷರ ಗಾತ್ರ

ವಿಪುಲ ಅವಕಾಶಗಳನ್ನು ಹೊಂದಿರುವ ಫ್ಯಾಷನ್ ಉದ್ಯಮದಲ್ಲಿ ಯಶಸ್ಸನ್ನು ಕಂಡಿದ್ದ ಆಶಾ ಬಾಲಸುಬ್ರಹ್ಮಣ್ಯಂ ಅವರನ್ನು ಒಂದು ಕೊರತೆ ಕಾಡುತ್ತಿತ್ತು. ಸಮಾಜದಿಂದ ಪಡೆದುಕೊಂಡಿದ್ದನ್ನು ಪುನಃ ಸಮಾಜಕ್ಕೇ ಹಿಂದಿರುಗಿಸುವ ಅವಕಾಶವನ್ನು ಅವರು ಅರಸುತ್ತಿದ್ದರು. ಕಾರ್ಪೋರೇಟ್ ಉದ್ಯೋಗ ಅವರನ್ನು ದಣಿಸಿತ್ತು.

ಉತ್ಕಟವಾದ ಸಾಮಾಜಿಕ ಕಳಕಳಿ ಹೊಂದಿದ್ದ ಆಶಾ, ಪರಿಸರದ ಪರ ಕಾಳಜಿ ಹೊಂದಿರುವ ಮತ್ತು ಸಮಾಜೋನ್ನತಿಯನ್ನು ಧ್ಯೇಯವಾಗಿ ಇಟ್ಟುಕೊಂಡಿರುವ ಉದ್ಯಮ ಸ್ಥಾಪಿಸಿದರು. ಆರೋಗ್ಯ ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನ ಕೇಂದ್ರವಾಗಿಟ್ಟುಕೊಂಡು, ಆಶಾ ಅವರು ‘ಟಮ್ಮಿ ಫ್ಯುಯಲ್’ ಎಂಬ ಕೆಫೆ ಪ್ರಾರಂಭಿಸಿದರು. ಬೆಂಗಳೂರಿನ ಜಯನಗರದಲ್ಲಿರುವ ‘ಟಮ್ಮಿ’ಯಲ್ಲಿ ವಿವಿಧ ರುಚಿಗಳ ಆರೋಗ್ಯಕರ ಆಹಾರ ದೊರೆಯುತ್ತದೆ. ಆಹಾರದ ಬಗ್ಗೆ ಜನ ಹೆಚ್ಚು ಗಮನ ನೀಡುತ್ತಿರುವ ಇಂದಿನ ದಿನಗಳಲ್ಲಿ, ‘ಟಮ್ಮಿ’ಯಲ್ಲಿ ರುಚಿಕರವೂ ಪೌಷ್ಟಿಕವೂ ಆಗಿರುವ ಖಾದ್ಯಗಳು ದೊರೆಯುತ್ತವೆ.

ಪರಿಸರ ಸ್ನೇಹಿ ಮತ್ತು ಶುದ್ಧ ಸಸ್ಯಾಹಾರಿ ಆಹಾರ ‘ಟಮ್ಮಿ’ಯ ವೈಶಿಷ್ಟ್ಯ. ಇದು ಶೂನ್ಯ-ತ್ಯಾಜ್ಯ ಕೆಫೆಯಾಗಿದ್ದು, ಇಲ್ಲಿ ಆಹಾರ ತಯಾರಿಕೆಗೆ ಬಳಸುವ ಸಾಮಗ್ರಿಗಳನ್ನು ಅತ್ಯಂತ ನಾಜೂಕಾಗಿ ಉಪಯೋಗಿಸಲಾಗುತ್ತದೆ.

ಎಲ್ಲ ಉದ್ಯಮಗಳಂತೆ, ‘ಟಮ್ಮಿ’ ಕೂಡ ತನ್ನದೇ ಆದ ಸವಾಲುಗಳನ್ನು ಎದುರಿಸಬೇಕಾಯಿತು. ಪ್ರಾರಂಭದಲ್ಲಿ ಹಣಕಾಸು ನಿರ್ವಹಣೆ ಮತ್ತು ಉದ್ಯಮಕ್ಕೆ ಜನಮನ್ನಣೆ ತಂದುಕೊಳ್ಳುವುದು ದೊಡ್ಡ ಸಮಸ್ಯೆಗಳಾಗಿದ್ದವು. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿದ್ದರಿಂದ ‘ಟಮ್ಮಿ’ ಕುರಿತು ಗ್ರಾಹಕ ಸಮುದಾಯದಲ್ಲಿ ಒಬ್ಬರಿಂದೊಬ್ಬರಿಗೆ ಮಾಹಿತಿ ಹರಡಿತು. ಹೀಗಾಗಿ ಉದ್ಯಮಕ್ಕೆ ಜನಮನ್ನಣೆ ದೊರೆಯಿತು. ಸಾಮಾಜಿಕ ಮಾಧ್ಯಮಗಳಲ್ಲೂ ಟಮ್ಮಿ ಕೆಫೆ ಪ್ರಮುಖ ಬ್ರ್ಯಾಂಡ್ ಆಗಿ ಕಾಣಿಸಿಕೊಳ್ಳುವುದು ಶುರುವಾಯಿತು.

ಲಾಕ್‌ಡೌನ್ ಪರಿಣಾಮಗಳನ್ನು ಟಮ್ಮಿ ಕೆಫೆ ಕೂಡ ಎದುರಿಸಬೇಕಾಯಿತು. ಉದ್ಯಮಕ್ಕೆ ಹೊಸ ಜೀವ ತುಂಬಲು, ಭರವಸೆ ಅತ್ಯಂತ ಅವಶ್ಯಕವಾಗಿತ್ತು. ಕೆಫೆಯಲ್ಲಿ ಶುಚಿತ್ವಕ್ಕೆ ನೀಡುವ ಮಹತ್ವದ ಕುರಿತು ಗ್ರಾಹಕರಿಗೆ ಮನದಟ್ಟು ಮಾಡಿಕೊಡಲಾಯಿತು. ಶುಚಿತ್ವ ಕಾಯಲು ಅನುಸರಿಸುವ ಕ್ರಮಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ಹಂಚಿಕೊಳ್ಳಲಾಯಿತು. ಇದರಿಂದಾಗಿ ಗ್ರಾಹಕರಿಗೆ ಟಮ್ಮಿ ಕೆಫೆಯಲ್ಲಿ ಮತ್ತೆ ಭರವಸೆ ಮೂಡಿತು.

ಪ್ರತಿ ಸಂಕಷ್ಟವೂ ಅವಕಾಶಗಳನ್ನು ಹೊತ್ತು ತರುತ್ತದೆ. ಕೋವಿಡ್–19 ಸಾಂಕ್ರಾಮಿಕದಿಂದ ಉದ್ಯಮದ ಮೇಲಾದ ಪರಿಣಾಮಗಳನ್ನು ಅರಿತ ಆಶಾ ಅವರು ತಾವು ಅನುಸರಿಸುತ್ತಿದ್ದ ವಹಿವಾಟಿನ ಕ್ರಮದಲ್ಲಿ ಸಂದರ್ಭಕ್ಕೆ ತಕ್ಕ ಬದಲಾವಣೆ ಮಾಡಿಕೊಂಡರು. ಪರಿಣಾಮಾಗಿ ‘ರೋಗ ನಿರೋಧಕ ಶಕ್ತಿ ನೀಡುವ ಭೋಜನ’ವು ‘ಟಮ್ಮಿ’ಯ ಮೆನುವಿನಲ್ಲಿ ಸೇರಿಕೊಂಡಿತು. ‘ಪೌಷ್ಟಿಕ ಮತ್ತು ಆರೋಗ್ಯ ವರ್ಧಕ’ ಕಷಾಯಗಳು, ಸಿರಿಧಾನ್ಯದ ಖಾದ್ಯಗಳು, ಸಾಂಬಾರು, ಹರ್ಬಲ್ ಸಾರು, ಪಲ್ಯ, ಮೆಂತ್ಯದ ಕಾಕ್ರಾ, ಉಪ್ಪಿನಕಾಯಿ, ತಾಜಾ ತರಕಾರಿಗಳು, ವೀಳ್ಯದೆಲೆ ಮತ್ತು ಕಡಲೆಕಾಯಿ-ಬೆಲ್ಲದ ಚಿಕ್ಕಿಯನ್ನು ಭೋಜನದಲ್ಲಿ ನೀಡಲಾರಂಭಿಸಿದರು. ಈ ಭೋಜನವನ್ನು ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಅಥವಾ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸರಬರಾಜು ಮಾಡಲು ಪ್ರಾರಂಭಿಸಿದರು.

ಉದ್ಯಮಶೀಲರಿಗೆ ಆಶಾ ಅವರ ಸಂದೇಶ ಹೀಗಿದೆ: ನಿಮ್ಮ ಉದ್ಯಮದಲ್ಲಿ ಯಶಸ್ವಿಯಾಗಲು ನಿಮ್ಮ ಪ್ರಯತ್ನಗಳ ಮೇಲೆ ಸಂಪೂರ್ಣವಾಗಿ ಹಾಗೂ ನಿರಂತರವಾಗಿ ಗಮನ ಕೊಡಿ. ಎಂದಿಗೂ ಸೋಲನ್ನೊಪ್ಪಿಕೊಳ್ಳಬೇಡಿ. ವಹಿವಾಟಿನ ರೀತಿಯನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಿ, ಪರಿಸರ ಪರ ಕಾಳಜಿಯನ್ನು ಯಾವಾಗಲೂ ಹೊಂದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT