ಬುಧವಾರ, ಮಾರ್ಚ್ 3, 2021
31 °C
ವನ್ಯಜೀವಿ ಸಂರಕ್ಷಣಾ ಸಪ್ತಾಹ–2019

ಸಕಲ ಪ್ರಾಣಿಗಳಲ್ಲೂ ದಯೆ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಭೂಮಿಯ ಮೇಲೆ ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಗಾತ್ರ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಬಲಿಷ್ಠ, ಸಾಧು ಪ್ರಾಣಿಗಳೆಂದು ವರ್ಗೀಕರಿಸಿದ್ದೇವೆ. ಆಯಾ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ ವನ್ಯಜೀವಿಗಳು ಸೃಷ್ಟಿಯಾಗಿವೆ. ಆದರೆ, ಮನುಷ್ಯನ ದುರಾಸೆಗೆ, ಕಾಡುಗಳ ನಾಶದಿಂದಾಗಿ ಹಲವು ವನ್ಯಜೀವಿಗಳು ಅಪಾಯದಂಚಿನಲ್ಲಿವೆ. ಇವುಗಳ ರಕ್ಷಣೆಗೆ  ಪ್ರತಿ ವರ್ಷ ‘ವನ್ಯಜೀವಿ ಸಂರಕ್ಷಣಾ ಸಪ್ತಾಹ’ ಆಚರಿಸಲಾಗುತ್ತದೆ. ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಕೆಲವು ಜೀವಿಗಳು, ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಸಿಗುತ್ತವೆ. ವಿಶ್ವದ ಇತರೆ ಪ್ರದೇಶಗಳಲ್ಲಿ ಕಾಣಸಿಗದ ಕೆಲವು ಪ್ರಾಣಿಗಳು ಭಾರತದಲ್ಲಿವೆ. ಪ್ರಸ್ತುತ ನಮ್ಮ ದೇಶದಲ್ಲಿ ಹಲವು ಪ್ರಾಣಿಗಳು ಅಳಿವಿನಂಚಿನಲ್ಲಿವೆ. ಅಂತಹ ಪ್ರಾಣಿಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಈ ಸಪ್ತಾಹವನ್ನು ಆಯೋಜಿಸಲಾಗಿದೆ.

ಈ ವರ್ಷ ಬುಧವಾರದಿಂದ (ಅಕ್ಟೋಬರ್ 2) ಸಪ್ತಾಹ ಆರಂಭವಾಗಿದ್ದು, ಮಂಗಳವಾರ (ಅಕ್ಟೋಬರ್ 8) ರಂದು ಕೊನೆಯಾಗಲಿದೆ. ಈ ಸಪ್ತಾಹವನ್ನು ಮೊದಲ ಬಾರಿಗೆ 1952ರಲ್ಲಿ ಆರಂಭಿಸಲಾಯಿತು. ಕೇಂದ್ರ ಸರ್ಕಾರ ಇದೇ ವರ್ಷ ರಾಷ್ಟ್ರೀಯ ವನ್ಯಜೀವಿ ಮಂಡಳಿಯನ್ನೂ ಸ್ಥಾಪಿಸಿತು. ಅಂದಿನಿಂದ ಅಕ್ಟೋಬರ್ ತಿಂಗಳಲ್ಲಿ ಒಂದು ವಾರ ಈ ಸಪ್ತಾಹವನ್ನು ಆಚರಿಸಲಾಗುತ್ತದೆ.

* ವನ್ಯಜೀವಿ ಸಂರಕ್ಷಣೆ ಕುರಿತು ಶಾಲೆ, ಸಂಸ್ಥೆಗಳಲ್ಲಿ ಆಯೋಜಿಸುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಮಕ್ಕಳನ್ನು ಪ್ರೇರೇಪಿಸುವುದು.

* ಪರಿಸರ ಸಂರಕ್ಷಣೆಯಿಂದ ವನ್ಯಜೀವಿಗಳಿಗೆ ಆಗುವ ಉಪಕಾರಗಳ ಕುರಿತು ಕಾಳಜಿ ಮೂಡಿಸುವುದು.

* ಪ್ರಾಣಿ ಸಂರಕ್ಷಣೆ ಕುರಿತ ವಿಶೇಷ ರಸಪ್ರಶ್ನೆಗಳಲ್ಲಿ ಭಾಗವಹಿಸುವುದು.

* ಹೊಸ ಪ್ರಾಣಿ, ಪಕ್ಷಿ, ಸರೀಸೃಪ ಮತ್ತು ಕೀಟಗಳ ಬಗ್ಗೆ ತಿಳಿದುಕೊಳ್ಳಬಹುದು.

* ಪ್ರಾಣಿಗಳ ಪ್ರತಿಕೃತಿಗಳನ್ನು ರಚಿಸುವುದು, ಚಿತ್ರ ಬಿಡಿಸುವುದನ್ನು ಕಲಿಯುವುದು.

* ವನ್ಯಜೀವಿ ಸಂರಕ್ಷಣೆ ಕುರಿತು ವಿವಿಧ ಸ್ಪರ್ಧೆ, ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರ ಗಮನ ಸೆಳೆಯುವುದು.

* ವನ್ಯಸಂಕುಲ ರಕ್ಷಣೆಗೆ ಮತ್ತಷ್ಟು ಕ್ರಮಕೈಗೊಳ್ಳಲು ಶ್ರಮಿಸುವುದು.

ಭಾರತದ ಖಡ್ಗಮೃಗ

ಇದನ್ನು ಏಕಕೊಂಬಿನ ಖಡ್ಗಮೃಗ ಎಂತಲೂ ಕರೆಯುತ್ತಾರೆ. ಇದು ವಿಶ್ವದ ನಾಲ್ಕನೇ ಅತಿದೊಡ್ಡ ಪ್ರಾಣಿ. ಈಶಾನ್ಯ ಭಾರತದಲ್ಲಿ ಇದರ ಸಂತತಿ ಇದೆ. ಪ್ರಸ್ತುತ ಕೇವಲ 3 ಸಾವಿರ ಖಡ್ಗಮೃಗಳು ಮಾತ್ರ ಉಳಿದಿದ್ದು, ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಇವನ್ನು ಕಾಣಬಹುದು.

ಗಂಗಾ ಡಾಲ್ಫಿನ್

ಇದು ನಮ್ಮ ರಾಷ್ಟ್ರೀಯ ಜಲಚರ. ಕೆಟಕಿಯಾ ಕುಟುಂಬಕ್ಕೆ ಸೇರಿದ ಜಲವಾಸಿ ಸಸ್ತನಿಗಳಲ್ಲಿ ಇದು ಕೂಡ ಒಂದು.  ಗಂಗಾ ಮತ್ತು ಬ್ರಹ್ಮಪುತ್ರ ನದಿಗಳಲ್ಲಿ ಇದರ ಸಂತತಿ ಇದೆ.

ಭಾರತದ ಹೆಬ್ಬಕ

ವಿಶ್ವದ ಅತಿ ಎತ್ತರದ ಹಾರುವ ಹಕ್ಕಿಗಳ ಪೈಕಿ ಭಾರತದ ಹೆಬ್ಬಕ ಕೂಡ ಒಂದು. ಗುಜರಾತ್, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಮಾತ್ರ ಈ ಹಕ್ಕಿ ಕಾಣಸಿಗುತ್ತದೆ. ಪ್ರಸ್ತುತ ಸಾವಿರಕ್ಕಿಂತಲೂ ಕಡಿಮೆ ಹೆಬ್ಬಕಗಳು ಉಳಿದಿವೆ ಎಂದು ಹೇಳಲಾಗಿದೆ. ಈ ಹಕ್ಕಿಯಂತೆಯೇ ಭಾರತದ ದೈತ್ಯ ಗಿಡುಗ (ಇಂಡಿಯನ್ ಕಿಂಗ್ ವಲ್ಚರ್‌) ಕೂಡ ಅಳಿವಿನಂಚಿನಲ್ಲಿದೆ.

ಬಂಗಾಳ ಹುಲಿ ‌

ಬಂಗಾಳ ಹುಲಿ ರಾಷ್ಟ್ರೀಯ ಪ್ರಾಣಿ. ಈ ಪ್ರಭೇದದ ಹುಲಿಗಳು 1,500ಕ್ಕಿಂತಲೂ ಕಡಿಮೆ ಇವೆ ಎಂದು ಹೇಳಲಾಗಿದೆ. ಗುಜರಾತ್‌ನ ಗಿರ್‌ ಸಿಂಹಗಳು, ಹಿಮಾಚಲ ಪ್ರದೇಶದಲ್ಲಿ ಕಾಣಸಿಗುವ ಹಿಮಚಿರತೆ ಕೂಡ ಅಳವಿನಂಚಿನಲ್ಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು