ಭಾನುವಾರ, ಆಗಸ್ಟ್ 1, 2021
26 °C

ಪರೀಕ್ಷೆ: ಪೋಷಕರಲ್ಲೇಕೆ ಆತಂಕ?

ಸುಧಾ ಹೆಗಡೆ Updated:

ಅಕ್ಷರ ಗಾತ್ರ : | |

ಮಕ್ಕಳು ಪರೀಕ್ಷೆ ಎದುರಿಸುತ್ತಿದ್ದಾರೆ ಎಂದರೆ ಪೋಷಕರಿಗೇ ಒಂದು ರೀತಿಯ ಆತಂಕ, ಒತ್ತಡ ಸೃಷ್ಟಿಯಾಗಿಬಿಡುತ್ತದೆ. ಎಷ್ಟೆಂದರೆ ತಮ್ಮ ಪೋಷಕರು ತಮಗಿಂತ ಹೆಚ್ಚಾಗಿ ತಾವು ಗಳಿಸುವ ಅಂಕದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಭಾವನೆ ಕೆಲವು ವಿದ್ಯಾರ್ಥಿಗಳಿಗೆ ಹುಟ್ಟುವಷ್ಟು. ಹಾಗಾದರೆ ತಮ್ಮ ಮಕ್ಕಳ ಓದಿನ ಬಗ್ಗೆ ಲಕ್ಷ್ಯ ಕೊಡುವುದು ಬೇಡವೇ ಎಂಬುದು ಪೋಷಕರ ಪ್ರಶ್ನೆ. ಎಷ್ಟು ಬೇಕೋ ಅಷ್ಟು ಪ್ರಾಮುಖ್ಯ ಕೊಡಿ, ಆದರೆ ಪ್ರತಿ ಕ್ಷಣವೂ ಅವರ ಮೇಲೆ ಒತ್ತಡ ಹೇರುವುದನ್ನು ಬಿಡಿ ಎನ್ನುತ್ತಾರೆ ತಜ್ಞರು.

ಹಿಂದಿನ ವರ್ಷ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯ ಉದಾಹರಣೆ ಕೊಟ್ಟು, ‘ನೋಡು, ಆ ವಿದ್ಯಾರ್ಥಿ ತೆಗೆದಷ್ಟು ಅಂಕ ಗಳಿಸದಿದ್ದರೆ ಪ್ರಯೋಜನವಿಲ್ಲ. ಜೀವನದಲ್ಲಿ ಮುಂದೆ ಬರುವುದು ನಿನಗೇ ಕಷ್ಟ’ ಎಂದು ಹೀಯಾಳಿಸುವವರಿಗೇನೂ ಕಡಿಮೆಯಿಲ್ಲ. ಜೊತೆಗೆ ಹೆದರಿಸುವುದು ಬೇರೆ. ‘ಒಳ್ಳೆಯ ಅಂಕ ಬರದಿದ್ದರೆ ಒಳ್ಳೆಯ ಕಾಲೇಜಿನಲ್ಲಿ ಸೀಟ್‌ ಸಿಗುವುದಿಲ್ಲ. ನಾನೇನೂ ನಿನಗೆ ಸಹಾಯ ಮಾಡಲಾರೆ. ಬೇಕಾದರೆ ನನ್ನ ಮಾತನ್ನು ಬರೆದಿಟ್ಟುಕೊ’ ಎಂಬ ಮಾತುಗಳೂ ಬರುತ್ತವೆ.

ಅಂಕ ಗಳಿಕೆಯ ಯಂತ್ರಗಳಲ್ಲ..
ಆದರೆ ನಿಮ್ಮ ಮಕ್ಕಳು ಕೇವಲ ಅಂಕ ಗಳಿಸುವ ಯಂತ್ರಗಳಲ್ಲ. ಅವರ ಭವಿಷ್ಯ ಚೆನ್ನಾಗಿರಬೇಕು, ಒಳ್ಳೆಯ ಉದ್ಯೋಗಕ್ಕೆ ಸೇರಿಕೊಳ್ಳಬೇಕು ಎಂಬ ಆಸೆ ತಂದೆ– ತಾಯಿಗೆ ಇರುವುದು ಸಹಜವೇ. ಹಾಗಂತ ಅವರ ಮೇಲೆ ನಿಮ್ಮ ಆಸೆಗಳನ್ನೆಲ್ಲ ಹೇರಿ ಒತ್ತಡ ಸೃಷ್ಟಿಸಬೇಡಿ. ಒತ್ತಡ ಜಾಸ್ತಿಯಾದರೆ ಬರುವಷ್ಟು ಅಂಕಗಳೂ ಕೈಕೊಡುತ್ತವೆ. ಕೊನೆಗೆ ನಿರಾಸೆಯಾಗುವುದು ನಿಮಗೇ.

ಮಕ್ಕಳಿಗೆ ಮಾರ್ಗದರ್ಶನ ಮಾಡುವುದಷ್ಟೇ ಪೋಷಕರ ಹೊಣೆ. ಚೆನ್ನಾಗಿ ಓದಲು ಏನೇನು ವ್ಯವಸ್ಥೆ– ಅದು ಪುಸ್ತಕಗಳಿರಲಿ, ಕೋಚಿಂಗ್‌ ಇರಲಿ.. ಮಾಡಿಕೊಡುವುದಷ್ಟೇ ಅವರ ಕೆಲಸ. ಆದರೆ ಅವರ ಮೇಲೆ 24 ಗಂಟೆ ನಿಗಾ ಇಡುವುದು, ಓದುವುದು ಬಿಟ್ಟು ಏನೇನು ಮಾಡಿದರು ಎಂದು ಪಟ್ಟಿ ಮಾಡಿ ಬಯ್ಯುವುದು, ಅವರ ಜೊತೆಗೇ ರಾತ್ರಿಯಿಡೀ ಕುಳಿತು ಓದಿಸುವುದು.. ಹೀಗೇ ಪೋಷಕರೇ ಹೆಚ್ಚು ಕಷ್ಟಪಟ್ಟರೆ, ಮಕ್ಕಳಲ್ಲಿ ದೌರ್ಬಲ್ಯ ಹೆಚ್ಚುತ್ತ ಹೋಗುತ್ತದಂತೆ. ಮೆದುಳು ಒತ್ತಡ ತಡೆದುಕೊಳ್ಳಲಾರದೇ, ನೆನಪಿನ ಶಕ್ತಿ ಕುಂದುವುದು, ಓದಿದ್ದೆಲ್ಲ ಕಸಲುಮೇಲೋಗರವಾಗುವುದು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರ ಬದಲಾಗಿ ಮಕ್ಕಳು ಓದುತ್ತಿದ್ದಾರೆಯೇ ಎಂಬುದನ್ನು ಸಹಜವಾಗಿ ವಿಚಾರಿಸಿದರೆ ಸಾಕು, ಅವರೇ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಅಧ್ಯಯನದಲ್ಲಿ ತೊಡಗುತ್ತಾರೆ. ಆರೋಗ್ಯಕರ ಮೆದುಳು ಓದಿದ್ದನ್ನು ಅರಗಿಸಿಕೊಂಡು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಸಿದ್ಧವಾಗುತ್ತದೆ.

ಬದುಕಲ್ಲಿ ಸಾಧನೆ ಮುಖ್ಯ
ಮಕ್ಕಳು ಚೆನ್ನಾಗಿ ಓದಿ, ಅಂಕ ಗಳಿಸಿ, ಮುಂದೆ ಒಳ್ಳೆಯ ಉದ್ಯೋಗ ಸಂಪಾದಿಸಲಿ, ಖುಷಿಯಾಗಿರಲಿ ಎಂಬುದು ಬಹುತೇಕ ಪೋಷಕರ ಬಯಕೆ. ಆದರೆ ಅವರನ್ನು ಹದಿಯರೆಯದಲ್ಲೇ ಎಲ್ಲಾ ಸಮಸ್ಯೆಗಳಿಗೆ, ಪೈಪೋಟಿಗೆ ಒಡ್ಡುವುದು ಎಷ್ಟು ಸರಿ? ಚೆನ್ನಾಗಿ ಸಂಪಾದನೆ ಮಾಡುವವರು ಖುಷಿಯಾಗಿರುತ್ತಾರೆ ಎಂದು ಅರ್ಥವೇ? ಒಳ್ಳೆಯ ಅಂಕ ಗಳಿಕೆ ಒಂದು ಕಡೆಯಾದರೆ, ವಿದ್ಯಾರ್ಥಿಯ ಸಾಮರ್ಥ್ಯ ಎಷ್ಟಿರುತ್ತದೋ ಅಷ್ಟು ಗ್ರೇಡ್‌ ಸಂಪಾದಿಸಿ ಬದುಕಿನಲ್ಲಿ ಯಶಸ್ವಿಯಾಗುವುದು ಇನ್ನೊಂದು ಕಡೆ. ತಮಗೆ ಆಸಕ್ತಿಯಿರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಇರುವ ಕೌಶಲವನ್ನು ಬಳಸಿಕೊಂಡು, ವಿಶೇಷ ಸಾಮರ್ಥ್ಯವಿದ್ದರೆ ಅವಕಾಶಗಳನ್ನು ಪಡೆದು ತಮ್ಮ ಜೀವನದಲ್ಲಿ ಸಾಧನೆ ಮಾಡಬಹುದು. ಹಲವರು ಇದಕ್ಕೆ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಉದಾಹರಣೆ ಕೊಡುತ್ತಾರೆ. ಎಲ್ಲರೂ ಅವರಂತಾಗಲು ಸಾಧ್ಯವಿಲ್ಲ. ಆದರೆ ಕಂಡ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನವನ್ನು ಹಾಕಬಹುದಲ್ಲ. ಅದಕ್ಕೇನೂ ಪರೀಕ್ಷೆಯಲ್ಲಿ ಪಡೆದ ಗ್ರೇಡ್‌ ಒಂದೇ ಆಧಾರವಲ್ಲ.

ಓದುವ ವಾತಾವರಣ ಕಲ್ಪಿಸಿ
ಮಕ್ಕಳ ಪರೀಕ್ಷೆ ಸಮೀಪಿಸಿದಾಗ ಮೊದಲು ಪೋಷಕರು ಸಮಾಧಾನಚಿತ್ತರಾಗಿ ಇರುವುದನ್ನು ಕಲಿಯಬೇಕು. ಮಕ್ಕಳ ಮೇಲೆ ರೇಗುವುದರ ಬದಲು, ಮಕ್ಕಳು ಕೇಳುವ ಬೆಂಬಲ ನೀಡಿ. ಮನೆಯಲ್ಲಿ ಮಕ್ಕಳು ಶಾಂತವಾಗಿ ಕುಳಿತು ಓದುವಂತಹ ವಾತಾವರಣ ನಿರ್ಮಾಣ ಮಾಡಿ. ಅವರಲ್ಲಿ ಆತ್ಮವಿಶ್ವಾಸ ಹುಟ್ಟಿಸುವಂತಹ ಮಾತುಗಳನ್ನಾಡಿ. ಯಾವಾಗಲೂ ಪರೀಕ್ಷೆ, ಓದು ಎಂದು ಮಾತನಾಡುವ ಬದಲು ಆದಷ್ಟು ಸಹಜವಾಗಿ ಮಾತುಕತೆ ನಡೆಸಿ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿರೀಕ್ಷೆ ಮಾಡಿದ್ದಷ್ಟು ಅಂಕ ಬರದಿದ್ದರೆ ಬಯ್ಯಬೇಡಿ, ಇಷ್ಟಾದರೂ ಬಂತಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿ. ಜೀವನದಲ್ಲಿ ಇದೊಂದೇ ಗುರಿಯಲ್ಲ, ಬೇಕಾದಷ್ಟು ಮಾರ್ಗಗಳಿವೆ ಎಂದು ಪ್ರೋತ್ಸಾಹದ ಮಾತುಗಳನ್ನಾಡಿ.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದವರು, ಫೇಲಾದವರು ಮುಂದೆ ಚೆನ್ನಾಗಿ ಓದಿ ಬದುಕಿನಲ್ಲಿ ಯಶಸ್ಸು ಗಳಿಸಿದವರಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಒಂದೆರಡು ವಿಷಯದಲ್ಲಿ ಫೇಲಾದವರು, ಎದೆಗುಂದದೇ ಮತ್ತೆ ಅದೇ ತರಗತಿಗೆ ಅಡ್ಮಿಷನ್‌ ಮಾಡಿಸಿ ಹೆಚ್ಚು ಅಂಕ ಗಳಿಸಿ ತಮಗೆ ಬೇಕಾದ ಕೋರ್ಸ್‌ಗೆ ಪ್ರವೇಶ ದೊರಕಿಸಿಕೊಂಡ ಉದಾಹರಣೆಗಳೂ ಬೇಕಾದಷ್ಟಿವೆ. ಹೀಗಾಗಿ ಪೋಷಕರೇ, ಆತುರ ತೋರದೆ ಮಕ್ಕಳ ಏಳ್ಗೆಗೆ ನೆರವಾಗಿ.

(ಪೂರಕ ಮಾಹಿತಿ: ಪ್ರೊ.ಎಸ್‌.ಕೆ.ಜಾರ್ಜ್‌)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು