ಸೋಮವಾರ, ಸೆಪ್ಟೆಂಬರ್ 21, 2020
27 °C

ಹರಿದೋಡುವ ಮಕ್ಕಳ ಮನಸ್ಸನ್ನು ಹಿಡಿದಿಡಿ

ಡಾ. ಅಂಜಲಿ ಅಶ್ವಿನ್ Updated:

ಅಕ್ಷರ ಗಾತ್ರ : | |

Prajavani

ಪ್ರತಿಯೊಂದು ಮಗುವೂ ಹೇಗೆ ಭಿನ್ನವೋ ಹಾಗೆ ಆ ಮಗುವಿನ ಮನಃಸ್ಥಿತಿಯೂ ವಿಭಿನ್ನವಾಗಿರುತ್ತದೆ. ಅದರ ಅವಶ್ಯಕತೆಗಳೂ ಬೇರೆ ಬೇರೆ. ಚಿಕ್ಕ ವಯಸ್ಸಿನಲ್ಲಿ ಆ ಮಕ್ಕಳಲ್ಲಿ ಏಕಾಗ್ರತೆಯೂ ಕಡಿಮೆ. ತುಂಟಾಟವಾಡುವ ವಯಸ್ಸಿನಲ್ಲಿ ಓದು, ಬರಹವೆಂದು ಹಿಡಿದಿಡಲು ಸಾಧ್ಯವೇ? ಪೋಷಕರು, ಬೋಧಕರು ಏನೋ ಒಂದು ಹೇಳುವುದು, ಆ ಮಗು ಇನ್ನೇನನ್ನೋ ಧ್ಯಾನಿಸಿ ಒಂದೇ ಕಡೆ ತನ್ನ ಗಮನ ಹರಿಸುವುದು ಆ ವಯಸ್ಸಿನಲ್ಲಿ ಸಾಮಾನ್ಯವೇ.

ಅಂತಹ ಮನಸ್ಸುಗಳನ್ನು ಹಿಡಿದಿಡುವುದು ದೊಡ್ಡ ಸವಾಲೇ ಸರಿ. ಶಾಲೆಯಲ್ಲಂತೂ ಒಂದೊಂದು ಮಗುವಿನ ನಡವಳಿಕೆಯೂ ಒಂದೊಂದು ರೀತಿಯಲ್ಲಿರುತ್ತದೆ. ಹೀಗಾಗಿ ಶಿಕ್ಷಕರು ಸ್ವಲ್ಪ ತಾಳ್ಮೆಯಿಂದ ನಿಗಾ ವಹಿಸಬೇಕಾಗುತ್ತದೆ. ಕೆಲವು ಸರಳ ಕ್ರಮಗಳನ್ನು ಅನುಸರಿಸಿದರೆ ಮಗುವನ್ನು ಓದು– ಬರಹದ ಕಡೆಗೆ ಗಮನ ಹರಿಸುವಂತೆ ಮಾಡಬಹುದು.

ಮಕ್ಕಳ ಮಾತನ್ನು ಆಲಿಸಿ

ಮಕ್ಕಳ ಮನಸ್ಸಿನ ತುಂಬ ಅದೆಷ್ಟೋ ಯೋಚನೆಗಳು, ಪ್ರಶ್ನೆಗಳು ತುಂಬಿಕೊಂಡಿರುತ್ತವೆ. ಅವನ್ನು ಹೊರಹಾಕಲು ಅವರು ಕಾತರರಾಗಿರುತ್ತಾರೆ. ತಮ್ಮ ಮಾತನ್ನು ಆಲಿಸುವವರು ಯಾರೆಂದು ಕಾಯುತ್ತಿರುತ್ತಾರೆ. ಆಂತರ್ಯದಲ್ಲಿ ಒತ್ತಡ ತುಂಬಿಕೊಂಡಿರುವ ಅಂತಹ ಮಕ್ಕಳು ಯಾರು ಏನೂ ಹೇಳಿದರೂ ಗ್ರಹಿಸುವುದಿಲ್ಲ. ‘ನಮ್ಮ ಮಾತನ್ನೂ ಕೇಳಿ’ ಎಂಬುದು ಅವರ ಅಳಲು. ಆದ್ದರಿಂದ ಅಂತಹ ಮಕ್ಕಳನ್ನು ಗುರುತಿಸಿ ಮಾತನಾಡಲು ಅವಕಾಶ ನೀಡಬೇಕು. ನಾವು ಅವರ ಮಾತನ್ನು ಕೇಳಿಸಿಕೊಂಡರೆ ಅವರು ನಮ್ಮ ಮಾತನ್ನು ಕೇಳುತ್ತಾರೆ. ಆದ್ದರಿಂದ ನಾವು ಮೊದಲು ಅವರನ್ನು ಆಲಿಸುವವರಾಗಬೇಕು.

ಹಾಸ್ಯ ಪ್ರಜ್ಞೆಯಿಂದ ವರ್ತಿಸಿ

ಶಿಕ್ಷಕರು ಧ್ವನಿ ಬದಲಾವಣೆ, ಮುಖ ಭಾವ ಪ್ರದರ್ಶನ, ಆಂಗಿಕ ಅಭಿನಯಗಳ ಮೂಲಕ ವಿಷಯವನ್ನು ಅರ್ಥೈಸಬೇಕು. ಸಾಧ್ಯವಿರುವ ಕಡೆಯಲ್ಲೆಲ್ಲಾ ಬೋಧನೆಯನ್ನು ಹಾಸ್ಯಮಯಗೊಳಿಸಬೇಕು. ಇದರಿಂದ ಮಕ್ಕಳ ಮನಸ್ಸು ಹಗುರವಾಗುತ್ತದೆ. ಚಿನ್ನವನ್ನು ಮೃದುಗೊಳಿಸಿ ಬೇಕಾದ ಆಕಾರಕ್ಕೆ ತರುವಂತೆ ಮಕ್ಕಳನ್ನು ಹೀಗೆ ಹದಗೊಂಡ ಮನಃಸ್ಥಿತಿಗೆ ತಂದು ಹೇಳಬೇಕಾದುದನ್ನು ಹೇಳಬೇಕು. ಆಗ ಅವರು ಸಂಪೂರ್ಣ ಗಮನವನ್ನು ನಮ್ಮೆಡೆ ಕೇಂದ್ರೀಕರಿಸುತ್ತಾರೆ, ವಿಷಯವನ್ನು ಗ್ರಹಿಸುತ್ತಾರೆ.

ಸಕ್ರಿಯ ಪಾತ್ರ

ಯಾವ ಮಗುವೂ ಇನ್ನೊಬ್ಬರು ಹೇಳಿದ್ದನ್ನು ಕೇಳುತ್ತಾ ಸುಮ್ಮನೆ ಕುಳಿತುಕೊಂಡಿರಲಾರದು. ಪ್ರತಿ ಮಗುವಿಗೂ ತನ್ನೊಳಗಿನ ಕ್ರಿಯಾಶೀಲತೆ, ಸೃಜನಶೀಲತೆಯನ್ನು ಎಲ್ಲರ ಮುಂದೆ ಪ್ರದರ್ಶಿಸುವ ಹಂಬಲ ಇರುತ್ತದೆ. ಅಂತಹ ಮಕ್ಕಳಿಗೆ ನಿರ್ದಿಷ್ಟ ಚುಟುವಟಿಕೆಯನ್ನು ನೀಡಿದಾಗ ಅವರಿಗದು ಸವಾಲಾಗುತ್ತದೆ. ಸವಾಲು ಸ್ವೀಕರಿಸುವುದು ಹರೆಯದ ಮಕ್ಕಳಿಗೊಂದು ಹುಚ್ಚು ಅಭಿರುಚಿ. ಆದ್ದರಿಂದ ಅವರಿಗೆ ಸಕ್ರಿಯವಾಗಿ ಪಾಲ್ಗೊಳ್ಳುವಂತ ಚಟುವಟಿಕೆಗಳನ್ನು ನೀಡಬೇಕು. ಆಗ ಅವರು ತಮಗೆ ನೀಡಿದ ಚಟುವಟಿಕೆಯನ್ನು ಎಲ್ಲರಿಗಿಂತ ಹೆಚ್ಚು ಸಮರ್ಥವಾಗಿ ನಿಭಾಯಿಸುವ ಪ್ರಯತ್ನದಲ್ಲಿ ತೊಡಗಿ ವಿಷಯವನ್ನು ಸಂಪೂರ್ಣ ಅವಲೋಕಿಸಿ, ಗ್ರಹಿಸುತ್ತಾರೆ. ಹೀಗೆ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಅವರನ್ನು ಸಕ್ರಿಯವಾಗಿ ತೊಡಗಿಸುವುದರ ಮೂಲಕ ಕಲಿಕೆಯನ್ನುಂಟು ಮಾಡಬೇಕು.

ವೈವಿಧ್ಯಮಯ ಚಟುವಟಿಕೆ

ಹತ್ತಾರು ಚಟುವಟಿಕೆಗಳನ್ನು ನೀಡಿದಾಗ ಪ್ರತಿ ಮಗುವಿಗೂ ಯಾವುದಾದರೊಂದು ಚಟುವಟಿಕೆ ಇಷ್ಟವಾಗುತ್ತದೆ. ಉದಾಹರಣೆಗೆ ಚಿತ್ರ ಬಿಡಿಸುವುದು, ಬಣ್ಣ ಹಾಕುವುದು, ರಸಪ್ರಶ್ನೆ, ವಿಡಿಯೊ ವಿಕ್ಷಣೆ, ಅಭಿನಯಿಸುವುದು, ಆಟ ಆಡುವುದು, ನಟರ ಬಗ್ಗೆ, ಆಟಗಾರರ ಬಗ್ಗೆ, ರಾಜಕಾರಣಿಗಳ ಬಗ್ಗೆ ಮಾತನಾಡುವುದು ಅಥವಾ ಬರೆಯುವುದು, ಸಮೂಹ ಗೀತೆ ಹಾಡುವುದು, ಥಟ್ಟಂತ ಹೇಳಿ, ಕೌನ್ ಬನೇಗಾ ಕರೋಡ್ ಪತಿ ಇಂತಹ ಆಕರ್ಷಕ ಕಾರ್ಯಕ್ರಮಗಳನ್ನು ಪಠ್ಯಾಧಾರಿತವಾಗಿ ಮಾಡುವುದು ಇತ್ಯಾದಿ ತಂತ್ರ ಸಾಧನಗಳನ್ನು ಬಳಸಿದಾಗ ಮಗು ತನಗಿಷ್ಟವಿರುವ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಆಸಕ್ತಿಯಿಂದ, ಏಕಾಗ್ರತೆಯಿಂದ ಕಲಿಕೆಯಲ್ಲಿ ಪಾಲ್ಗೊಳ್ಳುತ್ತದೆ.

ನೈಜ ಅನುಭವಗಳನ್ನು ನೀಡುವುದು

ಕಲಿಕೆ ಪ್ರಾಯೋಗಿಕವಾಗಿ ಅನುಭವಕ್ಕೆ ಬಂದರೆ, ನೈಜವಾಗಿ ಕಾಣಿಸಿಕೊಂಡರೆ ಮಾತ್ರ ಮಗು ಅದನ್ನು ನಂಬುತ್ತದೆ. ಕಲಿಯುತ್ತದೆ. ಉದಾಹರಣೆಗೆ ಪ್ರಾಣಿಗಳ ಬಗ್ಗೆ ಉಪನ್ಯಾಸ ಮಾಡಿದರೆ ಸಿಗುವ ಜ್ಞಾನವೇ ಬೇರೆ. ನಾಯಿ, ಹಸು, ಆನೆಗಳನ್ನು ನೋಡಿದರೆ, ಸ್ಪರ್ಶಿಸಿದರೆ ಸಿಗುವ ಅನುಭವವೇ ಬೇರೆ. ಅರಣ್ಯ ಸಂರಕ್ಷಣೆ ಬಗ್ಗೆ ಉಪನ್ಯಾಸ ಮಾಡುವುದಕ್ಕಿಂತ ಮಗುವಿನಿಂದಲೇ ಶಾಲೆ, ಮನೆ, ಊರಿನಲ್ಲೆಲ್ಲಾದರೂ ಒಂದು ಗಿಡ ನೆಡಿಸಿ, ನೀರೆರೆದು ಅದು ನಿನ್ನದೆಂದು ಹೇಳಿದರೆ ಆಗ ಅದರ ಬಗ್ಗೆ ಮಗುವಿನಲ್ಲಿ ಮೂಡುವ ಕಾಳಜಿ, ಅರಿವು, ಪ್ರೀತಿಯೇ ಬೇರೆ. ಆದ್ದರಿಂದ ಸಾಧ್ಯವಾದಷ್ಟು ನೈಜ ಅನುಭವಗಳನ್ನು ನೀಡಬೇಕು.

ಕಥೆ ಹೇಳುವುದು

ಸಂಶೋಧನೆಯ ಪ್ರಕಾರ ಕಥೆ ಎಲ್ಲಾ ವಯಸ್ಸಿನ ಮೆದುಳನ್ನು ಬಹುಬೇಗ ಹಿಡಿದಿಡುವ ತಂತ್ರವಾಗಿದೆ. ಕಥೆಗಾರ ಜಾದೂಗಾರನಂತೆ ಕೇಳುಗರನ್ನು ಮೋಡಿ ಮಾಡಬಲ್ಲ; ತನ್ನೆಡೆ ಸೆಳೆಯಬಲ್ಲ. ಆದ್ದರಿಂದ ಹೇಳಬೇಕಾದ ವಿಷಯವನ್ನು ಕಥೆಯಾಗಿ ಹೆಣೆದು ಹೇಳುವ ಕೌಶಲವನ್ನು ಬೆಳೆಸಿಕೊಳ್ಳಬೇಕು, ಬಳಸಬೇಕು.

ಅಧಿಕ ಬಣ್ಣಗಳ ಬಳಕೆ

ಬಣ್ಣ ಮೆದುಳನ್ನು ಬೇಗ ತಲುಪುತ್ತದೆ. ಮೆದುಳಿನಲ್ಲಿ ಬಹುಕಾಲ ನಿಲ್ಲುತ್ತದೆ. ಬಣ್ಣಗಳ ಹಿಂದೆ ವೈಜ್ಞಾನಿಕ ವಿಶ್ಲೇಷಣೆ ಇದೆ. ಆದ್ದರಿಂದ ಆಕರ್ಷಕ ಪಾಠೋಪಕರಣ ಬಳಸಿ, ಬಣ್ಣ ಬಣ್ಣದ ಬರಹ ಬಳಸಿ ಮಕ್ಕಳ ಮನಸ್ಸನ್ನು ಸೆರೆ ಹಿಡಿಯಬೇಕು.

ಸಕಾರಾತ್ಮಕ ಮನೋಭಾವ

ಶಿಕ್ಷಕರು ಬೋಧನೆ ಮಾಡುವಾಗ ತನ್ನೆದುರಿನ ಪ್ರತಿಯೊಂದು ಮಗುವು ಮುಂದೊಂದು ದಿನ ವಿವೇಕಾನಂದರಂತೆಯೋ, ವಿಶ್ವೇಶ್ವರಯ್ಯರಂತೆಯೋ, ಅಬ್ದುಲ್‌ ಕಲಾಂ ಅವರಂತೆಯೋ ಮಹಾನ್ ವ್ಯಕ್ತಿ ಆಗುವವನು ಎಂಬ ಭಾವನೆಯನ್ನು ಹೊಂದಿರಬೇಕು. ಮಕ್ಕಳ ಬಗ್ಗೆ ಗೌರವ, ಅವರ ಸಾಮರ್ಥ್ಯದ ಬಗ್ಗೆ ಭರವಸೆ ಹೊಂದಿರಬೇಕು. ಇವರೇನು ಮಾಡಬಲ್ಲರೆಂದು ನಿರ್ಲಕ್ಷಿಸಬಾರದು. ದಡ್ಡ, ನಿಷ್ಪ್ರಯೋಜಕ ಎಂಬಿತ್ಯಾದಿ ಪದಗಳನ್ನು ಬಳಸಲೇ ಬಾರದು.

ಮೆಚ್ಚುಗೆ-ಪ್ರಶಂಸೆ

‘ಎಲ್ಲರ ಮುಂದೆ ಪ್ರಶಂಸಿಸಿ; ಏಕಾಂತದಲ್ಲಿ ದೂಷಿಸಿ’ ಎಂಬ ಮಾತಿದೆ. ಮಗು ತಪ್ಪು ಮಾಡಿದರೆ ಅವಮಾನಗೊಳಿಸದೆ ಏಕಾಂತದಲ್ಲಿ ಆಪ್ತವಾಗಿ ತಿಳಿಹೇಳಿ ತಿದ್ದಬೇಕು. ಅವರ ಚಿಕ್ಕಪುಟ್ಟ ಸತ್ಕಾರ್ಯ, ಸಾಧನೆಗಳನ್ನು ಎಲ್ಲರೆದುರು ಪ್ರಶಂಸಿಸಿ ಪ್ರೋತ್ಸಾಹಿಸಬೇಕು. ಆಗ ಮಗುವಿನ ಮನಸ್ಸು ಹಿಗ್ಗಿ ಹರ್ಷಗೊಂಡು ತನ್ನ ಬಗ್ಗೆ ಬಂದಿರುವ ಪ್ರಶಂಸೆಯನ್ನು ಉಳಿಸಿಕೊಳ್ಳುವ ದೆಸೆಯಲ್ಲಿ ಪ್ರೇರೇಪಣೆಗೊಳ್ಳುತ್ತದೆ. ಆಗ ಅದು ನಿರಂತರ ಸನ್ಮಾರ್ಗದಲ್ಲಿ ಸಾಗುತ್ತದೆ.

ಧ್ಯಾನ- ಪ್ರಾರ್ಥನೆ- ಪ್ರಾಣಾಯಾಮ

ಮಗುವನ್ನು ಅಂತರ್ಮುಖಿಯಾಗಿಸುವ, ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಸರ್ವಶ್ರೇಷ್ಠ ಸಾಧನಗಳು ಧ್ಯಾನ, ಪ್ರಾರ್ಥನೆ, ಪ್ರಾಣಾಯಾಮಗಳು. ಇಂದಿನ ಜೀವನಶೈಲಿಯಲ್ಲಿ ಮಕ್ಕಳಿಗೆ ಇಂತಹ ಮೌಲ್ಯಯುತ ಅಭ್ಯಾಸಗಳು ಕಲ್ಪನೆಗೂ ನಿಲುಕದಂತಾಗಿದೆ. ಮಕ್ಕಳಿಗೆ ಇವುಗಳ ತರಬೇತಿ ನೀಡಿ, ನಿತ್ಯ ಜೀವನದ ಒಂದು ಭಾಗವಾಗಿಸಿದರೆ ಚಿತ್ತ ಚಾಂಚಲ್ಯಕ್ಕೆ ಕಡಿವಾಣ ಹಾಕಿಕೊಂಡು ಏಕಾಗ್ರತೆಯನ್ನು ಗಳಿಸಬಲ್ಲರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು