ಗುರುವಾರ , ಅಕ್ಟೋಬರ್ 22, 2020
22 °C
ಕಾಲೇಜು ಶಿಕ್ಷಣ ಇಲಾಖೆಯ ಯುಟ್ಯೂಬ್‌ ಚಾನಲ್‌ಗಳು

PV Web Exclusive: ಕಲಿಕೆಗೆ ನೆರವಾಗುತ್ತಿರುವ ‘ಜ್ಞಾನ ನಿಧಿ’, ‘ವಿಜಯೀಭವ’

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೋವಿಡ್‌–19’ ವಿವಿಧ ಕ್ಷೇತ್ರಗಳಲ್ಲಿ ಹೊಸತನ್ನು ಅಳವಡಿಸಿಕೊಳ್ಳುವುದಕ್ಕೆ ಕಾರಣವಾಗಿದೆ. ತಂತ್ರಜ್ಞಾನ ಲಭ್ಯವಿದ್ದರೂ ಅದರ ಬಳಕೆಗೆ ಅಷ್ಟಾಗಿ ಮುಂದಾಗದ ಜನರೂ ಕೋವಿಡ್‌ ಕಾಲಘಟ್ಟದಲ್ಲಿ ಅದರ ಮೊರೆ ಹೋಗಿದ್ದಾರೆ. ಈ ವೇಳೆಯಲ್ಲಿ ಬಹುತೇಕ ಕ್ಷೇತ್ರಗಳಿಗೆ ‘ಡಿಜಿಟಲ್‌’ ವೇದಿಕೆಯೇ ಆಧಾರವಾಗಿದೆ. ಅದು ಉನ್ನತ ಶಿಕ್ಷಣ ಕ್ಷೇತ್ರಕ್ಕೂ ಅನ್ವಯ. 

ಕಾಲೇಜು ಶಿಕ್ಷಣ ಇಲಾಖೆ ಈ ಸಂದರ್ಭದಲ್ಲಿ ಆರಂಭಿಸಿದ ಎರಡು ಯುಟ್ಯೂಬ್‌ ಚಾನಲ್‌ಗಳು ಬೋಧಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಇಲಾಖೆಯ ‘ಜ್ಞಾನನಿಧಿ’ ಮತ್ತು ‘ವಿಜಯೀಭವ’ ಯುಟ್ಯೂಬ್‌ ಚಾನಲ್‌ಗಳಲ್ಲಿ ಸರ್ಕಾರಿ ಪದವಿ ಕಾಲೇಜುಗಳ ಸಹಸ್ರಾರು ಬೋಧಕರು ವಿಷಯವಾರು ವಿವಿಧ ಪಠ್ಯಗಳಿಗೆ ಸಂಬಂಧಿಸಿದಂತೆ ಅಪ್‌ಲೋಡ್‌ ಮಾಡಿರುವ ವಿಡಿಯೊ, ಪಿಪಿಟಿ ಪ್ರೆಸೆಂಟೇಷನ್‌ಗಳು‌ ವಿದ್ಯಾರ್ಥಿಗಳನ್ನು ನಿರಂತರ ಕಲಿಕೆಯಲ್ಲಿ ತೊಡಗುವಂತೆ ಮಾಡಿವೆ.

ಇದರ ಜತೆಗೆ ಬಹುತೇಕ ಕಾಲೇಜುಗಳಲ್ಲಿನ ಬೋಧಕರು ವಿಷಯವಾರು ನೇರ ಆನ್‌ಲೈನ್‌ ತರಗತಿಗಳನ್ನು ಗೂಗಲ್‌ ಮೀಟ್‌, ಜೂಮ್‌, ಗೂಗಲ್‌ ಕ್ಲಾಸ್‌ ಸೇರಿದಂತೆ ನಾನಾ ವೇದಿಕೆಗಳ ಮೂಲಕ ತೆಗೆದುಕೊಳ್ಳುತ್ತಿದ್ದಾರೆ. ಹಲವು ಬೋಧಕರು ತಮ್ಮದೇ ಆದ ಯುಟ್ಯೂಬ್‌ ಚಾನಲ್‌ಗಳನ್ನು ಆರಂಭಿಸಿ, ಅದರಲ್ಲಿ ಪಾಠ, ಪ್ರವಚನದ ವಿಡಿಯೊಗಳನ್ನು ಅಪ್‌ಲೋಡ್‌ ಮಾಡಿ, ವಿದ್ಯಾರ್ಥಿಗಳಿಗೆ ಶೇರ್‌ ಮಾಡುತ್ತಿದ್ದಾರೆ.

ಜ್ಞಾನ ಹೆಚ್ಚಿಸುತ್ತಿರುವ ‘ಜ್ಞಾನನಿಧಿ’: 

2020ನೇ ಸಾಲಿನ ಏಪ್ರಿಲ್‌ ಮೊದಲ ವಾರದಲ್ಲಿ ಆರಂಭವಾದ ‘ಜ್ಞಾನನಿಧಿ’ ಯುಟ್ಯೂಬ್‌ ಚಾನಲ್‌ನಲ್ಲಿ ವಿವಿಧ ವಿಷಯಗಳ ಪಠ್ಯಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 20 ಸಾವಿರ ವಿಡಿಯೊಗಳನ್ನು ಕಾಲೇಜು ಶಿಕ್ಷಣ ಇಲಾಖೆ ಅಪ್‌ಲೋಡ್‌ ಮಾಡಿದೆ. ಇದರಲ್ಲಿ ಅಂತಿಮ ವರ್ಷದ ಪದವಿ ಕೋರ್ಸ್‌ಗಳ ಪಠ್ಯಗಳಿಗೆ ಸಂಬಂಧಿಸಿದಂತೆಯೇ 10 ಸಾವಿರ ವಿಡಿಯೊಗಳಿವೆ. ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿ ಕೋರ್ಸ್‌ಗಳಿಗೆ ಸಂಬಂಧಿಸಿದ 10 ಸಾವಿರ ವಿಡಿಯೊಗಳು ಇದರಲ್ಲಿ ಅಡಕವಾಗಿವೆ. 

ನಿತ್ಯ ಹೊಸದಾದ ಸುಮಾರು 200 ವಿಡಿಯೊಗಳನ್ನು ಇದರಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿದೆ. ಅಂತೆಯೇ ಅಧ್ಯಾಪಕರ ಯುಟ್ಯೂಬ್‌ ಲಿಂಕ್‌ ಅನ್ನೂ ಇದರಲ್ಲಿ ಶೇರ್‌ ಮಾಡಲಾಗುತ್ತಿದೆ. ಇಲ್ಲಿಯವರೆಗೆ 31 ಸಾವಿರ ‘ಸಬ್‌ಸ್ಕ್ರೈಬರ್‌’ಗಳಿದ್ದು, 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಠವನ್ನು ಆಲಿಸಿದ್ದಾರೆ. ಅಗತ್ಯ ಬಿದ್ದಾಗ ಮತ್ತೊಮ್ಮೆ ನೋಡಿ, ಪುನರಾವರ್ತನೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಇಲಾಖೆಯ ಯುಟ್ಯೂಬ್‌ ಚಾನಲ್‌ಗಳ ಸಮನ್ವಯ ಅಧಿಕಾರಿ ಬಿ. ಮಂಜುನಾಥ್‌. 


ಜ್ಞಾನ ನಿಧಿ

ಸ್ಪರ್ಧಾಕಾಂಕ್ಷಿಗಳಿಗೆ ‘ವಿಜಯೀಭವ’: 

ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪದವಿ ಕಾಲೇಜಿನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ 2020ರ ಫೆಬ್ರುವರಿಯಲ್ಲಿ ‘ವಿಜಯೀಭವ’ ಯುಟ್ಯೂಬ್‌ ಚಾನಲ್‌ ಅನ್ನು ಕಾಲೇಜು ಶಿಕ್ಷಣ ಇಲಾಖೆ ಆರಂಭಿಸಿತು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಜತೆಗೆ ಅವರ ಕೌಶಲ ವೃದ್ಧಿಸುವುದು ಇದರ ಮತ್ತೊಂದು ಪ್ರಮುಖ ಉದ್ದೇಶ. 

ಎಂಟು ತಿಂಗಳಲ್ಲಿ ಈ ಚಾನಲ್‌ನ ‘ಸಬ್‌ಸ್ಕ್ರೈಬರ್‌’ಗಳ ಸಂಖ್ಯೆ 2.20 ಲಕ್ಷಕ್ಕೆ ಏರಿದೆ. ಪದವಿ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ನಿತ್ಯ ಈ ಚಾನಲ್‌ ವೀಕ್ಷಣೆಯಲ್ಲಿ ತೊಡಗಿದ್ದಾರೆ. ಇಲ್ಲಿಯವರೆಗೆ 55 ಲಕ್ಷ ಜನರು ವಿಜಯೀಭವ ಚಾನಲ್‌ ವೀಕ್ಷಿಸಿದ್ದಾರೆ. ಸ್ಪರ್ಧಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಬೋಧಿಸಲು ಆಸಕ್ತಿ ಇರುವ ಇಲಾಖೆಯ 500 ಬೋಧಕರ ತಂಡ ರಚಿಸಲಾಗಿದ್ದು, ಗುಣಮಟ್ಟದ ವಿಡಿಯೊಗಳನ್ನು ಅಪ್‌ಲೋಡ್‌ ಮಾಡಲಾಗುತ್ತಿದೆ ಎನ್ನುತ್ತಾರೆ ಅವರು. 

ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ 430 ಪದವಿ ಕಾಲೇಜುಗಳಿದ್ದು, ಸುಮಾರು 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಹುತೇಕ ಬೋಧಕರು ಮತ್ತು ವಿದ್ಯಾರ್ಥಿಗಳ ಬಳಿ ‘ಸ್ಮಾರ್ಟ್‌ಫೋನ್‌’, ‘ಲ್ಯಾಪ್‌ಟಾಪ್‌’ಗಳು ಇರುವುದರಿಂದ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗೆ ಅಷ್ಟಾಗಿ ತೊಡಕಾಗಿಲ್ಲ ಎನ್ನುತ್ತಾರೆ ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು.

ಸಿದ್ಧವಾಗುತ್ತಿದೆ ಡಿಜಿಟಲ್‌ ಕಂಟೆಂಟ್‌: 

ಡಿಜಿಟಲ್‌ ಕಲಿಕೆಯ ಅನಿವಾರ್ಯವನ್ನು ಅರಿತು ಕಾಲೇಜು ಶಿಕ್ಷಣ ಇಲಾಖೆ ‘ಡಿಜಿಟಲ್‌ ಕಂಟೆಂಟ್‌’ ಸಿದ್ಧಪಡಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದೆ. ಇದಕ್ಕಾಗಿಯೇ ಪ್ರತ್ಯೇಕ ಪೋರ್ಟಲ್‌ ಮತ್ತು ಆ್ಯಪ್‌ ರೂಪಿಸುತ್ತಿದೆ. 

ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಕ್ರಮದ ಅನ್ವಯ ‘ಇ–ಕಂಟೆಂಟ್‌’ ಸಿದ್ಧಪಡಿಸಿ, ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡುವ ಯೋಜನೆ ಇಲಾಖೆಯದ್ದು. ವಿಡಿಯೊ, ಪಿಪಿಟಿ ಮಾದರಿಗಳಲ್ಲಿ ವಿಡಿಯೊ ಸಿದ್ಧಪಡಿಸುವ ಕಾರ್ಯ ಸಾಗಿದ್ದು, ಅಂದಾಜು 1 ಲಕ್ಷ ವಿಡಿಯೊಗಳನ್ನು ಅಪ್‌ಲೋಡ್‌ ಮಾಡುವ ಗುರಿ ಹೊಂದಿದೆ.  

ಆಯುಕ್ತರ ಪ್ರತಿಕ್ರಿಯೆ: 

ಸದ್ಯಕ್ಕೆ ಎಲ್ಲ ಕಾಲೇಜುಗಳಲ್ಲೂ ಆನ್‌ಲೈನ್‌ ಪಾಠ ಪ್ರವಚನ ನಡೆಯುತ್ತಿದೆ. ಆಫ್‌ಲೈನ್‌ನಲ್ಲಿ ಯಾವಾಗಿನಿಂದ ತರಗತಿಗಳನ್ನು ಆರಂಭಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎನ್ನುತ್ತಾರೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ. ಪ್ರದೀಪ್‌.

ಲಾಕ್‌ಡೌನ್‌ ಸಂದರ್ಭದಲ್ಲಿ ನಡೆದ ಆನ್‌ಲೈನ್‌ ತರಗತಿಗಳು ಶೇ 65ರಿಂದ 70ರಷ್ಟು ವಿದ್ಯಾರ್ಥಿಗಳನ್ನು ತಲುಪಿದ್ದರೆ, ವಾಟ್ಸ್‌ಆ್ಯಪ್‌, ಟೆಲಿಗ್ರಾಮ್‌ ಆ್ಯಪ್‌ಗಳ ಮೂಲಕ ಶೇ 80ರಿಂದ 85ರಷ್ಟು ವಿದ್ಯಾರ್ಥಿಗಳಿಗೆ ಪಾಠದ ನೋಟ್ಸ್‌ಗಳು ದೊರೆತಿವೆ. ‘ಜ್ಞಾನನಿಧಿ’ ಮತ್ತು ‘ವಿಜಯೀಭವ’ ಯುಟ್ಯೂಬ್‌ ಚಾನಲ್‌ಗಳು ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಿವೆ. ಜತೆಗೆ ಕೇಂದ್ರ ಸರ್ಕಾರದ ‘ಮೂಕ್‌’, ‘ಸ್ವಯಂ’ ಕೋರ್ಸ್‌ಗಳ ಪಠ್ಯ ಸಾಮಗ್ರಿಗಳು ಅವರ ಕಲಿಕೆಗೆ ಉಪಯುಕ್ತವಾಗಿವೆ ಎಂದು ಅವರು ವಿವರಿಸಿದರು.

‘ಇ–ಕಂಟೆಂಟ್‌’ ರಚಿಸುವ ಕಾರ್ಯ ಪ್ರಗತಿಯಲ್ಲಿದ್ದು, ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳಿಗೆ ಅದರಿಂದಲೂ ಅನುಕೂಲವಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು