ಶುಕ್ರವಾರ, ಆಗಸ್ಟ್ 12, 2022
27 °C

PV Web Exclusive | ಪರೀಕ್ಷಾ ಮಂಡಳಿಗೆ ‘ಬ್ಲಾಕ್‌ಚೈನ್‌’ ಸ್ಪರ್ಶ

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಕಲಿ ಅಂಕಪಟ್ಟಿ, ನಕಲಿ ಪದವಿ, ನಕಲಿ ಪಿಎಚ್‌.ಡಿ, ನಕಲಿ ಪ್ರಮಾಣ ಪತ್ರ... ಹೀಗೆ ಶೈಕ್ಷಣಿಕ ವಲಯದಲ್ಲಿ ಹಲವು ಬಗೆಯ ನಕಲಿಗಳಿರುವುದು ತಿಳಿದಿದೆ. ಈ ‘ನಕಲಿ’ಗಳಿಂದ ಅಸಲಿಗಳ ಮೌಲ್ಯ ಕುಸಿದಿರುವುದೂ ಹೌದು. ಶಿಕ್ಷಣ ಕ್ಷೇತ್ರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುವ ಜಾಲ ಹಿಂದಿನಿಂದಲೂ ಸಕ್ರಿಯವಾಗಿದೆ. ಅಸಲಿ ದಾಖಲೆಗಳಂತೆಯೇ ಕಾಣುವ ಈ ನಕಲಿ ದಾಖಲೆಗಳು ಎಂತಹವರ ಕಣ್ಣಿಗೂ ಮಣ್ಣೆರಚುತ್ತವೆ.

ಸಾಮಾನ್ಯವಾಗಿ ಅಡ್ಡ ಮಾರ್ಗದ ಮೂಲಕ ಉನ್ನತ ಶಿಕ್ಷಣ, ಉದ್ಯೋಗ, ಬಡ್ತಿ, ಶಿಕ್ಷಣ ಸಾಲ ಮೊದಲಾದ ಪ್ರಯೋಜನ ಪಡೆದುಕೊಳ್ಳಲು ಹಲವರು ಈ ನಕಲಿ ಜಾಲಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಲ್ಲಿ ಸಿಕ್ಕಿಬಿದ್ದವರ ಸಂಖ್ಯೆ ಮಾತ್ರ ಕಡಿಮೆ. ಇನ್ನೂ ಕೆಲವರು ಸಿಕ್ಕಿ ಬೀಳುವ ವೇಳೆಗೆ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಂಡಿರುತ್ತಾರೆ. ನಕಲಿ ನೋಟುಗಳು ಹೇಗೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಿವೆಯೋ ಹಾಗೆಯೇ ನಕಲಿ ಶೈಕ್ಷಣಿಕ ದಾಖಲಾತಿಗಳು ದೇಶದ ಇಡೀ ಶಿಕ್ಷಣ ವ್ಯವಸ್ಥೆಗೆ ಕಪ್ಪುಚುಕ್ಕೆ. 

2016–17ರಲ್ಲಿ ನಡೆದಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವೇಳೆ, 40ಕ್ಕೂ ಹೆಚ್ಚು ಅಭ್ಯರ್ಥಿಗಳು ಸಲ್ಲಿಸಿದ್ದ ಪಿಎಚ್‌.ಡಿಗಳು ನಕಲಿ ಆಗಿದ್ದವು. ಕೆಲ ಅಭ್ಯರ್ಥಿಗಳ ನಡವಳಿಕೆ ಬಗ್ಗೆ ಅನುಮಾನ ಬಂದ ಕಾರಣಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ (ಕೆಇಎ), ಅಭ್ಯರ್ಥಿಗಳ ಶೈಕ್ಷಣಿಕ ದಾಖಲಾತಿಗಳನ್ನು ಪರಿಶೀಲಿಸುವಂತೆ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತನ್ನು ಕೋರಿತು. ಈ ಪರಿಷತ್ತು ಉನ್ನತ ಮಟ್ಟದ ಸಮಿತಿ ರಚಿಸಿ ಅಭ್ಯರ್ಥಿಗಳ ಶೈಕ್ಷಣಿಕ ದಾಖಲಾತಿಗಳನ್ನು ಸಮಗ್ರವಾಗಿ ಪರಿಶೀಲನೆ ನಡೆಸಿತು. ಉತ್ತರ ಭಾರತದ ಕೆಲ ಸರ್ಕಾರಿ, ಖಾಸಗಿ ವಿಶ್ವವಿದ್ಯಾಲಯಗಳಿಂದ ಈ ಅಭ್ಯರ್ಥಿಗಳು ಪಡೆದಿದ್ದ ಪಿಎಚ್‌.ಡಿಗಳು ನಕಲಿ ಎಂಬುದು ಆಗ ಕೆಇಎಗೆ ಮನದಟ್ಟಾಯಿತು. ಈ ಪ್ರಕ್ರಿಯೆಗೆ ಕೆಲವಾರು ತಿಂಗಳುಗಳೇ ಬೇಕಾಯಿತು. ಅಲ್ಲದೆ ಸಮಿತಿಯ ಸದಸ್ಯರು ಖುದ್ದಾಗಿ ಆಯಾ ವಿ.ವಿಗಳಿಗೆ ಹೋಗಿ ದಾಖಲಾತಿಗಳನ್ನು ಪರಿಶೀಲಿಸಬೇಕಾಯಿತು. ಇದಕ್ಕೆ ಹಣಕಾಸಿನ ವೆಚ್ಚವೂ ಆಯಿತು. ನೇಮಕಾತಿ ಪ್ರಕ್ರಿಯೆಯೂ ವಿಳಂಬವಾಯಿತು. 

ಆದರೆ, ಖಾಸಗಿ ಸಂಸ್ಥೆಗಳು, ಕಂಪನಿಗಳು, ನೇಮಕಾತಿ ಪ್ರಾಧಿಕಾರಗಳು ಎಲ್ಲ ನೇಮಕಾತಿ ಸಂದರ್ಭದಲ್ಲಿಯೂ ಈ ರೀತಿ ದಾಖಲೆಗಳ ಪರಿಶೀಲನೆಗೆ ಮುತುವರ್ಜಿ ವಹಿಸುವುದಿಲ್ಲ. ಪ್ರಮಾಣ ಪತ್ರಗಳ ನೈಜತೆಯ ಗುರುತಿಸುವ ಅಥವಾ ದೃಢೀಕರಿಸಿಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಇದರಿಂದ ಅರ್ಹರಿಗೆ ಸಿಗಬೇಕಾದ ಅವಕಾಶಗಳು ‘ನಕಲಿ’ಗಳ ಪಾಲಾಗುತ್ತಿರುವುದು ಸುಳ್ಳಲ್ಲ. ಇನ್ನೂ ಸರ್ಕಾರವು ಅಭ್ಯರ್ಥಿಗಳು ಸಲ್ಲಿಸಿದ ಪ್ರಮಾಣ ಪತ್ರಗಳ ನೈಜತೆ ಪತ್ತೆ ಕಾರ್ಯಕ್ಕೆ ಕೆಲವು ತಿಂಗಳುಗಳೇ ತೆಗೆದುಕೊಂಡರೂ ನಕಲಿ ಪ್ರಮಾಣಪತ್ರಗಳು ನುಸುಳಿರುವ ಸಾಕಷ್ಟು ನಿದರ್ಶನಗಳಿವೆ.

ಕ್ರಾಂತಿಕಾರಿ ಹೆಜ್ಜೆಯಿಟ್ಟ ಎಸ್ಸೆಸ್ಸೆಲ್ಸಿ ಬೋರ್ಡ್‌

ಹಾಗಾದರೆ, ಅಸಲಿ ಮತ್ತು ನಕಲಿ ದಾಖಲೆಗಳ ನಡುವೆ ವ್ಯತ್ಯಾಸ ಕಂಡುಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಮಹತ್ವದ ಯೋಜನೆಯೊಂದನ್ನು ಕಾರ್ಯಗತ ಮಾಡಿದೆ. ತಂತ್ರಜ್ಞಾನದ ನೆರವಿನಿಂದ ಖಚಿತ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಉನ್ನತ ಶಿಕ್ಷಣ ಸಂಸ್ಥೆಗಳು, ಉದ್ಯೋಗದಾತರು ಮತ್ತು ಬ್ಯಾಂಕ್‌ಗಳಿಗೆ ನೀಡಲು ಸಜ್ಜಾಗಿದೆ. ಇದಕ್ಕಾಗಿಯೇ ‘ಬ್ಲಾಕ್‌ಚೈನ್‌’ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.  

‘ಬ್ಲಾಕ್‌ಚೈನ್‌’ ತಂತ್ರಾಂಶದಲ್ಲಿ ರಾಜ್ಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅಂಕಪಟ್ಟಿಗಳ ಸಂಗ್ರಹಿಸಿ, ಕಾಪಿಡುವ ಕಾರ್ಯಕ್ಕೆ ಮಂಡಳಿ ಚಾಲನೆ ನೀಡಿದೆ. ಪ್ರಸ್ತುತ 2019–20ನೇ ಸಾಲಿನ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ‘ಸರ್ಟಿಫಿಕೇಟ್‌ ಚೈನ್‌’ನಲ್ಲಿ ದಾಖಲಿಸಿದೆ. ಕ್ರಮೇಣ ಹಿಂದಿನ ವರ್ಷಗಳ ಅಂಕಪಟ್ಟಿಯ ಪ್ರಮಾಣ ಪತ್ರಗಳನ್ನು ಅಳವಡಿಸಲು ಕ್ರಮ ತೆಗೆದುಕೊಂಡಿದೆ. 

ಕರ್ನಾಟಕವೇ ಮೊದಲು: ಬ್ಲಾಕ್‌ಚೈನ್‌ ತಂತ್ರಜ್ಞಾನವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಅಳವಡಿಸಿಕೊಂಡ ದೇಶದ ಪ್ರಥಮ ರಾಜ್ಯ ಕರ್ನಾಟಕ. ಈ ನವೀನ ತಂತ್ರಜ್ಞಾನವನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಎನ್‌ಐಸಿ (ನ್ಯಾಷನಲ್‌ ಇನ್‌ಫಾರ್‌ಮೆಟಿಕ್ಸ್‌ ಸೆಂಟರ್‌) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. 

ಈ ತಂತ್ರಜ್ಞಾನದ ‘ಸರ್ಟಿಫಿಕೇಟ್‌ ಚೈನ್‌’ ಮೂಲಕ ವಿವಿಧ ಶಿಕ್ಷಣ ಸಂಸ್ಥೆಗಳು ತನ್ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಹಾಗೂ ವಿವಿಧ ಕಂಪನಿ, ಸಂಸ್ಥೆಗಳು ಉದ್ಯೋಗ ನೀಡುವ ಸಂದರ್ಭದಲ್ಲಿ ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ನೇರವಾಗಿ (ಯುಆರ್‌ಎಲ್‌ ಲಿಂಕ್‌ ಮೂಲಕ) ಪರಿಶೀಲಿಸಬಹುದು. ಹಾಗೆಯೇ ಶೈಕ್ಷಣಿಕ ಸಾಲ ನೀಡುವ ಬ್ಯಾಂಕುಗಳು ಮತ್ತು ವಿದ್ಯಾರ್ಥಿ ವೇತನ ನೀಡುವ ಸಂಸ್ಥೆಗಳು ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ನೋಡಿ, ಖಚಿತಪಡಿಸಿಕೊಳ್ಳಬಹುದು.

ಈ ತಂತ್ರಜ್ಞಾನ ಪಾರದರ್ಶಕವಾಗಿದ್ದು, ಇದರಲ್ಲಿ ಅಡಕವಾದ ದಾಖಲೆಗಳನ್ನು ಹಾಳುಮಾಡಲು ಅಥವಾ ದತ್ತಾಂಶವನ್ನು ಹೇಗೆಂದರೆ ಹಾಗೆ ಬದಲಿಸಲು ಸಾಧ್ಯವಿಲ್ಲ. ಹೀಗಾಗಿ ಇದು ವಿಶ್ವಾಸಾರ್ಹವಾದದ್ದಾಗಿದ್ದು, ಕಾಗದರಹಿತವೂ ಆಗಿದೆ. ಪ್ರಮಾಣಪತ್ರಗಳ ಪರಿಶೀಲನೆಗೆ ಮೂರನೇ ವ್ಯಕ್ತಿಯ ಅವಲಂಬನೆಯನ್ನು ಹಾಗೂ ಪರಿಶೀಲನಾ ಕಾರ್ಯದ ಸಮಯವನ್ನು ಇದು ಕಡಿಮೆ ಮಾಡುತ್ತದೆ ಎಂದು ಮಂಡಳಿಯ ನಿರ್ದೇಶಕಿ ವಿ. ಸುಮಂಗಲ ಮಾಹಿತಿ ನೀಡುತ್ತಾರೆ.

‘ಈ ತಂತ್ರಜ್ಞಾನದಲ್ಲಿ ಮಾಹಿತಿಯನ್ನು ಅಪ್‌ಡೇಟ್‌ ಮಾಡುವಾಗ ಹಳೆಯ ಮಾಹಿತಿಯನ್ನು ಅಳಿಸಲಾಗುವುದಿಲ್ಲ. ಬದಲಿಗೆ ಹಳೆಯ ಮಾಹಿತಿಯ ಜತೆಗೆ ಹೊಸ ಮಾಹಿತಿಯು ಡೇಟಾ ಬ್ಲಾಕ್‌ಗಳ ಮೂಲಕ ಅಪ್‌ಡೇಟ್‌ ಆಗುತ್ತದೆ. ಇದಕ್ಕೆ ದತ್ತಾಂಶ ಮೇಲ್ವಿಚಾರಣಾ ಅಧಿಕಾರಿಯ ಡಿಜಿಟಲ್‌ ಸಹಿ ಅಗತ್ಯವಿರುತ್ತದೆ. ಅದಾದ ನಂತರವಷ್ಟೇ ದತ್ತಾಂಶ ಅಪ್‌ಡೇಟ್‌ ಆಗುತ್ತದೆ. ಹಾಗಾಗಿ ಈ ವಿಧಾನದಿಂದ ದತ್ತಾಂಶವನ್ನು ಸುರಕ್ಷಿತವಾಗಿ ಸಂರಕ್ಷಿಸಬಹುದಾಗಿದೆ’ ಎಂದು ಅವರು ವಿವರಿಸುತ್ತಾರೆ. 

ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ಪ್ರಸ್ತುತ ಉಚಿತವಾಗಿ ಡಿಜಿಲಾಕರ್‌ ಮೂಲಕ ನೀಡುತ್ತಿರುವ ಅಂಕಪಟ್ಟಿ ಸೇವೆಯು ಬ್ಲಾಕ್‌ಚೈನ್‌ ತಂತ್ರಜ್ಞಾನದ ಮೂಲಕ ಎನ್‌ಐಸಿ ಸರ್ವರ್‌ನಲ್ಲಿ ಶೇಖರಿಸಲಾದ ದತ್ತಾಂಶವನ್ನೂ ಬಳಸಿಕೊಳ್ಳುತ್ತದೆ ಎನ್ನುತ್ತಾರೆ ಅವರು.

ಡಿಜಿಲಾಕರ್‌ಗಿಂತ ‘ಬ್ಲಾಕ್‌ಚೈನ್’‌ ತಂತ್ರಜ್ಞಾನ ಹೆಚ್ಚು ಸುರಕ್ಷಿತ. ಡಿಜಿಲಾಕರ್‌ನಲ್ಲಿ ವಿದ್ಯಾರ್ಥಿಗಳ ಅಂಕಪಟ್ಟಿಯ ಪಿಡಿಎಫ್‌ ಪ್ರತಿ ದೊರೆಯುವುದಿಲ್ಲ. ಆದರೆ ಬ್ಲಾಕ್‌ಚೈನ್‌ ತಂತ್ರಜ್ಞಾನದ ಸರ್ಟಿಫಿಕೇಟ್‌ ಚೈನ್‌ನಲ್ಲಿ ಯುಆರ್‌ಎಲ್‌ ಲಿಂಕ್‌ ಮೂಲಕ ವಿದ್ಯಾರ್ಥಿಗಳ ಅಂಕಪಟ್ಟಿಗಳು ಪಿಡಿಎಫ್‌ ರೂಪದಲ್ಲಿ ದೊರೆಯುತ್ತವೆ. ಅಲ್ಲದೆ ಸಂಬಂಧಿಸಿದ ಅಧಿಕಾರಿಯ ಡಿಜಿಟಲ್‌ ಸಹಿ ಕೂಡ ಇರುತ್ತದೆ ಎಂದು ಅವರು ವಿವರಿಸುತ್ತಾರೆ.

ಈ ನೂತನ ತಂತ್ರಜ್ಞಾನವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯು ಅಳವಡಿಸಿಕೊಳ್ಳಲು ಯೋಜಿಸಿದ್ದು, ಪಿ.ಯು ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲಾತಿಗಳು ಇದರಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದೇ ವಿಧಾನವನ್ನು ರಾಜ್ಯ ಮತ್ತು ದೇಶದ ಎಲ್ಲ ವಿಶ್ವವಿದ್ಯಾಲಯಗಳೂ ಅಳವಡಿಸಿಕೊಂಡರೆ, ಅಸಲಿ, ನಕಲಿ ಶೈಕ್ಷಣಿಕ ದಾಖಲೆಗಳ ಪರಿಶೀಲನೆ ಸುಲಭವಾಗುತ್ತದೆ. ‘ನಕಲಿ’ಗಳ ಹಾವಳಿಗೆ ತಡೆಯೊಡ್ಡಲು ಸಾಧ್ಯವಾಗುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು