ಶನಿವಾರ, ಮಾರ್ಚ್ 6, 2021
28 °C

ವಿದೇಶಿ ಭಾಷೆ: ಬೇಡಿಕೆ ಹೇಗೆ?

ಎಸ್‌.ಜಿ.ಕೃಷ್ಣ Updated:

ಅಕ್ಷರ ಗಾತ್ರ : | |

Prajavani

ಜಾಗತೀಕರಣವೆಂಬುದು ಔದ್ಯೋಗಿಕ ಅವಕಾಶಗಳನ್ನು ಹೆಚ್ಚಿಸಿದೆ. ನೀವು ನಿಮ್ಮ ಶಿಕ್ಷಣದ ಜೊತೆಗೆ ಕೆಲವು ವಿದೇಶಿ ಭಾಷೆಗಳನ್ನು ಕರಗತ ಮಾಡಿಕೊಂಡರೆ ವಿದೇಶಗಳಲ್ಲಿ ಉದ್ಯೋಗ ಮಾತ್ರವಲ್ಲ, ವೇತನವನ್ನೂ ಜಾಸ್ತಿ ಪಡೆಯಬಹುದು. ಕೆಲವು ಕಾಲೇಜುಗಳು, ದೆಹಲಿ ವಿಶ್ವವಿದ್ಯಾಲಯ, ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ವಿದೇಶಿ ಭಾಷೆಗಳ ಕಲಿಕೆಗೆಂದೇ ಪ್ರತ್ಯೇಕ ವಿಭಾಗಗಳಿವೆ.

ಸದ್ಯ ಜಗತ್ತಿನಲ್ಲಿ ಬೇಡಿಕೆ ಇರುವಂತಹ ಕೆಲವು ವಿದೇಶಿ ಭಾಷೆಗಳ ಬಗ್ಗೆ ವಿವರ ಇಲ್ಲಿದೆ.

ಮ್ಯಾಂಡರಿನ್‌/ ಚೈನೀಸ್‌ ಭಾಷೆ

ಜಾಗತಿಕವಾಗಿ ವ್ಯಾಪಾರ– ವ್ಯವಹಾರಗಳಲ್ಲಿ ಸದ್ಯ ಚೀನಾ ಮುಂದಿದೆ. ಜೊತೆಗೆ ಅಲ್ಲಿಯ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣದ ವೆಚ್ಚ ಕಡಿಮೆ ಇರುವುದರಿಂದ ಅಲ್ಲಿಗೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೂ ಸಾಕಷ್ಟಿದೆ. ಜಗತ್ತಿನಲ್ಲಿ ನೂರಾರು ಕೋಟಿ ಜನರು ಚೈನೀಸ್‌ ಹಾಗೂ ಮ್ಯಾಂಡರಿನ್‌ ಭಾಷೆ ಮಾತನಾಡುತ್ತಾರೆ. ಹಾಗೆಯೇ ಭಾರತ ಮತ್ತು ಚೀನಾದ ಮಧ್ಯೆ ವ್ಯಾಪಾರ ವಹಿವಾಟು ಹೆಚ್ಚಿದೆ. ಅಲ್ಲಿಯ 150ಕ್ಕೂ ಅಧಿಕ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿವೆ. ಹೀಗಾಗಿ ಚೀನಾದ ಕಂಪನಿಗಳಲ್ಲಿ ಉದ್ಯೋಗಕ್ಕೆ ಅವಕಾಶಗಳು ಸಾಕಷ್ಟಿವೆ. ಈ ಭಾಷೆಯಲ್ಲಿ ನೀವು ಪರಿಣತಿ ಸಾಧಿಸಿದರೆ ಶಿಕ್ಷಣದ ನಂತರ ಅವಕಾಶಗಳನ್ನು ಬಾಚಿಕೊಳ್ಳಬಹುದು.

ಸ್ಪ್ಯಾನಿಷ್‌

21 ದೇಶಗಳಲ್ಲಿ ಅಧಿಕೃತ ಭಾಷೆಯಾಗಿರುವ ಸ್ಪ್ಯಾನಿಷ್‌ ಅನ್ನು 53 ಕೋಟಿಗಿಂತ ಹೆಚ್ಚು ಜನರು ಮಾತನಾಡುತ್ತಾರೆ. ಚೈನೀಸ್‌ ನಂತರ ಅತಿ ಹೆಚ್ಚು ಜನರು ಮಾತನಾಡುವ ಭಾಷೆ. ಸ್ಪೇನ್‌ನ ಹಲವಾರು ಕಂಪನಿಗಳು ನಮ್ಮ ದೇಶದಲ್ಲಿ ಪ್ರವಾಸೋದ್ಯಮ, ಅನುವಾದ, ಶಿಕ್ಷಣ ಹಾಗೂ ಅಂತರರಾಷ್ಟ್ರೀಯ ವಹಿವಾಟು ಮತ್ತು ಸಂವಹನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಹೀಗಾಗಿ ಇದನ್ನು ಕೂಡ ಕಲಿತರೆ ಹೆಚ್ಚಿನ ಲಾಭಗಳಿವೆ.

ಪೋರ್ಚುಗೀಸ್‌

23 ಕೋಟಿಗಿಂತ ಅಧಿಕ ಮಂದಿ ಈ ಭಾಷೆಯನ್ನು ಮಾತನಾಡುತ್ತಿದ್ದು, ಎಂಟು ದೇಶಗಳಲ್ಲಿ ಅಧಿಕೃತ ಭಾಷೆ ಎನಿಸಿಕೊಂಡಿದೆ. ಜರ್ಮನ್‌, ಫ್ರೆಂಚ್‌ ಹಾಗೂ ಇಟಾಲಿಯನ್‌ ಭಾಷೆಗಿಂತಲೂ ಜನಪ್ರಿಯ. ಭಾರತ ಹಾಗೂ ಬ್ರೆಜಿಲ್‌ ನಡುವೆ ಹೆಚ್ಚುತ್ತಿರುವ ಬಾಂಧವ್ಯದಿಂದಾಗಿ ಈ ಭಾಷೆಗೆ ಬೇಡಿಕೆ ಜಾಸ್ತಿ. ಜೊತೆಗೆ ಅಕೌಂಟ್ಸ್‌, ತಂತ್ರಜ್ಞಾನ, ತಾಂತ್ರಿಕ ಸೇವೆ, ಹಣಕಾಸು, ರಫ್ತು, ಪ್ರವಾಸೋದ್ಯಮ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪೋರ್ಚುಗೀಸ್‌ ಭಾಷಾ ತಜ್ಞರ ಅವಶ್ಯಕತೆಯಿದೆ.

ಜರ್ಮನ್‌

ಜಾಗತಿಕವಾಗಿ ಮೂರನೆಯ ಸ್ಥಾನದಲ್ಲಿರುವ ಈ ಭಾಷೆ ಯೂರೋಪ್‌ ಮತ್ತು ಜಪಾನ್‌ನಲ್ಲಿ ಇಂಗ್ಲಿಷ್‌ ನಂತರ ಎರಡನೆಯ ಸ್ಥಾನದಲ್ಲಿದೆ. ಜರ್ಮನಿಯಲ್ಲಂತೂ ಸುಮಾರು 11 ಕೋಟಿ ಮಂದಿ ಈ ಭಾಷೆಯಲ್ಲಿ ಮಾತನಾಡುತ್ತಾರೆ. ಅಮೆರಿಕದಲ್ಲಿರುವ ಜರ್ಮನಿಯ ಕಂಪನಿಗಳಲ್ಲಿ ಸುಮಾರು 7 ಲಕ್ಷಕ್ಕಿಂತ ಅಧಿಕ ಉದ್ಯೋಗಗಳಿಗೆ ಬೇಡಿಕೆಯಿದ್ದು, ಅಮೆರಿಕ ಅಥವಾ ಜರ್ಮನಿಯಲ್ಲಿ ಉದ್ಯೋಗ ನಿರ್ವಹಿಸಲು ಆಸಕ್ತಿ ಇರುವವರು ಜರ್ಮನ್‌ ಭಾಷೆಯನ್ನು ಕಲಿಯಬಹುದು.

ಫ್ರೆಂಚ್‌

ಐದು ಖಂಡಗಳಲ್ಲಿ ಸರಿ ಸುಮಾರು 22 ಕೋಟಿ ಜನ ಈ ಭಾಷೆಯನ್ನು ಮಾತನಾಡುತ್ತಾರೆ. ಈ ಭಾಷೆಯಲ್ಲಿ ಪಾರಂಗತರಾದರೆ ಫ್ರಾನ್ಸ್‌ನಲ್ಲಿರುವ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವ ಅವಕಾಶ ನಿಮ್ಮದಾಗಬಹುದು. ಈ ಭಾಷೆಯಲ್ಲಿ ಪರಿಣತಿ ಸಾಧಿಸಿದರೆ ಅಲ್ಲಿಯ ಸರ್ಕಾರದ ಫೆಲೊಶಿಪ್‌ ಪಡೆದು ಉನ್ನತ ಅಧ್ಯಯನ ಮಾಡಬಹುದು. ಯೂರೋಪ್‌ನ ಹಲವು ದೇಶಗಳಲ್ಲಿ ದೃಶ್ಯ ಕಲೆ, ಫ್ಯಾಷನ್‌, ಹೋಟೆಲ್‌ ಉದ್ಯಮದಲ್ಲಿ ಫ್ರೆಂಚ್‌ ಭಾಷೆ ಹೆಚ್ಚು ಚಾಲ್ತಿಯಲ್ಲಿದ್ದು, ಅದನ್ನು ಕಲಿತರೆ ಅವಕಾಶಗಳು ಕಟ್ಟಿಟ್ಟ ಬುತ್ತಿ.

ರಷ್ಯನ್‌

ಈ ಭಾಷೆಯಲ್ಲಿ 30 ಕೋಟಿಗಿಂತಲೂ ಅಧಿಕ ಜನ ವ್ಯವಹರಿಸುತ್ತಿದ್ದು, ಯೂರೋಪ್‌ನಲ್ಲಿ ಅತಿ ದೊಡ್ಡ ಸ್ಥಳೀಯ ಭಾಷೆ ಎನಿಸಿಕೊಂಡಿದೆ. ರಷ್ಯಾದ ಕಂಪನಿಗಳಲ್ಲಿ ಎಂಜಿನಿಯರಿಂಗ್‌, ವಿಜ್ಞಾನ ಮತ್ತು ತಂತ್ರಜ್ಞಾನ, ತೈಲ ಮತ್ತು ಅನಿಲ, ರಕ್ಷಣಾ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಅವಕಾಶಗಳು ಹೆಚ್ಚಿವೆ. ಹೀಗಾಗಿ ಈ ಭಾಷೆಯನ್ನು ಕಲಿತರೆ ಲಾಭವಿದೆ.

ಜಪಾನೀಸ್‌

ಅಂತರ್ಜಾಲದಲ್ಲಿ ಇಂಗ್ಲಿಷ್‌ ಮತ್ತು ಚೈನೀಸ್‌ ಬಿಟ್ಟರೆ ಅತ್ಯಂತ ವ್ಯಾಪಕವಾಗಿ ಬಳಕೆಯಾಗುವ ಭಾಷೆ. 12 ಕೋಟಿಯಷ್ಟು ಜನರ ಆಡುಭಾಷೆ ಎನಿಸಿಕೊಂಡಿದೆ. ಹಲವಾರು ಜಪಾನ್‌ ಕಂಪನಿಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ಭಾರತದಲ್ಲಿ ಉದ್ಯಮ ವಿಸ್ತರಿಸಿವೆ. ಸೋನಿ, ಟೊಯೊಟಾ, ಹೊಂಡಾ, ತೊಷಿಬಾ, ಮಿತ್ಸುಬಿಶಿ ಮೊದಲಾದ ಪ್ರಸಿದ್ಧ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಿವೆ. ಈ ಭಾಷೆಯ ಮೇಲೆ ನೀವು ಹಿಡಿತ ಸಾಧಿಸಿದರೆ ಅವಕಾಶಗಳ ಬಾಗಿಲು ತೆರೆಯಬಹುದು.

ಇಟಾಲಿಯನ್‌

ಫಿಯೆಟ್‌, ಬೆನೆಟನ್‌, ಗುಸ್ಸಿ, ಫೆರಾರಿ, ಪಿನ್ನಾಕಲ್‌, ಮಾರ್ಕೋನಿ ಮೊದಲಾದ ಇಟಲಿಯ ಕಂಪನಿಗಳು ಭಾರತದಲ್ಲಿ ವಹಿವಾಟು ನಡೆಸುತ್ತಿದ್ದು, ಈ ಭಾಷೆ ಕಲಿತವರಿಗೆ ಉದ್ಯೋಗಕ್ಕೆ ನೆರವಾಗಬಹುದು.

ಅರೇಬಿಕ್‌

ಈ ಭಾಷೆಯನ್ನು ಚೆನ್ನಾಗಿ ಮಾತನಾಡುವುದನ್ನು ಕಲಿತರೆ ದುಬೈ, ಬಹ್ರೇನ್‌, ಕತಾರ್‌, ಓಮನ್‌, ಕುವೈತ್‌ ಮೊದಲಾದ ದೇಶಗಳಲ್ಲಿ ಉದ್ಯೋಗವಲ್ಲದೇ, ಉದ್ಯಮ ಸ್ಥಾಪಿಸಬಹುದು. ಅಲ್ಲಿ ಪ್ರವಾಸೋದ್ಯಮ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಬಹಳಷ್ಟು ಬೇಡಿಕೆಯಿದೆ.

ಕೊರಿಯನ್‌

ಕೊರಿಯನ್‌ ಭಾಷೆಯನ್ನು ಉತ್ತರ ಮತ್ತು ದಕ್ಷಿಣ ಕೊರಿಯಾದಲ್ಲಿ ಮಾತ್ರವಲ್ಲ, ಚೀನಾ, ಅಮೆರಿಕ, ಜಪಾನ್‌ನಲ್ಲಿ ಕೂಡ ಮಾತನಾಡುವವರಿದ್ದಾರೆ. ಕೊರಿಯಾದ ಕಂಪನಿಗಳು ಜಾಗತಿಕವಾಗಿ ಉತ್ತಮ ವಹಿವಾಟು ನಡೆಸುತ್ತಿದ್ದು, ಭಾರತದಲ್ಲೂ ಹಲವಾರು ಉದ್ಯಮಗಳನ್ನು ಸ್ಥಾಪಿಸಲಾಗಿದೆ. ಸ್ಯಾಮ್ಸಂಗ್‌, ಎಲ್‌ಜಿ, ಹ್ಯುಂಡೈ ಮೊದಲಾದ ಕಂಪನಿಗಳನ್ನು ಇಲ್ಲಿ ಹೆಸರಿಸಬಹುದು. ಕೊರಿಯಾದ ಕಂಪನಿಗಳಲ್ಲಿ ಆ ಭಾಷೆಯನ್ನು ಬಲ್ಲವರಿಗೆ ಬಹು ಬೇಡಿಕೆಯಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು