ಬುಧವಾರ, ನವೆಂಬರ್ 30, 2022
17 °C

ಹುಬ್ಬಳ್ಳಿ | ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಅದ್ವಿತೀಯ–2019’ ಸಮಾವೇಶ

ಪ್ರಮೋದ್‌ Updated:

ಅಕ್ಷರ ಗಾತ್ರ : | |

Prajavani

ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ಬಂದಿದ್ದ ಪ್ರವಾಹದಿಂದ ಆದ ಅನಾಹುತಗಳೇನು? ಈ ರೀತಿಯ ಘಟನೆ ನಡೆದಾಗ ಎಂಜಿನಿಯರ್‌ಗಳು ಏನು ಮಾಡಬೇಕು? ಸುರಕ್ಷತಾ ಕ್ರಮಗಳು ಹೇಗಿರಬೇಕು? ಬರೀ ಕಟ್ಟಡಗಳೇ ತುಂಬಿ ಹೋದರೆ ಭೂಮಿ ಉಳಿಯಲು ಸಾಧ್ಯವೇ? ಪ್ರವಾಹದಿಂದ ಕಣ್ಣೀರು ಸುರಿಸಿದ ಸಂತ್ರಸ್ತರಿಗೆ ಜನ ನೆರವಾದರು, ಸರ್ಕಾರ ಸಹಾಯ ಹಸ್ತ ಚಾಚಿತು ನಿಜ; ಆದರೆ ಭೂಮಿ ತಾಯಿಯ ಕಣ್ಣೀರು ಯಾರು ಒರೆಸುತ್ತಾರೆ....?

ಹೀಗೆ ಹತ್ತಾರು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಿವಿಲ್‌ ಎಂಜಿನಿಯರಿಂಗ್ ವಿದ್ಯಾರ್ಥಿನಿ ರೇಣುಕಾ ಪಾಟೀಲ ಚಿತ್ರಗಳನ್ನು ಬಿಡಿಸಿದ್ದಾರೆ. ತಾಯಿ ಕಣ್ಮುಚ್ಚಿಕೊಂಡು ಸುರಿಸುವ ಕಣ್ಣೀರಿನಿಂದಲೇ ಪ್ರವಾಹ ಬಂದಿದೆ. ಇದರಲ್ಲಿ ಮನೆ, ವಾಹನಗಳು ಕೊಚ್ಚಿ ಹೋಗಿವೆ ಎನ್ನುವುದನ್ನು ಅವರು ಕಲೆಯ ಮೂಲಕ ಬಿಂಬಿಸಿದ್ದಾರೆ. ಕೆಎಲ್‌ಇ ಐಟಿ ಕಾಲೇಜಿನ ವಿದ್ಯಾರ್ಥಿನಿ ಕಾವೇರಿ ಗಳಗಿ, ಜಗತ್ತಿನ ಯಾವುದೇ ಮೂಲೆಗೆ ಹೋದರೂ ಎಲೆಕ್ಟ್ರಿಕಲ್‌ ವಸ್ತುಗಳು ಸಿಗುತ್ತವೆ. ಜಗತ್ತಿನ ತುಂಬೆಲ್ಲ ಎಲೆಕ್ಟ್ರಾನಿಕ್ಸ್‌ ಉಪಕರಣಗಳೇ ತುಂಬಿಹೋಗಿವೆ ಎನ್ನುವುದನ್ನು ಎಲೆಕ್ಟ್ರಾನಿಕ್ಸ್‌ ಸಾಮಗ್ರಿಗಳ ಮೂಲಕ ಮನುಷ್ಯನ ಚಿತ್ರ ಅರಳಿಸಿ ತೋರಿಸಿದ್ದಾರೆ.

ಗೋಕುಲ ರಸ್ತೆಯ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆರಂಭವಾದ ‘ಅದ್ವಿತೀಯ–2019’ ರಾಷ್ಟ್ರಮಟ್ಟದ ಎರಡು ದಿನಗಳ ತಾಂತ್ರಿಕ ಸಮಾವೇಶದಲ್ಲಿ ಕಂಡು ಬಂದ ಚಿತ್ರಣಗಳಿವು. ಒಂಬತ್ತನೇ ಆವೃತ್ತಿಯ ಸಮಾವೇಶ ಇದಾಗಿದ್ದು 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.

ಕಂಪ್ಯೂಟರ್ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗ, ಎಲೆಕ್ಟ್ರಾನಿಕ್ಸ್‌ ಆ್ಯಂಡ್ ಕಮ್ಯುನಿಕೇಷನ್‌, ಎಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌, ಸಿವಿಲ್‌ ಎಂಜಿನಿಯರಿಂಗ್‌, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮತ್ತು ಎಂಸಿಎ ವಿಭಾಗದಲ್ಲಿ ತಾಂತ್ರಿಕ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.


ಪೋರಸ್‌ ಕಾಂಕ್ರೀಟ್‌ನಿಂದ ಮಾಡಿದ ರಸ್ತೆಯಲ್ಲಿ ನೀರು ಇಂಗುವ ವಿಧಾನ ತೋರಿಸಿದ ವಿದ್ಯಾರ್ಥಿಗಳು

ಹುಬ್ಬಳ್ಳಿ ಕೆಎಲ್‌ಇ ಐಟಿ ಕಾಲೇಜಿನ ವಿದ್ಯಾರ್ಥಿಗಳು ವೆಬ್‌ಡಿಸೈನ್‌ ಎನ್ನುವ ಹೆಸರಿನಲ್ಲಿ ಟ್ರ್ಯಾಕ್‌ ರೂಪಿಸಿದ್ದಾರೆ. ಕಡಿದಾದ ರಸ್ತೆ, ತೆಗ್ಗು, ಗುಂಡಿಗಳ ರಸ್ತೆಯ ಮೇಲೆ ವಿದ್ಯಾರ್ಥಿಗಳು ತಾವೇ ತಯಾರಿಸಿದ ವಾಹನ ಓಡಿಸಬೇಕು. ಇದಕ್ಕಾಗಿ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ವಿನಾಯಕ, ನಂದೀಶ, ಶ್ರೀಹರಿ, ಪ್ರಶಾಂತ, ವಿನಯ ಅವರನ್ನು ಒಳಗೊಂಡ ತಂಡದವರು ಈ ಪ್ರಾತ್ಯಕ್ಷಿಕೆ ತೋರಿಸಿದರು. ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರೊ.ರಜತ್‌ ವೈದ್ಯ ಅವರು ‘ಬಾಬ್ ದ ಬಿಲ್ಡರ್‌’ ಎನ್ನುವ ಯೋಜನೆಯಲ್ಲಿ ವಿಭಿನ್ನ ವಿನ್ಯಾಸದ ಮನೆಗಳನ್ನು ಕಟ್ಟುವ ‘ಪರೀಕ್ಷೆ’ಯನ್ನು ಭಾವಿ ಎಂಜಿನಿಯರ್‌ಗಳಿಗೆ ನೀಡಿದ್ದಾರೆ. ಶನಿವಾರ ಈ ಸ್ಪರ್ಧೆ ನಡೆಯಲಿದ್ದು, ವಿದ್ಯಾರ್ಥಿಗಳು ಮನೆ ಕಟ್ಟಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು.

‘ಆಧುನಿಕ ಕಾಲಕ್ಕೆ ತಕ್ಕಂತೆ ಭಿನ್ನವಾಗಿ ಮನೆಗಳನ್ನು ಕಟ್ಟಲಾಗುತ್ತಿದೆ. ಆದ್ದರಿಂದ ಎಂಜಿನಿಯರ್‌ಗಳಿಗೆ ಜನಸ್ನೇಹಿ ಮನೆ ಕಟ್ಟಲು ಗೊತ್ತಿರಬೇಕು. ವೃತ್ತಿಯ ಅನುಭವ ತಿಳಿಯಬೇಕು ಎನ್ನುವ ಕಾರಣಕ್ಕೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಮನೆ ಕಟ್ಟುವಾಗ ಎದುರಾಗುವ ಪ್ರಾಯೋಗಿಕ ಸಮಸ್ಯೆಗಳನ್ನು ಈಗಲೇ ತಿಳಿದುಕೊಳ್ಳಬೇಕು ಎನ್ನುವ ಉದ್ದೇಶ ನಮ್ಮದು’ ಎಂದು ರಜತ್‌ ಹೇಳಿದರು.

ಸಿವಿಲ್ ವಿಭಾಗದ ಅನುಷಾ, ಶ್ವೇತಾ, ವಿಶಾಲ್‌ ಮತ್ತು ಶೀತಲ್‌ ಅವರನ್ನು ಒಳಗೊಂಡ ತಂಡ ಪೋರಸ್‌ ಕಾಂಕ್ರೀಟ್‌ ಬಳಸಿ ಪ್ರಾಯೋಗಿಕ ರಸ್ತೆ ನಿರ್ಮಿಸಿದ್ದಾರೆ. ಮಳೆ ನೀರು ರಸ್ತೆ ಮೇಲೆ ಬಿದ್ದರೆ ಅದು ರಂಧ್ರಗಳ ಸಹಾಯದಿಂದ ಭೂಮಿಯಲ್ಲಿ ಇಂಗುತ್ತದೆ. ಇದರಿಂದ ಭೂಮಿಯಲ್ಲಿ ನೀರಿನ ಅಂಶ ಹೆಚ್ಚಾಗುತ್ತದೆ ಎಂಬುದು ಪ್ರಾತ್ಯಕ್ಷಿಕೆಯ ಸಾರಾಂಶ.

‘ಪೋರಸ್‌ ಕಾಂಕ್ರೀಟ್‌ ಬಳಸಿ ರಸ್ತೆಯಷ್ಟೇ ಅಲ್ಲ; ಅಣೆಕಟ್ಟೆಗಳನ್ನೂ ಕಟ್ಟಬಹುದು. ಈ ಕುರಿತು ಹೊಸ ಪ್ರಯೋಗಗಳನ್ನು ಮಾಡುತ್ತಿದ್ದೇವೆ. ಈ ಕಾಂಕ್ರೀಟ್‌ ಮಾಡುವ ಕಾಮಗಾರಿ ಗಟ್ಟಿಮುಟ್ಟಾಗಿ ಇರುತ್ತದೆ. ನೀರು ಉಳಿಸಲು ಸಾಧ್ಯವಾಗುತ್ತದೆ’ ಎಂದು ಅನುಷಾ ಹೇಳಿದರು.

ಪ್ರಾತ್ಯಕ್ಷಿಕೆ ಜೊತೆಗೆ ರಸಪ್ರಶ್ನೆ, ಪ್ರಬಂಧ ಮಂಡನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಫೋಟೊಗಳನ್ನು ತೆಗೆದುಕೊಳ್ಳಲು ಹೂವಿನಿಂದ ಅಲಂಕರಿಸಿ ಫ್ರೇಮ್‌ ರೂಪಿಸಲಾಗಿದ್ದು, ಇದು ಯುವಜನತೆಗೆ ಆಕರ್ಷಣೆಯಾಗಿತ್ತು. ಎಲ್ಲರೂ ಜಿದ್ದಿಗೆ ಬಿದ್ದು ಫೋಟೊ ತೆಗೆದುಕೊಳ್ಳುತ್ತಿದ್ದ ಚಿತ್ರಣ ಕಂಡುಬಂತು.

ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ತಮ್ಮಲ್ಲಿನ ಪ್ರತಿಭೆ ಮತ್ತು ಯೋಜನೆಗಳನ್ನು ಪ್ರಾಯೋಗಿಕವಾಗಿ ತೋರಿಸಲು ಸಮಾವೇಶ ಉತ್ತಮ ವೇದಿಕೆಯಾಗಿದೆ. ವೃತ್ತಿಗೆ ಸೇರಿದ ಬಳಿಕ ಎದುರಾಗುವ ಸವಾಲುಗಳಿಗೆ ಈಗಲೇ ಉತ್ತರಕಂಡುಕೊಳ್ಳಲು ಅವಕಾಶವಿದೆ.

ಆದ್ದರಿಂದ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ವಿದ್ಯಾರ್ಥಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಅವರ ಯೋಚನೆಗಳಿಗೆ ಪ್ರಾಧ್ಯಾಪಕರು ಮಾರ್ಗದರ್ಶನ ಮಾಡಿ ನೆರವಾಗುತ್ತಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳ ‘ಅದ್ವಿತೀಯ’ ಸಾಧನೆಯ ಆಸೆಗೆ ಶಕ್ತಿ ತುಂಬುತ್ತಿದ್ದಾರೆ.


ವೆಬ್‌ ಡಿಸೈನ್‌ ಯೋಜನೆಯಲ್ಲಿ ರೋಡ್ ಟ್ರ್ಯಾಕ್‌ ನಿರ್ಮಿಸಿ ಪ್ರಾತ್ಯಕ್ಷಿಕೆ ನೀಡುತ್ತಿರುವ ವಿದ್ಯಾರ್ಥಿಗಳು

ಕೌಶಲ ಕಲಿಯಲು ವೇದಿಕೆ
ಪ್ರತಿ ವರ್ಷ ಸೆಪ್ಟೆಂಬರ್‌ ಬರುವುದನ್ನೇ ಕೆಎಲ್‌ಇ ಐಟಿ ಕಾಲೇಜಿನ ವಿದ್ಯಾರ್ಥಿಗಳು ಕಾಯುತ್ತಿರುತ್ತಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಂಘಟನಾ ಕೌಶಲ ಮತ್ತು ಒಂದು ತಂಡವಾಗಿ ಹೇಗೆ ಕೆಲಸ ಮಾಡಬೇಕು ಎಂಬುದು ಗೊತ್ತಾಗುತ್ತದೆ. ಸಂವಹನ ಹೇಗೆ ಮಾಡಬೇಕು ಎಂಬುದು ತಿಳಿಯತ್ತದೆ. ಸಾಫ್ಟ್‌ ಕೌಶಲಗಳನ್ನು ಕಲಿತರೆ ಎಂಜಿನಿಯರಿಂಗ್ ವೃತ್ತಿಗೂ ಅನುಕೂಲ.
-ಡಾ.ಬಸವರಾಜ ಅನಾಮಿ, ಕಾಲೇಜಿನ ಪ್ರಾಚಾರ್ಯ

ಹೊರಗಿನ ವಿದ್ಯಾರ್ಥಿಗಳಿಗೆ ಅವಕಾಶ
ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕೆ ಜೊತೆಗೆ ಹೊರಗಿನ ವಿದ್ಯಾರ್ಥಿಗಳೊಂದಿಗೆ ಬೆರೆಯಲು ಸಮಾವೇಶ ಉತ್ತಮ ಅವಕಾಶ. ಮೊದಲ ವರ್ಷ 200 ವಿದ್ಯಾರ್ಥಿಗಳಷ್ಟೇ ಇದ್ದರು. ಈ ವರ್ಷ ಆರು ರಾಜ್ಯಗಳಿಂದ ಸ್ಪರ್ಧಿಗಳು ಬಂದಿದ್ದಾರೆ. ಸಮಾವೇಶಕ್ಕೆ ನೋಂದಣೆ, ಮಾಹಿತಿ ಎಲ್ಲದಕ್ಕೂ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಡಿಜಿಟಲ್‌ ಇಂಡಿಯಾಕ್ಕೆ ಕೈ ಜೋಡಿಸಿದ್ದೇವೆ.
-ಡಾ. ಶರದ್‌ ಜೋಶಿ, ಅಕಾಡೆಮಿ ವಿಭಾಗದ ಡೀನ್‌

ವಿದ್ಯಾರ್ಥಿಗಳ ಕಾರ್ಯಕ್ರಮ
ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ವಿದ್ಯಾರ್ಥಿಗಳೇ ಮಾಡುವ ಕಾರ್ಯಕ್ರಮವಿದು. ಶಿಕ್ಷಕರು ಮಾರ್ಗದರ್ಶನ ಮಾತ್ರ ಮಾಡುತ್ತಾರೆ. ಎಲ್ಲವನ್ನೂ ವಿದ್ಯಾರ್ಥಿಗಳೇ ರೂಪಿಸಿಕೊಳ್ಳುತ್ತಾರೆ. ಪ್ಲಾಸ್ಟಿಕ್‌ ಬಳಸದೇ ಎಲ್ಲ ಪ್ರಾತ್ಯಕ್ಷಿತೆ ತಯಾರಿಸಿದ್ದು ವಿಶೇಷ.
-ಡಾ. ರಾಜೇಶ್ವರಿ ಎಲ್‌. ಇಟಗಿ, ಸಮಾವೇಶದ ಸಂಯೋಜಕಿ

**

ದಿನದಿಂದ ದಿನಕ್ಕೆ ಸಾಕಷ್ಟು ಅನ್ವೇಷಣೆಗಳು ಆಗುತ್ತಿವೆ. ರೋಬೊಟಿಕ್ ಸೇರಿದಂತೆ ಅನೇಕ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಮಾವೇಶ ವೇದಿಕೆಯಾಗಿದೆ.
-ವಸಂತ ದೇಶಪಾಂಡೆ, ಮಾಹಿತಿ ವಿಜ್ಞಾನ ವಿಭಾಗ, ಕೆಎಲ್‌ಇ ಐಟಿ, ಹುಬ್ಬಳ್ಳಿ

**

ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ನಾವು ಕೂಡ ನಮ್ಮ ಕಾಲೇಜಿನಲ್ಲಿ ಯಾವ ರೀತಿಯ ಪ್ರಯೋಗ ಮಾಡಬೇಕೆಂದು ತಿಳಿಯಿತು.
-ಶ್ರೀಕಾಂಕ್ಷಾ, ಬಿ.ವಿ. ರಾಜು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಹೈದರಾಬಾದ್‌

**

ಹುಬ್ಬಳ್ಳಿ ಆತಿಥ್ಯ ಚೆನ್ನಾಗಿತ್ತು. ಇಲ್ಲಿನ ಕೆಲ ಯೋಜನೆಗಳ ಪ್ರಾತ್ಯಕ್ಷಿಕೆಯನ್ನು ನಮ್ಮ ಕಾಲೇಜಿನಲ್ಲಿಯೂ ಮಾಡಲಾಗುವುದು.
-ಬಾಗೇಶ ರೆಡ್ಡಿ, ಬಿವಿ ರಾಜು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಹೈದರಾಬಾದ್‌

**

ನಮ್ಮ ಕಾಲೇಜಿನಲ್ಲಿ ಎಂಜಿನಿಯರಿಂಗ್‌ನ ಒಂದು ವಿಭಾಗದ ವಿಷಯ ಮಾತ್ರ ತಿಳಿದುಕೊಳ್ಳುತ್ತೇವೆ. ಸಮಾವೇಶಕ್ಕೆ ಬಂದಿದ್ದರಿಂದ ಎಲ್ಲ ವಿಭಾಗಗಳ ಪ್ರಯೋಗಗಳನ್ನು ನೋಡಲು ಸಾಧ್ಯವಾಗಿದೆ.
-ಫಾತಿಮಾ ಮುಸ್ಕಾನ್‌, ಅಂಜುಮನ್‌ ಕಾಲೇಜು, ಭಟ್ಕಳ

**

ಮೊದಲ ಬಾರಿಗೆ ಅದ್ವಿತೀಯ ಸಮಾವೇಶಕ್ಕೆ ಬಂದಿದ್ದೇನೆ. ಇಲ್ಲಿಂದ ಹೊಸ ವಿಷಯಗಳನ್ನು ತಿಳಿದುಕೊಂಡರೆ ಕ್ಯಾಂಪಸ್‌ ಆಯ್ಕೆಗೆ ಅನುಕೂಲವಾಗುತ್ತದೆ.
-ಇಬ್ಬನಿ, ಜಿಎಂಐಟಿ ಕಾಲೇಜು ದಾವಣಗೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು