ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಪರೀಕ್ಷೆ: ಈಗಿನಿಂದಲೇ ತಯಾರಿ ಇರಲಿ

Last Updated 27 ಜನವರಿ 2021, 19:30 IST
ಅಕ್ಷರ ಗಾತ್ರ

ಬ್ಯಾಂಕ್‌ನಲ್ಲಿ ಉದ್ಯೋಗ, ಅದರಲ್ಲೂ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ)ದಲ್ಲಿ ಉದ್ಯೋಗ ಹೊಂದಬೇಕು ಎನ್ನುವುದು ಹಲವರ ಕನಸು, ಇದನ್ನು ಸಾಕಷ್ಟು ಪ್ರಯತ್ನದಿಂದ ಸಫಲಗೊಳಿಸಲು ಇದು ಸಕಾಲ ಎನ್ನಬಹುದು.

ಎಸ್‌ಬಿಐ ಪಿಒ (ಪ್ರೊಬೆಷನರಿ ಅಧಿಕಾರಿ) ಪ್ರಿಲಿಮ್ಸ್ ಫಲಿತಾಂಶ ಬಂದಿದೆ ಹಾಗೂ ಮೇನ್ಸ್‌ ಪರೀಕ್ಷೆ ಜನವರಿ 29ಕ್ಕೆ ಇದೆ.

ಎಸ್‌ಬಿಐ ಅಪ್ರೆಂಟಿಸ್‌ ಪರೀಕ್ಷೆ ಸದ್ಯದಲ್ಲಿ ಜರುಗಲಿದೆ.

ಎಸ್‌ಬಿಐ ಕ್ಲರ್ಕ್‌– 2021 ಈ ಪರೀಕ್ಷೆಯ ಅಧಿಸೂಚನೆ ಶೀಘ್ರದಲ್ಲೇ ಹೊರಬೀಳಲಿದೆ.

ಈ ವರ್ಷ ಎಸ್‌ಬಿಐ ಕ್ಲರ್ಕ್‌ ಹುದ್ದೆಗಳಿಗೆ ಅಧಿಸೂಚನೆ ಬರುವುದೋ ಇಲ್ಲವೋ ಎಂಬ ಅನುಮಾನ ಹಲವು ಅಭ್ಯರ್ಥಿಗಳಲ್ಲಿರಬಹುದು. ಆದರೆ ವಾಸ್ತವ ಏನೆಂದರೆ ಕೋವಿಡ್‌ ಕಾರಣದಿಂದಾಗಿ ಕೇವಲ ಎಸ್‌ಬಿಐ ಕ್ಲರ್ಕ್‌– 2021 ಅಧಿಸೂಚನೆಯಲ್ಲಿ ಮಾತ್ರ ವಿಳಂಬವಾಗಿಲ್ಲ, ಇದರಂತೆ ಉಳಿದ ಸ್ಪರ್ಧಾತ್ಮಕ ಪರೀಕ್ಷೆಗಳ ಅಧಿಸೂಚನೆಯಲ್ಲಿಯೂ ವಿಳಂಬವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷಾ ತಯಾರಿಗಾಗಿ ಅಧಿಸೂಚನೆ ಬರುವವರೆಗೂ ಕಾಯುವುದು ಸೂಕ್ತವಲ್ಲ.

ಪರೀಕ್ಷೆಗೆ ತಯಾರಿ

ಈಗ ನಡೆದ ಪ್ರೊಬೆಷನರಿ ಅಧಿಕಾರಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲವಲ್ಲ ಎಂಬ ಚಿಂತೆಯನ್ನು ಬಿಟ್ಟುಬಿಡಿ. ಮತ್ತೆ ಅಧಿಸೂಚನೆ ಬಂದಾಗ ಅರ್ಜಿ ಸಲ್ಲಿಸಬಹುದು. ಹಾಗೆಯೇ ಪರೀಕ್ಷಾ ಅಧಿಸೂಚನೆ ಹೊರಡಿಸಿದ ನಂತರ ತಯಾರಿ ನಡೆಸೋಣ ಹಾಗೂ ಮೇನ್ಸ್ ಪರೀಕ್ಷೆ ಎದುರಿಸಲು ಮೊದಲು ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವುದು ಮುಖ್ಯ ಎಂಬ ಮನೋಭಾವದಿಂದ ಹೊರ ಬನ್ನಿ. ಪ್ರಿಲಿಮ್ಸ್ ಪರೀಕ್ಷೆ ಕೇವಲ ಅರ್ಹತಾ ಪರೀಕ್ಷೆಯಾಗಿರುವುದರಿಂದ ನಿಮ್ಮ ಪ್ರಯತ್ನ ಆಯ್ಕೆಯ ಮಟ್ಟದವರೆಗೂ ತಲುಪಲಾರದು. ಆದ್ದರಿಂದ ಉದ್ಯೋಗ ಗಿಟ್ಟಿಸಿಕೊಳ್ಳಲು ನಿರಂತರವಾಗಿ ಪ್ರಿಲಿಮ್ಸ್ ಜೊತೆ ಜೊತೆಗೆ ಮೇನ್ಸ್‌ನ ಪರೀಕ್ಷೆಯ ತಯಾರಿ ಅತ್ಯವಶ್ಯ.

ಇದಲ್ಲದೆ ಜನರಲ್ ನಾಲೆಜ್‌/ ಕರೆಂಟ್ ಅಫೇರ್ಸ್ ವಿಭಾಗದಲ್ಲಿ ಕನಿಷ್ಠ ಆರು ತಿಂಗಳುಗಳ ಅಧ್ಯಯನ ನಡೆಸಬೇಕಾಗುತ್ತದೆ. ನೀವು ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಸಹ ಮೇನ್ಸ್ ಪರೀಕ್ಷೆಯಲ್ಲಿ ನಿಮ್ಮ ಅಂಕಗಳನ್ನು ನಿರ್ಧರಿಸುವ ಅಥವಾ ಹೆಚ್ಚಿಸುವ ಈ ವಿಭಾಗಕ್ಕೆ ನಿಮಗೆ ತಯಾರಿಗಾಗಿ ಪ್ರಿಲಿಮ್ಸ್ ಪರೀಕ್ಷೆಯ ನಂತರವಾಗಲಿ ಅಥವಾ ಅದರ ಫಲಿತಾಂಶದ ನಂತರವಾಗಲಿ ಖಂಡಿತ ಹೆಚ್ಚಿನ ಸಮಯ ಸಿಗಲಾರದು. ಹೀಗಾಗಿ ಈ ವಿಭಾಗದ ತಯಾರಿಗಾಗಿ ಆರಂಭಿಕ ಹಂತದ ಅಭ್ಯರ್ಥಿಯಾಗಲಿ ಅಥವಾ ಮೊದಲು ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳಾಗಲಿ ಈಗಿನಿಂದಲೇ ಪ್ರತಿನಿತ್ಯ ಕನಿಷ್ಠ 2 ಗಂಟೆ ಮೀಸಲಿಡುವುದು ಸೂಕ್ತ.

ಅಭ್ಯರ್ಥಿಗಳು ಮೊದಲು ಪರೀಕ್ಷಾ ಪಠ್ಯಕ್ರಮದ ಮೇಲೆ ಗಮನ ಕೊಡಬೇಕು. ಇದರಿಂದ ಯಾವ ಟಾಪಿಕ್‌ನಿಂದ ಎಷ್ಟು ಅಂಕಗಳ ಪ್ರಶ್ನೆಗಳು ಬರಬಹುದು, ಅದಕ್ಕೆ ನಾವು ವ್ಯಯಿಸಬೇಕಾದ ಸಮಯವೆಷ್ಟು ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅಭ್ಯಾಸ ನಡೆಸಲು ಸಾಧ್ಯ.

ನಿಮ್ಮ ತಪ್ಪುಗಳಿಂದ ಕಲಿಯಿರಿ ಹಾಗೂ ವೇಗ ಹೆಚ್ಚಿಸಿಕೊಳ್ಳಿ

ವಿಷಯವಾರು ಪಠ್ಯ ಅನುಸಾರ ಅಭ್ಯಸಿಸುವುದು ಎಷ್ಟು ಮುಖ್ಯವೋ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸುವುದು ಅಷ್ಟೇ ಮುಖ್ಯ. ಇದರಿಂದ ಯಾವ ತರಹದ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರುತ್ತವೆ, ಯಾವ ಟಾಪಿಕ್‌ನಿಂದ ಎಷ್ಟು ಅಂಕಗಳು ಬರಬಹುದು, ಅವುಗಳ ಕ್ಲಿಷ್ಟತೆ ಎಷ್ಟಿರಬಹುದು, ನಾವು ಯಾವ ವಿಷಯಗಳಲ್ಲಿ/ ಯಾವ ಟಾಪಿಕ್‌ನಲ್ಲಿ ದುರ್ಬಲ ಹಾಗೂ ಪ್ರಬಲ ಇದ್ದೇವೆ, ಯಾವ ವಿಷಯಕ್ಕೆ ಹೆಚ್ಚು ಒತ್ತುಕೊಟ್ಟು ಅಭ್ಯಸಿಸುವ ಅವಶ್ಯಕತೆ ಇದೆ ಎಂಬ ಅಂದಾಜು ಸುಲಭವಾಗಿ ದೊರಕುತ್ತದೆ. ಹಾಗಾಗಿ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳ ಜೊತೆಗೆ ಪ್ರತಿನಿತ್ಯ ಒಂದು ಪ್ರಿಲಿಮ್ಸ್ ಹಾಗೂ ಎರಡು ದಿನಗಳಿಗೊಮ್ಮೆ ಒಂದು ಮೇನ್ಸ್ ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ ಅವುಗಳನ್ನು ವಿಶ್ಲೇಷಿಸಿದರೆ ಖಂಡಿತ ಎಲ್ಲ ವಿಷಯಗಳ ಮೇಲೆ ಹಿಡಿತ ಸಾಧಿಸಬಹುದು; ಪರೀಕ್ಷಾ ಭಯ ಸುಲಭವಾಗಿ ದೂರವಾಗಿಸಬಹುದು.

ಸಮಯದ ನಿರ್ವಹಣೆ

ಪರೀಕ್ಷಾ ತಯಾರಿಗಾಗಿ ಎಲ್ಲದಕ್ಕಿಂತ ಹೆಚ್ಚು ಗಮನ ಹರಿಸಬೇಕಾಗಿರುವುದು ಸಮಯ ನಿರ್ವಹಣೆಯ ಮೇಲೆ. ವಿದ್ಯಾರ್ಥಿಗಳು ಓದಲು ನಿರ್ದಿಷ್ಟ ವೇಳಾಪಟ್ಟಿಯನ್ನು ಅನುಸರಿಸಿದರೆ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT