ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿದ್ದು ನೆನಪಿಡುವುದು ಹೇಗೆ?

Last Updated 29 ಜನವರಿ 2020, 19:30 IST
ಅಕ್ಷರ ಗಾತ್ರ

ಓದುವುದು ಸುಲಭ. ಆದರೆ ಅದು ಪರೀಕ್ಷೆಯಲ್ಲಿ ನೆನಪಾಗುವುದು ಅಷ್ಟು ಸುಲಭವಲ್ಲ. ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸಿದರೆ ಕಲಿತಿದ್ದನ್ನು ನೆನಪಿಗೆ ತಂದುಕೊಳ್ಳಬಹುದು.

‘ನನಗೆ ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದೇ ಕಷ್ಟ. ಪರೀಕ್ಷೆಯನ್ನು ಎದುರಿಸುವುದಕ್ಕೆ ಭಯ ಎನಿಸುತ್ತದೆ’

‘ಕೆಲವೊಮ್ಮೆ ಓದಿದ್ದೆಲ್ಲ ಕಲಸುಮೇಲೋಗರವಾಗಿ ತಲೆಯೆಲ್ಲ ಖಾಲಿ ಖಾಲಿ ಎನಿಸುತ್ತದೆ’

ಪರೀಕ್ಷೆ ಸಮೀಪಿಸಿದಂತೆ ಕೆಲವು ವಿದ್ಯಾರ್ಥಿಗಳು ಸ್ಮರಣ ಶಕ್ತಿಯ ಕುರಿತು ಈ ರೀತಿ ಭಯ ತೋಡಿಕೊಳ್ಳುವುದು ಸಾಮಾನ್ಯ. ಆದರೆ ನಿಜ ಹೇಳಬೇಕೆಂದರೆ ಪ್ರತಿಯೊಬ್ಬರಿಗೂ ಮಾಹಿತಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟವೇ. ಮಹತ್ವವಾದ ವಿವರಗಳೇ ಎಷ್ಟೋ ಸಲ ಮರೆತುಹೋಗುತ್ತವೆ. ಆದರೆ ನೀವು ತರಗತಿಗಳಲ್ಲಿ ಕಲಿತಿರುವುದನ್ನು ಹಾಗೂ ನಂತರ ಅಧ್ಯಯನ ಮಾಡಿರುವುದನ್ನು ತಿಳಿದುಕೊಳ್ಳುವ ಸಲುವಾಗಿಯೇ ಪರೀಕ್ಷೆಗಳನ್ನು ರೂಪಿಸಲಾಗಿದೆ. ಓದಿದ್ದನ್ನು ನೆನಪಿಗೆ ತಂದುಕೊಂಡು ಬರೆದರೆ ಮಾತ್ರ ನಿಮ್ಮ ಶೈಕ್ಷಣಿಕ ಪ್ರಗತಿ ಸಾಧ್ಯ. ಹಾಗೆಯೇ ಕಾಲೇಜು ಮುಗಿಸಿದ ನಂತರ ಉದ್ಯೋಗ ಕ್ಷೇತ್ರಕ್ಕೆ ಕಾಲಿಟ್ಟ ಮೇಲೂ ಕೂಡ ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಅಗತ್ಯ.

ಕೆಲವೊಮ್ಮೆ ಬೇಡದ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸುಲಭ ಎನಿಸಿಬಿಡುತ್ತದೆ. ಉದಾಹರಣೆಗೆ ವಿಡಿಯೊ ಗೇಮ್‌ ಆಡುವುದು. ಆದರೆ ರಾಸಾಯನಿಕ ಸೂತ್ರವನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗಿಬಿಡುತ್ತದೆ. ನಿಮಗೆ ಬೇಕಾಗಿರುವುದನ್ನು, ಅಗತ್ಯ ಸಂದರ್ಭದಲ್ಲಿ ನೆನಪಿಗೆ ತಂದುಕೊಳ್ಳಲು ಕೆಲವು ವಿಧಾನಗಳಿವೆ. ಬಹಳಷ್ಟು ವಿದ್ಯಾರ್ಥಿಗಳು ಇದರಲ್ಲಿ ಸಫಲರೂ ಆಗಿದ್ದಾರೆ.

ಮಾಹಿತಿ ಅರ್ಥ ಮಾಡಿಕೊಳ್ಳಿ

ವಿವರಗಳು ಅಸ್ಪಷ್ಟವಾಗಿದ್ದರೆ, ಗೊಂದಲಗಳಿಂದ ತುಂಬಿದ್ದರೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ವಿದ್ಯಾರ್ಥಿಗಳಿಗೆ ಕಷ್ಟ. ಅದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಬೇಕಾದಾಗ ಸ್ಮರಿಸಬಹುದು. ಹೀಗಾಗಿ ಕಲಿತ ಅಥವಾ ಓದಿದ ವಿಷಯವನ್ನು ನಿಮ್ಮದೇ ಆದ ಶಬ್ದಗಳಲ್ಲಿ ಟಿಪ್ಪಣಿ ಮಾಡಿಕೊಂಡು ಮೆದುಳೆಂಬ ಕಂಪ್ಯೂಟರ್‌ ಒಳಗೆ ಭರ್ತಿ ಮಾಡಿ. ಇದು ನಿಮಗೆ ಸಾಧ್ಯವಾಗಲಿಲ್ಲ ಎಂದರೆ ನೀವದನ್ನು ಅರ್ಥ ಮಾಡಿಕೊಂಡಿಲ್ಲ ಎಂದೇ ಭಾವಿಸಬಹುದು.

ಮಾಹಿತಿ ಕ್ರಮಬದ್ಧವಾಗಿ ಕ್ರೋಢೀಕರಿಸಿ

ಓದಿದ ಮಾಹಿತಿಯನ್ನು ಬೇರೆ ಬೇರೆ ವಿಭಾಗಗಳಲ್ಲಿ ಕ್ರೋಢೀಕರಿಸಿ. ಉದಾಹರಣೆಗೆ ನೀವು ಇಂಗ್ಲಿಷ್‌ ಭಾಷೆ ವಿಷಯ ಓದುತ್ತಿದ್ದೀರಿ ಎಂದುಕೊಳ್ಳಿ. ಅದರಲ್ಲಿ ಒಂದೇ ಅರ್ಥ ಬರುವ ಬೇರೆ ಬೇರೆ ಶಬ್ದಗಳನ್ನು ಒಂದು ವಿಭಾಗದಲ್ಲಿ ಕ್ರೋಢೀಕರಿಸಿಕೊಂಡು ಓದಿ. ಇದರಿಂದ ಅವುಗಳೆಲ್ಲ ನಿಮಗೆ ನೆನಪಿನಲ್ಲಿ ಉಳಿಯುತ್ತವೆ. ಹೀಗೆಯೇ ವಿಜ್ಞಾನದಲ್ಲಿ ಬರುವ ಮಾನವನ ಅಂಗಾಂಗಗಳನ್ನು ಕೂಡ ಅವುಗಳ ಕೆಲಸದ ಆಧಾರದ ಮೇಲೆ ಕ್ರೋಢೀಕರಿಸಿ ಸ್ಮರಣೆಯಲ್ಲಿ ಇಟ್ಟುಕೊಳ್ಳಬಹುದು. ಇನ್ನೊಂದು ಬಗೆಯೆಂದರೆ ಉದ್ದನೆಯ ನಂಬರ್‌ ಅನ್ನು ತುಂಡು ತುಂಡಾಗಿ ಮಾಡಿ ನೆನಪಿನಲ್ಲಿ ಇಟ್ಟುಕೊಳ್ಳುವುದು. ಉದಾಹರಣೆಗೆ ಫೋನ್‌ ನಂಬರ್‌ ಅನ್ನು 2–3 ನಂಬರ್‌ ಸೇರಿಸಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರಲ್ಲವೇ ಹಾಗೆ. ಇತಿಹಾಸದಲ್ಲಿ ಇಸವಿಗಳನ್ನು ಇದೇ ರೀತಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು.

ದೃಶ್ಶೀಕರಣ

ಪಠ್ಯಕ್ಕಿಂತ ಚಿತ್ರವನ್ನು ನೆನಪಿಸಿಕೊಳ್ಳುವುದು ಸುಲಭ. ಇದನ್ನೇ ವಿವರಗಳಿಗೂ ಅನ್ವಯಿಸಬಹುದು. ಯಾವುದೋ ಸಂಕೀರ್ಣವಾದ ಗಣಿತದ ಸಮಸ್ಯೆ ಅಥವಾ ಗೊಂದಲದ ವಿವರಗಳಿದ್ದರೆ ಪಠ್ಯದಲ್ಲಿರುವ ವಿವರಗಳನ್ನು ಪದೇ ಪದೇ ನೋಡಿ ಮೆದುಳಿನಲ್ಲಿ ದೃಶ್ಶೀಕರಿಸಲು ಯತ್ನಿಸಿ. ಅಂದರೆ ನಿಮ್ಮ ಮನಸ್ಸಿನಲ್ಲಿ ಅದು ಇಂಪ್ರಿಂಟ್‌ ಆಗಿ ಉಳಿಯಬೇಕು. ಬಹಳಷ್ಟು ವಿದ್ಯಾರ್ಥಿಗಳು ಈ ತಂತ್ರವನ್ನು ಬಳಸಿಕೊಂಡು ಯಶಸ್ವಿಯಾಗಿದ್ದಾರೆ.

ಉದಾಹರಣೆಗೆ ವಿಜ್ಞಾನದಲ್ಲಿ ನೀರಿನ ಚಕ್ರ, ಗಣಿತದಲ್ಲಿ ಗ್ರಾಫ್‌, ಚಾರ್ಟ್‌ಗಳನ್ನು ಮೆದುಳಿನಲ್ಲಿ ಅಚ್ಚೊತ್ತಿದಂತೆ ನೆನಪಿನಲ್ಲಿ ಇಟ್ಟುಕೊಳ್ಳಬಹುದು.

ಪರಸ್ಪರ ಹೊಂದಿಸುವುದು

ಓದಿದ ವಿಷಯದಲ್ಲಿನ ಶಬ್ದಗಳನ್ನು ಅಥವಾ ಘಟನೆಗಳನ್ನು ಸ್ಥಳಕ್ಕೆ, ಭಾವನೆಗಳಿಗೆ, ವ್ಯಕ್ತಿಗಳಿಗೆ, ಸಂದರ್ಭಗಳಿಗೆ ಹೊಂದಿಸುವುದರಿಂದ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಏಕೆಂದರೆ ನಮ್ಮ ಮೆದುಳು ತನಗೆ ಪರಿಚಿತವಾದದ್ದನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳುತ್ತದೆ. ಇದೇ ಸೂತ್ರವನ್ನು ಅಧ್ಯಯನಕ್ಕೆ ಬಳಸಬಹುದು. ಶಬ್ದಗಳಿಗೆ ಇದನ್ನು ಸಾಮಾನ್ಯವಾಗಿ ಬಳಸಬಹುದು.

ಸಕಾರಾತ್ಮಕ ಅಧ್ಯಯನ

ಓದಿನ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಂಡರೆ ಕಲಿತಿರುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟ. ಹೀಗಾಗಿ ಸಕಾರಾತ್ಮಕತೆ ಇರಲಿ. ಇದಕ್ಕೆ ಒಂದು ಉದಾಹರಣೆಯೆಂದರೆ ನಿಮಗೆ ಗೊತ್ತಿರುವುದನ್ನು ಸ್ಟಡಿ ಗ್ರೂಪ್‌ನಲ್ಲಿ ಇತರ ಸ್ನೇಹಿತರಿಗೆ ಹೇಳಿಕೊಡಿ. ಓದಿರುವುದನ್ನು ವಿಶ್ಲೇಷಣೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT