ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಬುದ್ಧಿಮತ್ತೆ: ಐಟಿ ಕ್ಷೇತ್ರದ ಭವಿಷ್ಯ

Last Updated 9 ಜುಲೈ 2019, 19:30 IST
ಅಕ್ಷರ ಗಾತ್ರ

ನಾನು ದ್ವಿತೀಯ ಪಿಯುಸಿಯಲ್ಲಿ ಪಿಸಿಎಂಸಿಎಸ್ ತೆಗೆದುಕೊಂಡಿದ್ದೇನೆ. ನನಗೆ ಕೃತಕ ಬುದ್ಧಿಮತ್ತೆ ವಿಷಯದ ಬಗ್ಗೆ ಓದಲು ಆಸಕ್ತಿ ಇದೆ. ಅದಕ್ಕಾಗಿ ನಾನು ಯಾವ ಕೋರ್ಸ್ ಆಯ್ಕೆ ಮಾಡಬೇಕು ತಿಳಿಸಿ.

ಸೃಜನ್, ಅರಸೀಕೆರೆ

ಗೂಗಲ್ ಸರ್ಚ್‌ನಲ್ಲಿ ನಮ್ಮ ಧ್ವನಿಯ ಆಧಾರದ ಮೇಲೆ ಆಗುವ ಹುಡುಕಾಟದಿಂದ ಹಿಡಿದು ಆಟೋಮೇಟೆಡ್ ಕಾರುಗಳು ಓಡುವವರೆಗೂ ಅಳವಡಿಸಬಹುದಾದ ‘ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ (ಎಐ)’ ಕ್ಷೇತ್ರವನ್ನು ಐಟಿ ಕ್ಷೇತ್ರದ ಭವಿಷ್ಯ ಎಂದೇ ಪರಿಗಣಿಸಲಾಗುತ್ತಿದೆ. ಹೆಚ್ಚಿನ ಕಂಪನಿಗಳು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ಅಳವಡಿಕೆಯನ್ನು ಆರಂಭಿಸಿರುವುದರಿಂದ, ಎಐ ಕ್ಷೇತ್ರದಲ್ಲಿ ಮುಂದೆ ಅನೇಕ ಹುದ್ದೆಗಳಿಗೆ ಅವಕಾಶವಿದ್ದು, ಒಂದು ಉತ್ತಮ ಉದ್ಯೋಗಾವಕಾಶಗಳ ಕ್ಷೇತ್ರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೇಶದ ಕೆಲವು ಸಂಸ್ಥೆಗಳು ಕೃತಕ ಬುದ್ಧಿಮತ್ತೆ ವಿಷಯದಲ್ಲಿ ಪದವಿಯನ್ನು ಪರಿಚಯಿಸಿವೆ. ಹೈದರಾಬಾದ್ ವಿಶ್ವವಿದ್ಯಾಲಯ, ಐಐಟಿ ಮುಂಬೈ, ಐಐಟಿ ಮದ್ರಾಸ್, ಐಐಎಸ್ಐ ಬೆಂಗಳೂರು, ಐ.ಎಸ್.ಐ. ಕೊಲ್ಕತ್ತಾ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆಯ ಪದವಿ ಅಥವಾ ಸ್ನಾತಕೋತ್ತರ ಶಿಕ್ಷಣ ಲಭ್ಯವಿದೆ. ಆ ಬಗ್ಗೆ ನಿಖರವಾದ ಮಾಹಿತಿಯನ್ನು ಆಯಾ ಸಂಸ್ಥೆಯ ಅಧಿಕೃತ ವೈಬ್‌ಸೈಟ್‌ನಲ್ಲಿ ಪಡೆಯಿರಿ. ಒಂದುವೇಳೆ ಈ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯಲು ಆಗದಿದ್ದಲ್ಲಿ ಕಂಪ್ಯೂಟರ್ ವಿಷಯದಲ್ಲಿ ಎಂಜಿನಿಯರಿಂಗ್ ಮುಗಿಸಿ, ಕೃತಕ ಬುದ್ಧಿಮತ್ತೆಯಲ್ಲಿ ಸ್ನಾತಕೋತ್ತರ ಪದವಿ ಮಾಡಬಹುದು ಅಥವಾ ಕೆಲವು ಆನ್‌ಲೈನ್‌ ವೇದಿಕೆಗಳಲ್ಲಿ ಸರ್ಟಿಫಿಕೇಟ್ ಪಡೆಯುಬಹುದು. ನಂಬಲು ಅರ್ಹವಾದ ಮತ್ತು ಉತ್ತಮ ಗುಣಮಟ್ಟದ ಕೋರ್ಸ್‌ಗಳನ್ನು www.udacity.com, Coursera ಮತ್ತು www.edx.org ಗಳಂತಹ ವೇದಿಕೆಗಳಲ್ಲಿ ಮಾಡಬಹುದು.

ಮಷಿನ್ ಲರ್ನಿಂಗ್ ರಿಸರ್ಚರ್, ಎಐ ಎಂಜಿನಿಯರ್, ಡೇಟಾ ಮೈನಿಂಗ್ ಮತ್ತು ಅನಾಲಿಸಿಸ್, ಮಷಿನ್ ಲರ್ನಿಂಗ್ ಎಂಜಿನಿಯರ್, ಡೇಟಾ ಸೈಂಟಿಸ್ಟ್, ಬ್ಯುಸಿನೆಸ್ ಇಂಟೆಲಿಜೆನ್ಸ್ ಡೆವಲೆಪರ್ ಇತ್ಯಾದಿಗಳು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳು.

ಹೆಚ್ಚಿನ ಮಾಹಿತಿ ಮತ್ತು ವೈಯಕ್ತಿಕ ಮಾರ್ಗದರ್ಶನಕ್ಕಾಗಿ ನಿಮ್ಮ ಜಿಲ್ಲೆಯ ಉದ್ಯೋಗ ವಿನಿಮಯ ಕೇಂದ್ರದಲ್ಲಿರುವ ಮಾದರಿ ವೃತ್ತಿ ಕೇಂದ್ರದ ಮಾರ್ಗದರ್ಶಕರಿಂದ ಉಚಿತ ಮಾರ್ಗದರ್ಶನ ಪಡೆಯಿರಿ.

***

ನಾನು ಉತ್ತರ ಕರ್ನಾಟಕದ ಕಾಲೇಜ್ ಒಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ನನಗೆ ಪರಿಸರವಾದಿಯಾಗಬೇಕೆಂಬ ಮನಸ್ಸಿದೆ. ಹೀಗಾಗಿ ಕರ್ನಾಟಕದಲ್ಲಿ ಪರಿಸರ ವಿಜ್ಞಾನದಲ್ಲಿ ಬಿ.ಎಸ್‌ಸಿ. ಮಾಡಲು ಒಳ್ಳೆಯ ಕಾಲೇಜಿನ ವಿವರ ನೀಡಿ. ಸದ್ಯ ಭಾರತದಲ್ಲಿ ಇದಕ್ಕೆ ಹೆಚ್ಚಿ ಅವಕಾಶಗಳಿವೆಯೇ ಹಾಗೂ ವಿದೇಶದಲ್ಲಿ ಪಿಎಚ್‌.ಡಿ. ಮಾಡಲು ವಿವರಗಳನ್ನು ತಿಳಿಸಿ.

ಸಂದೀಪ್‌ ಕುಲಕರ್ಣಿ, ಊರು ಬೇಡ

ಪರಿಸರ ತಜ್ಞರಾಗುವ ಉದ್ದೇಶ ಹೊಂದಿರುವ ನೀವು ಆ ಕುರಿತು ಸ್ಕೋಪ್ ಇದೆಯೋ ಇಲ್ಲವೊ ಎಂದು ಆಲೋಚಿಸಬೇಡಿ. ಎಲ್ಲಾ ಕ್ಷೇತ್ರಗಳಿಗೂ ತನ್ನದೇ ಆದ ಸ್ಕೋಪ್ ಇದೆ ಮತ್ತು ನಾವು ಆ ಕ್ಷೇತ್ರದಲ್ಲಿ ಓದು ಮತ್ತು ಸಾಮರ್ಥ್ಯವನ್ನು ಪಡೆದುಕೊಂಡಾಗ ಸೂಕ್ತವಾದ ಅವಕಾಶಗಳು ಲಭ್ಯವಾಗುತ್ತವೆ. ಹೀಗಾಗಿ ಆ ಬಗ್ಗೆ ಯೋಚಿಸದೆ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯಿರಿ.

ಪರಿಸರ ವಿಜ್ಞಾನದ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಪರಿಸರ ವಿಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯುವುದು ಮುಖ್ಯವಾಗುತ್ತದೆ. ನೇರವಾಗಿ ಪರಿಸರ ವಿಜ್ಞಾನದ ಅವಕಾಶ ದೊರಕದೆ ಇದ್ದಲ್ಲಿ ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರ ವಿಷಯಗಳಿರುವ ಪದವಿ ಶಿಕ್ಷಣ ಪೂರೈಸಿ ನಂತರ ಪರಿಸರ ವಿಜ್ಞಾನದಲ್ಲಿ ಅಥವಾ ಪ್ರಾಣಿಶಾಸ್ತ್ರದಲ್ಲಿ ಅಥವಾ ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಬಹುದು. ಇದಲ್ಲದೆ ಪರಿಸರ ವಿಜ್ಞಾನ ಕ್ಷೇತ್ರದಲ್ಲಿ ಇರಲು ಬಯಸುವುದಾದರೆ ಮರೈನ್ ವಿಜ್ಞಾನ, ಜಿಯಾಲಜಿ ಇತ್ಯಾದಿ ವಿಷಯಗಳನ್ನು ಓದಬಹುದು.

ರಾಜ್ಯದಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜು, ಕ್ರೈಸ್ಟ್ ಕಾಲೇಜು, ಸಿ.ಎಮ್.ಆರ್. ವಿಶ್ವವಿದ್ಯಾಲಯ, ಮೌಂಟ್ ಕಾರ್ಮೆಲ್, ಮೈಸೂರಿನ ಜೆ.ಎಸ್.ಎಸ್. ಅಕಾಡೆಮಿ, ಮಹಾಜನಾಸ್ ಕಾಲೇಜು, ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜು ಹಾಗೂ ಇನ್ನೂ ಅನೇಕ ಕಾಲೇಜುಗಳಲ್ಲಿ ಪ್ರಯತ್ನಿಸಬಹುದು. ಈಗಾಗಲೇ ಓದಿರುವ ಸ್ನೇಹಿತರ ಬಳಿ ಹೆಚ್ಚು ಪ್ರಾಯೋಗಿಕ ಅನುಭವ ಕೊಡಮಾಡುವ ಕಾಲೇಜುಗಳ ಬಗ್ಗೆ ತಿಳಿದು ಆಯ್ಕೆ ಮಾಡಿಕೊಳ್ಳಿ.

ನಿಮ್ಮ ಪದವಿ ಅಥವಾ ಸ್ನಾತಕೋತ್ತರ ಪದವಿಯ ನಂತರ ಪರಿಸರ ತಜ್ಞರಾಗಿ, ವೇಸ್ಟ್ ಮ್ಯಾನೇಜ್‌ಮೆಂಟ್ ತಜ್ಞರಾಗಿ, ಪರಿಸರ ವಿಜ್ಞಾನದ ಸಂಶೋಧಕರಾಗಿ, ಗುಣಮಟ್ಟ ಪರೀಕ್ಷಕರಾಗಿ ಸರ್ಕಾರಿ ಸಂಸ್ಥೆಗಳಲ್ಲಿ, ಖಾಸಗಿ ಉದ್ಯಮ ಮತ್ತು ಕೈಗಾರಿಕೆಗಳಲ್ಲಿ, ಸರ್ಕಾರೇತರ ಸಂಘ ಸಂಸ್ಥೆಗಳಲ್ಲಿ, ಸಂಶೋಧನ ಕೇಂದ್ರಗಳಲ್ಲಿ ಉದ್ಯೋಗ ಪಡೆಯಬಹುದು.

ವಿದೇಶಿ ವಿಶ್ವವಿದ್ಯಾಲಯದಲ್ಲಿ ನೀವು ಡಾಕ್ಟರೇಟ್ ಪದವಿ ಪಡೆಯಲು ಬಯಸುವಿರಾದರೆ ನಿಮ್ಮ ಸ್ನಾತಕೋತ್ತರ ಪದವಿಯನ್ನು ಪ್ರತಿಷ್ಠಿತ ಸಂಸ್ಥೆಯಲ್ಲಿ ಮಾಡಿದರೆ ಉತ್ತಮ. ನಿಮ್ಮ ಸ್ನಾತಕೋತ್ತರ ಪದವಿಯ ನಂತರ ನಿಮ್ಮ ಆಸಕ್ತಿಯ ಕ್ಷೇತ್ರ ಮತ್ತು ಸಂಶೋಧನ ಪ್ರಶ್ನೆಯನ್ನು ನಿಗದಿಪಡಿಸಿಕೊಂಡು ಆ ವಿಷಯಗಳನ್ನು ಸಂಶೋಧನೆ ಮಾಡುತ್ತಿರುವ ಪ್ರಾಧ್ಯಾಪಕರು ಮತ್ತು ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ ಗೈಡ್‌ಗಳನ್ನು ಪಡೆಯಬೇಕು. ಸಂಶೋಧನ ಗೈಡ್‌ಗೆ ನೀವು ಸಲ್ಲಿಸಿದ ವಿಷಯದಲ್ಲಿ ಆಸಕ್ತಿ ಇದ್ದಲ್ಲಿ ಆಯಾ ವಿಶ್ವವಿದ್ಯಾಲಯದ ಪ್ರಕ್ರಿಯೆಯ ಪ್ರಕಾರ ಸೇರ್ಪಡೆ ಆಗಬೇಕಾಗುತ್ತದೆ. ಸದ್ಯ ನೀವು ಪರಿಸರ ವಿಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದುಕೊಳ್ಳಿ, ಈ ಕ್ಷೇತ್ರದಲ್ಲಿ ಆಗಿರುವ ಸಂಶೋಧನೆಗಳ ಕುರಿತು ಓದಿಕೊಂಡು ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಿ, ಸ್ನಾತಕೋತ್ತರ ಪದವಿಯಲ್ಲಿ ಸಂಶೋಧನ ಅನುಭವ ಪಡೆದುಕೊಂಡು ಸಂಶೋಧನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ. ನೀವು ನಿಮ್ಮ ಗುರಿಯನ್ನು ತಲುಪಲಿ ಎಂದು ಆಶಿಸುತ್ತೇನೆ.

***

ನನ್ನ ಮಗ ಪಿಯುಸಿ ಮುಗಿಸಿ 2–3 ಬೇರೆ ಬೇರೆ ಡಿಗ್ರಿ ಕೋರ್ಸ್‌ಗಳಿಗೆ ಹೋಗಿ ಒಂದನ್ನೂ ಪೂರ್ತಿ ಮುಗಿಸಲು ಆಸಕ್ತಿ ಇಲ್ಲದೆ ಈಗ ಡಿಜಿಟಲ್ ಕ್ಯಾಮೆರಾ ತೆಗೆದುಕೊಂಡು ಫೋಟೊಗ್ರಫಿ, ಸಿನೆಮಾಟೊಗ್ರಫಿಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾನೆ. ಹೆಗ್ಗೋಡಿನ ‘ನೀನಾಸಂ’ನಲ್ಲಿ ಫೋಟೊಗ್ರಫಿ ತರಬೇತಿ ಶಿಬಿರ(ಒಂದು ವಾರ) ಹಾಗೂ ಅರುಣಾಚಲ ಪ್ರದೇಶದ ಸತ್ಯಜಿತ್ ರೈ ಫಿಲ್ಮ್ ಇನ್ಸ್ಟಿಟ್ಯೂಟ್‌ನಲ್ಲಿ ‘ಟ್ರಿಪ್ ಟು ಸಿನಿಮಾ’ ಹೆಸರಲ್ಲಿ ಎರಡೂವರೆ ತಿಂಗಳ ಕಾಲ ತರಬೇತಿ ಪಡೆದು ಬಂದಿದ್ದಾನೆ. ಅವನು ತೆಗೆದ ಹೆಚ್ಚಿನ ಫೋಟೊಗಳು ತುಂಬ ಜನರ ಮೆಚ್ಚುಗೆ ಪಡೆದಿವೆ. ಫೋಟೊಗ್ರಫಿ, ಸಿನೆಮಾಟೊಗ್ರಫಿಯಲ್ಲಿ ಹೆಚ್ಚಿನ ಅನುಭವ, ಆಸಕ್ತಿ ಹೊಂದಿರುವ ನನ್ನ ಮಗನಿಗೆ ಇದರಲ್ಲಿ ಹೆಚ್ಚಿನ ಶಿಕ್ಷಣ/ಅನುಭವ ಹೊಂದಲು ಇರುವ ಅವಕಾಶದ ಬಗ್ಗೆ ಮಾಹಿತಿ ನೀಡಬೇಕಾಗಿ ವಿನಂತಿ. ಹೊರದೇಶಗಳಲ್ಲಿ ಒಳ್ಳೆಯ ಅವಕಾಶ ಇದ್ದರೂ ತಿಳಿಸಿ. ನಿಮ್ಮಿಂದ ಮಾರ್ಗದರ್ಶನ ನಿರೀಕ್ಷಿಸುತ್ತೇವೆ.

ಹೆಸರು, ಊರು ಬೇಡ

ಅವಕಾಶ ಮತ್ತು ಸೌಲಭ್ಯಗಳಿದ್ದಾಗ ನಮ್ಮ ಆಸಕ್ತಿಯ ಕ್ಷೇತ್ರಗಳನ್ನು ಆಯ್ದುಕೊಂಡು ಮುಂದುವರಿಯುವುದು ಬಹಳ ಉತ್ತಮವಾದ ಆಯ್ಕೆ. ಸಿನಿಮಾಟೊಗ್ರಫಿಯಲ್ಲಿ ಮುಂದುವರಿಯಲು ಆ ಕುರಿತು ಅಧ್ಯಯನ ಮಾಡುವುದು ಮುಖ್ಯವಾಗಿದೆ.

ಭಾರತದಲ್ಲಿ, ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್‌ಟಿಐಐ) ಪುಣೆ, ಸತ್ಯಜಿತ್ ರೇ ಫಿಲ್ಮ್ಸ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್, ಕೊಲ್ಕತ್ತಾ, ಸೆಂಟರ್ ಫಾರ್ ರಿಸರ್ಚ್ ಇನ್ ಆರ್ಟ್ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ (CRAFT), ದೆಹಲಿ ಇತ್ಯಾದಿ ಸಂಸ್ಥೆಗಳಲ್ಲಿ ಸಿನಿಮಾಟೊಗ್ರಫಿ ಅಧ್ಯಯನ ಮಾಡಬಹುದು. ವಿದೇಶದಲ್ಲಿ ಲಾಸ್ ಏಂಜಲೀಸ್ ಫಿಲ್ಮ್ ಇನ್ಸ್ಟಿಟ್ಯೂಟ್, ಕಾನ್ಬಾರ್ ಇನ್ಸ್ಟಿಟ್ಯೂಟ್ ಆಫ್ ಫಿಲ್ಮ್ ಆ್ಯಂಡ್‌ ಟೆಲಿವಿಷನ್, ಟೊರೊಂಟೊ ಫಿಲ್ಮ್ ಸ್ಕೂಲ್ ಇತ್ಯಾದಿಗಳಲ್ಲಿ ಪ್ರಯತ್ನಿಸಬಹುದು.

ಅಧ್ಯಯನದ ಜೊತೆ ಪ್ರಾಯೋಗಿಕ ಅನುಭವ ಪ್ರಮುಖ ಪಾತ್ರ ವಹಿಸುವುದರಿಂದ ಸಿನಿಮಾಟೊಗ್ರಫಿ ಕ್ಷೇತ್ರದಲ್ಲಿ ಅನುಭವ, ಪರಿಣತಿ ಹೊಂದಿರುವ ಖ್ಯಾತ ಸಿನಿಮಾಟೊಗ್ರಾಫರ್ ಬಳಿ ಕೆಲಸ ಮಾಡುವುದು ಕೂಡ ಉತ್ತಮ ಆಯ್ಕೆ. ಅವರಿಂದ ಜ್ಞಾನ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದ ಪ್ರಾಯೋಗಿಕ ಅನುಭವವು ಸಿಗುತ್ತದೆ. ಅಷ್ಟು ಮಾತ್ರವಲ್ಲದೆ ಸಿನಿಮಾ ಕ್ಷೇತ್ರದ ಜನರ ಸಂಪರ್ಕಗಳು ಆಗುವುದರಿಂದ ಹೆಚ್ಚಿನ ಅವಕಾಶಗಳ ಬಗ್ಗೆ ತಿಳಿಯುತ್ತದೆ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT