ಶನಿವಾರ, ಜನವರಿ 16, 2021
27 °C

ಬಿ.ಇಡಿ: ಕೊರತೆಗಳ ನಡುವೆಯೂ ತ್ವರಿತ ಫಲಿತಾಂಶ ನೀಡಿದ ಬಿಎನ್‌ಯು

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿ.ಇಡಿ ಕೋರ್ಸ್‌ನ ಅಂತಿಮ ಸೆಮಿಸ್ಟರ್‌ ಪರೀಕ್ಷೆಗಳು ಮುಗಿದ 40 ಗಂಟೆಗಳಲ್ಲಿಯೇ ಫಲಿತಾಂಶ ಪ್ರಕಟಿಸುವ ಮೂಲಕ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು (ಬಿಎನ್‌ಯು) ಮಹತ್ವದ ಸಾಧನೆ ದಾಖಲಿಸಿದೆ. 2017–18ನೇ ಸಾಲಿನಲ್ಲಿ ಕಾರ್ಯಾರಂಭ ಮಾಡಿದ ಈ ವಿಶ್ವವಿದ್ಯಾಲಯ ಕೇವಲ ಎರಡು– ಮೂರು ವರ್ಷಗಳಲ್ಲಿಯೇ ಈ ಸಾಧನೆ ಮಾಡಿದೆ.

ಕೋಲಾರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಿಎನ್‌ಯುನಲ್ಲಿ ಎಂ.ಇಡಿ (ಶಿಕ್ಷಣದಲ್ಲಿ ಸ್ನಾತಕೋತ್ತರ) ಕೋರ್ಸ್‌ ಇಲ್ಲ. ಹಾಗೇ ಶಿಕ್ಷಣ ನಿಕಾಯಕ್ಕೆ ಪ್ರತ್ಯೇಕ ಡೀನ್‌ ಕೂಡ ಇಲ್ಲ. ಜತೆಗೆ ಕಾಯಂ ಸಿಬ್ಬಂದಿಯೂ ಹೆಚ್ಚು ಇಲ್ಲ. ಹೀಗಾಗಿ ಬಿ.ಇಡಿ ಪದವಿಯ ಬಹುತೇಕ ಪರೀಕ್ಷಾ ಮತ್ತು ಮೌಲ್ಯಮಾಪನ ಕಾರ್ಯಕ್ಕೆ ಅದು ನೆರೆಯ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನೇ ಅವಲಂಬಿಸಿದೆ. ಇಷ್ಟೆಲ್ಲ ಕೊರತೆಗಳ ನಡುವೆಯೂ ಬಿ.ಇಡಿ ಪದವಿಯ ತ್ವರಿತ ಫಲಿತಾಂಶ ಪ್ರಕಟಿಸುವ ಮೂಲಕ ಬಿಎನ್‌ಯು ರಾಜ್ಯವಷ್ಟೇ ಅಲ್ಲ, ಇಡೀ ದೇಶದ ಗಮನ ಸೆಳೆದಿದೆ.

ಈ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯವು ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನಲ್ಲಿ (ಯುವಿಸಿಇ) ಕೆಲ ಬಿ.ಇ ಕೋರ್ಸ್‌ಗಳ ಫಲಿತಾಂಶವನ್ನು ಪರೀಕ್ಷೆ ನಡೆದ ಎರಡು–ಮೂರು ದಿನಗಳಲ್ಲಿಯೇ ಪ್ರಕಟಿಸಿತ್ತು. ಸಿವಿಲ್‌ ಎಂಜಿನಿಯರಿಂಗ್‌ನ 8ನೇ ಸೆಮಿಸ್ಟರ್‌ ವಿದ್ಯಾರ್ಥಿಗಳ ಫಲಿತಾಂಶವನ್ನಂತೂ ಪರೀಕ್ಷೆ ಮುಗಿದ ಎರಡೂವರೆ ಗಂಟೆಗಳಲ್ಲಿಯೇ ಪ್ರಕಟಿಸಿ ದೇಶದ ಗಮನ ಸೆಳೆದಿತ್ತು. ಅಂತೆಯೇ ಕೆಲ ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ತಮ್ಮ ಕೆಲ ಕೋರ್ಸ್‌ನ ಫಲಿತಾಂಶವನ್ನು ತ್ವರಿತವಾಗಿ ಪ್ರಕಟಿಸಿದ್ದುಂಟು. ಆದರೆ ಅಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 200ಕ್ಕಿಂತ ಕಡಿಮೆ. ಮೇಲಾಗಿ ಒಂದೇ ಕಾಲೇಜಿನ ವ್ಯಾಪ್ತಿಯಲ್ಲಿ ಆ ವಿದ್ಯಾರ್ಥಿಗಳು ಬರುತ್ತಿದ್ದರು.

ಆದರೆ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವ್ಯಾಪ್ತಿ ವಿಶಾಲವಾದದ್ದು. ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳ 33 ಬಿ.ಇಡಿ ಕಾಲೇಜುಗಳು ಈ ವಿ.ವಿ ವ್ಯಾಪ್ತಿಗೆ ಬರುತ್ತವೆ. ಅಲ್ಲಿನ 2028 ವಿದ್ಯಾರ್ಥಿಗಳು ಬಿ.ಇಡಿ ಪರೀಕ್ಷೆ ತೆಗೆದುಕೊಂಡಿದ್ದರು. ಇಷ್ಟು ವಿದ್ಯಾರ್ಥಿಗಳ ಸುಮಾರು 11,500 ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ತ್ವರಿತವಾಗಿ ನಡೆಸುವುದರ ಜತೆಗೆ 12 ವಿವಿಧ ವಿಷಯಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿ, ಅದರ ಅಂಕವನ್ನು ಫಲಿತಾಂಶದೊಂದಿಗೆ ಕ್ರೋಡೀಕರಿಸುವ ಜವಾಬ್ದಾರಿಯನ್ನು ವಿ.ವಿ ಸಮರ್ಪಕವಾಗಿ ನಿಬಾಯಿಸಿದೆ.

ತ್ವರಿತ ಫಲಿತಾಂಶ ಹೇಗೆ ಸಾಧ್ಯವಾಯಿತು?

‘ಮೌಲ್ಯಮಾಪಕರು ತಂಡವಾಗಿ ಕಾರ್ಯನಿರ್ವಹಿಸಿದ್ದು, ಕೆಲಸದ ಸಮರ್ಪಕ ಹಂಚಿಕೆ ಮತ್ತು ನಿರ್ವಹಣೆ, ಪರಿಣಾಮಕಾರಿ ಸಂಯೋಜನೆ, ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಬಿ.ಇಡಿ ಕೋರ್ಸ್‌ನ ಅಂತಿಮ ಸೆಮಿಸ್ಟರ್‌ ವಿದ್ಯಾರ್ಥಿಗಳ ಫಲಿತಾಂಶವನ್ನು ತ್ವರಿತವಾಗಿ ನೀಡಲು ಸಾಧ್ಯವಾಯಿತು’ ಎನ್ನುತ್ತಾರೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ. ಕೆ. ಜನಾರ್ದನಂ.

‘ನವೆಂಬರ್‌ 4ರಿಂದ ಥಿಯರಿ ಪರೀಕ್ಷೆಗಳನ್ನು ಆರಂಭಿಸಿದೆವು. 2028 ವಿದ್ಯಾರ್ಥಿಗಳ ಪೈಕಿ ಸುಮಾರು 1900 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ವಿದ್ಯಾರ್ಥಿಗಳಿಗೆ ನ. 13ರಿಂದ 21ರವರೆಗೆ ಪ್ರಾಕ್ಟಿಕಲ್‌ ಪರೀಕ್ಷೆಗಳನ್ನು ನಡೆಸಿದೆವು. ಆಯಾ ದಿನದ ಪರೀಕ್ಷೆಗಳು ಮುಗಿದ ಎರಡು–ಮೂರು ಗಂಟೆಯೊಳಗೆ ವಿದ್ಯಾರ್ಥಿಗಳ ಉತ್ತರ ಪ್ರತಿಗಳು ಡಿ ಕೋಡಿಂಗ್ ಕೇಂದ್ರಕ್ಕೆ (ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ) ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ಉತ್ತರ ಪತ್ರಿಕೆಗಳು ಬಂದ ಕೂಡಲೇ ಅವುಗಳನ್ನು ‘ಡಿ ಕೋಡಿಂಗ್‌’ ಮಾಡಲಾಗುತ್ತಿತ್ತು. ಬೆಂಗಳೂರಿನ ಮೌಂಟ್‌ ಫೋರ್ಟ್‌ ಕಾಲೇಜಿನಲ್ಲಿ ಮೌಲ್ಯಮಾಪನ ಕಾರ್ಯ ನಡೆಸಲಾಯಿತು’ ಎಂದು ಅವರು ಮಾಹಿತಿ ನೀಡಿದರು.

60 ಮೌಲ್ಯಮಾಪಕರು:

‘ನಮ್ಮ ವಿ.ವಿಯಲ್ಲಿ ಎಂ.ಇಡಿ ವಿಭಾಗ ಇಲ್ಲದ ಕಾರಣ ಬೆಂಗಳೂರು ವಿ.ವಿ ಮತ್ತು ಬೆಂಗಳೂರು ನಗರ ವಿ.ವಿ ನೆರವು ಪಡೆದೆವು. ಅಲ್ಲಿನ ವಿ.ವಿ ವ್ಯಾಪ್ತಿಗಳಲ್ಲಿ ಇರುವ ಅರ್ಹ ಮೌಲ್ಯಮಾಪಕರನ್ನು ಮೌಲ್ಯಮಾಪನ ಕಾರ್ಯಕ್ಕೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಿದೆವು. ಒಟ್ಟು 60 ಮೌಲ್ಯಮಾಪಕರಿರುವ ತಂಡವನ್ನು ರಚಿಸಿದ್ದೆವು. ಪ್ರತಿ ವಿಷಯದ ಪರೀಕ್ಷೆ ಮುಗಿದ ಮರುದಿನವೇ ಅದರ ಮೌಲ್ಯಮಾಪನ ಕಾರ್ಯಕ್ಕೆ ಚಾಲನೆ ದೊರೆಯುತ್ತಿತ್ತು. ಅಂತೆಯೇ ಪ್ರಾಯೋಗಿಕ ಪರೀಕ್ಷೆಗಳಿಗಾಗಿ ತಲಾ 33 ಆಂತರಿಕ ಮತ್ತು ಬಾಹ್ಯ ತಜ್ಞರನ್ನು ನಿಯೋಜಿಸಲಾಗಿತ್ತು. ಪ್ರಾಯೋಗಿಕ ಪರೀಕ್ಷೆಗಳು ನಡೆದ ದಿನವೇ ವಿದ್ಯಾರ್ಥಿಗಳ ಅಂಕಗಳು ಅಪ್‌ಲೋಡ್‌ ಆಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ತ್ವರಿತ ಫಲಿತಾಂಶ ಸಾಧ್ಯವಾಯಿತು’ ಎಂದು ಅವರು ವಿವರಿಸಿದರು.

‘ಕೋವಿಡ್‌ ನಿಯಮಗಳನ್ನು ಪಾಲನೆ ಮಾಡಿಕೊಂಡೇ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಅಂತೆಯೇ ಮೌಲ್ಯಮಾಪನ ಕಾರ್ಯವೂ ನಡೆಯಿತು. ಸಣ್ಣ ಲೋಪವೂ ಆಗದಂತೆ 20 ದಿನಗಳಲ್ಲಿ ಫಲಿತಾಂಶ ನೀಡಿದ್ದೇವೆ. ಬಿ.ಇಡಿ ಪರೀಕ್ಷೆ ನ. 21ಕ್ಕೆ (ಶನಿವಾರ) ಮುಗಿಯಿತು. ಪರೀಕ್ಷೆ ಮುಗಿದ 24 ಗಂಟೆಯೊಳಗೆ ಫಲಿತಾಂಶ ಪ್ರಕಟಿಸಲು ಸಿದ್ಧರಿದ್ದೆವು. ಆದರೆ ಅಂದು (ನ. 22) ಭಾನುವಾರ ಆಗಿದ್ದರಿಂದ ಮರು ದಿನ ಸೋಮವಾರ (ನ.23) ಫಲಿತಾಂಶ ಪ್ರಕಟಿಸಲಾಯಿತು’ ಎಂದು ಕುಲಸಚಿವರು ಹೇಳಿದರು.

ವಿಶ್ವವಿದ್ಯಾಲಯ ಅಳವಡಿಸಿಕೊಂಡಿರುವ ತಂತ್ರಜ್ಞಾನವೂ (ಎಕ್ಸಾಮಿನೇಷನ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ) ತ್ವರಿತ ಫಲಿತಾಂಶ ಪ್ರಕಟಿಸಲು ನೆರವಾಯಿತು ಎನ್ನುತ್ತಾರೆ ಅವರು. 

ವಿದ್ಯಾರ್ಥಿಗಳ ಹಿತವೇ ಮುಖ್ಯ:

‘ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯ ಸೇರಿದಂತೆ ಕೆಲವು ವಿಶ್ವವಿದ್ಯಾಲಯಗಳು ಎಂ.ಇಡಿ ಕೋರ್ಸ್‌ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿವೆ. ನಮ್ಮ ವಿ.ವಿಯ ಕೆಲ ಅಫಿಲಿಯೇಟೆಡ್‌ ಕಾಲೇಜುಗಳಲ್ಲಿ ಎಂ.ಇಡಿ ಕೋರ್ಸ್‌ ಇದೆ. ಅಲ್ಲಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಂತಾಗಿದೆ. ನಮ್ಮ ವಿ.ವಿ ಪರೀಕ್ಷೆ ಆರಂಭಿಸಿದ್ದು ತಡವಾಗಿ ಆದರೂ, ಫಲಿತಾಂಶವನ್ನು ತ್ವರಿತವಾಗಿಯೇ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳ ಹಿತ ಕಾಯ್ದಿದ್ದೇವೆ. ದೇಶದಲ್ಲಿಯೇ ಯಾವ ವಿಶ್ವವಿದ್ಯಾಲಯವೂ ಬಿ.ಇಡಿ ಫಲಿತಾಂಶವನ್ನು ಇಷ್ಟು ತ್ವರಿತವಾಗಿ ನೀಡಿದ ನಿದರ್ಶನವಿಲ್ಲ. ನಾವು ಫಲಿತಾಂಶದ ಜತೆಗೆ 1 ಮತ್ತು 2ನೇ ಸೆಮಿಸ್ಟರ್‌ ಅಂಕಪಟ್ಟಿಯನ್ನೂ ನೀಡಿದ್ದೇವೆ. 4ನೇ ಸೆಮಿಸ್ಟರ್‌ ಅಂಕಪಟ್ಟಿಯನ್ನೂ ಕೆಲವೇ ದಿನಗಳಲ್ಲಿ ನೀಡಲಿದ್ದೇವೆ. 3ನೇ ಸೆಮಿಸ್ಟರ್‌ ವಿದ್ಯಾರ್ಥಿಗಳನ್ನು ಸರ್ಕಾರದ ಕೋವಿಡ್‌ ಮಾರ್ಗಸೂಚಿಯಂತೆ ಪಾಸ್‌ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

ಈಗಾಗಲೇ ಬಿಎನ್‌ಯು ಎಂ.ಬಿ.ಎ, ಎಂ.ಎ, ಎಂ.ಎಸ್ಸಿಯ ಹಲವು ಕೋರ್ಸ್‌ಗಳ 4ನೇ ಸೆಮಿಸ್ಟರ್‌ ಫಲಿತಾಂಶ ಪ್ರಕಟಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು