ಬುಧವಾರ, ಮಾರ್ಚ್ 3, 2021
18 °C
ಬೆಳಗಾವಿಯ ಕಾನನದಂಚಿನ ಹಳ್ಳಿಯಲ್ಲಿ ಹೈಟೆಕ್ ಗ್ರಂಥಾಲಯ

PV Web Exclusive | ಈಗ ‘ಬೀಡಿ’ಯಲ್ಲಿ ಜ್ಞಾನ ವೃದ್ಧಿ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಾನನದಂಚಿನಲ್ಲಿರುವ ಹಳ್ಳಿ ‘ಬೀಡಿ’ಯಲ್ಲಿ ನಗರವನ್ನೂ ಮೀರಿಸುವಂತೆ ಅತ್ಯಾಧುನಿಕ ಗ್ರಂಥಾಲಯ ಅಭಿವೃದ್ಧಿಪಡಿಸಿರುವುದು ಗಮನಸೆಳೆಯುತ್ತಿದೆ.


ಬೀಡಿ ಗ್ರಾ.ಪಂ. ಪಿಡಿಒ ಕೆ.ಎಸ್. ಗಣೇಶ್

ಅಲ್ಲಿ ಡಿಜಿಟಲ್ ಮತ್ತು ಹೊಸ ಕಲ್ಪನೆಯ ಬಯಲು ಗ್ರಂಥಾಲಯ ಮೈದಳೆದಿದ್ದು, ಉದ್ಘಾಟನೆ ಸಜ್ಜಾಗಿದೆ. ಹಳ್ಳಿಯೊಂದರಲ್ಲಿ ಅತ್ಯಾಕರ್ಷಕ ಪುಸ್ತಕಾಲಯ ತಲೆಎತ್ತಿರುವುದು ವಿಶೇಷ. ಜ್ಞಾನಪಿಪಾಸುಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 3ಸಾವಿರಕ್ಕಿಂತ ಹೆಚ್ಚು ಪುಸ್ತಕಗಳನ್ನು ಅಲ್ಲಿ ಒಪ್ಪ ಓರಣವಾಗಿ ಜೋಡಿಸಲಾಗಿದೆ.

ಓದುಗರ ಅನುಕೂಲಕ್ಕಾಗಿ ಕುರ್ಚಿ ಮತ್ತು ಟೇಬಲ್‌ಗಳನ್ನು ಹಾಕಲಾಗಿದೆ. ಚಿಕ್ಕ ಮಕ್ಕಳಿಗೆ ಕೆಲವು ಸೋಫಾಗಳನ್ನು ವ್ಯವಸ್ಥೆ ಮಾಡಿರುವುದು ವಿಶೇಷ. ಆರು ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದ್ದು, ಅವುಗಳಿಗೆ ಇಂಟರ್ನೆಟ್‌ ಸಂಪರ್ಕ ಒದಗಿಸಲಾಗಿದೆ. ಆಸಕ್ತರು ಅವುಗಳಲ್ಲಿ ಐದನ್ನು ಸಾರ್ವಜನಿಕರು ಬಳಸಿಕೊಂಡು www.Karnatakapubliclibrary.com ಜಾಲತಾಣಕ್ಕೆ ಭೇಟಿ ನೀಡಿ 40ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ಓದಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಅಧ್ಯಯನ ಸಾಮಗ್ರಿಯನ್ನು ಪಡೆಯಬಹುದು. ಯುವಜನರು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಈ ಕಂಪ್ಯೂಟರ್‌ಗಳನ್ನು ಬಳಸಿಕೊಳ್ಳಬಹುದು.

ವಿವಿಧ ವಿಭಾಗ

ಸ್ಪರ್ಧಾತ್ಮಕ ಪರೀಕ್ಷೆ, ಮಕ್ಕಳು ಹಾಗೂ ಮಹಿಳಾ ವಿಭಾಗ ಎಂದು ವಿಭಾಗಗಳನ್ನು ಮಾಡಿ ಆಯಾ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಶಿಕ್ಷಣದ ಹೃದಯವಾದ ಗ್ರಂಥಾಲಯದತ್ತ ಓದುಗರನ್ನು ಸೆಳೆಯುವ ರೀತಿಯಲ್ಲಿ ಅಲ್ಲಿನ ವಾತಾವರಣವನ್ನು ರೂಪಿಸಲಾಗಿದೆ. ಗೋಡೆಯ ಅಲ್ಲಲ್ಲಿ ಪುಸ್ತಕಗಳು, ಶಿಕ್ಷಣ, ಜ್ಞಾನ ಹಾಗೂ ಕಲಿಕೆಯ ಮಹತ್ವವನ್ನು ತಿಳಿಸುವ ಸಂದೇಶಗಳನ್ನು ಹಾಕಲಾಗಿದೆ. ಏಕಾಗ್ರತೆಯ ಓದಿಗೆ ಪೂರಕವಾದ ಪರಿಸರವನ್ನು ಅಲ್ಲಿ ನಿರ್ಮಿಸಲಾಗಿದೆ. ಇದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.


ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕು ಬೀಡಿ ಗ್ರಾಮದ ಗ್ರಂಥಾಲಯ ಕಟ್ಟಡದ ಹೊರ ನೋಟ

ಗ್ರಾಮ ಪಂಚಾಯ್ತಿಯ ಮುಖ್ಯ ಕಟ್ಟಡದ ಪಕ್ಕದಲ್ಲಿದ್ದ ಖಾಲಿ ಜಾಗವನ್ನು ಅಭಿವೃದ್ಧಿಪಡಿಸಿ ಚಿಕ್ಕದಾಗಿ ಉದ್ಯಾನವನ್ನು ನಿರ್ಮಿಸಲಾಗಿದೆ. ಅಲ್ಲಿಯೂ ಕುಳಿತು ಓದಲು ಅನುಕೂಲ ಆಗುವಂತೆ ಹುಲ್ಲುಹಾಸು ಅಭಿವೃದ್ಧಿಪಡಿಸಲಾಗಿದೆ. ಅದೇ ಆವರಣದಲ್ಲಿ 1924ರಲ್ಲಿ ನಿರ್ಮಾಣವಾಗಿರುವ ಬಾವಿಗೆ ಪುನರುಜ್ಜೀವನ ನೀಡಿ ಆಕರ್ಷಕಗೊಳಿಸಲಾಗಿದೆ. ಈ ಮೂಲಕ ಬಾವಿಗಳನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವನ್ನು ಸಾರುವ ಪ್ರಯತ್ನವನ್ನೂ ಮಾಡಲಾಗಿದೆ. ದಿನಪತ್ರಿಕೆಗಳು,   ಮ್ಯಾಗಜಿನ್‌ಗಳ ಕೂಡ ಲಭ್ಯ. ಕಟ್ಟಡದ ಗೋಡೆಗಳಿಗೆ ಹಾಗೂ ಕಾಂಪೌಂಡ್‌ನಲ್ಲಿ ಮಕ್ಕಳನ್ನು ಆಕರ್ಷಿಸುವ ರೀತಿಯಲ್ಲಿ ಚಿತ್ರಗಳನ್ನು ಬಿಡಿಸಿರುವುದು ಮೆರುಗು ಹೆಚ್ಚಿಸಿದೆ.


ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕು ಬೀಡಿ ಗ್ರಾಮದಲ್ಲಿ ಅಭಿವೃದ್ಧಿಪಡಿಸಿರುವ ಹೈಟೆಕ್ ಗ್ರಂಥಾಲಯ

ಈ ಹಿಂದೆ ಕಸ ಹಾಕುವ ಡಂಪಿಂಗ್ ಯಾರ್ಡ್‌ನಂತೆ ಬಳಕೆಯಾಗುತ್ತಿದ್ದ ಖಾಲಿ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ.

ಆಹ್ಲಾದಕರ ವಾತಾವರಣದಲ್ಲಿ

‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಭೇಟಿ ನೀಡಿದ ವೇಳೆ ನೀಡಿದದ ಸಲಹೆಯಂತೆ, ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್‌ ಅವರ ನಿರ್ದೇಶನ ಹಾಗೂ ತಾ.ಪಂ. ಇಒ ಬಿ.ವಿ. ಅಡವಿಮಠ ಅವರ ಮಾರ್ಗದರ್ಶನದಿಂದ ಗ್ರಂಥಾಲಯ ಅಭಿವೃದ್ಧಿಪಡಿಸಲಾಗಿದೆ. ಗ್ರಾಮದ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ಪಿಡಿಒ ಕೆ.ಎಸ್. ಗಣೇಶ್‌ ತಿಳಿಸುತ್ತಾರೆ.

‘ಗ್ರಾಮ ವಿಕಾಸ ಹಾಗೂ 14ನೇ ಹಣಕಾಸು ಯೋಜನೆ ಮತ್ತು ಸ್ವಂತ ಸಂಪನ್ಮೂಲದಿಂದ ಅಭಿವೃದ್ಧಿಪಡಿಸಲಾಗಿದೆ. ಕಟ್ಟಡಕ್ಕೆ ₹ 8 ಲಕ್ಷ, ಗ್ರಂಥಾಲಯಕ್ಕೆ  ಒಟ್ಟು ₹ 5 ಲಕ್ಷ ವೆಚ್ಚವಾಗಿದೆ. ಒಳಾವರಣದಲ್ಲಿ ಎಲ್‌ಇಡಿ ವಿದ್ಯುತ್ ದೀಪಗಳನ್ನು ಹಾಕಲಾಗಿದೆ. ಒಳಗಡೆ ಓದಿ ಬೇಸರವಾದವರು, ಹೊರಗಡೆಯೂ ಕುಳಿತು ಓದಬಹುದು. ಆಹ್ಲಾದಕರ ವಾತಾವರಣದಲ್ಲಿ ಓದಬಹುದು. ಪುಸ್ತಕಗಳು ಸುಲಭವಾಗಿ ಸಿಗುವಂತೆ ವಿಭಾಗವನ್ನು ನೋಡಲಾಗಿದೆ. ಗ್ರಾಮೀಣ ಜನರಿಗೂ ನಗರ ಪ್ರದೇಶದಲ್ಲಿ ಸಿಗುವಂತಹ ಸೌಲಭ್ಯ ಕೊಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ’ ಎಂದು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕು ಬೀಡಿ ಗ್ರಾಮದಲ್ಲಿ ಅಭಿವೃದ್ಧಿಪಡಿಸಿರುವ ಬಯಲು ಗ್ರಂಥಾಲಯ ಹಾಗೂ ಬಾವಿಯನ್ನು ಪುನರುಜ್ಜೀವನಗೊಳಿಸಿರುವುದು
ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕು ಬೀಡಿ ಗ್ರಾಮದಲ್ಲಿ ಅಭಿವೃದ್ಧಿಪಡಿಸಿರುವ ಬಯಲು ಗ್ರಂಥಾಲಯ ಹಾಗೂ ಬಾವಿಯನ್ನು ಪುನರುಜ್ಜೀವನಗೊಳಿಸಿರುವುದು

ಗ್ರಾಮದಲ್ಲಿ 2 ಖಾಸಗಿ ಪ್ರೌಢಶಾಲೆಗಳು, 2 ಪಿಯು ಕಾಲೇಜು, ತಲಾ ಒಂದು ಪದವಿ ಮತ್ತು ಐಟಿಐ ಕಾಲೇಜು, ಒಂದು ಡಾ.ಆರ್. ಅಂಬೇಡ್ಕರ್ ವಸತಿ ಶಾಲೆ ಇದೆ. ಹತ್ತು ಕಿ.ಮೀ. ವ್ಯಾಪ್ತಿಯ ಹಳ್ಳಿಗಳ ವಿದ್ಯಾರ್ಥಿಗಳು ಬೀಡಿ ಗ್ರಾಮದಲ್ಲಿ ಕಲಿಕೆಗೆ ಬರುತ್ತಾರೆ. ಆ ವಿದ್ಯಾರ್ಥಿಗಳೆಲ್ಲರೂ ಗ್ರಂಥಾಲಯವನ್ನು ಬಳಸಿಕೊಳ್ಳಬಹುದಾಗಿದೆ. ಉಚಿತವಾಗಿ ಬ್ರೌಸಿಂಗ್ ಕೂಡ ಮಾಡಬಹುದದು. ಪುಸ್ತಕಗಳನ್ನು ಓದಬಹುದು. ಅದಕ್ಕಾಗಿ ಎಲ್ಲ ರೀತಿಯ ವ್ಯವವ್ಥೆ ಕಲ್ಪಿಸಲಾಗಿದೆ’ ಮಾಹಿತಿ ನೀಡುತ್ತಾರೆ ಅವರು. ಸಂಪರ್ಕಕ್ಕೆ ಮೊ:98440 80407.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು