ಶನಿವಾರ, ಅಕ್ಟೋಬರ್ 24, 2020
18 °C
ಚಿಂತಾಮಣಿ ಮಹಿಳಾ ಕಾಲೇಜಿಗೆ ‘ಡಿಜಿಟಲ್‌ ಸ್ಪರ್ಶ’

PV Web Exclusive: ‘ರೂಸಾ’ ಅನುದಾನ ಕಾಲೇಜಿಗೆ ವರದಾನ

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಲ್ಲಿನ ಬಹುತೇಕ ಕೊಠಡಿಗಳು ‘ಸ್ಮಾರ್ಟ್‌ ಕ್ಲಾಸ್’‌, ಎಲ್ಲ ಬೋಧಕರ ಬಳಿ ಲ್ಯಾಪ್‍ಟಾಪ್‌, ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಉಚಿತ ವೈಫೈ, ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡುವ ಕಿಯಾಸ್ಕ್, ಎಲ್ಲ ತರಗತಿಗಳಿಗೆ ಯುಪಿಎಸ್ ಸಂಪರ್ಕ, ಜತೆಗೆ ಗಣಿತ ಮತ್ತು ಇಂಗ್ಲಿಷ್ ಭಾಷಾ ವಿಷಯಕ್ಕೆ ಪ್ರತ್ಯೇಕ ಕಂಪ್ಯೂಟರ್ ಲ್ಯಾಬ್, ಅಲ್ಲದೆ ಸುಸಜ್ಜಿತ ವಿಡಿಯೊ ಕಾನ್ಫರೆನ್ಸ್ ವ್ಯವಸ್ಥೆ.... 

ಹೀಗೆ ಒಂದಲ್ಲ, ಎರಡಲ್ಲ ಹಲವು ಬಗೆಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವುದು ಯಾವುದೋ ಖಾಸಗಿ ಶಿಕ್ಷಣ ಸಂಸ್ಥೆ ಅಥವಾ ವಿಶ್ವವಿದ್ಯಾಲಯ ಅಲ್ಲ. ಅದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಇರುವ ಸರ್ಕಾರಿ ಮಹಿಳಾ ಪದವಿ ಕಾಲೇಜು.

ಈ ಭಾಗದ ವಿವಿಧ ಹಳ್ಳಿಗಳ ಬಡ ವಿದ್ಯಾರ್ಥಿನಿಯರ ಪದವಿ ವ್ಯಾಸಂಗದ ಕನಸನ್ನು ನನಸು ಮಾಡುತ್ತಿರುವ ಈ ಕಾಲೇಜು ತಾಂತ್ರಿಕ ಸೌಲಭ್ಯ ಅಳವಡಿಸಿಕೊಳ್ಳುವ ವಿಚಾರದಲ್ಲಿ ಬೆಂಗಳೂರಿನ ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡುತ್ತಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಇಂಗ್ಲಿಷ್ ಭಾಷೆಯನ್ನು ಕರಗತ ಮಾಡಿಸಲು ಇಂಗ್ಲಿಷ್ ಭಾಷಾ ಕಂಪ್ಯೂಟರ್ ಲ್ಯಾಬ್ ಕಳೆದವಾರವಷ್ಟೇ ಇಲ್ಲಿ ಆರಂಭವಾಗಿದೆ. ಇದೇ ವೇಳೆ ಬಿ.ಎಸ್ಸಿ ವ್ಯಾಸಂಗ ಮಾಡುವ ಗಣಿತ ವಿದ್ಯಾರ್ಥಿನಿಯರಿಗಾಗಿ ಗಣಿತ ಕಂಪ್ಯೂಟರ್‌ ಲ್ಯಾಬ್ ಕೂಡ ಹೊಸದಾಗಿ ಉದ್ಘಾಟನೆಯಾಗಿದೆ. 

ಈಗಾಗಲೇ ಕಾಲೇಜಿನಲ್ಲಿ ಬಿ.ಎಸ್ಸಿ, ಬಿ.ಕಾಂ ಮತ್ತು ಎಂ.ಕಾಂ ವಿದ್ಯಾರ್ಥಿನಿಯರ ಬಳಕೆಗಾಗಿ ಕಂಪ್ಯೂಟರ್ ಲ್ಯಾಬ್ ಇದೆ. ಈಗ ಹೊಸದಾಗಿ ಆರಂಭವಾಗಿರುವ ಇಂಗ್ಲಿಷ್ ಭಾಷಾ ಲ್ಯಾಬ್‍ಗೆ 15 ಹಾಗೂ ಗಣಿತ ಲ್ಯಾಬ್‍ಗೆ 17 ಕಂಪ್ಯೂಟರ್‌ಗಳನ್ನು ಹಂಚಿಕೆ ಮಾಡಲಾಗಿದೆ. 

ಇಂಗ್ಲಿಷ್ ಕಲಿಕೆಗೆ ಒತ್ತು: 

ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆ. ಅದರಲ್ಲೂ ಬಿ.ಎ ವ್ಯಾಸಂಗ ಮಾಡುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಇಂಗ್ಲಿಷ್ ಪತ್ರಿಕೆಯಲ್ಲಿ ಪಾಸಾಗಲು ಹರಸಾಹಸ ಪಡುತ್ತಾರೆ. ಇದು ಅವರ ಒಟ್ಟಾರೆ ಫಲಿತಾಂಶದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೆ ಉನ್ನತ ವ್ಯಾಸಂಗ ಮತ್ತು ಉದ್ಯೋಗಕ್ಕೆ ಹೋಗಬೇಕಾದಾಗ ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲಿಷ್ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಇಂಗ್ಲಿಷ್ ಭಾಷಾ ಕಂಪ್ಯೂಟರ್ ಲ್ಯಾಬ್ ಆರಂಭಿಸಿರುವುದಾಗಿ ಹೇಳುತ್ತಾರೆ ಕಾಲೇಜಿನ ಪ್ರಾಂಶುಪಾಲರಾದ ಕೆ.ಆರ್. ಶಿವಶಂಕರ್ ಪ್ರಸಾದ್. 

ಕಾಲೇಜಿನ ವಿದ್ಯಾರ್ಥಿನಿಯರಿಗೆ ಇಂಗ್ಲಿಷ್ ವ್ಯಾಕರಣ, ವಾಕ್ಯರಚನೆ, ಉಚ್ಚಾರಣೆ, ಸುಲಲಿತವಾಗಿ ಮಾತನಾಡುವುದನ್ನು ಕರಗತ ಮಾಡಿಸುವುದು ಇಂಗ್ಲಿಷ್ ಭಾಷಾ ಕಂಪ್ಯೂಟರ್ ಲ್ಯಾಬ್‍ನ ಉದ್ದೇಶ. ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಗುತ್ತಿಗೆ ಪಡೆದಿರುವ ‘ವರ್ಡ್ಸ್‌ವರ್ತ್‌’ ಸಂಸ್ಥೆಯುವರು ಇದಕ್ಕೆ ಪೂರಕವಾಗಿ ‘ಪ್ರೋಗ್ರಾಮ್‌’ ಮಾಡಿಕೊಟ್ಟಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿಯರು ಈ ಲ್ಯಾಬ್‍ನ ಅನುಕೂಲ ಪಡೆದುಕೊಂಡು ತಮ್ಮ ಇಂಗ್ಲಿಷ್ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಕಾಲೇಜು ಪೂರ್ಣ ಪ್ರಮಾಣದಲ್ಲಿ ಆರಂಭವಾದ ನಂತರ ಎಲ್ಲ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ವೇಳಾಪಟ್ಟಿ ಸಿದ್ಧಪಡಿಸಿ, ಈ ಲ್ಯಾಬ್ ಅನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು ಎನ್ನುತ್ತಾರೆ ಅವರು. 

ಇನ್ನು ಗಣಿತದ ಲೆಕ್ಕಗಳನ್ನು ಸುಲಭವಾಗಿ ಮಾಡುವ ವಿವಿಧ ವಿಧಾನಗಳನ್ನು ಹೇಳಿಕೊಡುವ ಸಲುವಾಗಿ ಗಣಿತ ಲ್ಯಾಬ್ ಆರಂಭವಾಗಿದೆ. ಬಿ.ಎಸ್ಸಿ ಗಣಿತದ ವಿದ್ಯಾರ್ಥಿಗಳಿಗೆ ಥಿಯರಿ ಜತೆಗೆ ಪ್ರಾಯೋಗಿಕ ತರಗತಿಗಳನ್ನು ತೆಗೆದುಕೊಳ್ಳಬೇಕು. ಇದು ಅವರ ಪಠ್ಯದ ಭಾಗವೇ ಆಗಿದೆ. ಇಲ್ಲಿಯವರೆಗೆ ಹಾಲಿ ಇದ್ದ ಕಂಪ್ಯೂಟರ್ ಲ್ಯಾಬ್‍ನಲ್ಲಿಯೇ ತರಗತಿ ತೆಗೆದುಕೊಳ್ಳಲಾಗುತ್ತಿತ್ತು. ಇದೀಗ ಗಣಿತಕ್ಕಾಗಿಯೇ ಪ್ರತ್ಯೇಕ ಲ್ಯಾಬ್ ಆರಂಭಿಸಿರುವುದರಿಂದ, ಗಣಿತದ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ ಎಂದು ಅವರು ಹೇಳುತ್ತಾರೆ. 

‘ರೂಸಾ’ ಅನುದಾನ: 

ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತಿನಿಂದ (ನ್ಯಾಕ್) ಮೂರನೇ ಬಾರಿ ‘ಬಿ+’ ಮಾನ್ಯತೆ ಪಡೆದಿರುವ ಈ ಕಾಲೇಜು 2015ನೇ ಸಾಲಿನಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ (ರೂಸಾ) ಆಯ್ಕೆ ಆಯಿತು. ಅದರಡಿ ಕಾಲೇಜಿಗೆ ಹಂತ ಹಂತವಾಗಿ ದೊರೆತ ಎರಡು ಕೋಟಿ ರೂಪಾಯಿ ಅನುದಾನದಲ್ಲಿ ಕಾಲೇಜಿನ ಮೂಲಸೌಕರ್ಯ ವೃದ್ಧಿ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಯಿತು ಎಂದು ಕಾಲೇಜಿನ ಇತಿಹಾಸ ವಿಭಾದ ಮುಖ್ಯಸ್ಥರೂ ಆಗಿರುವ ‘ರೂಸಾ’ ಸಂಯೋಜಕ ಡಾ. ಎಂ.ಎನ್.ರಘು ವಿವರಿಸುತ್ತಾರೆ.

ಕಾಲೇಜಿನಲ್ಲಿ ಹೊಸ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು, ಇರುವ ಸೌಲಭ್ಯಗಳನ್ನು ಉನ್ನತೀಕರಿಸಲು ಹಾಗೂ ಹೊಸ ಸಲಕರಣೆಗಳನ್ನು ಖರೀದಿಸಲು ‘ರೂಸಾ’ ಅನುದಾನ ಬಳಸಿಕೊಳ್ಳಲಾಗಿದೆ. ಕಾಲೇಜಿಗೆ ಏಳು ಹೊಸ ಕೊಠಡಿಗಳನ್ನು ನಿರ್ಮಿಸಲಾಗಿದೆ. 21 ಕೊಠಡಿಗಳಲ್ಲೂ ಪ್ರೊಜೆಕ್ಟರ್‌ಗಳನ್ನು ಅಳವಡಿಸಿ ಸ್ಮಾರ್ಟ್‌ಕ್ಲಾಸ್ ಆಗಿ ಪರಿವರ್ತಿಸಲಾಗಿದೆ. ಎಲ್ಲ ಕೊಠಡಿಗಳಿಗೂ ಯುಪಿಎಸ್ ಸಂಪರ್ಕ ಕಲ್ಪಿಸಿ, ವಿದ್ಯುತ್ ಅಡಚಣೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಕಾಲೇಜಿನ 31 ಕಾಯಂ ಬೋಧಕರಿಗೂ ಲ್ಯಾಪ್‍ಟಾಪ್ ಕೊಡಲಾಗಿದೆ. ಈ ಅನುದಾನದಡಿ 45 ಕಂಪ್ಯೂಟರ್‌ಗಳನ್ನು ಖರೀದಿಸಿ ಗಣಿತ, ಇಂಗ್ಲಿಷ್ ಕಂಪ್ಯೂಟರ್ ಲ್ಯಾಬ್‍ಗಳನ್ನು ತೆರೆಯಲಾಗಿದ್ದು, ಕೆಲ ಕಂಪ್ಯೂಟರ್‌ಗಳನ್ನು ಮೊದಲಿದ್ದ ಲ್ಯಾಬ್‌ಗೂ ಹಂಚಲಾಗಿದೆ ಎಂದು ಅವರು ಮಾಹಿತಿ ನೀಡುತ್ತಾರೆ. 

ಅಲ್ಲದೆ ಕಾಲೇಜಿನ ಪ್ರವೇಶ ದ್ವಾರದಲ್ಲಿ ಇಟ್ಟಿರುವ ‘ಕಿಯಾಸ್ಕ್’ ಕೂಡಾ ರೂಸಾ ಅನುದಾನದಲ್ಲೇ ಖರೀದಿಸಿದ್ದಾಗಿದೆ. ಕಾಲೇಜಿನ ಸಮಗ್ರ ಮಾಹಿತಿ ಈ ‘ಕಿಯಾಸ್ಕ್‌’ನಲ್ಲಿ ಲಭ್ಯವಾಗುತ್ತದೆ. ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಅಥವಾ ಅನ್ಯರು ಯಾರೇ ಈ ‘ಕಿಯಾಸ್ಕ್’ ಬಳಸಿ ಕಾಲೇಜಿನ ಬಗ್ಗೆ ಮಾಹಿತಿ ಪಡೆಯಬಹುದು. ಅದರ ಜತೆಗೆ ಕಾಲೇಜಿನಲ್ಲಿ ಸುಸಜ್ಜಿತ ವಿಡಿಯೊ ಕಾನ್ಫರೆನ್ಸ್ ವ್ಯವಸ್ಥೆ ಮಾಡಲಾಗಿದೆ. ಈ ಮೂದಲು ಉನ್ನತ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿಡಿಯೊ ಕಾನ್ಫರೆನ್ಸ್‌ಗಳಿಗೆ ಹಾಜರಾಗಲು ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಹೋಗಬೇಕಿತ್ತು. ಆದರೆ ರೂಸಾ ಅನುದಾನದಿಂದ ನಮ್ಮ ಕಾಲೇಜಿನಲ್ಲಿಯೇ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳುತ್ತಾರೆ. 

1999–2000ನೇ ಸಾಲಿನಲ್ಲಿ ಆರಂಭವಾದಾಗ ಈ ಮಹಿಳಾ ಪದವಿ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರ ಸಂಖ್ಯೆ 235 ಇತ್ತು. 2019–20ನೇ ಸಾಲಿನಲ್ಲಿ ಇಲ್ಲಿನ ವಿದ್ಯಾರ್ಥಿನಿಯರ ಸಂಖ್ಯೆ 2266ಕ್ಕೆ ಏರಿಕೆಯಾಗಿದೆ. ಬಿ.ಎ ಕೋರ್ಸ್‌ನಲ್ಲಿ 303, ಬಿ,ಎಸ್ಸಿಯಲ್ಲಿ 762, ಬಿ.ಕಾಂನಲ್ಲಿ 989, ಬಿಬಿಎ ಕೋರ್ಸ್‌ನಲ್ಲಿ 34 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಪಿ.ಜಿ ಕೋರ್ಸ್‌ಗಳು ನಡೆಯುತ್ತಿದ್ದು ಕನ್ನಡ ಎಂ.ಎ, ರಸಾಯನವಿಜ್ಞಾನ ಎಂ.ಎಸ್ಸಿ ಹಾಗೂ ಎಂ.ಕಾಂ ಕೋರ್ಸ್‌ಗಳಲ್ಲಿ ಒಟ್ಟಾರೆ 160 ವಿದ್ಯಾರ್ಥಿನಿಯರು ಕಲಿಕೆಯಲ್ಲಿ ತೊಡಗಿದ್ದಾರೆ.

ಏನಿದು ‘ರೂಸಾ’: 

ಉನ್ನತ ಶಿಕ್ಷಣದ ಗುಣಮಟ್ಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆಯೇ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (ರೂಸಾ). ಇದಕ್ಕೆ 2013ರಲ್ಲಿ ಚಾಲನೆ ದೊರೆಯಿತು. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರಗತಿಗೆ ನೆರವಾಗುವುದು ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳನ್ನು ಸರಿಪಡಿಸುವುದು ಈ ಯೋಜನೆಯ ಉದ್ದೇಶ. ದೇಶದಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನವನ್ನು ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒದಗಿಸುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು